ಅಜ್ಜನ ಕೋಲಿದು ನನ್ನಯ ಕುದುರೆ!
ಅವರೇಕೆ ಹಾಗೆ ಕನವರಿಸಿದರೋ ನನಗೆ ಈಗಲೂ ಅರ್ಥವಾಗುತ್ತಿಲ್ಲ! ‘ಅಪ್ಪ ಪೂರ್ಣ ಹಾಸಿಗೆ ಹಿಡಿದಿದ್ದಾರೆ ಎಚ್ಚರವಾದಾಗಲೊಮ್ಮೆ ನಿಮ್ಮ ಹೆಸರು ಹೇಳ್ತಾರೆ ಬಂದು ಹೋಗಿ’ ಅಂತ ಗೌರಿ ದತ್ತು ಅವರು ಫೋನ್ ಮಾಡಿದರು…… ಈ ಜಂಜಾಟದಲ್ಲಿ ಸಿಕ್ಕಿಬಿಟ್ಟಿದ್ದೆ. ತಡ ಆಗುತಿತ್ತು… ದುನಿಯಾ ವಿಜಿ ಫೋನ್ ಮಾಡಿ ಅಣ್ಣಾ, ನಿಮ್ಮನ್ನು ನೆನೆಸ್ತಾರೆ ಹೋಗಿ ಬನ್ನಿ! ಅಂದ.. ತಲೆ ಗಿರ್ರಂತು.! ಅವರ್ಯಾಕೆ ನನ್ನ ನೆನೆಸಬೇಕು… ಅವರ ಅರ್ಧದಷ್ಟೂ ಆಯಸ್ಸಾಗದ ನಾನು ಈ ಹಠಮಾರಿ ಅಜ್ಜನ ಕೊನೆಗಾಲದ ಇಂಗಿತವೇನು ಅಂತ ಊಹಿಸಲಾಗದೆ ಗೊಂದಲಕ್ಕೊಳಗಾದೆ.
ಒಂದೆರಡು ದಿನಗಳ ನಂತರ ಬೆಂಗಳೂರಿಗೆ ಇದಕ್ಕಾಗೆ ಹೊರಟೆ. ತಲೆ ತುಂಬಾ ಒಂದೇ ಪ್ರಶ್ನೆ ‘ತೀರಾ ವಯಸ್ಸಾಗಿದೆ’ ‘ರಂಗಭೂಮಿ’ಗೆ ನಿಜದ ಹೋರಾಟ ಮಾಡಿದ ಈ ‘ಏ.ಎಸ್.ಮೂರ್ತಿ’ ಅನ್ನುವ ಪೂರ್ಣವಾಗಿ ಯಾರಿಗೂ ಅರ್ಥವಾಗದ ಮುದುಕನನ್ನು ನೋಡಲು ನಾನು ಸುಮ್ಮನೆ ಹೊರಟ… ಹೊರಡಿಸಿದ ಅಂಶ ಯಾವುದದು.?
‘ಅಭಿನಯ ತರಂಗ’ಕ್ಕೆ ಬಂದೆ, ಮಗ ಪ್ರಕಾಶ ಸಿಕ್ಕ… ತರಾತುರಿಯಲ್ಲಿ ನನ್ನ ಕರೆದೋಯ್ದ. ಒಳಗೆ ತಣ್ಣಗೆ ಮಲಗಿತ್ತು ಅಜ್ಜ… ಹತ್ತು ದಿನಗಳಿಂದ ಪೂರ್ಣ ಹಾಸಿಗೆ ಹಿಡಿದಿತ್ತು. ‘ನಾನು ಮಂಡ್ಯ ರಮೇಶ’ ಅಂದೆ. ಮುಖ ಅರಳಿತು ಅವರದು! ಕಣ್ಣಲ್ಲೊಂದು ಸಣ್ಣ ಹೊಳಪು! ‘ನಾಟಕ ಯಾವುದು ಮಾಡಿಸಿದೆ? ಅಂದ್ರು’ ನನಗೆ ಅಚ್ಚರಿ! ಶರಶಯ್ಯೆಯಲ್ಲಿರೋ ಭೀಷ್ಮನಂತೆ ಕಂಡರು. ಅಲ್ಲಿಂದಾಚೆಗೆ ಬರೋಬ್ಬರಿ ಎರಡು ಘಂಟೆಗೂ ಹೆಚ್ಚು ಅವರ ಪಕ್ಕದಲ್ಲೇ ಅವರ ಮೃದುವಾದ ಹಸ್ತದಲ್ಲಿ ನನ್ನ ಕೈಗಳನಿಟ್ಟು ಕುಳಿತಿದ್ದೆ. ಆ ವಯಸ್ಸಿನಲ್ಲೂ ಹತ್ತು ನಿಮಿಷಕ್ಕೊಮ್ಮೆ ನಾಟಕಗಳ ಬಗ್ಗೆ, ತಂಡಗಳ ಬಗ್ಗೆ, ಮಾತನಾಡುತ್ತಲೇ ಹೋದರು. ಮಧ್ಯೆ ಮಧ್ಯೆ ಮಾತು ನಿಲ್ಲಿಸಿದರು. ಸ್ಮೃತಿ ಹೋಗುತ್ತಿತ್ತು…. ಏದುಸಿರು ಬರುತಿತ್ತು…. ರಂಗಭೂಮಿಯ ಕುರಿತು ತುಂಬಾ ಕಾಳಜಿಯಿಂದ ಮಾತನಾಡಿದರು. ಮಾರನೇ ದಿನ ಅವರ ತಂಡವಾಡುವ ಮಕ್ಕಳ ನಾಟಕಕ್ಕೆ ಏನಾಗ ಬೇಕೆಂದು ಮಲಗಿದ್ದಲ್ಲಿಯೇ ಭರದ ಸಿದ್ದತೆ ನಡೆಸಿದ್ದರು. ಭಾಷಣ ಕೂಡ ತಯಾರು ಮಾಡಿಕೊಳ್ಳತ್ತಿದ್ದರು! ನಮಗೆ ಮೆಲು ನಗುವಿಗಿಂತಲೂ ಅಚ್ಚರಿ! ದಿನಕ್ಕೆ ಬರೀ ನಾಲ್ಕಾರು ಚಮಚ ಹಾಲು ಮಲಗಿದಲ್ಲಿಯೇ ಕುಡಿದು… ಉಸಿರಾಡುವುದೇ ತ್ರಾಸದಾಯಕವಾಗಿರುವಾಗ… ‘ಮೈಕ್ ಹಿಡಿದು ಹೂಂ ಕರಿಸಿ ಮಾತನಾಡಿ ಎಲ್ಲರನ್ನು ಬೆಚ್ಚಿಬೀಳಿಸುವ’ ಆಸೆ ಇದೆಯೆಲ್ಲಾ ಆ ಆಸೆ ಅಪರೂಪದ್ದು! ಕೃಶವಾದ ದೇಹದಲ್ಲೂ ಕ್ರಿಯಾಶೀಲ ಕನಸುಗಳ ಮಹಾ ಭೋರ್ಗರೆತ! ಅದಕ್ಕೆ ಅಂದೆ ‘ಮನಸ್ಸು ಯೌವ್ವನದಲ್ಲಿ ನಿಂತಿದೆ… ದೇಹ ವಯಸ್ಸಿನ ಕಾರಣಕ್ಕೆ ಬಡವಾಗಿದೆ!’ ಆದರೇ ಉತ್ಸಾಹ ತಣಿಯದಿರುವುದರಿಂದ… ಧ್ವನಿ ಹೊರ ಬಂದರೇ… ‘ಇಡೀ ಕರ್ನಾಟಕಕ್ಕೆ ಪ್ರಿಯವಾದ ‘ಈರಣ್ಣ’ ಪ್ರಚಂಡ ಧ್ವನಿ’ ಅದು. ಕೊನೆಗಾಲದಲ್ಲೂ ಧ್ವನಿ ಕುಗ್ಗಿರಲಿಲ್ಲ! ಅದೇ ಆಶ್ಚರ್ಯ, ‘ಆಯಾಸ ಆಗುತ್ತೆ, ಕಣ್ಮುಚ್ಚಿ ಅಂದೆ’… ನೆಟ್ಟ ದೃಷ್ಟಿಯಿಂದ ನೋಡುತ್ತಲೇ ಇದ್ದರು! ಇಲ್ಲ ಮಲಗಲ್ಲ… ಮಾತನಾಡಬೇಕೆನ್ನುವ ಆಸೆ ಅವರಿಗೆ… ನನಗೆ ಕಳವಳ.. ರಂಗಮಂದಿರ ನಿರ್ಮಾಣ ಮಾಡುತ್ತಿರುವುದರ ಬಗ್ಗೆ… ಹೊಸ ನಾಟಕಗಳು ತುಂಬಾ ಚೆನ್ನಾಗಿ ಜನರಿಂದ ಸ್ವೀಕೃತವಾಗುತ್ತಿರುವುದರ ಬಗ್ಗೆ, ಸಂಘಟನೆಯ ತಾಪತ್ರಯಗಳ ಬಗ್ಗೆ ಕೇಳಿ ಕೇಳಿ ತಿಳಿದುಕೊಂಡರು. ‘ತುಂಬಾ ಒಳ್ಳೆಯ ಕೆಲಸ ಮಾಡ್ತಿದ್ದಾನೆ’ ಅಂತಾ ಮಗನ ಬಳಿ ಅಭಿಮಾನದಿಂದ ನನ್ನ ಅಂಗೈ ಅದುಮುತ್ತಾ ಹೇಳುವಾಗ ನನಗೆ ತಡೆಯಲಾಗಲಿಲ್ಲ… ಕಣ್ಣಲ್ಲಿ ನೀರು ತನಗೆ ತಾನೇ ಜಾರಿದ್ದು ಅರಿವಿಗೆ ಬಂತು… ಧಾವಂತಗಳನ್ನೆಲ್ಲಾ ದಾಟಿ ‘ಮತ್ತೆ ಮಗುವಾಗಿ ಬಿಡುವ’ ಘಳಿಗೆಗಳು ತುಂಬಾ ಭಾವಪರವಶನನ್ನಾಗಿ ಮಾಡಿ ಬಿಡುತ್ತದೆ…. ನಿಧಾನವಾಗಿ ಕೈ ಬಿಡಿಸಿಕೊಂಡು ಮೇಲೆದ್ದೆ. ಹೊಸಿಲ ಬಳಿ ಗೌರಿ ಅವರ ಜೊತೆ ತುಂಬಾ ಹೊತ್ತು ‘ಅನಸು’ ಆವರಣದ ಆ ದಿನಗಳ ಕ್ರಿಯಾಶೀಲ ವೈಭವಗಳನ್ನು ನೆನಪಿಸಿಕೊಳ್ಳುತ್ತಾ… ಹೊರಬಿದ್ದೆ….
ಕಾಲೇಜು ದಿನಗಳಲ್ಲಿ ನಾಟಕವೆಂದರೇ ಮನೋರಂಜನೆ ಮಾತ್ರ ಅಂತಾ ಭಾವಿಸಿಕೊಂಡಿದ್ದ ನನಗೆ ಅದು ‘ಪ್ರತಿಭಟನೆಯ ಅಸ್ತ್ರ’ ಅಂತಾ ಸ್ಪಷ್ಟವಾಗಿ ಬೀದಿನಾಟಕಗಳ ಮೂಲಕ ತೋರಿಸಿಕೊಟ್ಟದ್ದೇ ಶ್ರೀ ಏ.ಎಸ್.ಮೂರ್ತಿಗಳು. ಅದೆಂತಹ ರೊಚ್ಚು! ಚಡಪಡಿಕೆ, ದುಮ್ಮಾನ ಎಲ್ಲವನ್ನೂ ಮೀರಿದ ‘ವಿಡಂಬನಾತ್ಮಕ’ ಗುಣ ಅವರನ್ನು ತುಂಬಾ ಜೀವಂತವಾಗಿಟ್ಟಿತ್ತು…. ಕಾವು ಕಳೆದಕೊಂಡಿರೋ ಚಳುವಳಿಗಳ ಕಾಲ ಇದು… ಅವರು ಆಕಾಶವಾಣಿಯಲ್ಲಾಡುತ್ತಿದ್ದ ನಿರರ್ಗಳ ವಾಗ್ಝರಿ…, ‘ಬೀದಿ’ಯಲ್ಲಿ ಹರಿಯತೊಡಗಿ ಲಕ್ಷಾಂತರ ಜನರನ್ನು ಎಚ್ಚರವಾಗಿರಿಸಿತ್ತು..! ಅದೆಷ್ಟೋ ಮಂದಿ ಕಲಾವಿದರು ಸಮ್ಮೋಹಿನಿಗೆ ಒಳಗಾದವರಂತೆ ಅವರ ಹಿಂದೆ ಕಲಿಯುತ್ತಾ, ನಲಿಯುತ್ತಾ, ಬಲಿಯುತ್ತಾ ಹೋದರು… ಅಭಿನಯ ತರಂಗವಾಲೀ, ಬಿಂಬವಾಗಲೀ, ವಿಜಯನಗರದ ಬಿಂಬ ಆಗಲೀ… ರಂಗಭೂಮಿಯ ಬಗ್ಗೆ, ಸುಗಮ ಸಂಗೀತದ ಬಗ್ಗೆ, ಚಿತ್ರ ಕಲೆಯ ಬಗ್ಗೆ, ಸಿನಿಮಾ ಶಿಕ್ಷಣದ ಬಗ್ಗೆ, ಸಾಹಿತ್ಯದ ಬಗ್ಗೆ… ಹೊಸ ತಲೆಮಾರಿನವರಿಗೆ ಕಳೆದ ವರ್ಷಗಳಿಂದ ರಸಗ್ರಹಣದ ಬಗ್ಗೆ ಬೋಧಿಸಿದ ಪರಿ…. ಈ ಮಣ್ಣಿಗೆ ಸಂದ ಋಣ. ಕನ್ನಡದ ನೆಲದಲ್ಲಿ ಅನೇಕ ಸದೃಢ ಕಲಾವಿದರು ರೂಪುಗೊಂಡದ್ದು…. ಏ.ಎಸ್.ಮೂರ್ತಿ ಅವರ ಗರಡಿಯಲ್ಲೇ…
ಎ.ಎಂ.ಪ್ರಕಾಶನಂಥ ಚಿತ್ರಕಲಾವಿದರು, ಪ್ರಕಾಶ್ ರೈನಂಥ ಅತಿರಥ ನಟರು, ಬಿ.ಸುರೇಶನಂಥ ಪ್ರಜ್ಞಾವಂಥ ಲೇಖಕ-ನಿರ್ದೇಶಕರು, ಡಾ||ಕಶ್ಯಪನಂಥ ಸಮರ್ಥ ನಾಟಕಕಾರರು, ಎಂ.ಡಿ.ಪಲ್ಲವಿಯಂಥ ಶ್ರೇಷ್ಠ ಹಾಡುಗಾರ್ತಿ, ಬರೆದಷ್ಟೂ ಮುಗಿಯದ ಅದ್ವಿತೀಯ ಪ್ರತಿಭೆಗಳಿಗೆ ವೇದಿಕೆ ಕೊಟ್ಟವರು ಏ.ಎಸ್.ಮೂರ್ತಿ. ನನ್ನಂಥ ಅನಾಮಿಕರಿಗೆ, ಅಗೋಚರ ಗುರು ಆ ಅಜ್ಜ! ಅವರ ಧೀಃ ಶಕ್ತಿ ಎಂಬ ಕೋಲು ನಮ್ಮ ಬಣ್ಣದ ಕುದುರೆ!
ಸಿನೆಮಾ ಪ್ರೆಸ್ ಮೀಟ್ಗಳಿಗೆ ಬಂದರೇ ಅವರನ್ನು ಕಂಡೊಡನೆ ಓಡಿಹೋಗುವ ಮಂದಿ, ಮೂಗೆಳೆವ ಮಂದಿಗೂ ಚೆನ್ನಾಗಿ ಗೊತ್ತಿತ್ತು., ಅವರಷ್ಟು ಓದು, ಅನುಭವ, ವಯಸ್ಸು… ಇದ್ಯಾವುದಕ್ಕೂ ತಾವು ಸಾಟಿ ಅಲ್ಲಾ ಅಂತ.! … ಬೆಚ್ಚಿಬಿಡುತ್ತಿದ್ದರು ಒಂದಷ್ಡು ಜನ! ಸ್ಟಾರ್ಗಳಿಗೂ ಮೂರ್ತಿಗಳೆಂದರೆ ಭಯ ಇತ್ತು! ಎಂಬತ್ತೆರಡರ ಆಸು ಪಾಸಿನಲ್ಲೂ ಕರಿಯ ಮುಖದ ಬಿಳಿಯ ಗಡ್ಡದ ನಡುವೆ ಸಿಗರೇಟು ಹಚ್ಚಿ, ಕೈಲೊಂದು ಗ್ಲಾಸ್ ಹಿಡಿದು, ಜೀನ್ಸ್ ಪ್ಯಾಂಟ್ ತೊಟ್ಟು ಕಾಲಿನ ಮೇಲೆ ಕಾಲು ಹಾಕಿ ಕುಳಿತು ಪ್ರಶ್ನೆ ಕೇಳಿದರೆಂದರೆ… ಅಷ್ಟೇ! ಕೊನೆಗೆ ಎಲ್ಲರಿಂದಲೂ ನಿಷ್ಠೂರವಾಗಿಯೇ ಬದುಕಿದರು.
ಈಗ ಗಲ್ಲಿಗೆರಡು ಶಾಲೆಗಳಿದೆ ನಿಜ… ಆದರೇ ಆಗ ಕಲೆಯೆಂದರೇ ಮೂಗು ಮುರಿಯುತ್ತಿದ್ದ ದಿನಗಳಲ್ಲಿ, ಹೆಂಡತಿ ಮಗಳು, ಮೊಮ್ಮಗಳು, ಮರಿಮಗಳವರೆಗೆ ಬಣ್ಣ ಹಚ್ಚಿಸಿ ಹಾಡಿಸಿ… ಬಣ್ಣದ ಬದುಕನ್ನು ಅರ್ಥಪೂರ್ಣವಾಗಿ ನಡೆಸಿದ ಕನ್ನಡ ರಂಗಭೂಮಿಯ ಸಾಕ್ಷೀ ಪ್ರಜ್ಞೆ ಅವರು..!
ತಮ್ಮ ದೈವಶಕ್ತಿ ನಾಲಿಗೆಯ ಮೇಲೆ ತಾವೇ ಎಡವಿಬಿದ್ದಂತೆ ಕಂಡರೂ… ಎಂದೂ ಸ್ವಾಭಿಮಾನ ಬಿಟ್ಟುಕೊಟ್ಟಿರಲಿಲ್ಲ…! ಸಾಮಾಜಿಕ ಕಳಕಳಿಗೆ ಯಾರಾದರೂ ಮನಸೋಲಲೇಬೇಕು, ಸರಳ ರಂಗಭೂಮಿಯ ಮೂಲಕ ರಂಗಭೂಮಿಯಲ್ಲಿ ಶ್ರೇಷ್ಠತೆಯ ಸಾಧಿಸುವ ಹಂಬಲ ಕೊನೆಯ ದಿನದವರೆಗೂ ಅವರಲ್ಲಿತ್ತು.
ಹೈಸ್ಕೂಲು-ಕಾಲೇಜು ವಾರ್ಷಿಕೋತ್ಸವಗಳಲ್ಲಿ ಕೆ.ಗುಂಡಣ್ಣ, ಪರ್ವತವಾಣಿ, ಏ.ಎಸ್.ಮೂರ್ತಿಯವರ ನಾಟಕಗಳನ್ನು ಶತಮಾನಗಳ ಕಾಲ ಆಡಿರದ ಪಾಪಿಗಳಿಲ್ಲ! ಅಷ್ಟೊಂದು ಜನಜನಿತ! ಏ.ಎಸ್.ಮೂರ್ತಿಯವರ ತೀರದ ಹೆಗ್ಗಳಿಕೆಯೆಂದರೇ., ವಾರ್ಷಿಕೋತ್ಸವದ ಸಾಮಾಜಿಕ ನಗೆನಾಟಕಗಳನ್ನು ರಚಿಸುತ್ತಿದ್ದ ವ್ಯಕ್ತಿ. ತೀರಾ ಆಧುನಿಕ ಪ್ರಜ್ಞೆಯ ಹೊಸ ಚಿಂತನೆಗಳ ನಾಟಕ ಚಳುವಳಿಗೆ ತೆರೆದುಕೊಂಡ ಪ್ರಕ್ರಿಯೆ. ಅತ್ಯಂತ ಗಮನಾರ್ಹ ಮತ್ತು ಅಧ್ಯಯನ ಯೋಗ್ಯ ಬದುಕದು.
ಮುಖಕ್ಕೆ ಬಡಿದಂತೆ ಮಾತನಾಡಿ ಜೀವಮಾನವಿಡೀ ಶತ್ರುರಾಶಿಯನ್ನು ಎದುರುಹಾಕಿಕೊಂಡೇ ಬದುಕಿದ ಮೂರ್ತಿಯವರು ಅದರ ನಾಲ್ಕರಷ್ಟು ಅಭಿಮಾನಿಗಳನ್ನು ಹೊಂದಿದದ್ದೂ ತಮ್ಮ ‘ಸಂಹವನ ಶಕ್ತಿ’ – ‘ಕೌಶಲ್ಯ’ದ ಕಾರಣಕ್ಕಾಗಿ ಮತ್ತು ‘ಕಾಯಕ ಶ್ರದ್ಧೆ’ಯಿಂದಾಗಿ…
ಮತ್ತೆ ನನಗೆ ಅದೇ ಪ್ರಶ್ನೆ ಅವರ ಶಿಷ್ಯ ಪಾಳೆಯದ ಲಕ್ಷಾಂತರ ಮಂದಿಯ ನಡುವೆ ನನ್ನನ್ಯಾಕೆ ಸಾವಿನ ಮುನ್ನ ಕರೆಕಳಿಸಿದರು..?
ಅದಕ್ಕಿಂತಲೂ ಕಾಡುವುದು…. ಅವರಿಗೆ ದಕ್ಕಬೇಕಾದ್ದು ದಕ್ಕಲಿಲ್ಲ..!
‘ಮರ್ತೇಬುಟ್ಟಿದ್ದೆ’! ಆಕಾಶವಾಣಿಯ ‘ಈರಣ್ಣ’ನ ದನಿ ಇವತ್ತಿನ ಚಳುವಳಿಗಳ ಹಾಗೆ ಉಡುಗಿದೆ!



ರಮೇಶ್… ಮನ ತಟ್ಟುವಂಥ ಬರಹ… ನಾನು ಕೂಡ ಮೂರ್ತಿಗಳ ನಾಟಕಗಳಲ್ಲಿ ಪಾತ್ರವಾಡುತ್ತಲೇ ಬೆಳೆದವನು. ರಂಗಕರ್ಮಿಯಾಗಿ, ಪತ್ರಕರ್ತನಾಗಿ ಮತ್ತು ಗೀತರಚನಕಾರನಾಗಿ ನಾನು ಅವರ ಮಾರ್ಗದರ್ಶನ ಪಡೆದಿದ್ದೆ… ಒಮ್ಮೆ ‘ಕವಿಮನ’ ಕಾರ್ಯಕ್ರಮಕ್ಕೆ ಹಾಗಿದ್ದ ಸಂದರ್ಭದಲ್ಲಿ ಅವರು ನನ್ನನ್ನು ಹರಸಿದ್ದರು.
”…’ಕಲಾಮಂದಿರ’ ಕರ್ನಾಟಕದ ಮಟ್ಟಿಗಿನ ‘ಶಾಂತಿನಿಕೇತನ’…” ಅಂತ ಅವತ್ತು ಹೇಳಿದ್ದ ಮಾತನ್ನು ಈಗ ಪುನರುಚ್ಚರಿಸುತ್ತಿದ್ದೇನೆ.
ಆ ಅಜ್ಜನ ನೆರಳಿನಲ್ಲಿ ಬೆಳೆದ ಹೆಗ್ಗಳಿಕೆ ನನ್ನದು. ಸಿಗರೇಟಿನ ಘಾಟು ಹೊಗೆಯಲ್ಲಿ ಬಿಳಿಯ ಗಡ್ಡದ ತಾತನ ಮಾತಿನ ಕಚಗುಳಿ ಮರೆಯುವುದೆಂತು.ನಮ್ಮ ಪಾಲಿಗೆ ಅವರು ತಮ್ಮ ಕೈಚೀಲದಿಂದ ನಿಂಬೇಹುಳಿ ಪೆಪ್ಪರಮೆಂಟ್ ತೆಗೆದು ಕೊಡುತ್ತಿದ್ದ ಸ್ಯಾಂಟಾಕ್ಲಾಸ್ ನೂ ಹೌದು, ನಾಟಕ ಹೇಳಿ ಕೊಡುವ ನಾಟಕದ ಮೇಷ್ಟರೂ ಹೌದು, ರಂಗದ ಮೇಲೆ ತಬ್ಬಿಬ್ಬು ಮಾಡುವಾ ಸಹನಟನೂ ಹೌದು. ಕೊನೆಗೂ ಮನದಲ್ಲಿ ಉಳಿದಿರುವ ಭಾವ ಒಂದೆ -hats off ತಾತ.
ರಮೇಶ್ ಅವರೇ,
ತಾನು ಸಾಯುವ ಕೊನೆ ಗಳಿಗೆಯಲ್ಲಿ ಅಪ್ಪ, ತನ್ನ ಆಪ್ತ ಸ್ನೇಹಿತರನ್ನ, ತಾನು ಅತಿಯಾಗಿ ಹಚ್ಚಿಕೊಂಡವರನ್ನ,ಪ್ರಸಿದ್ಧ ಶಿಷ್ಯರುಗಳನ್ನ, ಬಂಧುಗಳನ್ನ ನೆನೆಯದೆ ನಿಮ್ಮನ್ನು ನೆನೆಯುತ್ತಿದ್ದುದ್ದು ನನಗೂ, ಮನೆಯವರಿಗೂ ಆಶ್ಚರ್ಯ. ನೀವು ಬಂದಾಗ ಅಪ್ಪ, ನಿಮ್ಮ ರಂಗಭೂಮಿಯ ಕೆಲಸವನ್ನು ಮನಸಾರೆ ಹೊಗಳಿದ್ದು ಇನ್ನೂ ನನ್ನ ಕಿವಿಯಲ್ಲಿದೆ. ನಿಮ್ಮನ್ನು ನೋಡಿ, ಮಾತನಾಡಿದ ನಂತರ ತನ್ನ ಕೊನೆಯಾಸೆ ತೀರಿತೇನೋ ಎಂಬಂತೆ ಅಪ್ಪ ವರ್ತಿಸಿದ್ದು, ಅದಾದ ಮೂರೇ ದಿನಕ್ಕೆ ಅಪ್ಪ ತೀರಿಕೊಂಡಿದ್ದು ನಮಗಂತೂ ಅಚ್ಚರಿಯೆ.
ಬಹುಮುಖಿ ಎ.ಎಸ್.ಮೂರ್ತಿ ಅವರು ತೀರಿ ಹೋದ ನಂತರ ಬಹುಶಃ ನಾನು ಕಂಡಂತೆ, ಅವರ ಬಗೆಗಿನ ಅತ್ಯುತ್ತಮ, ಆಪ್ತ ಬರಹ ಇದೊಂದೆ!!