ಬಣ್ಣದ ಬೇರು
ಬೇರೆ ಬೇರೆ ಬಗೆಯ ನಟರಿರ್ತಾರೆ. ಪ್ರತೀ ನಟರಿಗೂ ಅವರದ್ದೇ ಆದ ವಿಶೇಷ ಗುಣಗಳು ಇರ್ತಾವೆ. ಆ ವಿಶೇಷತೆಗೆ ನಾವು ಹೋಲಿಕೆ ಗುಣಗಳನ್ನು ಕಂಡುಕೊಳ್ಳುವುದು ಸಾಧ್ಯವಾದರೆ., ಅದು ಪಾತ್ರ ಬೆಳವಣಿಗೆಗೆ ಸಹಾಯವಾಗುತ್ತದೆ. ಉದಾಹರಣೆಗೆ, ಬೆಂಕಿಯ ಹಾಗೆ, ನೀರಿನ ಗುಣ, ಗಾಳಿಯಷ್ಟು ಹಗುರ, ಭೂಮಿಯಂತೆ ಭಾರ,… ಹಾಗೆ ಗುಣಗಳು ಪ್ರಕೃತಿಯ ಒಡನಾಟದಿಂದ, ಏಕಾಗ್ರತೆಯಿಂದ ಎಲ್ಲವೂ ಸಾಧ್ಯವಿದೆ ಎನ್ನುವ ಮಾರ್ಟಿನ್ ನಮ್ಮ ಜೊತೆ ಕಳೆದ ದಿನಗಳನ್ನೇ, ಮೈಸೂರ್ ಮ್ಯಾನುಯಲ್ ಎಂಬ ಪುಸ್ತಕರೂಪದಲ್ಲಿ ಪ್ರಕಟಿಸಿ ಬಿಟ್ಟ. ನಟರಿಗೆ ತುಂಬಾ ಉಪಯೋಗವಾಗುವ ಪುಸ್ತಕವದು.
ಕ್ರಿಸ್ಮಸ್ ದಿನ ಆತನ ಸಿಹಿ ಹಂಚಿಕೆ ಕಾರ್ಯಕ್ರಮ ಒಂದು ಒಳ್ಳೆ ತರಗತಿಯಾಗಿತ್ತು ಅಂತಾ ನಮಗೆ ಗೊತ್ತಾಗಿದ್ದು ತಡವಾಗಿ!
ಈ ಹಿಂದೆ ಬಂದಿದ್ದ ಶ್ರೀ ಫಿಲಿಪ್ ಜರೇಲಿ ಹಾಗು ಶ್ರೀಮತಿ ಜರೇಲಿ ಮಾಡಿಸಿದ್ದ ಅಭ್ಯಾಸಗಳೂ ನಟನ ಶಕ್ತಿ ಮತ್ತು ಮನೋಭೂಮಿಕೆಯನ್ನು ಉಸಿರಾಟದ ಮೂಲಕ ಪ್ರಭಲವಾಗಿ ಕಾಯ್ದಿಡುವುದೇ ಆಗಿತ್ತು. ಈ ದಂಪತಿಗಳ ಜೊತೆಗೆ ಮಗಳೂ ಬಂದಿದ್ದಳು…. ಹೇಗಿದ್ದಳು ಅಂತೀರೀ…? ಅಭ್ಯಾಸಿ ಹುಡುಗರ ನಿದ್ದೆಗೆಡಿಸಿದ್ದಳು…!
ಪ್ರತೀ ಸೋಮವಾರ ಮುಂಜಾನೆ ವಾಕಿಂಗ್ ಕ್ಲಾಸ್ನಲ್ಲಿ ಟೀಗಾಗಿ ದುಂಬಾಲು ಬಿದ್ದು ಯಾರಾದರೂ ಗೆಳೆಯರಿಗೆ ತಲೆತಿನ್ನುತ್ತಿದ್ದೆವು…. ವಾಕಿಂಗ್ ಮುಗಿಸಿ ರಂಗಾಯಣದ ಅಭಿಮಾನಿ ಗೆಳೆಯರ ಮನೆಯವರು ತಿಂಡಿಗಾಗಿ ಆಹ್ವಾನಿಸುತ್ತಿದ್ದರು…. ಶ್ರೀ ಗೋಪಾಲಕೃಷ್ಣ ನಾಯರಿ, ಶ್ರೀ ವರ್ಮ, ಶ್ರೀಮತಿ ನಂದಿನಿ, ನಾ.ರತ್ನ, ಸಿಂಧುವಳ್ಳಿ…. ಒಮ್ಮೆ ಡಿ.ಸಿ.ಮನೆಗೂ ಧಾಳಿಯಿಟ್ಟು ಮೇಯ್ದು ಬಂದಿದ್ದೆವು….(ಆಗ ವಿ.ಪಿ.ಬಳಿಗಾರ್ ಇದ್ದರು)
ಮದುವೆ, ಮುಂಜಿ ಊಟಗಳಿಗೂ ಇಡೀ ತಂಡ ಸಂಕೋಚವಿಲ್ಲದೆ ಹಾಜರಾಗಿದ್ದೂ ನೆನಪಿದೆ. ವಾಸು ಅನ್ನೋವ್ರ ಮಗನ ಮುಂಜಿ. ನಮ್ಮ ಆಫೀಸ್ ಕ್ಲರ್ಕ್ ತಾರಾಸರಸ್ವತೀ, ಯೋಗಣ್ಣನವರ ಮಗನ ಮದುವೆ, ನಮ್ಮ ವಾಚ್ಮನ್ ಜಯಣ್ಣನವರ ಮನೆಗೆ, ಕೇಶವರಾವ್ರವರ ಮನೆ ಗೃಹಪ್ರವೇಶ.. ಹೀಗೆ.. ಅಯ್ಯಯ್ಯೋ! ಎಷ್ಟೊಂದು ನೆಂಟರು ನಮಗೆ!! ಮೈಸೂರಿನಲ್ಲಿ ಸಂಪರ್ಕ ಭಾಂದವ್ಯಗಳು ಹೆಚ್ಚಲು ಇವೂ ಕಾರಣವಾಗಿವೆ.
ಕವಿ ಅಡಿಗರ ಭೂಮಿಗೀತವನ್ನು ರಂಗಕ್ಕೆ ತರುತ್ತಾರೆ ಅಂತ ಸುದ್ದಿ ಇತ್ತು. ನಾವೇ ಅಂತ ತಿಳಿದು ವಾಹ್! ಇದು ಛಾಲೆಂಜಿಂಗ್! ಅನ್ನಿಸ್ತು. ಕಾಲೇಜಿನಲ್ಲಿದ್ದಾಗ ಅದನ್ನು ಓದಿ, ಓದಿ ಅರ್ಥವಾಗದೇ ಗೊಣಗಿಕೊಂಡಿದ್ದುಂಟು. ಈಗಲೂ ಪೂರ್ಣ ಅರ್ಥವಾಗಿದೆ ಎಂದಲ್ಲ, ಯಾವುದೋ ಒಳ್ಳೆ ಕವನ ಯಾವತ್ತಿಗೂ ಒಂದೇ ಅರ್ಥ ಹೊಂದಿರೋದಿಲ್ಲ. ಪ್ರತಿ ಓದಿಗೂ ಬೇರೆ ಬೇರೆ ಕಾಲಕ್ಕೂ ಹೊಸ ಅರ್ಥ ಪಡೆದುಕೊಳ್ಳುತ್ತಾ ಹೋಗುತ್ತದೆಯಾದರೂ., ಇಂಥದ್ದೊಂದು ಕ್ಲಿಷ್ಟಕವನವನ್ನು ದೃಶ್ಯೀಕರಿಸಲು ನಾವು ಹೊರಟಿದ್ದು. ಈ ಧೃವೀಕರಣ ಸಮಂಜಸವೇ? ಎಂಬ ಪ್ರಶ್ನೆಯೂ ಇತ್ತು. ಆದರೆ ಒಂದು ಸಾಧ್ಯತೆ. ಇದೇ ಪರಿಪೂರ್ಣ ಎನ್ನುವ ಅಹಂಕಾರ ಖಂಡಿತಾ ನಮಗಿರಲಿಲ್ಲ.
ಮುಂದೆ….

….ನಮ್ಮ ಹುಡುಕಾಟ ಮುಂದುವರೆದಿತ್ತು. ಶ್ರೀ ಮಾಧವ ಕುಲಕರ್ಣಿ, ಶ್ರೀ ಜಿ.ಹೆಚ್.ನಾಯಕ್, ಶ್ರೀ ಎಸ್.ಆರ್.ರಮೇಶ್…. ಹೀಗೆ ಅತಿಥಿ ಉಪನ್ಯಾಸಕರು ಪದ್ಯದ ಅರ್ಥ, ಹಿನ್ನೆಲೆ… ಎಲಿಯಟ್ನ ಕಾವ್ಯ ವೇಸ್ಟ್ಲ್ಯಾಂಡ್ ಹಾಗು ಅವತ್ತಿನ ಭಾರತದ ಸಾಮಾಜಿಕ ಸಂದರ್ಭ, ನವೋದಯದಿಂದ ನವ್ಯಕ್ಕೆ ಏರುತ್ತಿದ್ದ ತಳಮಳ…. ಹೀಗೆ ಅಡಿಗರು ಹಾಗು ಭೂಮಿಗೀತ ವಿಶ್ಲೇಷಿಸುವ ಯತ್ನ ಮಾಡಿದರು. ನಮಗೆ ಕೊಂಚ ಉಪಯೋಗವಾದರೂ ಪೂರ್ಣ ಸಮಾಧಾನವೇನೂ ಆಗಲಿಲ್ಲ. ಮತ್ತೆ ನಮ್ಮ ಹುಡುಕಾಟ ಮುಂದುವರೆದಿತ್ತು.
ನಮ್ಮ ಎಲ್ಲಾ ಹುಡುಗ-ಹುಡುಗಿಯರು ದೇಹ ಪ್ರತೀ ಸಾಧ್ಯತೆಯನ್ನು ಇಂಚೂ ಬಿಡದಂತೆ ಪರಿಕರವನ್ನಾಗಿ ಬಳಸಿಕೊಳ್ಳಬೇಕೆಂಬ ಹಠವನ್ನು ಜೋಷಿಯವರು ತೊಟ್ಟಿದ್ದ ಹಾಗೆ ನಮ್ಮವರೂ ಸಹ ಮೈ-ಮನಸ್ಸುಗಳಿಗೆ ಬಲವಾದ ಕಸರತ್ತು ಕೊಟ್ಟಿದ್ದರು. ಭೂಮಿ, ಮಣ್ಣು, ಹಾವು, ಆಕಾಶ, ನೀರು, ಮುತ್ತು ವಜ್ರ, ಮಗು, ಮುದುಕಿ, ಹಕ್ಕಿ, ಮರ… ನೂರು ಸಹಸ್ರಗಳನ್ನು ಗೋಲಾಕಾರದ ರಂಗದಲ್ಲಿ ಪ್ರತಿಮೆಗಳಾಗಿ, ಸಂಕೇತದಲ್ಲಿ ಹಿಡಿದಿಡಲು ತೊಡೆತಟ್ಟಿ ನಿಂತೆವು.
ಪದ್ಯದ ಒಂದೊಂದು ಸಾಲಿಗೆ ಅರ್ಥ ಮೂಡಿಸುವ ಮೂರ್ನಾಲ್ಕು ತಂಡಗಳು ತಲೆಕೆಡಿಸಿಕೊಂಡು ಅಶುವಿಸ್ತರಣೆ ಮಾಡಿದಾಗ, ಒಂದೊಂದು ತಂಡದ ಆಕರ್ಷಕವೆನಿಸುವ ಮುಖ್ಯ ನಾಟಕೀಯ ಗುಣವುಳ್ಳ ಅರ್ಥಪೂರ್ಣವೆನಿಸುವ ಕ್ಷಣಗಳನ್ನು ಆಯ್ದು, ಒಂದೆಡೆ ಪೋಣಿಸುವ ಕೆಲಸ ಜೋಶಿ ನಿರ್ವಹಿಸುತ್ತಿದ್ದರು. ಮೂರು ವರ್ಷಗಳಲ್ಲಿ ರಂಗಾಭ್ಯಾಸಿಗಳ ಕಲ್ಪನಾಶಕ್ತಿ, ಚಾತುರ್ಯತೆಗಳನ್ನು ಹೇರಳವಾಗಿ ನೋಡಬಹುದಾಗಿದ್ದ ಪ್ರಯೋಗ – ಭೂಮಿಗೀತ. ಶ್ರೀ ಜೋಷಿಯವರು ಮಿತಪರಿಕರಗಳಲ್ಲಿ ಇಡೀ ಕವನವನ್ನು ಬಟ್ಟೆಗಳನ್ನು ಬಳಸಿ ದೃಶ್ಯಕ್ಕೊಂದು ರಕ್ಷಾಕವಚ ಕೊಟ್ಟಿದ್ದರು.
ಪ್ರದರ್ಶನದ ದಿನ ಬಂದ ಧಾರಾಕಾರ ಮಳೆ ನಮ್ಮ ರಂಗವನವನ್ನು ಈಜುಕೊಳ ಮಾಡಿಬಿಟ್ಟಿತ್ತು. ಆ ದಿನ ನಾವು ಗುದ್ದಲಿ, ಪಿಕಾಸಿ, ಬಾಣಲಿ ಹಿಡಿದು, ಮಳೆಯಲ್ಲಿ ನೆನೆಯುತ್ತಾ ತಡೆ ಒಡ್ಡಲು ಮಾಡಿದ ಕೆಲಸ ನೆನೆದರೆ, ಈಗಲೂ ಮೈ ಝುಂ ಎನಿಸುತ್ತದೆ. ಎಂಥಾ ಸಮಯದಲ್ಲೂ ನಾಟಕ ಮಾಡಲೇಬೇಕೆಂಬುವ ನಮ್ಮ ನಿರ್ಧಾರಕ್ಕೆ ಮೊದಲ ಪರೀಕ್ಷೆಯಾಗಿ ಆ ದಿನ ಮಳೆ ಸುರಿದಿತ್ತು.
(ಇನ್ನೂ ಇದೆ…)


0 Comments
Trackbacks/Pingbacks