(ಲೇಖನದ ಮೊದಲ ಭಾಗಕ್ಕಾಗಿ ಇಲ್ಲಿ ಕ್ಲಿಕ್ಕಿಸಿ)
ಮತ್ತೆ ಮುಂಜಾನೆ 6ಕ್ಕೆ ಎದ್ದು ಬಂದು, ಪಾಳಿ ಪ್ರಕಾರ ಸ್ಟೇಜ್ ಗುಡಿಸಿ, ಸಾರಿಸಿ, ಚೊಣ್ಣ ತೊಟ್ಟು, ಯೋಗ ಮಾಡಲು ಸಿದ್ಧ. ನಮಗೆ ಮೈಬಗ್ಗಿಸುತ್ತಿದ್ದ ಶಂಕರನಾರಾಯಣ, ಜೋಯಿಸ್ರು ಅವರ ಶಿಷ್ಯರು ಜೋಯಿಸ್ರು ಮಹಾ ಶಿಸ್ತಿನ ಮನುಷ್ಯ ಅವರು ಕೂಡುತ್ತಿದ್ದ ರೀತಿ, ಮಾತನಾಡುವ ಶೈಲಿ ಎಲ್ಲವೂ ನಮಗೆ ವಿಶೇಷ ಎನ್ನುವಷ್ಟು ಕುತೂಹಲ… ಅವರಾಡುತ್ತಿದ್ದ ಪ್ರತೀ ಮಾತಿನಲ್ಲೂ ಅಚಲ ಆತ್ಮವಿಶ್ವಾಸ ಅವರಿಗೆ….. 32 ತುತ್ತು ಮಾತ್ರ ಊಟಮಾಡಿ., ಪ್ರತಿದಿನ ತುಪ್ಪ ಗೊಡಂಬಿ, ದ್ರಾಕ್ಷಿ, ಖರ್ಜೂರಗಳನ್ನು ತಿನ್ನಿ, ಪ್ರಾಣಾಯಾಮ ಮಾಡುವಾಗ ಆಳಕ್ಕೆ ಉಸಿರು ಎಳೆದುಕೊಳ್ಳಿ… ಗುದದ್ವಾರವನ್ನು… ಹೀಗೆ… ಅವರ ಮಾತುಗಲಿಗೆ ನಗುತ್ತಿದ್ದರೂ, ಗೌರವಿಸುತ್ತಿದ್ದೆವು.
ಆರಂಭದ ತಿಂಗಳಲ್ಲಿ ಮೆಸ್ನಲ್ಲಿ ಮಜ್ಜಿಗೆಗೆ ಗತಿಯಿಲ್ಲ… ಇವರು ಮೊಸರು, ತುಪ್ಪಕ್ಕೆ ಹೇಳ್ತಾರೆ…. ಅಂತಾ ನಕ್ಕಿದ್ದೇವೆ. ಅವೆಲ್ಲಾ ಇರಲಿ. ಮೂರು ವರ್ಷಗಳಲ್ಲಿ ಅವರು ಕಲಿಸಿದ ಯೋಗ ನಮಗೆ ಎಷ್ಟು ಉಪಕಾರ ಮಾಡಿದೆ ಅಂದರೆ, ಯೋಗ ತಪ್ಪಿದ ದಿನ ಮೈಯಲ್ಲಾ ಜಡ್ಡು, ಲವಲವಿಕೆ ಇಲ್ಲದೆ ಬೇರೆ ಬೇರೆ warm up ಮಾಡಿಕೊಳ್ಳಲೇ ಬೇಕು. ಅರ್ಧಶಂಖ ಪ್ರಾಕ್ಷಾಳನ ಮಾಡಿ ದಿನವಿಡೀ ಕಕ್ಕಸ್ಸಿನಲ್ಲಿ ಕೂತು ಮೈ ಒಳಗಿನ ಕೊಳೆ ತೊಳೆದುಕೊಂಡು fresh ಆಗಿದ್ದೇವೆ.
ಎಲ್ಲಾ ಮಂಗಳೂರಿನ night clubನಲ್ಲಿ ಗಿಟಾರಿಸ್ಟ್ ಆಗಿದ್ದ ಉಡುಪಿಯ ಚೀನಿ, ರಂಗಸಂಗೀತ ತರಬೇತಿ ಬಗ್ಗೆ ಪಾಠ ಮಾಡಲು, ನಮ್ಮನ್ನು ಹಾರ್ಮೋನಿಯಮ್ ಶೃತಿಗೆ ಒಗ್ಗಿಸಲು ನಿತ್ಯವೂ ತಿಪ್ಪರಲಾಗ ಹಾಕುತ್ತಿದ್ದದು… ಹೊಸ ಹೊಸ ಅಭ್ಯಾಸಗಳಿಗಾಗಿ ಹುಡುಕಾಟ ಮಾಡುತ್ತಿದ್ದದು… ಹುಡುಗರೊಂದಿಗೆ ಅಧ್ಯಾಪಕರು ಬೆಳೆಯುತ್ತಿದ್ದುದರ ಕುರುಹಾಗಿತ್ತು. ಕ್ರಮೇಣ ಎಲ್ಲರೂ ಶೃತಿ ಸೇರಿಸಿ ಲಯಬದ್ಧವಾಗಿ ಹಾಡಲು ಶುರುಮಾಡಿದಾಗ ಆತನ ನಗುಮೊಗ ನಮಗೆ ಹೆಮ್ಮೆಯೆನಿಸಿತ್ತು… ಫ್ರೆಂಚ್ ಗಡ್ಡ… ತಿರುಗಾಟದ ನಾಟಕಗಳು ಗಿಟಾರ್ ಬಾರಿಸುತ್ತಿದ್ದ….. ಅವರೇ…. ಅವರೇ ಚೀನಿ…
ಕುವೆಂಪುರವರ ಬೊಮ್ಮನಹಳ್ಳಿ ಕಿಂದರಜೋಗಿ…. ಶುರುವಾಯ್ತು. ಮೊದಲು ಓದಿದವರು, ಏಣಗಿ ನಟರಾಜ. ಆತಕೂಡ ನಮಗೆ ಪಾಠ ಮಾಡಿದ್ದ. ಶೈಲೀಕೃತ ಅಭಿನಯ, ಡಿಸ್ಟಾರ್ಟೆಡ್ ಅಭಿನಯಗಳ ಬಗ್ಗೆ ಕೆಲ ಅಭ್ಯಾಸೀ ಕಸರತ್ತುಗಳನ್ನು ಮಾಡಿಸಿ ಮೈ ಸಡಿಲಗೊಳಿಸಿದ್ದ. ಇರಲಿ… ಜೋಗಿ ತಯಾರಿ ಬಗ್ಗೆ ಹೇಳ್ತೇನೆ. ಆರಂಭದ ದಿನಗಳಲ್ಲಿ ಕಾರಂತರು ಹೆಚ್ಚು ಒತ್ತು ಕೊಟ್ಟಿದ್ದು, ಇಡೀ ಪದ್ಯವನ್ನು ಎಲ್ಲೂ ಲಯ ತಪ್ಪದಂತೆ ಒದಿಸಿದ್ದರು. ಈ ಅಭ್ಯಾಸ ಸತತವಾಗಿ ನಡೆದಮೇಲೆ, ನಾಟಕೀಯ ಅಂಶವನ್ನು ಪ್ರಕಟಗೊಳಿಸುತ್ತಾ ಹೆಚ್ಚು ಅರ್ಥ ಮಾಡಿಸುವ ಸಲುವಾಗಿ ಓದುವುದು.
ಪ್ರತೀ ವಾಕ್ಯಕ್ಕೂ, ಪ್ರತೀ ಸಾಲಿಗೂ, ಪ್ರತೀ ಪದಕ್ಕೂ ಇರುವ ಅರ್ಥವಂತಿಕೆಯನ್ನು ವಾಚಿಸುವಾಗಲೇ ಧ್ವನಿಸಬೇಕು. ಪಿಚ್ ಮತ್ತು ಟೆಂಪೋ ಬದಲಾವಣೆಗೆ ಹೆಚ್ಚು ಗಮನಕೊಡಬೇಕೆಂದು ಅವರು ಪದೇಪದೇ ಹೇಳುತ್ತಿದ್ದರು. ಕಿಂದರಿಜೋಗಿ ಪದ್ಯದ ಲಯವನ್ನು ಅರ್ಥೈಸಿಕೊಳ್ಳುವಂತಾದರೆ ಭಾಷೆ ಮೇಲಿನ ಹಿಡಿತವೂ ಸಾಧ್ಯವಾಗಬಹುದು… ಕ್ರಮೇಣ ಕವಿತೆಗಳನ್ನು ದೃಶ್ಯೀಕರಿಸುವಾಗ ಅದರ ಬೇಕಾದಷ್ಟು ಎಕ್ಸ್ಟಿರ್ಷನ್ಗಳ ಮಾಡಿ ನಾಟಕ ಕಟ್ಟುತ್ತಾ ಹೊಗುತ್ತೇವೆ…. ಎಂದು ಹೇಳುತ್ತಿದ್ದರು….. ಹಾಗೆ ನಮ್ಮಿಂದ ಸಾಧ್ಯಮಾಡಿ ತೋರಿಸಿದರೂ ಕೂಡ.
ಇದೊಂದು ಸರಳ ಸುಂದರ ಪದ್ಯದ ಮೇಲೆ ಎಷ್ಟೆಲ್ಲಾ ಕೆಲಸ ಮಾಡಿದೆವು ಅಂದರೆ… ಉದಾಹರಣೆಗೆ, ರಂಗಕೃತಿಯಾಗಿ ಒತ್ತು ವಚನದ ಮೇಲಿದ್ದಾಗ ಉದ್ಗಾರ, ದ್ವಿರುಕ್ತಿ, ಪುನರಾವರ್ತನೆ, ಧ್ವನಿ ಪ್ರಕಾರಗಳು, ಘೋಷಣೆ, ಪ್ರತಿಧ್ವನಿ, ನಿಸ್ವರಯೋಜನೆ, ಲಯವೈವಿದ್ಯ… ಜೊತೆಗೆ ಸ್ವರಾರೋಹ, ಗತಿ, ಯತಿ, ಛಂದಸ್ಸು, ತಾಳ… ಹೀಗೆ ಎಲ್ಲವನ್ನೂ ಸಾಂಧರ್ಭಿಕವಾಗಿ ಬಳಸುತ್ತಾ ಹೋಗುವುದರ ಕಡೆಗೆ ಗಮನಕೊಟ್ಟೆವು… ಈ ನಾಟಕದ ಶೈಲಿಗಾಗಿ ಫ್ಯಾಂಟಸಿ/ಮಿಸ್ಟರಿಗಳಾಗಿರುವ ಗುಣಗಳನ್ನು ಬೆಳೆಸಿಕೊಳ್ಳುವುದು… ಪರಿಸರವನ್ನು ಒಂದು ಪಾತ್ರವನ್ನಾಗಿ ಉಪಯೋಗಿಸಿ ಕೊಳ್ಳಬೇಕೆನ್ನುವ ಹಠದಿಂದ ವನರಂಗವನ್ನು ಕಟ್ಟಿದೆವು!

ನಾಟಕವನ್ನು ಕಥಾಗಾಯನ ರೂಪದಲ್ಲೇ ಇರಿಸಬೇಕೆಂದು ಪೂರ್ವ ನಿಶ್ಚಯವಾಗಿತ್ತು… ಕಾರಂತರ ಸಂಗೀತದ ಬಗ್ಗೆ ಬರೆಯಲು ಖಂಡಿತಾ ಸಾಧ್ಯವಿಲ್ಲ. ಅದನ್ನು ಎದುರಿದ್ದು ಕೇಳಿಯೇ ಅನುಭವಿಸಬೇಕು.
ನಟನೊಬ್ಬ ಊಟಮಾಡೋದಕ್ಕೂ, ಬೇರೆಯವರು ಊಟಮಾಡೋದಕ್ಕೂ ಇರೋ ವ್ಯತ್ಯಾಸಗಳನ್ನು, ಮಕ್ಕಳಿಗೆ ಕಥೆ ಹೇಳುವ ಬಗೆಯನ್ನು ಅಭ್ಯಾಸ ಮಾಡಿಸಲಾಯಿತು. ರಂಗದಲ್ಲಿ ಪ್ರತಿಯೊಂದು ಕ್ಷಣಕ್ಕೂ ಲಾಜಿಕ್, ಔಚಿತ್ಯಗಳ ಜೊತೆಗೆ…. ದೃಶ್ಯದ ದೃಷ್ಟಿಕೋನದ ಹಿಂದೆ ವಿನ್ಯಾಸ ಅತ್ಯಗತ್ಯ… ಈ ಮಾತುಗಳು ಅದೆಷ್ಟು ಮುಖ್ಯ ಅಂತಾ ಒಳ್ಳೆ ರಂಗಭೂಮಿ ಮಾಡೋ ಎಲ್ಲಾ ಗೆಳೆಯರಿಗೂ ಗೊತ್ತಿರುತ್ತೆ.
ಪ್ರತಿಯೊಂದು ಸಾಲಿಗೂ ನೂರಾರು ಬಗೆಯ ಅಶುವಿಸ್ತರಣೆಗಳನ್ನು ಮಾಡಿ, ಮಾಡಿ ಮೂಲಧ್ರವ್ಯಕ್ಕೆ ಎಲ್ಲೂ ಧಕ್ಕೆಯಾಗದಂತೆ, ರಂಜನರ-ಚಿಂತನೆ ಬೆರೆಸುತ್ತಾ ನಾಟಕವನ್ನು ಕಟ್ಟುತ್ತಾ ಹೋದೆವು….
ನಮ್ಮ ಕಿಂದರಿಜೋಗಿ ನಾಟಕದ ನಾಲ್ಕು ಅಚಿಣಟಿರ ಪ್ರದರ್ಶನಗಳನ್ನು ಇಟ್ಟುಕೊಂಡರೂ, ಪ್ರತಿದಿನ ಪ್ರದರ್ಶನಗಳು ಕೂಡ ಸಾರ್ಥಕ ಬದಲಾವಣೆಗಳು, ಸೃಜನಶೀಲ ಬೆಳವಣಿಗೆಗಳಿಗೆ ಸಾಕ್ಷಿಯಾಗಿ ದಿನದಿಂದ ದಿನಕ್ಕೆ ತುಂಬಿದ ರಾಶಿ ರಾಶಿ ಪ್ರೇಕ್ಷಕರು… ಅಪಾರ ಪ್ರತಿಕ್ರಿಯೆ ಮತ್ತಷ್ಟು ಹುರಿದುಂಬಿಸಿಬಿಟ್ಟಿತ್ತು.
ರಾತ್ರಿಯಿಡೀ ಮರಕ್ಕೆ ಲೈಟು ಕಟ್ಟಿ, ಸೆಟ್ಟುಹೊತ್ತು, ಮಣ್ಣುಮೆತ್ತಿ, ಮೇಷ್ಟ್ರಿಂದ ಬೈಯಿಸಿಕೊಂಡು, ಗಂಗಾಧರಸ್ವಾಮಿ (ನಮ್ಮ ಇನ್ನೊಬ್ಬ ಮೇಷ್ಟ್ರು)ಗಳಿಂದ ಗೊಣಗಿಸಿಕೊಂಡು. ಉಸ್ಸಪ್ಪಾ! ಅಂದುಕೊಂಡರೂ… ಸಂಜೆಹೊತ್ತಿಗೆ ಕಚ್ಚೆತೊಟ್ಟು, ಬಾಲಕಟ್ಟಿ, ಇಲಿಮುಖವಾಡ ಹಾಕಿ, ರಂಗಕ್ಕೆ ಹಾರಿದೆವೆಂದರೆ… ಎಷ್ಟೇ ಕಷ್ಟವನ್ನು ಮರೆತು ಕುಣಿತವೋ ಕುಣಿತ.!
ನಮ್ಮ ಕಿಂದರಿಜೋಗಿ, ವನರಂಗ ಎಲ್ಲವೂ ಮೈಸೂರಿನ ರಂಗಭೂಮಿಯಲ್ಲೇ ದಾಖಲೆಯಾಗಿ ಬಿಟ್ಟವು! ಅದೇ ವರ್ಷ ದೆಹಲಿಯಲ್ಲೂ ಪ್ರದರ್ಶನಗೊಂಡಿತು. ರಾಗ-ಸರಾಗದ ಮೊದಲ ಕಂತಂತೂ ದೆಹಲಿಯಲ್ಲಿ ನಾಟಕಪ್ರಿಯರಿಗೆ, ಶಾಲಾಮಕ್ಕಳಿಗೂ ಒಂದು ಹೊಚ್ಚಹೊಸ ಅನುಭವ ಎಂಬಂತೆ ಸ್ವೀಕಾರವಾಗಿಬಿಟ್ಟಿತು.
ನಮಗೊಬ್ಬರು ಡ್ರಾಯಿಂಗ್ ಟೀಚರ್ಸಹ ಇದ್ದರು. ನಾವೆಲ್ಲಾ ಪ್ರೀತಿಯಿಂದ ದ್ವಾರಕೀ… ಅನ್ನುತ್ತಿದ್ದೆವು. ಮೂರೂವರೆ ಅಡಿಯ ಈ ಮನುಷ್ಯ ಪೆನ್ಸಿಲ್ಲೇ ಸರಿಯಾಗಿ ಹಿಡಿಯಲು ಗೊತ್ತಿಲ್ಲದ ನಮ್ಮ ಕೈಯಲ್ಲಿ ಎಂತೆಂಥಾ ರೇಖಾಚಿತ್ರಗಳು, ಪೇಂಟಿಂಗ್ ಗಳು, ಪೋಸ್ಟರ್ಗಳನ್ನು ಬರೆಸಿಬಿಟ್ಟರು ಎಂದರೆ, ಅವರ ಪ್ರತಿಭೆಯ ಪರಿಚಯ ನಿಮಗಾಗುತ್ತದೆ. ರೇಖೆ, ಕುಂಚ ಚಲನೆ, ಕಲ್ಪನೆ, ಎಲ್ಲಕ್ಕಿಂತ ಹೆಚ್ಚು ಕ್ರಿಯಾಶೀಲ ಗುಣಗಳನ್ನು ನಮ್ಮ ಅನೇಕ ಹುಡುಗ-ಹುಡುಗಿಯರು ಈತನಿಂದ ತಮ್ಮದಾಗಿಸಿಕೊಂಡಿದ್ದಾರೆ. ಮೂರು ವರ್ಷಗಳಲ್ಲಿ ಮೂರು ದಿವಸವು ಸಿಟ್ಟನ್ನೇ ಮಾಡದ ದ್ವಾರಕೀ ನಮಗೆ ಮೇಷ್ಟ್ರಂತಿರಲಿಲ್ಲ…. ಮಾವಮಮಗ! ಪಾಳುಬಿದ್ದ, ಸುಣ್ಣಕಾಣದ, ನಮ್ಮ ರಂಗಾಯಣದ ಗೋಡೆಗಳಲ್ಲಿ, ಗ್ಲಾಸುಗಳಲ್ಲಿ, ನಮ್ಮ ತಲೆಗಳಲ್ಲಿ ಬುಳುಬುಳು ನದಿಹರಿದು, ಬೆಟ್ಟಕಟ್ಟಿ, ಮೊಡ ಮುಟ್ಟಿಸಿ, ವಿನ್ಯಾಸದ ಅರ್ಥ ಮಾಡಿಸಿದರು.
ನಾವು ಇಲ್ಲಿಗೆ ಬಂದ ಹೊಸತರಲ್ಲಿ ಇನ್ನೂ ಶಿಕ್ಷಕವರ್ಗ ನೇಮಕಗೊಂಡಿಲ್ಲದ ದಿನಗಳಿಲ್ಲದ ನಮಗೆ ಅತಿಥಿ ಉಪನ್ಯಾಸಕರಾಗಿ ಬಂದವರು, ಶ್ರೀ ಕೇಶವರಾವ್… ಕರ್ನಾಟಕದಲ್ಲಿ ಟಿ.ಪಿ.ಕೈಲಾಸಂ ನಾಟಕಗಳನ್ನು ಸರಾಗವಾಗಿ, ಅತ್ಯಂತ ಸ್ಫುಟವಾಗಿ ಅರ್ಥಸಮೇತ ನೀರುಕುಡಿಯ ಬಲ್ಲಷ್ಟು ಸರಾಗವಾಗಿ ಓದಬಲ್ಲ ಬೆರಲೆಣಿಕೆ ಮಂದಿಯಲ್ಲಿ ಈತ ಮುಖ್ಯರು. ಕೈಲಾಸಂ ಕನ್ನಡದಲ್ಲಿ ನಾಟಕ ರಚಿಸಲು ಪ್ರಾರಂಭಿಸಿದ ಹಿನ್ನೆಲೆ, ಸಂಧರ್ಭ, ಅವರ ಜೀವನಚಕ್ರದ ಕುತೂಹಲ ಘಟ್ಟಗಳು, ಎಲ್ಲವನ್ನೂ ನಿಖರವಾಗಿ ಭಾರಪರವಶರಾಗಿ ತಿಳಿಸುತ್ತಿದ್ದರು. ನಮ್ಮಿಂದಲೂ ನಾಟಕ ಓದಿಸಿ, ಭಾಷೆ ಮತ್ತು ಸಾಮಾಜಿಕತೆಯ ಬಗ್ಗೆ ಅವರು ನಮ್ಮನ್ನು ಕೇಳಿದ್ದು ನೆನಪಿದೆ.
ಮಂಡ್ಯ ರಮೇಶ್ ಕಾಲಂ : ಮರಳಿ ಮನೆಗೆ ಬಂದೆವು…
ನಿಮಗೆ ಇವೂ ಇಷ್ಟವಾಗಬಹುದು…

Rameshravare nimma baravanige thumba vishayagalanuu olagondide. RangaBhoobiya Asaktarige olleya online patyadantide. Munduvarisi. Naavu mundina sanchikege kaayutteve.Dhanyavaadagalu