ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂಡ್ಯ ರಮೇಶ್ ಕಾಲಂ : ನಟನ ಹುಟ್ಟಿದ್ದು ಹೀಗೆ (ಭಾಗ – ೧)

ಕನವರಿಕೆ

ಆ ಹೊತ್ತಿಗಾಗಲೇ ಪುಟ್ಟ ಸೆಲೆಬ್ರೆಟಿಯಾಗಿದ್ದ ನಾನು ರಂಗಾಯಣದ ಚಿಣ್ಣರ ಮೇಳದಲ್ಲಿ ಮಕ್ಕಳು ನನ್ನನ್ನು ಮುತ್ತಿಕೊಳ್ಳುತ್ತಿದುದ್ದನ್ನು ಕಂಡು ರೋಮಾಂಚಿತನಾಗಿದ್ದೆ. ಪೋಷಕರು ಪ್ರೀತಿ ಮಾಡಿದರು. ಇವರನ್ನು ಬಿಟ್ಟು ಅದೆಷ್ಟು ಮಂದಿ ಮಕ್ಕಳು ಬೀದಿ ಅಲೆಯುತ್ತಿರಬಹುದೆಂದು ಯೋಚಿಸಿದೆ. ಒಂದಷ್ಟು ಜನಕ್ಕಾದರೂ ಏನಾದರೂ ಕಲಿಸಬಹುದೆನ್ನಿಸಿತ್ತು.
‘ನಟನ’ ಹೆಸರಿನ ಪುಟ್ಟ ಸಂಸ್ಥೆಯೊಂದನ್ನು ತೆರೆಯಬೇಕೆಂದು ಮನಸ್ಸಿಗೆ ಬಂದೊಡನೆ, ನಾನು ಬದುಕಿನಲ್ಲಿ ನೋಡಿದ ಅನುಭವಿಸಿದ ಅದೆಷ್ಟೊಂದು ತಂಡಗಳು ಕಣ್ಮುಂದೆ ಬಂತು. ಬಾಲ್ಯದಲ್ಲಿ ನಾಗಮಂಗಲದಲ್ಲಿ ನೋಡಿದ ಕಲಾಸಂಘ, ಒಡನಾಡಿದ ಕನ್ನಡ ಸಂಘ, ಹುಡುಗನಾಗಿದ್ದಾಗ ನಾನೇ ಕಟ್ಟಿದ ಶಿವಶಂಕರ ಸಮೀತಿ! ಮಂಡ್ಯದಲ್ಲಿ ಹೈಸ್ಕೂಲಿನಲ್ಲಿದ್ದಾಗ ಬೊಂಬು ಕದ್ದು ಚಪ್ಪರಹಾಕಿ ಗಣಪತಿ ಕೂರಿಸಿ ಗೋಲಕ ಕುಲುಕಿ… ಊರಿನವರ ಬಳಿ ಉಗಿದು ಉಪ್ಪಿನಕಾಯಿ ಹಾಕಿಸಿಕೊಳ್ಳುತ್ತಿದ್ದ ಅನುಭವ, ಕಾಲೇಜಿಗೆ ಬಂದೊಡನೆ ನಾನೆ ಕಟ್ಟಿದ ಕ್ರಾಂತಿಕಾರಿ ನಾಟಕ ತಂಡ ‘ವೇದಿಕೆ’, ನನ್ನ ಬದುಕನ್ನೇ ಬದಲಾಯಿಸಿದ ‘ಗೆಳೆಯರ ಬಳಗ’ ಪ್ರಜ್ಞೆ ರೂಪಿಸಿದ ನೀನಾಸಂ, ತಿರುಗಾಟ, ನಾಟಕಕ್ಕಾಗಿ ಜಗತ್ತು ಸುತ್ತಿದ ಮೈಸೂರಿನ ರಂಗಾಯಣ ಗಂಭೀರವಾಗಿ ಕಲಿತ ರಂಗ ವಿದ್ಯೆಯನ್ನು ಸಾಕ್ಷೀಕೊರಿಸಿಕೊಳ್ಳಲು ರಾಜ್ಯದ ಹಲವು ಊರನ್ನು ಸುತ್ತುತ್ತಿದ್ದಾಗ….
ಪೊನ್ನಂಪೇಟೆ ಕಾರ್ಯಪ್ಪನ ಸೃಷ್ಠಿ ‘ಕೊಡಗು ರಂಗ’, ದೇರಾಜೇ ಮೂರ್ತಿ, ಹೆಬ್ಬಾರ, ಮೋಹನ ಸೋನ, ವಿಟ್ಲದ ರಂಗಾಸಕ್ತರು ಮಲೆನಾಡ ಮೂಲೆಯಲ್ಲಿ ನಿಷ್ಠೆಯಿಂದ ದುಡಿದ ರಕ್ಷೀದಿ ಪ್ರಸಾದ್ರ ಜೈ ಕರ್ನಾಟಕ ಯುವಕ ಸಂಘ, ಸುಂಡ ಹಳ್ಳಿಯ ದಲಿತ ಯುವಕರು…. ಅದೆಷ್ಟೊಂದು ಸಂಘ ಸಂಸ್ಥೆಗಳಲ್ಲಿ ತಿಂಗಳುಗಟ್ಟಳೆ, ವರ್ಷಗಟ್ಟಳೆ ಹಗಲಿರುಳೆನ್ನದೆ ‘ನಾಟಕ’ಕ್ಕಾಗಿ ಪಳುಗುತ್ತಲೇ ಹೋದೆ…. ನಟನಾಗಿ ದುಡಿದ ಅನುಭವಗಳನ್ನು ಒಟ್ಹಾಕಿ… ಮತ್ತೆ ಈಗ ಕೆಲಸ ಸುರು ಮತ್ತೆ ನಾನೀಗ ಒಬ್ಬಂಟಿ!
ಬದುಕು ಹಾಗೆ ಅಲ್ವಾ? ಮತ್ತೆ ಎದ್ದೆ. ಮನೆಯ ಮೇಲೊಂದು ಪುಟ್ಟ ಹಾಲ್ ಮಾಡಿ ‘ಕಾರಂತ ರಂಗ ಮನೆ’ ಎಂದು ಕರೆದೆ.. ‘ನಟನ’ದ ಚಟುವಟಿಕೆಗಳು ಆರಂಭವಾದವು ಸಿನೆಮಾದಲ್ಲಿ ಮುಖ ತೋರಿಸಿ ಕರ್ನಾಟಕಕ್ಕೆ ನನ್ನನ್ನು ಪರಿಚಯಿಸಿದ ನಾಗಭರಣ ಕಾರಂತರ ಭಾವ ಚಿತ್ರಗಳ ಮುಂದೆ ದೀಪ ಹಚ್ಚಿದರು…. ನಾಲ್ಕಾರು ಜನ ಇದ್ದೆವು, ನಾನು, ಸರೋಜ, ಗೌತಮ್, ವಿಶ್ವ, ನಮ್ಮಪ್ಪ, ಬಾಬು…. ಹೀಗೆ, ಆಮೇಲೆ ಸಿಂಗ್ ಬಂದ, ಡ್ಯಾನ್ಸ್ ಹೇಳ್ಕೊಡ್ತೀನಿ ಅಂದ… ಶಾಸ್ತ್ರೀಯ ಕಲಿಕೆ ಬಗ್ಗೆ ನನಗೆ ಅಪಾರ ಗೌರವ…, ರಾಜು ಅನಂತಸ್ವಾಮಿಯನ್ನು ಸುಗಮ ಸಂಗೀತ, ವೀರಭದ್ರಯ್ಯ ಯಾರೇಗಲ್ ಅವರನ್ನು ಹಿಂದುಸ್ತಾನಿಗೆ, ನವೀನ್ ಅಂದಗಾರು ಕರ್ನಾಟಕ ಸಂಗೀತಕ್ಕೆ, ಭರತನಾಟ್ಯಕ್ಕೆ ಶ್ರೀಧರ್ ಜೈನ್… ಎಲ್ಲಾ ಉತ್ಸಾಹದಿಂದಲೇ ಬಂದರು.
ರಾಜುವಿನ ಕೆಲ ಹಾಡಿನ ತರಗತಿಗಳು ಅದ್ಭುತವಾಗಿದ್ದವು. ನಿರಂತತೆಯ ಕೊರೆತೆಯಿಂದಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು…. ಜನ ಜಾಸ್ತಿಯಾಗತೊಡಗಿದರು. ಸಂಘಟನೆಗೆ ಜೀವಶಕ್ತಿಯಾದ ಆರ್ಥಿಕ ವ್ಯವಸ್ಥೆ ಹೊಂದಿಸಲಾಗದೆ ಒದ್ದಾಡತೊಡಗಿದೆ. ಸಂಸ್ಥೆಗೆ ಆ ದಿನಗಳಲ್ಲಿ ನೈತಿಕವಾಗಿ ನನ್ನೊಂದಿಗೆ ಸುನಂದಾ ಮತ್ತು ಶಂಕರ್ ಆಸರೆಯಾಗಿದ್ದರು…. ನಿಧಾನವಾಗಿ ಸತೀಶ್ ಬೈಕಾಡಿ ಮತ್ತು ಜಿ.ಬಿ. ನಾರಾಯಣಸ್ವಾಮಿ ನನ್ನೊಂದಿಗೆ ಜವಾಬ್ದಾರಿ ಹೊತ್ತರು. ಸಂಸ್ಥೆಯಿಂದ ಮೊದಲ ಬಾರಿ ‘ರಜಾ ಮಜಾ’ ಹೆಸರಿನ ಮಕ್ಕಳ ಬೇಸಿಗೆ ಶಿಬಿರ ಆಯೋಜಿಸಿದೆ. ಪೂರ್ಣ ಪರಿಕಲ್ಪನೆ ನನ್ನದಾದರೂ., ನನ್ನೊಟ್ಟಿಗೆ ದುಡಿದವರು ಹಲವರು… ಎಲ್ಲಾ ಹೊಸದು.. ಎಷ್ಟೇ ಅನುಭವವಿದ್ದರೂ ನಾವು, ಸ್ವತಃ ಕೆಲಸದಲ್ಲಿ ತೊಡಗಿದಾಗಲೇ ತಾಪತ್ರಯಗಳು, ಸಂಕಟಗಳು, ಅವಮಾನಗಳು ಅರಿವಿಗೆ ಬರೋದು. ನನ್ನಿಂದ ಶುರುಮಾಡಿ ಪ್ರಪಂಚದ ದೊಡ್ಡ ರಂಗಕರ್ಮಿಗಳಿಗೂ ಎದುರಾಗೋದು ‘ಜಾಗ’ದ ಸಮಸ್ಯೆ. ಎಲ್ಲೆಲ್ಲಿ ಹುಡುಕಿದರೂ ಸಿಗಲಿಲ್ಲ, ಸಿಕ್ಕರೂ ಹೊಂದಿಕೆಯಾಗಲ್ಲ!

ಮನೆಗೆ ಹತ್ತಿರವಾದ ಮಗಳು ಓದುತ್ತಿದ್ದ ಗೋಕುಲ್ ಶಾಲೆಯಲ್ಲಿ ಮೊದಲ ಶಿಬಿರ ಏರ್ಪಟ್ಟಿತ್ತು. ಅದೆಂತಹ ರೋಮಾಂಚಕಾರಿ ಅದ್ಭುತ ಅನುಭವ ಎಂದರೇ ಮೊದಲ ಬೇಸಿಗೆ ಶಿಬಿರ ವೈಭವದ ಯಶಸ್ವಿ. ನಾನು ಕರೆದ ಎಲ್ಲರೂ ಬಂದು ಶಿಬಿರದಲ್ಲಿ ಪಾಲ್ಗೊಂಡು ನಲಿದರು. ಬಿ.ಜಯಶ್ರೀ, ಪ್ರಸನ್ನ, ಡಿ.ಕೆ.ಚೌಟ, ರಮೇಶ್ ಅರವಿಂದ, ಕರಿಬಸವಯ್ಯ, ರಾಜಾನಂದ, ಎಂಪಿ.ಶಂಕರ್, ರಾಜಶೇಖರ ತೋಡಿ, ಈಶ್ವರ ಧೈತೋಟ…. ಅಬ್ಬಬ್ಬಾ! ಅತಿರಥರೆಲ್ಲಾ ಬಂದು ಶಿಬಿರದ ಮಕ್ಕಳು ತೊಡಗಿಸಿಕೊಂಡ ಬಗ್ಗೆ, ಸಾಂಸ್ಕೃತಿಕ ಕಲಿಕ ವಿಧಾನ ಕಂಡು ಬೆರಗಾದರು. ಅಲ್ಲಿಂದ ಆರಂಭವಾದ ನಮ್ಮ ‘ರಜಾಮಜಾ’ ಶಿಬಿರ ಮೈಸೂರಿನಲ್ಲಿ ನಮಗೊಂದು ಭದ್ರವಾದ ಸಾಂಸ್ಕೃತಿಕ ನೆಲೆ ದೊರಕಿಸಿಕೊಟ್ಟಿತು.
ಯುವಕ ಯುವತಿಯರಿಗೆ ರಂಗ ಶಿಬಿರ ಆಯೋಜಿಸಿ ನಟರಾಜ ಹೊನ್ನವಳ್ಳಿ ಕರೆಸಿ ಸಾಂಬಶಿವ ಪ್ರಹಸನ ಮಾಡಿಸಿದೆವು. ಜನ ನಕ್ಕಿದ್ದು ಅಂದ್ರೆ ಹೇಗೆ ನಕ್ಕು ಸುಸ್ತಾಗಿ ಮೂರ್ಛೆ ಬೀಳುವುದೊಂದು ಬಾಕಿ! ಉಡುಪಿ ರಂಗಭೂಮಿಯ ಪ್ರತಿಷ್ಠಿತ ಉತ್ಸವದಲ್ಲಿ ‘ಶ್ರೇಷ್ಠ’ ತಂಡ ಹೆಸರಾಯಿತು. ಮಕ್ಕಳಿಗೆ ನನ್ನ ಬಗ್ಗೆ ಆಕರ್ಷಣೆ ಇತ್ತಲ್ಲ. ಅದನ್ನು ಉಪಯೋಗಿಸಿಕೊಂಡು ನಾನು ಮಾಡಿಸಿದ ಅಲೀಬಾಬಾ, ತುಂಟ ರಾಬಿನ್, ಇತ್ಯಾದಿ ನಾಟಕಗಳು 75ಕ್ಕೂ ಹೆಚ್ಚು ಪ್ರದರ್ಶನಗಳಾಯಿತು.! ನಮ್ಮ ಮಕ್ಕಳು, ಯುವುಕರು ಮೈಸೂರಿನಲ್ಲಿ ಮತ್ತು ರಾಜ್ಯದೆಲ್ಲೆಡೆ ಮನೆಮಾತಾಗಿ ಹೋದರು. ತಂಡಕ್ಕೆ ಯಾರೇ ನಿರ್ದೇಶನ ಮಾಡಿದರೂ ನಾನು ಪ್ರತಿ ನಟನಿಗೆ ಶಕ್ತಿ, ಏಕಾಗ್ರತೆ, ಮತ್ತು ಸ್ಪಷ್ಟತೆ ಮೂಲ ಪಾಠಗಳನ್ನು ಹಠ ಹಿಡಿದು ಕಲಿಸುತ್ತಿದ್ದೆ… ಒಳ್ಳೇ ನಟರ ಪರಂಪರೆಯೇ ಹವ್ಯಾಸಿಗಳಲ್ಲಿ ಹೊಸಬಗೆಯ ವೃತ್ತಿಪರತೆ ಸೃಷ್ಟಿಯಾಗತೊಡಗಿತು.
ಮತ್ತೆ ರಜಮಜಾ ಬಂದರೇ… ಅದೇ ಜಾಗದ ಸಮಸ್ಯೆ! ಈ ಬಾರಿ KEMPS ಅನ್ನೋ ಇನ್ನೊಂದು ಕಡೆ ಮಾಡಿದೆವು. ಈ ವರ್ಷ ಇನ್ನೂ ಯಶಸ್ಸಾಯಿತು. ಪ್ರತೀ ವರ್ಷವೂ ಜಾಗಹುಡುಕಿಕೊಂಡು ಹೋಗುವುದು, ಅಲೆಯುವುದು.. ಹೀಗೆ ಸಾಗಿತು
ಯಾವುದೋ ಸನ್ಮಾನ, ಕಾರ್ಯಕ್ರಮದಲ್ಲಿ ಸಿಕ್ಕ ಪ್ರಭಾಕರ್ ಅನ್ನುವ ಇಂಜಿನಿಯರ್ ಸಿಕ್ಕಿ ನೀವೇ ಜಾಗ ಮಾಡಿ ಅಂದ್ರು! ನಕ್ಕು ಬಿಟ್ಟೆ! ನಾನು HERO ಅಲ್ಲ, ಸಾಮಾನ್ಯ ಪೋಷಕ ನಟ ಅಂದೆ… ಸಂಸ್ಥೆ ರಿಜಿಸ್ಟರ್ಡಾ? ಆಗಿದೆ ಸಾರ್ ಅಂದೆ… ಅಪ್ಲೈ ಮಾಡಿ CA ಸೈಟ್  ಸಿಗುತ್ತೆ ಅಂದ್ರು. ಮಾಡಿ ಸುಮ್ಮನಾದೆ. ಆರಂಭದಲ್ಲಿ ಹಣ ಕಟ್ಟಿ ಅಂದ್ರು ಕಟ್ಟಿದೆ. ಮೊದಲ ಬಾರಿ MUDAಕ್ಕೆ ಹೋದೆ… ಎಲ್ಲಾ ಅಭಿಮಾನದಿಂದ ಮಾತನಾಡಿಸುವುದೇನೋ ಹೌದು. ಆದ್ರೆ ಕೆಲಸ ಮಾತ್ರ ಆಗಲಿಲ್ಲ… ಶೂಟಿಂಗ್ ಮುಗಿಸಿ ಮೈಸೂರಿಗೆ ಬಂದಾಗಲೆಲ್ಲಾ, MUDAಗೆ ಹೋಗುವುದು, ಕಾಯುವುದು. ಅಧಿಕಾರಿ, ನೌಕರರು ಸಿಕ್ಕಿದರೇ ಬೆನ್ನು ಹತ್ತಿದ ಬೇತಾಳದಂತೆ ಹಿಂದೇನೆ ಓಡಾಡ ತೊಡಗಿದೆ, ನಾಳೆ ಬನ್ನಿ, ನಾಡಿದ್ದು ಬನ್ನಿ ಅಂತ ಅವರನ್ನುವುದು, ನಾನು ಅದೆಷ್ಟು ಬಾರಿ ಹೋಗಿ ದೈನ್ಯಾವಸ್ತೆಯಲ್ಲಿ ಅವರ ಮುಂದೆ ಹಲ್ಲುಗಿಂಜುತ್ತಾ ನಿಲ್ಲುವುದು ಅಭ್ಯಾಸವಾಗಿ ಹೋಯಿತು.

ದಿನಕ್ಕೊಂದು ದಾಖಲೆ ತರಲಲು ಹೇಳುತ್ತಿದ್ದರು. ಕೊಂಚವೂ ಬೇಸರ ಮಾಡಿಕೊಳ್ಳದೇ ಹೋಗಿ ಪಟ್ಟು ಹಿಡಿದು ಮಾಡಿಸಿಕೊಂಡು ಬಂದು ಅವರಿಗೆ ಸಲ್ಲಿಸಿ ಮತ್ತೆ ಕೈ ಕಟ್ಟಿ ನಿಲ್ಲುತ್ತದೆ. ಇನ್ನೇನು ಪತ್ರ ನನ್ನ ಕೈಗೆ ಬರಬೇಕು ಅನ್ನುವ ಹೊತ್ತಿಗೆ ಕಛೇರಿ ಟೈಮ್ ಆಗಿ ಅಧಿಕಾರಿ ಎದ್ದು ಹೋಗಿ ಬಿಡುತ್ತಿದ್ದ..! ತಬರನ ಕಥೆಯೇ ನನ್ನದೂ ಅಲ್ಲಿ! ಆದರೂ ನಾಟಕದ ಚಟ ಇತ್ತಲ್ಲ ಅದು ನನ್ನನ್ನು ಕುಸಿಯಗೊಡಲಿಲ್ಲ… ತಂಡ ಕಟ್ಟುತ್ತಲೇ ಮನೆ ಮೇಲಿನ ಹಾಲ್ನಲ್ಲಿ ರಿಹರ್ಸಲ್ ಮಾಡುತ್ತಲೇ, ಶೂಟಿಂಗ್ಗಳಲ್ಲಿ ಸಿನೆಮಾದಲ್ಲಿ ಆಕ್ಟ್ ಮಾಡುತ್ತಾ, ದೂರದರ್ಶನ ದಾರಾವಾಹಿಗಳಲ್ಲಿ ಸತತ ಕಾಣಿಸಿಕೊಳುತ್ತಾ ಚಿಕ್ಕ ಪುಟ್ಟ ಪಾತ್ರಗಳನ್ನು ಮಾಡುತ್ತಾ, ಮಧ್ಯರಾತ್ರಿಗಳಲ್ಲಿ ಹೋಗಿ ನಾಗಮಂಗಲದ ಹುಡುಗರಿಗೆ ನಾಟಕ ಕಲಿಸುತ್ತಾ, ರಿಯಾಲಿಟಿ ಶೋಗಳಲ್ಲಿ ಸೂತ್ರಧಾರಿಯಾಗಿ Anchor ಆಗಿ ಭಾಗವಹಿಸುತ್ತ ಸಿಕ್ಕ ಒಂದೊಂದು ಪೈಸೆ ಜೋಡಿಸಿ, MUDAಗೆ ದುಡ್ಡು ಕಟ್ಟುತ್ತಾ ಬಂದೆ.
ಲಕ್ಷಾಂತರ ಹಣವನ್ನೇ ಕಂಡವನಲ್ಲ ನಾನು! ಏನಿದ್ದರೂ ಸಾವಿರದ ಲೆಖ್ಖ ನನ್ನದು! ನನಗೇ ನನ್ನ ಬಗ್ಗೆ ಗಾಬರಿ! ಇನ್ನೇನು ಭೂಮಿ ಪತ್ರ ನನಗೆ ಬರುವ ಸಮಯದಲ್ಲಿ ಕೈಲಿದ್ದ ಕಾಸೆಲ್ಲಾ ಖರ್ಚಾಗಿ ಹೋಗಿದೆ! ಒಂದು ಬಿಡುಗಾಸಿಲ್ಲ. ನಾಳೆ ಇಪ್ಪತೈದು ಸಾವಿರ MUDAಗೆ ಕಟ್ಟಬೇಕು ಅಂತಾ Letter ಬಂತು. ಸಿಕ್ಕ ಸಿಕ್ಕವರೆನ್ನೆಲಾ ಅಂಗಲಾಚಿದೆ. ಊಹೂಂ ಎಲ್ಲೂ ಸಿಕ್ಕಿರಲಿಲ್ಲ… ನನ್ನ ಬಳಿ ಹಣವಿದ್ದಾಗ ಯಾರೇ ಕೇಳಿದರೂ ಇಲ್ಲ ಅನ್ನುತ್ತಿರಲಿಲ್ಲ. ಈಗ ನನ್ನ ತುರ್ತಿಗೆ ಎಲ್ಲೂ ಸಿಕ್ಕಲಿಲ್ಲ… ಕಾರಿನಲ್ಲಿ ಡ್ರೈವಿಂಗ್ ಸೀಟಿನಲ್ಲಿ ನಟನದ ಪ್ರಶಾಂತ್ ಕುಳಿತಿದ್ದ.. ಕಾರಿನ ಗಾಜು ಏರಿಸಿ ಜೋರಾಗಿ ಅತ್ತುಬಿಟ್ಟೆ… ಸಂಕಟ ತಡೆಯದ ಉಮ್ಮಳಿಸಿ ಬಂದ ಅಳು..
ಅದು ಮತ್ತೆ ಮುಖ ಒರೆಸಿಕೊಂಡು. ಸೀದಾ ಮನೆಗೆ ಬಂದು… ಹೆಂಡತಿ ಸರೋಜಾಳಿಗೆ ತಾಳಿ ಬಿಚ್ಚಿಕೊಡಲು ಹೇಳಿದೆ. ದಿಟ್ಟಿಸಿ ಮುಖ ನೋಡಿ ಒಳಗೆ ಹೋಗಿ ತಾಳಿ ಬಿಚ್ಚಿ ಕಾಗದದ ಪೊಟ್ಟಣದಲ್ಲಿ ನೀನೇ ಕಟ್ಟಿದ್ದು ತಗೋ ಅಂದಳು. ತಲೆ ಎತ್ತದೆ. ಅಡ ಇಟ್ಟು ಹಣ ಕೊಡು ಅಂದೆ…. ಹಣ ತಂದು ಕೊಟ್ಟಳು,– ಕಟ್ಟಿ ನಿರಾಳನಾದೆ…. ಮತ್ತೆ… ಮುಂದೆ ಅನೇಕ ಸಾರಿ ದೊಡ್ಡ ಹಣ ಕಟ್ಟ ಬೇಕಾಗಿ ಬಂದಾಗಲೆಲ್ಲಾ… ಆಹೊತ್ತಿಗೆ ಸರಿಯಾಗಿ ಯಾವುದೋ ಸಿನೆಮಾ ಅಥವಾ ಟಿವಿಯಲ್ಲಿ ಬರಬೇಕಾದ ದುಡ್ಡು ಧುತ್ತೆಂದು ಬಂದು ನನ್ನ ಸಮಸ್ಯೆ ಬಗೆಹರಿದದ್ದೂ ಇದೆ.. ಹಾಗೇ ಸ್ವಲ್ಪವೇ ಸೇರಿಸುತ್ತಾ ಹೋದೆ… ಅಲೆದದ್ದಕ್ಕೆ ಫಲಸಿಕ್ಕಿತು… ಪತ್ರ ಬಂತು… ಮತ್ತೆ ಹಣ ಕಟ್ಟಲು ಆದೇಶಿಸಿತ್ತು.. ಸಾಲ ಮಾಡಿ ಓಯ್ದೆ… ನಿಮಗೆ ಪತ್ರ ಬಂದಿದೆ… ಆದರೆ ಅದಿನ್ನೂ ಆಗಿಲ್ಲ ಅಂದರು… ಬಿಡಿ… ಕೋರ್ಟ್ ಗೆ ಹೋಗ್ತೇನೆ ಅಂದೆ. ಪ್ರಭಾಕರ್ ರಾವ್ ಸಮಾಧಾನ ಪಡಿಸಿ ‘ಹಾಗೆಲ್ಲ ಹೋಗ್ಬೇಡಿ, Black MArk ಆಗುತ್ತೆ, ಕಾಯಿರಿ ಮತ್ತೆ ಬರುತ್ತೆ ಅಂದ್ರು..
ಒಳಗಿನ Town Planning Officer ಹತ್ರ ಕರೆದೋಯ್ದು ತುಂಬಾ ಕಷ್ಟ ಪಡ್ತಿದ್ದಾರೆ.. ಯೋಗ್ಯ ಜನ ಅಂತ ಒಳ್ಳೇ ಮಾತನ್ನಾಡಿದರು. ಅವರು ನನ್ನ ಅಭಿನಯ ನೋಡಿ ಅಭಿಮಾನಿ ಆಗಿದ್ರಂತೆ.. ಮಾಡ್ಕೊಡ್ತೀನಿ ನನ್ನ ಹೆಂಡ್ತಿ ಮಕ್ಳ ಹತ್ರ ಫೋನ್ ನಲ್ಲಿ ಮಾತಾಡಿ ಅಂದ್ರು, ಮಾತನಾಡಿದೆ. ಅವರಿಗೆ ಖುಷಿ! ನನಗೆ ಪತ್ರದ ಕಾತರ!!
(ಮುಂದುವರೆಯುತ್ತದೆ….)

‍ಲೇಖಕರು avadhi

27 May, 2013

4 Comments

  1. ಚಿನ್ಮಯ ಭಟ್ಟ

    ಅಬ್ಬಾ ಒಂದು ಸಂಸ್ಥೆಯ ಹಿಂದೆ ಇಷ್ಟೆಲ್ಲಾ ಕಷ್ಟವಿರತ್ತೆ ಎಂದು ಗೊತ್ತಿರಲಿಲ್ಲ ಸರ್…
    ಧನ್ಯವಾದ ನಿಮಗೆ,ನಿಮ್ಮ ಗೆಳೆಯರಿಗೆ,ಅಷ್ಟು ಕಷ್ಟದ ಮಧ್ಯದಲ್ಲೂ ಎದ್ದು ನಿಂತ ಸಂಸ್ಥೆಗೆ…..
    ಮುಂದಿನ ಭಾಗಕ್ಕೆ ಕಾಯ್ತಿರ್ತೀವಿ…
    ನಮಸ್ತೆ 🙂

  2. Raghunandan K

    ಕಷ್ಟಗಳೇ ಅಲ್ವಾ ಮನುಷ್ಯನನ್ನು ಗಟ್ಟಿಗೊಳಿಸೋದು, ಸಂಸ್ಥೆಯನ್ನು ಗೆಲ್ಲಿಸೋದು… ಗೆಲುವು ಕಣ್ಮುಂದೆ ಇದೆ, ಸುಖದ ಕಥೆಗೆ ರೋಚಕತೆಗಳಿಲ್ಲ, ಮುಂದಿನ ಭಾಗಕ್ಕೆ ಕಾದಿದ್ದೇನೆ…

  3. Nagabhushan P

    NATANA HUTTIDA KANAVARIKE SOOGASAAGI ARAMBAGONDIDE. MUNDHINA SANCHIKEGAGI KAYUTHIDHEVE.

  4. bharat kumar polipu

    nimma commitmentge thale baagale beku,,,,bharat kumar polipu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading