ಅಭಿನಯ ಕಲಿಕೆಗೆಂದು ಬರುವ ಅನೇಕ ಅಭ್ಯಾಸಿಗಳಿಗೆ ನನ್ನದೊಂದು ಪ್ರಶ್ನೆ ಸಾಮಾನ್ಯವಾಗಿ ಕೇಳುತ್ತಿರುತ್ತೇನೆ; ಅಭಿನಯ ಏಕೆ ಕಲಿಯಬೇಕು?. . . ಯಾರಿಗೂ ನಿಶ್ಚಿತ ಉತ್ತರವಿಲ್ಲ! ಮತ್ತೆ ಮುಂದುವರಿದು ಅಭಿನಯ ಎಂಬುದು ಹುಟ್ಟಿದ್ದು ಎಲ್ಲಿ? ಯಾವಾಗ? ಏಕೆ? . . . ಸ್ಪಷ್ಟ ಉತ್ತರಗಳೇನೂ ಬರುವುದಿಲ್ಲ. ಆದರೆ ಚರ್ಚಿಸಲು ತೊಡಗುತ್ತಲೇ ನಿಧಾನವಾಗಿ ಪ್ರತಿಯೊಂದು ಪ್ರಶ್ನೆಗೂ ಪೂರ್ಣವಾಗಿ ಅಲ್ಲದಿದ್ದರೂ ನಿಖರವಾದದ್ದೊಂದು ಉತ್ತರ ರೂಪ ಪಡೆದುಕೊಳ್ಳುತ್ತಾ ಹೋಗುತ್ತದೆ. ನಾಗರೀಕತೆಯ ಹೊಸ್ತಿಲ ಹಿಂಬಾಗಿಲಲ್ಲಿದ್ದ (ಆದಿಮಾನವನೆಂದರೂ ಅಡ್ಡಿ ಇಲ್ಲ!) ಬದುಕಲಿಕ್ಕೆ ಪ್ರಾಣಿ ಪಕ್ಷಿಯನ್ನು ಅನುಕರಿಸಿ ಬೇಟೆಯಾಡಿ, ಬೇಯಿಸಿ ತಿಂದನಲ್ಲಾ…
ಆ ಘಳಿಗೆಯ ಆಸುಪಾಸು, ಅವನು ಹಿಂಬಾಲಿಸುವ ಹಕ್ಕಿಯ, ಪ್ರಾಣಿಯ ಅನುಕರಣೆಯಿಂದ ಹುಟ್ಟಿದ್ದು ‘ಅಭಿನಯ’. ಇಂದು ಅಭಿನಯಕ್ಕೆ ಶಾಸ್ತ್ರ, ಸಿದ್ಧಾಂತ, ರೀತಿ-ರಿವಾಜುಗಳೆಂಬ ಕ್ರಮಗಳಿದ್ದರೂ, ಎಲ್ಲ ಚೌಕಟ್ಟುಗಳಾಚೆ ಅಭಿನಯವೆಂಬ ಘಟಿಸುವ ಕ್ರಿಯೆಗೆ ‘ಅನುಭವ’ವೆಂಬ ದ್ರವ್ಯವೇ ಮೂಲವಾದದು ಎಂಬ ವಾದದಲ್ಲಿ ನಂಬಿಕೆ ಇಟ್ಟವನು ನಾನು. ಆದರೆ ಕಲಿಕಾ ಪದ್ಧತಿಗಳನ್ನು ರೂಢಿಮಾಡಿಕೊಳ್ಳುತ್ತಾ, ಅನುಭವದ ಅಂತರ್ಗತ ಸತ್ಯಗಳ ಮೇಳೈಕೆಯಿಂದ ಅಭಿನಯ ಸಿದ್ಧಿಸಬಹುದೆಂಬ ಆಶಯವೂ ನನಗಿದೆ. ಅಪ್ಪಟ ದೇಸೀ ಶೈಲಿಯ ನೃತ್ಯದ ಕ್ಷಣವೊಂದರ ಆದಿಯಾಗಿ ರಂಗಭೂಮಿ, ಕಿರುತೆರೆ, ಚಲನಚಿತ್ರ, ಸಾಕ್ಷ್ಯಚಿತ್ರ, ಜಾಹೀರಾತಿನ ಕ್ಷಣದ ಪರಿಣಾಮಕಾರಿಯ ಅತ್ಯಂತ ಆಧುನಿಕ ವಿಧ್ಯುನ್ಮಾನ ಮಾಧ್ಯಮಗಳವರೆಗೂ ‘ಆಭಿನಯ’ದ ವ್ಯಾಕರಣ ಕಾಲಮಾನಕ್ಕೆ ತಕ್ಕಂತೆ ಬದಲಾಗುತ್ತ ಹೋಗುತ್ತದೆ.
ಮೇಲ್ನೋಟಕ್ಕೆ ವಾಸ್ತವವಾದಿ ಆಭಿನಯ, ಶೈಲೀಕೃತ ಅಭಿನಯ ಎಂಬ ಎರಡು ಬಗೆಯ ಅಭಿನಯ ಶೈಲಿಗಳು ಮುಖ್ಯವೆಂಬಂತೆ ಕಂಡರೂ ಅಸಂಖ್ಯ ಪದ್ಧತಿಗಳು ‘ನಟನೆ’ಯಲ್ಲಿವೆ. ಪದ್ಧತಿಗಳೇ ಇಲ್ಲದ ಪರಂಪರೆಗಳೂ ಆಭಿನಯ ಕ್ಷೇತ್ರದಲ್ಲಿದೆ! ಸ್ವಾಭಾವಿಕವಾಗಿ ನಟಿಸುವುದನ್ನು ವಾಸ್ತವಶೈಲಿ ಅಭಿನಯವೆಂದೂ, ಕೊಂಚ ಹೆಚ್ಚೆನಿಸುವ, ಆಂಗಿಕವಾಗಿ ಒತ್ತನ್ನಿತ್ತು ಆಭಿನಯಿಸುವುದನ್ನು ಶೈಲೀಕೃತ ಆಭಿನಯವೆಂದು ಸರಳವಾಗಿ ಗುರುತಿಸಲಾಗಿದೆ. ಆದರೇ ಈ ತೀರ್ಮಾನವೂ ಅಂತಿಮವಾದದ್ದಲ್ಲ. ಒಂದೊಂದು ವಿಭಾಗದಲ್ಲೂ ನೂರಾರು ಮಾರ್ಗಗಳನ್ನು ವಿಭಜಿಸಬಹುದಾಗಿದೆ. ಅಭಿನಯ ಪದ್ಧತಿಗಳು ಹಲವಿರಬಹುದು, ಎಲ್ಲಕ್ಕೂ ಮೂಲ ಮಂತ್ರ ಮಾತ್ರ ಒಂದೇ: ‘ಉಸಿರಾಟದ ನಿಯಂತ್ರಣ’ ದೇಹ-ಧ್ವನಿಯನ್ನು ನಟನೊಬ್ಬ ಸಮರ್ಥವಾಗಿ ಪಾತ್ರಕ್ಕೆ ಒಗ್ಗಿಸಿಕೊಳ್ಳುವುದು ಸಾಧ್ಯವಾಗಬಹುದಾದರೇ, ಕಣ್ಣಿನ ಕಿರಿದಾದ ಚಲನೆಯಿಂದ . . . ಗಂಟೆಗಳ ಕಾಲ ಧೀರ್ಘ ಅವಧಿಯವರೆಗೂ ಮಾತು, ಬಾಷೆ, ದೈಹಿಕ ಚಲನೆ ಎಲ್ಲದರಲ್ಲೂ ಸಮತೋಲನ ಸಾಧಿಸಲು ಸಾಧ್ಯವಾಗಬೇಕಾದರೇ ನಟ ಮೊಟ್ಟ ಮೊದಲು ಹೆಚ್ಚು ಸಿದ್ಧತೆ ಮಾಡಿಕೊಳ್ಳಬೇಕಾದ್ದು – ಉಸಿರಾಟದ ನಿಯಂತ್ರಣದ (breathing control) ಮೂಲಕ.
ಮೂಲತಃ ರಂಗಭೂಮಿ ಶಿಕ್ಷಣದಿಂದಲೇ ನಟನಿಗೆ ನಾಟಕ, ಟಿ.ವಿ. ಸಿನಿಮಾ, ಮುಂತಾದ ಕ್ಷೇತ್ರಗಳಿಗೆ ಅಭಿನಯದಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಳ್ಳುವ ಧೈರ್ಯ ಮೂಡುತ್ತದೆ. ರಂಗ ಶಿಕ್ಷಣ ಈ ಕ್ಷೇತ್ರದಲ್ಲಿ ‘ನಟನೆ’ಯ ಕೌಶಲ್ಯಗಳನ್ನು ಕಲಿಸುವುದರೊಂದಿಗೆ ವ್ಯಕ್ತಿತ್ವ ವಿಕಸನವೂ ಆಗಿ ವೃತ್ತಿಯೊಂದರಲ್ಲಿ ದೀರ್ಘಕಾಲ ಶಕ್ತಿಯನ್ನು ಜತನದಿಂದ ಕಾಯ್ದಿಟ್ಟುಕೊಳ್ಳುತ್ತದೆ. ನಾವು ಅಭಿನಯ ಕಲಿಯಲು ಬಳಸುವ ಅಭ್ಯಾಸಗಳನ್ನು ಆ ಕಾರಣಕ್ಕಾಗಿಯೇ ತಂತ್ರಗಳು ಅನ್ನುವುದಕ್ಕಿಂತ ಆಟಗಳೆಂದೇ ಕರೆದುಕೊಳ್ಳುತ್ತೇವೆ. ರಂಗಾಟಗಳ ಮೂಲಕ, ವೈಜ್ಞಾನಿಕವಾಗಿ ಅತ್ಯಂತ ಪರಿಣಾಮಕಾರಿಯಾಗಿ ನಟ ಅಭಿನಯ ಶಕ್ತಿಯನ್ನು ವೃದ್ಧಿಸಿಕೊಳ್ಳುವುದರೊಂದಿಗೆ ಬದುಕುವ ಪರಿಯನ್ನೂ ಕಲಿಯುತ್ತಾನೆ.
‘ಅಭಿನಯ ಕಲಿಸಲು ಸಾಧ್ಯವೇ?’ ಎಂದು ಬಹುತೇಕ ಮಂದಿ ಕೇಳುತ್ತಾರೆ. ತೆವಳುವ ಮಗು ಒಲಿಂಪಿಕ್ ಓಟಗಾರ್ತಿಯಾಗುವುದು ಸಾಧ್ಯವಾಗುತ್ತದೆ ಎಂದಾದರೆ, ‘ನಟನೆ’ ಏಕೆ ಕಲಿಯಲು ಸಾಧ್ಯವಿಲ್ಲಾ? ಜಡವಾಗಿರುವ ವ್ಯಕ್ತಿತ್ವವೊಂದು ಪರಮ ಲವಲವಿಕೆಯಿಂದ ತೊಡಗಿಕೊಳ್ಳಲು ಖಂಡಿತ ಸಾಧ್ಯವಿದೆ. ಇಚ್ಛಾಶಕ್ತಿಯೊಡನೆ ಕಾಯಕ ಶೃದ್ಧೆಯೂ ಸೇರಿಬಿಟ್ಟರೆ ನಟ ತನ್ನ ದೇಹ-ಧ್ವನಿಯನ್ನು ಮನಸ್ಸಿನ ಹಿಡಿತಕ್ಕೆ ಮತ್ತು ಮನಸ್ಸಿನಲ್ಲಿ ಮೂಡಿದ್ದನ್ನು ದೇಹ-ಧ್ವನಿಗಳು ಅಭಿವ್ಯಕ್ತಿಸುವ ಶಕ್ತಿ ರೂಪುಗೊಂಡರೆ ನಟ ಸಿದ್ಧ. ತುಂಬಾ ಶ್ರಮದ ಕೆಲಸವದು. ದೇಹ-ಧ್ವನಿ-ಮನಸ್ಸುಗಳಲ್ಲದೇ ‘ಜೀವನಾನುಭವದ ಪಕ್ವತೆ’ ಎಂಬ ಅಮೂರ್ತ ಭಾವ ರೂಪುಗೊಳ್ಳುವುದಕ್ಕೆ ನಟ ಸಂವತ್ಸರಗಳ ಕಾಲ ದುಡಿಯುತ್ತಲೇ ಹೋಗಬೇಕು. ಬರಿಯೇ ದುಡಿದರೂ ಸಾಲದು ದುಡಿಮೆಯ ಶಕ್ತಿಯನ್ನು ಗ್ರಹಿಸಿಕೊಳ್ಳಬೇಕು. ಅ ಗ್ರಹಿಕೆಯನ್ನು ಪಾತ್ರದ ಅಚ್ಚಿಗೆ ಅಳತೆಗೆ ತಕ್ಕಂತೆ ಎರಕ ಹೊಯ್ದು ಪಾತ್ರವನ್ನು ಜೀವಂತವಾಗಿ ಕಡೆದಿಡುವುದು ಬಹಳ ತ್ರಾಸದಾಯಕವಾದದ್ದು – ಆದರೆ ಪಾತ್ರ ಪಡಿಮೂಡಿದ ಕ್ಷಣದಿಂದಲೇ ಅದನ್ನು ಮತ್ತಷ್ಟು ಪೂರಕ ಅನುಭವ ಸಾಮಗ್ರಿಗಳು ಹಾಗೂ ಕಲಿತ ಕೌಶಲ್ಯಗಳ (skills) ಮೂಲಕ ಪೋಷಿಸುತ್ತಲೇ ಹೋಗಬೇಕು. ಅತ್ಯಂತ ಚಲನಶೀಲ ಕ್ರಿಯೆ ಪಾತ್ರ ಕಟ್ಟುವುದು. ‘ನಟನೆಯೆಂಬ’ ಕಸರತ್ತಿನ ಮೂಲಕ ಕೋಟ್ಯಾನು ಕೋಟಿ ಜನರನ್ನು ನಂಬಿಸುವ ಕ್ರಿಯೆ ಸಾಮಾನ್ಯವಾದುದಲ್ಲ.
ನಂಬಿಬಿಟ್ಟ ಪ್ರೇಕ್ಷಕ ನೆನಪಲ್ಲಿಟ್ಟುಕೊಳ್ಳುವುದರಲ್ಲಿ ವಿಶೇಷವಿಲ್ಲ. ನಟ ಮಾತ್ರ ಪ್ರತಿಕ್ಷಣಕ್ಕೂ ಹುಡುಕಾಡುತ್ತಲೇ ಇರಬೇಕು. ಎಚ್ಚರ ತಪ್ಪಿದೊಡನೆ ಪಾತ್ರ ತನ್ನ ಸತ್ವ ಕಳೆದುಕೊಂಡುಬಿಡುತ್ತದೆ. ಆ ಕಾರಣಕ್ಕಾಗೆ ಹೇಳಿದ್ದು, ಕೊಂಚವೂ ವಿರಮಿಸಲಾಗದ ಕಾಯಕ ಈ ಅಭಿನಯ. ಪಾಶ್ಚಾತ್ಯ ಶ್ಯೆಲಿ, ಭಾರತೀಯ ಶ್ಯೆಲಿ, ಪೌರಾತ್ಯ ಶ್ಯೆಲಿ, ಕರ್ನಾಟಕ, ದಕ್ಷಿಣ ಕರ್ನಾಟಕ, ಅಸಂಖ್ಯಾತ ಪ್ರಾದೇಶಿಕ ಶ್ಯೆಲಿಗಳೂ ಜಾಗತಿಕವಾಗಿ, ಭರತನ ನಾಟ್ಯಶಾಸ್ತ್ರದ ಆಂಗಿಕ, ವಾಚಿಕ, ಆಹಾರ್ಯ, ಸಾತ್ವಿಕದ ಬಗೆಗಳು ತುಂಬ ಮಹತ್ವಪೂರ್ಣವಾದವು. ಈ ನಾಲ್ಕೂ ಬಗೆಯನ್ನು ಸಮತೂಕದಲ್ಲಿ ನಟ ನಿಭಾಯಿಸಿಬಿಟ್ಟರೇ ಅಭಿನಯದ ಅರಿವು ಮೂಡಿದಂತೆಯೇ ಸೈ. ಆಂಗಿಕವಾಗಿ ದೇಹದ ಪ್ರತಿ ಇಂಚೂ ತನ್ನ ಹದ್ದುಬಸ್ತಿನಲ್ಲಿಟ್ಟುಕೊಳ್ಳುವಂತೆ ಮಾಡುವುದು, ಪ್ರತಿನಿತ್ಯ ಸೂರ್ಯನಮಸ್ಕಾರ, ಯೋಗಾಭ್ಯಾಸ, ಜಿಮ್, ಗರಡಿ, ಕಾಲ್ನಡಿಗೆ, ಓಟ, ಏರೋಬಿಕ್ಸ್ … ನೀವೇನೇ ಮಾಡಿದರೂ ಅಂಗಸೌಷ್ಠವವನ್ನು ಕಾಪಾಡಿಕೊಳ್ಳುವುದರೊಂದಿಗೆ ಪಾತ್ರಕ್ಕೆ ಬೇಕಾದ ದೇಹವಿನ್ಯಾಸ ಮಾಡಿಕೊಳ್ಳಲು ಉಂಗುಷ್ಟದಿಂದ ನೆತ್ತಿಯವರೆಗೆ ದೇಹ ಕುಗ್ಗಲು-ಹಿಗ್ಗಲು-ಅರಳಿಕೊಳ್ಳಲು . . . ಎಲ್ಲ ಬಗೆಯ ಪಾತ್ರಕ್ಕೂ ಒಗ್ಗಿಕೊಳ್ಳುವ ಹಾಗೆ ಪ್ರತಿನಿತ್ಯ ದೈಹಿಕ ವ್ಯಾಯಾಮ ಮಾಡಲೇಬೇಕು.
ವಾಚಿಕ: ನಟ, ತನಗಿರುವ ಧ್ವನಿಶಕ್ತಿಗೆ ಮತ್ತಷ್ಟು ಪ್ರಖರತೆ ತುಂಬಲು ಸಂಗೀತ ಕಲಿಯುವುದೊಳಿತು. ಶೃತಿ (picth) ಮತ್ತು ಧ್ವನಿಪ್ರಮಾಣ (volume)ದ ವ್ಯತ್ಯಾಸ, ಕೆಳಸ್ತರದಿಂದ ತೀರ ಮೇಲ್ಮುಖಕ್ಕೆ ಸಾಗಲು ಪ್ರತಿನಿತ್ಯ ಹಾರ್ಮೋನಿಯಂ ಮುಂದೆ ಕುಳಿತು ಸ್ವರಗಳ ಜೊತೆಗೆ ಏರಿಳಿತಗಳನ್ನೂ ಅಭ್ಯಾಸ ಮಾಡುವುದು, ಶೃತಿಗೂ-ಭಾವಕ್ಕೂ ಇರುವ ನಂಟನ್ನು ಸರಿಯಾಗಿ ಗ್ರಹಿಸಿ – ಬೇರೆ ಬೇರೆ ಭಾವಗಳನ್ನು ಶೃತಿಯೊಡನೆ ಬೆರೆಸಿ – ಅಭ್ಯಾಸ ಮಾಡಿದರೇ ಧ್ವನಿ ಶಕ್ತಿಪೂರ್ಣವಾಗುತ್ತದೆ. ಜಲಪಾತದೆದುರು, ಸಮುದ್ರದೆದುರು, ಧ್ವನಿಯ ಏರಿಳಿತಗಳ ಅಭ್ಯಾಸ ಹೆಚ್ಚು ಸಹಾಯವಾಗುತ್ತದೆ. ಧ್ವನಿಯನ್ನು ‘ಥ್ರೋ’ ಮಾಡುವುದು ಹಾಗೆಯೇ ಮೆಲು ಧ್ವನಿಯಲ್ಲಿ ಮಾತನಾಡಿದಾಗಲೂ, ಪಿಸುಗುಟ್ಟಿದಾಗಲೂ ಸೂಕ್ಷ್ಮತೆ ಸಾಧಿಸಲು ಧ್ವನಿಗೆ ಶಕ್ತಿ ಇರಬೇಕದ್ದು ಅತ್ಯಂತ ಅವಶ್ಯಕ. ವಾಚಿಕದ ಬಹುಮುಖ್ಯ ಅಂಗ ಮಾತನಾಡುವ ಬಗೆ. ಭಾಷೆ – ಭಾವಕ್ಕೆ ತಕ್ಕಂತೆ ವಾಕ್ಯಗಳಲ್ಲೂ ಏರಿಳಿತಗಳನ್ನು ಸಾಧಿಸಬೇಕಾದ್ದು ಅನಿವಾರ್ಯ. ಬಿಡಿ ಅಕ್ಷರ, ಪದ, ವಾಕ್ಯ, ಕಾಕುಗಳು, ದ್ವಿರುಕ್ತಿ, ಶ್ಲೇಷೆ, ಛಂದಸ್ಸು, ಗಣ, ಮಾತ್ರೆ, ಗಾದೆ, ನುಡಿಗಟ್ಟು, ಅರ್ಥಕೋಶ, ವಕ್ರತುಂಡೋಕ್ತಿ, ಜಿಹ್ವಾಚಾಪಲ್ಯ ಪರೀಕ್ಷಕಗಳು (tongue twisters), ಪೌರಾಣಿಕ ನಾಟಕದ ಬಹುಪರಾಕ್ಗಳು, ಶ್ಲೋಕ, ಹಾಡು, ಲಾಲಿ ಎಲ್ಲವನ್ನೂ ಅಭ್ಯಾಸ ಮಾಡುತ್ತಲೇ, ಪ್ರಾಯೋಗಿಕವಾಗಿ ನಟ ತನ್ನ ಪಾತ್ರದ ಪ್ರತಿಸಾಲನ್ನೂ ಬೇರೆ ಬೇರೆ ಬಗೆಯಲ್ಲಿ ಆಡುತ್ತಲೇ ಮಾತಿನ ರೂಪವನ್ನು ಸಿದ್ಧಮಾಡಿಟ್ಟುಕೊಳ್ಳಬೇಕು. ತಾನು ಬದುಕುತ್ತಿರುವ ಪರಿಸರದ ಭಾಷೆಯ ವ್ಯಾಕರಣ, ಸಾಹಿತ್ಯದ ವೈವಿಧ್ಯವನ್ನು ಗ್ರಹಿಸದೇ ಪರಿಪೂರ್ಣ ನಟನಾಗುವುದು ಸಾಧ್ಯವಾಗದ ಮಾತು.
ಆಹಾರ್ಯ: ನಟ ಪಾತ್ರವೊಂದಕ್ಕೆ ಪೂರಕವಾಗಿ ಉಡುಪು-ಪ್ರಸಾಧನವನ್ನು ಅಧಿಕೃತವಾಗಿ ಅಭ್ಯಾಸ ಮಾಡುವುದು ಅತ್ಯಂತ ಅವಶ್ಯ. ಯಾವುದೇ ಶೈಲಿಯ ನಾಟಕ, ತನ್ನ ಪಾತ್ರಕ್ಕೆ ತಕ್ಕಂತೆ ಉಡುಪುಗಳನ್ನು ಮತ್ತು ಮುಖವರ್ಣಿಕೆಯನ್ನು ವಿನ್ಯಾಸಗೊಳಿಸಿಕೊಳ್ಳಬೇಕಾದ್ದು ಅನಿವಾರ್ಯ. ಪಾತ್ರದ ವಯಸ್ಸಿನ ಉಡುಗೆ, ಪಾತ್ರದ ಧೋರಣೆಗೆ ಪೂರಕವಾಗಿ ದೇಶ-ಕಾಲ-ಸ್ಥಿತಿಗೆ ತಕ್ಕಂತಿರಬೇಕು. ನಟ-ನಟಿಯರಿಗೆ, ಉಡುಪನ್ನು ದೇಹಕ್ಕೆ ಒಗ್ಗಿಸಿಕೊಳ್ಳುವ ಬಗ್ಗೆ (wearing) ಅರಿವಿರಲೇಬೇಕು. ಮತ್ತು ಉಡುಪನ್ನು ಪಾತ್ರದ ಬಾಹ್ಯಸೌಂದರ್ಯದೊಂದಿಗೆ ಪಾತ್ರದ ಗುಣವಿಶೇಷದ ತೀವ್ರತೆ ಹೆಚ್ಚಿಸುವುದೂ ಅಷ್ಟೇ ಮುಖ್ಯ. ನಟ ಪಾತ್ರವನ್ನು ನಂಬಿಕೊಳ್ಳಲು ಉಡುಪು ಮತ್ತು ಮುಖವರ್ಣಿಕೆಯ ಭಾಗ ತುಂಬ ಮಹತ್ವಪೂರ್ಣವಾದದ್ದು, ಮೈಗಷ್ಟೇ ಅಲ್ಲದೇ ಮನಸ್ಸಿಗೂ ತಾನುಟ್ಟಿರುವ ಉಡುಗೆ, ತನ್ನ ಪ್ರಸಾದನ ಸೂಕ್ತವಾಗಿದೆ ಎಂದು ನಂಬಿಕೊಳ್ಳುವುದರ ಜೊತೆಗೆ ಅರ್ಥಪೂರ್ಣವೂ ಆಗಿರಬೇಕು. ನಟನೊಬ್ಬ ಅಭಿನಯ ಕಲಿಯುವ ಪ್ರಕ್ರಿಯೆಯಲ್ಲಿ ಉಡುಪು-ಪ್ರಸಾದನದ ಬಗ್ಗೆ ತೀವ್ರ ಕುತೂಹಲ ಇಟ್ಟುಕೊಂಡು ಅದನ್ನೂ ಅಭ್ಯಾಸ ಮಾಡಿದರೇ ಅಭಿನಯದ ಪೂರ್ಣತೆ ಸಾಧ್ಯವಾಗುತ್ತದೆ. ನಟನೊಬ್ಬ ತನ್ನ ಉಡುಪು, ಪ್ರಸಾಧನ, ಪರಿಕರಗಳನ್ನು ತಾನೇ ಪಾತ್ರಕ್ಕಾಗಿ ಸಿದ್ಧಪಡಿಸಿಕೊಳ್ಳುವಂತಾದರೆ ಅದಿನ್ನೂ ಚೆಂದ. . . ಪಾತ್ರದ ಆಳಕ್ಕಿಳಿಯಲು ಈ ಕ್ರಿಯೆ ನೆರವಾಗುತ್ತದೆ. ನಟ ತನ್ನ ಪಾತ್ರದ ಉಡುಗೆ, ಮುಖವರ್ಣಿಕೆ, ಪರಿಕರ, ಸುತ್ತಲ ಪರಿಸರ . . . ಈ ಎಲ್ಲವನ್ನೂ ವಿಜ್ಞಾನವೆಂದು ಅರಿತುಕೊಳ್ಳಬೇಕಾಗುತ್ತದೆ. ಮುಂಜಾವಿನ ಬೆಳಕಿನ ಕಿರಣದಿಂದ ಹೊರಡುವ ಬಣ್ಣದಿಂದ ಮೊದಲುಗೊಂಡು ನಟ್ಟ ನಡುರಾತ್ರಿಯ ಅರಣ್ಯದಲ್ಲಿ ಮಿಂಚುಹುಳ ಹೊರಸೂಸುವ ಕಿರಣಗಳವರೆಗೂ ಆತ ಸದಾ ಬಣ್ಣ, ಘ್ರಾಣ . . . ಎಲ್ಲಕ್ಕೂ ಸಂವೇದಿಸುತ್ತಿರಬೇಕು’. ಆತನಿಗೆ ವಜ್ರ್ಯವೆಂಬುದಿಲ್ಲ. ಪಂಚೇಂದ್ರಿಯಗಳು ಸದಾ ಜಾಗೃತವಾಗಿರಬೇಕು.
ಸಾತ್ವಿಕ: ಅಭಿನಯದಲ್ಲಿ ಪರಿಪೂರ್ಣತೆ ನಟನಿಗೆ ದಕ್ಕಬೇಕಾದರೆ ಆತ ಸಾತ್ವಿಕಬಗೆಯಲ್ಲೂ ಸಿದ್ಧಹಸ್ತನಾದರೇ ಮಾತ್ರ ಸಾಧ್ಯ ಎಂಬ ಮಾತೊಂದಿದೆ. ಅದು ಸತ್ಯವೂ ಹೌದು. ಪ್ರಪಂಚದ ಸರ್ವ ಶ್ರೇಷ್ಟ ನಟರ ಪರಂಪರೆಯನ್ನು ಗುರುತಿಸುವುದು ಸಾತ್ವಿಕಶೈಲಿಯಿಂದಲೇ. ಅನುಭವವೇದ್ಯದಿಂದ ಮಾತ್ರವೇ ಸಾತ್ವಿಕ ಶೈಲಿ ರೂಢಿಸಿಕೊಳ್ಳಲು ಸಾಧ್ಯ. ತೀವ್ರವಾಗಿ ಅನುಭವಿಸುವುದು ಮತ್ತು ಅದನ್ನು ಪ್ರಕಟಿಸಲು ಹೋಗದಿರುವುದು ಈ ಶೈಲಿಯ ಮುಖ್ಯ ಗುಣ. ಪಾತ್ರದ ಎಂಥ ಭಾವವನ್ನೂ ರಂಗದಲ್ಲಾಗಲಿ, ಕ್ಯಾಮೆರಾದ ಮುಂದಾಗಲಿ ನಟನೊಬ್ಬ ಪೂರ್ಣವಾಗಿ ನಂಬಿಕೊಂಡು ಕರಗಿಹೋಗುವುದು, ತನ್ಮಯನಾಗುವುದು, ಲೀನವಾಗುವುದು ಎಂದೆಲ್ಲ ಕರೆಸಿಕೊಳ್ಳುವ ಈ ಶೈಲಿಗೆ ಆರ್ಭಟದ ತೊಡುಗೆ ಹಾಕಿ ಬಿಟ್ಟರೇ ‘ಮೆಲೋಡ್ರಾಮ’ವಾಗಿಬಿಡುವ ಅಪಾಯವೇ ಹೆಚ್ಚು. ಸಾತ್ವಿಕ ಶೈಲಿ ತುಂಬ ಸೂಕ್ಷ್ಮವಾದದ್ದು. ಗುರು ಕಾರಂತರ ಪ್ರಕಾರ ಸಾತ್ವಿಕಾಭಿನಯದ ಸರ್ವೋತ್ತಮ ನಟರು ಜಗತ್ತಿನಲ್ಲಿ ಬೆರಳೆಣಿಕೆಯಷ್ಟಿದ್ದಾರೆ. ಅಭಿನಯದಲ್ಲಿ ಪಾತ್ರವನ್ನು ಪೂರ್ಣ ನಂಬಿಕೊಳ್ಳುವ ಮತ್ತು ಎಚ್ಚರವಿಟ್ಟು ಅಭಿನಯಿಸುವ ಮತ್ತೆರಡು ಶೈಲಿಯ ವಾದಗಳು ಕೂಡ ಸಾತ್ವಿಕ ಬಗೆಯ ಮತ್ತೊಂದು ರೂಪವೇ ಆನಿಸುತ್ತದೆ.
ಸಾತ್ವಿಕ ಅಭಿನಯ ರೂಢಿಸಿಕೊಳ್ಳುವ ಬಗೆ ಮಾತ್ರ ಸುಲಭವಾಗಿ ಸಿಗುವಂಥದಲ್ಲ. ಬದುಕಿನ ಪ್ರತಿ ಕ್ಷಣವನ್ನೂ ಮನದಲ್ಲಿ ಅಚ್ಚೊತ್ತಿ ದಾಖಲಿಸಬೇಕೆನ್ನುವುದು ಸಾಧ್ಯವಾಗದ ಮಾತಾದರೂ ನೆನಪಿನ ಕ್ಷಣಗಳನ್ನು ಪುನರ್ನಿಮರ್ಶಿಸಿಕೊಡುವಾಗ ‘ಪ್ರದರ್ಶಕ’ ಅಂಶಗಳನ್ನು ಬದಿಗಿಟ್ಟು ನೆನಪಿನಲ್ಲಿನ ಎಲ್ಲ ವಿವರಗಳನ್ನು ತಣ್ಣಗೆ ಅನುಭವಿಸುವುದು ಕಷ್ಟಸಾಧ್ಯದ ಮಾತು . . . ಆದರೆ ಆ ಭಾವ ಮೇಲ್ನೋಟಕ್ಕೆ ನಿರುಮ್ಮಳವೆಂಬಂತೆ ಕಂಡರೂ ಭಾವ ತೀವ್ರತೆ ಅಂತರ್ಗಾಮಿಯಾಗಿ ಪ್ರೇಕ್ಷಕನನ್ನು ತಟ್ಟುತ್ತದೆ. ನಟ ಉತ್ಸವಮೂರ್ತಿಯಂತೆ ಕಂಡರೂ ಅಂತರ್ಮುಖಿಯಾಗಿರಬೇಕಾದ ಅವಶ್ಯಕತೆಯನ್ನು ಅಭಿನಯ ಪ್ರಶಿಕ್ಷಕರು ಭೋದಿಸುತ್ತಲೇ ಇರುತ್ತಾರೆ.
ನಟಿಸಬೇಕೆನ್ನುವವರಿಗೆ ಮುಖ್ಯವಾಗಿ ನಾಲ್ಕು ಮಾರ್ಗೋಪಾಯಗಳನ್ನು ಪಠಿಸದೆ ಜಾರಿಗೆ ತರಬೇಕೆನ್ನುವ ಮಾತಿನೊಂದಿಗೆ ನಿಮ್ಮ ಮುಂದಿಡುತ್ತೇನೆ. ನಿಮ್ಮೊಳಗಿನ ನಾಲ್ಕು ಶಕ್ತಿಗೆ ಸತತ ಸಾಣೆ ಹಿಡಿಯಬೇಕು.
ಗ್ರಹಣ ಶಕ್ತಿ (OBSERVATION)
ಏಕಾಗ್ರ ಶಕ್ತಿ (CONCENTRATION)
ಜ್ಞಾಪಕ ಶಕ್ತಿ (MEMORY POWER)
ಕಲ್ಪನಾ ಶಕ್ತಿ (IMAGINATION)
ಘಟನೆಯೊಂದನ್ನು ನೋಡಿದ ತಕ್ಷಣ ನಾವೇಕೆ ಪುನರ್ನಿಮರ್ಶಿಸಲು ಒದ್ದಾಡುತ್ತೇವೆ? ಕೆಲವು ಮಕ್ಕಳು ಕಂಡದ್ದೆಲ್ಲವನ್ನೂ ಚಾಚೂ ತಪ್ಪದೇ, ಎಲ್ಲ ವಿವರಗಳೊಡನೆ ಹೇಗೆ ಬಣ್ಣಿಸುತ್ತಾರೆ? ಅವರಿಗದು ಹೇಗೆ ಸಾಧ್ಯವಾಯಿತು? ಹೇಗೆಂದರೆ ಅವಕ್ಕೆ ಪ್ರತಿಯೊಂದೂ ಕುತೂಹಲ. ಅಚ್ಚರಿಕೊಡುವ ಕ್ಷಣಗಳನ್ನು ಮನತುಂಬಿ ಅವರು ಆಹ್ಲಾದಿಸುತ್ತಾರೆ, ಗಾಢವಾಗಿ ಪರಿಕಿಸುತ್ತಲೇ ಅನುಭವದ ಜೋಳಿಗೆಗೆ ಅರಿವಿಲ್ಲದೇ ತುಂಬಿಕೊಳ್ಳುತ್ತಾರೆ. ಗ್ರಹಿಸುವಾಗ ಮನ ಒತ್ತಡಗಳಿಂದಾಗಿ ಕಲ್ಮಷಗೊಂಡಿದ್ದರೆ ಪೂರ್ಣಗ್ರಹಿಕೆ ಅಸಾಧ್ಯ. ಗೊಂದಲಗೊಂಡ ಮನಸ್ಸು ಅಸ್ಥಿರವಾಗಿದ್ದರೆ . . . ನೋಡಿದ್ದು, ಓದಿದ್ದು, ಅನುಭವಿಸಿದ್ದು ಮನತಾಕಿರುವುದಿಲ್ಲ. ಗ್ರಹಿಸುವಾಗ ಸೂಕ್ಷ್ಮಗಳನ್ನು ವಿವರಗಳೊಂದಿಗೆ ದಾಖಲಿಸಿಕೊಂಡರೇ ಹೆಚ್ಚು ಅನುಕೂಲ. ನಿಮ್ಮೊಳಗೆ ತೌಲನಿಕತೆ ಆರಂಭವಾಗಬೇಕಾದ್ದು ನೀವು ಪುನರ್ನಿಮರ್ಶಿಸುವಾಗ – ಗ್ರಹಿಸುವಾಗ ಸುಮ್ಮನೆ ಗ್ರಹಿಸಬೇಕಷ್ಟೆ. ಅಭಿನಯದ ಮೂಲ ಮಂತ್ರಗಳಲ್ಲಿ ಒಂದಾದ ಅನುಕರಣೆಗೆ ಪ್ರಧಾನ ಗ್ರಹಿಸುವ ಪರಿ.
ಅಭಿನಯವೇನು ಪ್ರಪಂಚದಲ್ಲಿ ಯಶಸ್ಸಿನ ಗುಟ್ಟೆಂದರೆ ಏಕಾಗ್ರತೆ. ಅಗಾಧ ಏಕಾಗ್ರ ಗುಣವೊಂದಿದ್ದರೇ ಸಾಕು ಅಭಿನಯ ಸರ್ವರೂಪಗಳೂ, ಅರಿವಿರದ ಅನೇಕ ಸಂಗತಿಗಳು ದಕ್ಕುವುದಲ್ಲದೇ ನಿರಂತರತೆಯನ್ನೂ ಕಾಯ್ದಿಡುವುದು ಈ ಏಕಾಗ್ರತೆ. ನಟರು ಸಾಮಾನ್ಯವಾಗಿ ಚಂಚಲಚಿತ್ತರು. ನೀವು ಗ್ರಹಿಸುವಾಗ ಏಕಾಗ್ರತೆ ಇಲ್ಲದಿದ್ದರೇ ವಸ್ತು, ಪಾತ್ರ, ಘಟನೆ, ಭಾವ ಯಾವುದೂ ಮನನವಾಗುವುದಿಲ್ಲ. ಚದುರುತ್ತಿರುವ ಮನವನ್ನು ಸತತ ಅಭ್ಯಾಸಗಳ ಮೂಲಕ, ರಂಗಾಟಗಳು ಮತ್ತು ಯೋಗಾಭ್ಯಾಸ, ಧ್ಯಾನ, ಸಂಗೀತ . . . ಮುಂತಾದವುಗಳಲ್ಲಿ ತೊಡಗಿಕೊಳ್ಳುವುದರಿಂದ ಸತತ ಕ್ರಿಯಾವಿಧಿಗಳಿಂದ ‘ಏಕಾಗ್ರತೆ’ ಸಾಧಿಸಿದರೆ ನಟನ ಮಾತುಗಳು, ಚಲನೆ, ಎದುರಿಗಿರುವ ಪಾತ್ರಗಳ ಸಂಬಂಧ, ವಿಚಾರ . . . ಎಲ್ಲವೂ ಸುಲಭ ಸಾಧ್ಯವಾಗುತ್ತದೆ. ನಟನಿಗೆ ಅತ್ಯಂತ ಆವಶ್ಯಕ ಮಂತ್ರ ಏಕಾಗ್ರತೆಯನ್ನು ರೂಢಿಸುವುದು. ನಟ ಸೈಡ್ವಿಂಗ್ನಲ್ಲಿದ್ದಾಗ, ಪಾತ್ರ ಅಭಿನಯಿಸಲು ಸಿದ್ಧತೆ ನಡೆಸಿರುವಾಗ ಏಕಾಗ್ರಚಿತ್ತನಾಗಿರದಿದ್ದರೆ ಅನೇಕ ತೊಂದರೆಗಳನ್ನೆದುರಿಸಬೇಕಾಗುತ್ತದೆ. ವೃತ್ತಿಪರ ಆಲೋಚನೆಗಳಿರುವ ಪ್ರಬುದ್ಧ ನಟನಟಿಯರು ಪಾತ್ರಕ್ಕೆ ಹೊರಡುವ ಮುನ್ನ ಹೊರಜಗತ್ತಿನ ಎಲ್ಲ ಸಂಪರ್ಕಗಳನ್ನು ಕಿತ್ತೊಗೆದು ತಮ್ಮ ಪಾತ್ರ – ಅಭಿನಯದೆಡೆಗೆ ಮಾತ್ರ ಏಕಾಗ್ರತೆ ವಹಿಸುತ್ತಾರೆ. ವಿಶೇಷ ಶಕ್ತಿಯುಳ್ಳ ನಟರು ಏಕಾಗ್ರತೆ ಸಾಧಿಸಿಲ್ಲವೆಂಬಂತೆ ಹೊರ ಜಗತ್ತಿಗೆ ಕಾಣಿಸಿಕೊಂಡರೂ ಆಂತರ್ಯದಲ್ಲಿ ಅಪಾರ ಧೃಡಮನಸ್ಕತೆಯನ್ನು ಸಾಧಿಸಿಕೊಂಡವರಾಗಿರುತ್ತಾರೆ. ಅಭಿನಯ ಸಿದ್ಧಿಸಿಕೊಳ್ಳಲು ‘ತಪಸ್ಸು’ ಎಂದು ಕರೆಸಿಕೊಳ್ಳಲ್ಪಡುವ ಏಕಾಗ್ರತೆ ಗಳಿಸಿಕೊಳ್ಳಲು ನಟ ಓದುವುದು ಮತ್ತು ಗುಣಾತ್ಮಕ ವಿಷಯಗಳತ್ತ ಪದೇ ಪದೇ ಗಮನವಹಿಸುವುದು, ತನ್ಮಯನಾಗಿ ತೊಡಗಿಕೊಳ್ಳುವುದು, ಆರಂಭದಲ್ಲಿ ಬಲವಂತವಾಗಿಯಾದರೂ ಮನಸ್ಸನ್ನು ಕೇಂದ್ರೀಕರಿಸಲು ಯತ್ನಿಸುತ್ತಲೇ ಹೋಗುವುದು . . . ಈ ಕೆಲ ಕ್ರಿಯೆಗಳು ಸಹಾಯವಾಗಬಹುದು. ಮೂರನೇ ಮುಖ್ಯ ಅಂಶ ಜ್ಞಾಪಕ ಶಕ್ತಿ ಅರ್ಥಾತ್ ನೆನಪನ್ನು ವೃದ್ಧಿಸಿಕೊಳ್ಳುವುದು. ಮನುಷ್ಯ ಅಥವ ನಟನಿಗೆ ವರ ಮತ್ತು ಶಾಪ ಎರಡೂ ಹೌದಾದರೆ ಅದು ಈ ನೆನಪು.
ಮಾಡಿದ್ದೆಲ್ಲವೂ ನೆನಪಲ್ಲಿ ಉಳಿದುಬಿಟ್ಟರೇ ನಟನ ಕಥೆ ಏನಾದೀತು? ಹಾಗೇ ಕಲಿತದ್ದೆಲ್ಲವೂ ಮರೆತುಬಿಟ್ಟರೇ ಪಾತ್ರ ಮಾಡಲಾದೀತೆ? ಬೇಡವಾದದ್ದನ್ನು ಮರೆಯುತ್ತಾ ಬೇಕಾದುದನ್ನು ಸ್ಮೃತಿ ಪಟಲದಲ್ಲಿ ಮೂಡಿಸಿಕೊಳ್ಳುತ್ತಾ, ಅನುಭವಿಸಿದ ಪ್ರತಿ ಭಾವನೆಗಳನ್ನು, ಕಲಿತ ಮಾತು-ಚಹರೆಗಳನ್ನು ಪ್ರೇಕ್ಷಕರೆದುರು ಈಗ ತಾನೇ ಸ್ಫುರಿಸಿತು ಅನ್ನುವ ಕಟ್ಟಿಕೊಡುವ ಕ್ರಿಯೆಗೆ ಪದೇ ಪದೇ ನೆನಪಿನ ಶಕ್ತಿಗೆ ನಟ ಮೊರೆಹೋಗಲೇ ಬೇಕು. ವ್ಯಕ್ತಿ ತಾನು ಪ್ರೀತಿಸುವ ವಿಷಯಗಳಲ್ಲಿ ಹೆಚ್ಚು ಗಮನವಹಿಸುವುದರಿಂದ ಅಂಥ ವಸ್ತು, ಪಾತ್ರ, ಪಾಠ ಎಲ್ಲವೂ ಮನಸ್ಸಿನಲ್ಲಿ ಉಳಿದುಬಿಡುತ್ತವೆ. ಕಾಲಾನುಗತಿಗೆ ತಕ್ಕಂತೆ, ಮನುಷ್ಯನ ಮನಸ್ಸು ಆರೋಗ್ಯಪೂರ್ಣವಾಗಿದ್ದಷ್ಟು ಸ್ಮೃತಿ ಶಕ್ತಿ ಜಾಗೃತವಾಗಿರುತ್ತದೆ. ಗೊಂದಲಗೊಂಡ ಮನಸ್ಸು, ಅಸ್ಥಿರ ಸ್ಥಿತಿಯಲ್ಲಿನ ಮನಸ್ಸು ಘಟಿಸಿದ್ದನ್ನು ಸ್ಪಷ್ಟವಾಗಿ ದಾಖಲಿಸಿಕೊಳ್ಳುವಲ್ಲಿ ತೊಡಕುಗಳಾದರೂ ಸುಪ್ತದಲ್ಲಿ ಎಷ್ಟೋ ವಿವರಗಳು ಸ್ಮೃತಿ ಪಟಲದಲ್ಲಿ ಅಚ್ಚೊತ್ತಿಬಿಟ್ಟಿರುತ್ತದೆ. ಒಳಿತಾಗಲಿ-ಕೆಡುಕಾಗಲಿ ನೆನಪು ನೆನಪೇ. ಏಕಾಗ್ರವಾಗಿ ಗ್ರಹಿಸಿದ್ದು ಮನಸ್ಸಿನಲ್ಲುಳಿದರೇ ಆ ಭಾವವನ್ನೆತ್ತಿಕೊಂಡು ಅದನ್ನು ನಟ ಹೊಸದಾಗಿ ಪುನರ್ನಿಮರ್ಶಿಸಿಕೊಡುವಾಗ ನೆನಪಿನಲ್ಲಿದ್ದ ಅಂಶಗಳು ‘ಪಾತ್ರ’ ಸೃಷ್ಟಿಸಲು ಪ್ರಧಾನಪಾತ್ರ ವಹಿಸುತ್ತವೆ. ನೆನಪಿನ ಶಕ್ತಿ ಪ್ರಬಲವಾಗಿದ್ದಷ್ಟೂ ಪಾತ್ರದಲ್ಲಿನ ಚಿಕ್ಕ ಚಿಕ್ಕ ವಿವರಗಳನ್ನೂ ಕೂಡ ನಟ ವಿವರಿಸಬಲ್ಲ.
ಪಾತ್ರಧಾರಿಯೊಬ್ಬನಿಗೆ ಮಾತು ಮರೆವ ಸಮಸ್ಯೆ ಎದುರಾದಾಗ ಫಕ್ಕನೆ ಆತ ಮತ್ತಷ್ಟು ಉದ್ವಿಗ್ನ(tenstion)ಗೊಳ್ಳುವುದಕ್ಕಿಂತ ಕೊಂಚ ನಿರಾಳ(relax)ವಾದರೇ ತಕ್ಷಣವೇ ಮಾತುಗಳೆಲ್ಲ ನೆನಪಾಗಲು ಆರಂಭಿಸುತ್ತವೆ. ಆದರೆ ಆ ಕ್ಷಣದಲ್ಲಿ ಹೇಗೆ ಅಧೈರ್ಯಗೊಂಡ ನಟ ಅತಿರೇಕದ ನಟನೆಗೆ ಮೊದಲುಗೊಳ್ಳುವನೋ ಅಂತೆಯೇ ಮಾತು ಮರೆಯುವ ಕ್ಷಣದಲ್ಲಿ ನಟ ಅಗತ್ಯಕ್ಕಿಂತ ಹೆಚ್ಚು ಉದ್ವಿಗ್ನಗೊಂಡಿರುತ್ತಾನೆ. ಅಂಥ ಸಂದರ್ಭದಲ್ಲಿ ಮನಸ್ಸನ್ನು ಸ್ವಸ್ಥಸ್ಥಿತಿಗೆ ತಂದುಕೊಂಡು ಎರಡು ಪಾದಗಳನ್ನು ಪೂರ್ಣವಾಗಿ ನೆಲಕ್ಕೆ ತಾಗಿಸಿ – ಭುಜಗಳನ್ನು ಕೆಳಗಿಳಿಸಿ – ಧುಮುಗುಡುವುದನ್ನು ತಪ್ಪಿಸಬೇಕು. ನೆನಪಿನ ಶಕ್ತಿ ವೃದ್ದಿಸಿಕೊಳ್ಳಬಹುದೇ? ಖಂಡಿತಾ ಸಾಧ್ಯವಿದೆ! ಕಣ್ಣಿಗೆ ಕಂಡದ್ದನ್ನ, ಮನಸ್ಸಿನಲ್ಲಿ ಅನುಭವಿಸಿದ್ದನ್ನು ಬಾಯಿಂದ ಆಡುತ್ತಾ ಹೋದರೆ ಮಾತಿನ ಮೂಲಕ ವಿಷಯಗಳು, ವಿವರಗಳು ಸ್ಪಷ್ಟವಾಗುತ್ತಾಹೋಗಿ ಆಡುವವನ ಜೊತೆ ಕೇಳುಗನ ಮನದಲ್ಲೂ ಚಿತ್ರ ಮೂಡುತ್ತದೆ. ಮುಖಾಮುಖಿಯ ಪರಂಪರೆ ಕ್ಷೀಣಿಸುಲು ಮೊದಲ್ಗೊಂಡು ಸಣ್ಣ ಸಣ್ಣ ವಿಷಯಗಳಿಗೂ ವಿದ್ಯುನ್ಮಾನ ತಂತ್ರಜ್ಞತೆಗೆ ಮೊರೆ ಹೋಗಿರುವ ನಮಗೆ, ಎಲ್ಲಕ್ಕೂ ಯಂತ್ರಗಳನ್ನು ಅವಲಂಬಿಸಿರುವ ನಮ್ಮ ಮನಸ್ಸು, ದೇಹದ ಮೈಗಳ್ಳತನದ ಸಂಕೇತವಾಗಿ ಮರೆಗುಳಿತನ ಹೆಚ್ಚಾಗಿದೆ.
ರಂಗಾಟಗಳ ಮೂಲಕ, ಅನುಭವಗಳನ್ನು ಪರಸ್ಪರ ಮನದಣಿಯೇ ಹಂಚಿಕೊಳ್ಳುವುದರ ಮೂಲಕ ಚಿತ್ತಭಿತ್ತಿಯಲ್ಲಿ ಕ್ಷಣಿಕ ವಿವರಗಳನ್ನು ಕೆತ್ತಿಕೊಂಡು ಮಾತನಾಡುವ ಪರಂಪರೆಯಿಂದ ನೆನಪಿನ ಶಕ್ತಿಯನ್ನು ವೃದ್ದಿಸಿಕೊಳ್ಳಬಹುದೆಂದು ಅನಿಸಿದೆ. ನಟನೆ, ಕವಿ, ಕಾವ್ಯ, ಚಿತ್ತಾರ, ಅಭಿನಯ ಪ್ರಪಂಚದ ಯಾವುದೇ ಕ್ರಿಯಾಶೀಲ ಕಾರ್ಯಕ್ಕೆ ಪ್ರಧಾನ ಆಕರವೆಂದರೆ, ‘ಕಲ್ಪನಾ ಶಕ್ತಿ’. ಅದಕ್ಕಾಗಿಯೇ ಅದನ್ನು ಚಾತುರ್ಯವೆಂದೇ ಬಣ್ಣಿಸಲಾಗಿದೆ. ಕಲ್ಪನೆ ಇಲ್ಲದಿದ್ದರೇ ಈ ಜಗತ್ತಿನಲ್ಲಿ ಏನೂ ಇಲ್ಲ. ಸಂತೋಷದ ಮೂಲ ಸೆಲೆ ಕಲ್ಪನೆ. ನಟನೊಬ್ಬ ಅನೇಕ ಜೀವನ ಪಾತ್ರಗಳನ್ನು ನೋಡಿದ ಮೇಲೂ ತನ್ನ ಕಲ್ಪನೆಯಿಂದ ಆ ಪಾತ್ರಕ್ಕೆ ವಿಶೇಷ ಅವಯವಗಳನ್ನು ಮೂಡಿಸಬೇಕು. ‘ಯಥಾವತ್ ಅನುಕರಣೆ’ ಪ್ರೇಕ್ಷಕರಲ್ಲಿ ದೀರ್ಘಕಾಲ ರೋಮಾಂಚನಗೊಳಿಸದು. ತಾನು ಕಂಡ ಪಾತ್ರಕ್ಕೆ ನಟ ತನ್ನ ಕಲ್ಪನೆಯ ಮೆರುಗನ್ನು ನೀಡಲೇಬೇಕು. ವಿಶೇಷವಾಗಿ ಮಕ್ಕಳಲ್ಲಿ ಕಲ್ಪನಾಶಕ್ತಿ ಜಾಗೃತವಾಗಿಯೇ ಇರುತ್ತದೆ. ಪ್ರತಿಕ್ಷಣ ಹೊಸದನ್ನು ಗ್ರಹಿಸುವ, ನಿರೀಕ್ಷಿಸುವ, ಸಂತಸಗೊಳ್ಳುವ ಪರಿಭಾವ ಗುಣ ಕಲ್ಪನಾಶಕ್ತಿಗೆ ಕಾರಣವಾಗುತ್ತದೆ. ಕಲ್ಪಿಸಿಕೊಳ್ಳುವುದಕ್ಕೆ ವಾಸ್ತವದ ನೆಲೆಗಟ್ಟಿರಬೇಕೆಂಬ ನಿಯಮವೇನಿರದಿದ್ದರೂ ಆಧುನಿಕ ಮುನುಷ್ಯನ ಮನಸ್ಥಿತಿ ಓತಪ್ರೇತವಾಗಿ ವಿಚ್ಚಿದ್ರಕಾರಿಯಾಗಿ, ವಿನಾಶಕಾರಿಯಾಗಿ, ನೇತ್ಯಾತ್ಮಕ ಅಂಶಗಳೆಡೆಗೆ ಲಂಗುಲಗಾಮಿಲ್ಲದೇ . . . ಕಲ್ಪನೆ ಕೂಡ ಅಪಾಯವೇ ಆದರೂ ‘ನಟ’ನೊಬ್ಬ ಕಲ್ಪನೆಯ ತುದಿಯವರೆಗೆ (height of imagination) ಸಾಗಬೇಕಾದ್ದು ಅತ್ಯಂತ ಅನಿವಾರ್ಯ, ಕಲ್ಪಿಸಿಕೊಂಡದ್ದನ್ನು ಪ್ರೇಕ್ಷಕರೆದುರು ಮಂಡಿಸುವಾಗ, ಕೊಂಚ ಮಿತಿಯ ಕಡಿವಾಣ ಹಾಕಿ ಸಹಜತೆಯ ಒಡವೆ ತೊಡಿಸಿದರೇ ಪಾತ್ರ ನೈಜ ಬೆಡಗಿನಿಂದ ಪ್ರೇಕ್ಷಕನಿಗೆ ಪ್ರಿಯವೆನಿಸುತ್ತದೆ.
ನಮ್ಮ ಜಾನಪದ, ಮಹಾಪುರಾಣಗಳು, ಕಾವ್ಯ . . . ಎಲ್ಲದರಲ್ಲೂ ಕಲ್ಪನೆಯ ಅಂಶಗಳು ಹೆಚ್ಚಿದ್ದರೂ ಪಾತ್ರದ ವಸ್ತುವಿನ ಮತ್ತು ಸಂದರ್ಭದ, ‘ಮೌಲ್ಯ’ಗಳಷ್ಟೇ ಗಮನಾರ್ಹ. ಆ ಕಾರಣಗಳಿಗಾಗಿಯೇ ಅವು ಪ್ರಮುಖ ರೂಪಕಗಳೆಂದು ಗುರುತಿಸಿಕೊಂಡಿದ್ದೇವೆ. ‘ನಾನು ಮಂತ್ರಿಯಾದರೇ’. . . ‘ನಾನು ಕಳ್ಳನಾಗಿದ್ದರೇ’. . . ‘ನಾನು ಸ್ವಾಮೀಜಿಯಾದರೇ’. . . ಹೀಗೆ ಆದರೇ, ಆಗಿದ್ದರೆ ಹೇಗಿರಬಹುದು ಎಂದು ಕಲ್ಪಿಸಿಕೊಂಡ ನಟ ಪಾತ್ರದ ವಯಸ್ಸು, ಬಣ್ಣ, ಲಿಂಗ, ಪ್ರಾದೇಶಿಕ ಶೈಲಿ, ಬಾಷೆ, ಚಹರೆ, ಮನಸ್ಥಿತಿ – ಸಕಲ ವಿವರಗಳನ್ನೂ ಪೂರ್ಣ ನಂಬಿಕೊಂಡೇ ಪಾತ್ರ ನಿರ್ವಹಿಸಬೇಕಾಗುತ್ತದೆ. ಹಾಗಾಗಿ, ನಟನೆಯಲ್ಲಿ ಮಿಕ್ಕೆಲ್ಲ ಅಂಶಗಳಿಂದ ಹೆಚ್ಚು ಪ್ರಾಧಾನ್ಯತೆ ‘ಕಲ್ಪನೆ’ಗೆ, ಕಲ್ಪನಾಶಕ್ತಿ ಕೊರತೆ ಇರುವ ನಟ ಮಿತಿಯಲ್ಲಿಯೇ ಇರಬೇಕಾಗುತ್ತದೆ. ಕುಳಿತಾಗ, ನಿಂತಾಗ, ಯೋಚಿಸುವಾಗ, ಮಲಗಿದಾಗ ಕೂಡ ಪಾತ್ರದ ಬಗ್ಗೆ ಚಿಂತಿಸಬಲ್ಲೆ ಎಂದರೇ ನೀ ಕಲ್ಪನೆಗಳನ್ನು ಹೆಣೆಯುತ್ತಿದ್ದೀ ಎಂದೇ ಅರ್ಥ. ಕಣ್ಣಿಗೆ ಬಿದ್ದದ್ದೆಲ್ಲದಕ್ಕೂ ಕಥೆ ಕಟ್ಟಬೇಕು ನಟ. ಆದರೇ ಸಿಕ್ಕಲ್ಲೆಲ್ಲಾ ಪ್ರಯೋಗಿಸುವುದು ನಿಷಿದ್ಧ.
ಗ್ರಹಿಸುವುದು, ಏಕಾಗ್ರತೆ, ನೆನಪಿನ ಶಕ್ತಿ ಮತ್ತು ಕಲ್ಪನಾ ಶಕ್ತಿಗಳನ್ನು ನಟನೆಯನ್ನು ಅಭ್ಯಾಸ ಮಾಡಲು ಬರುವ ಯುವಕ-ಯುವತಿಯರು ಕಡ್ಡಾಯವಾಗಿ ತೊಡಗಿಕೊಳ್ಳುವಂತಾದರೇ ತಮ್ಮ ಅಭಿನಯದಲ್ಲಿನ ಮಿತಿಗಳನ್ನು ದಾಟುವ ಅವಕಾಶಗಳು ಹೇರಳವಾಗಿವೆ. ಎಷ್ಟೋ ಬಾರಿ ಇವುಗಳೊಂದಿಗೆ ಹೊರ ಜಗತ್ತಿಗೆ ನಟ ತೆರೆದುಕೊಳ್ಳುವುದರ ಮೂಲಕವೇ ಗಳಿಸಿಕೊಳ್ಳುವ ಅನುಭವಗಳಿಂದ, ಸರಳ ಸಿದ್ಧತೆಗಳಿಂದ, ನಿಧಾನವಾಗಿ ತಾಲೀಮಿನಿಂದ – ತಾಲೀಮಿಗೆ, ಪ್ರಯೋಗದಿಂದ ಪ್ರಯೋಗಕ್ಕೆ, ಸಂಚಿಕೆಯಿಂದ-ಸಂಚಿಕೆಗೆ, ಸಿನಿಮಾದಿಂದ-ಸಿನಿಮಾಕ್ಕೆ ಕೊಂಚ ಕೊಂಚವಾಗಿ ಬೆಳೆಯುತ್ತಾ ಹೋಗಿರುವ ಉದಾಹರಣೆಯೂ ನಮ್ಮ ಮುಂದಿದೆ. ನಟ ಪಂಚಭೂತಗಳಿಂದಲೂ ಗ್ರಹಿಸಬೇಕಾದ ಅಂಶಗಳು ಅನೇಕವಿದೆ. ಬೆಂಕಿ, ನೀರು, ಗಾಳಿ, ಭೂಮಿ, ಆಕಾಶಗಳಿಗಿರುವ ಗುಣ ವಿಶೇಷತೆಗಳನ್ನು ನಟ ಗ್ರಹಿಸಿಕೊಂಡು ತಾನು ಯಾವ ಬಗೆಯ ನಟ? ತಾನು ಏನಾಗಬೇಕೆಂದು ನಿರ್ಧರಿಸಿಕೊಳ್ಳುವುದರಿಂದ ತನ್ನ ಮೇಲೆ ತಾನು ಪದೇ ಪದೇ ಪ್ರಯೋಗಕ್ಕೆ ಒಡ್ಡಿಕೊಂಡಾಗ ನಟನಿಗೆ ಮತ್ತಷ್ಟು ಹೊಳಹುಗಳು ದಕ್ಕಬಹುದು.
ಕಲಾವಿದನಿಗೆ ಜಾತಿಯಿಲ್ಲ, ಅಂತಸ್ತಿನ ಸೊಕ್ಕಿಲ್ಲ. ಆತ ಅಭ್ಯಾಸ ಮಾಡುವಾಗ ಎಲ್ಲ ಬಗೆಯ ಸಂಸ್ಕಾರಗಳನ್ನು, ಪರಂಪರೆಗಳನ್ನೂ ವಿವರವಾಗಿ ಒಗ್ಗಿಸಿಕೊಳ್ಳಬೇಕು. ಜನಾಂಗೀಯ ಅಧ್ಯಯನವೆಂಬುದು ಬದುಕಿನ ಅವಿಭಾಜ್ಯ ಅಂಗವಾಗಿರಬೇಕು. ಪ್ರಪಂಚದ ಮನುಷ್ಯ ಬದುಕಿನ ರೀತಿ ನೀತಿಗಳ, ವಿಧಿ-ವಿಧಾನಗಳ, ಪರಿಸರ ವೈವಿಧ್ಯದ ರೋಮಾಂಚಕ ಅಭ್ಯಾಸ ನಟನ ಪ್ರಾಥಮಿಕ ‘ಪಾಠ’. ಜೀವರಾಶಿಯ ಸಕಲವನ್ನೂ ಗೌರವಿಸುವ ಗುಣ ನಟನಿಗೆ ಅತ್ಯಗತ್ಯ. ನಟನಾಗಲು ಹೊರಟವನಿಗೆ ರಾತ್ರಿ-ಹಗಲುಗಳ ಪರಿವೆ ಇರುವುದಿಲ್ಲ, ಶ್ರಮದ ದುಡಿಮೆಯೊಂದಿಗೆ, ದೈಹಿಕ ವ್ಯಾಯಾಮದ ಕಸರತ್ತುಗಳೊಂದಿಗೆ ಇತಿಹಾಸ, ಧರ್ಮ, ರಾಜಕೀಯ, ತತ್ವಶಾಸ್ತ್ರ ಎಲ್ಲವನ್ನೂ ಅಧ್ಯಯನ ಮಾಡುತ್ತಲೇ ಪ್ರತಿಯೊಂದನ್ನೂ ಆಧುನಿಕ ಪ್ರಜ್ಞೆಯಿಂದ ಗ್ರಹಿಸುವಂತಾಗಬೇಕು. ಪ್ರಯಾಣ ಪ್ರಿಯನಾಗಿರಬೇಕು, ವೃತ್ತಗಳು, ಚೌಕಗಳು, ಗಲ್ಲಿಗಳು, ಬೀದಿಗಳು, ರಸ್ತೆಗಳು, ಹೆದ್ದಾರಿಗಳು, ಬಡಾವಣೆಗಳು, ಫ್ಲಾಟ್ಗಳು, ವಿಶೇಷವಾಗಿ ರೈಲ್ವೇಸ್ಟೇಷನ್, ಬಸ್ಸ್ಟಾಪ್, ಆಸ್ಪತ್ರೆ, ಛತ್ರಗಳು, ಜಾತ್ರೆ, ಸಂತೆ, ಮದುವೆ, ಚಳುವಳಿಗಳು, ಸಭೆ-ಸಮಾರಂಭಗಳು, ಸಿನಿಮಾ ಮಂದಿರಗಳು… ಹೀಗೆ ಜನ ಸೇರುವಲ್ಲೆಲ್ಲಾ ಆತ ಸದಾ ಕಣ್ಣು ನೆಟ್ಟಿರಬೇಕು.
ಸಮುದ್ರದ ಭೋರ್ಗರೆತ, ಜಲಪಾತದ ರುದ್ರ ರಮಣೀಯತೆ, ಸ್ಮಶಾನದ ನಟ್ಟನಡುರಾತ್ರಿ ಕುಳಿರ್ಗಾಳಿಯ ಅನುಭವಗಳನ್ನು ಆತ ಆಸ್ವಾದಿಸಲೇಬೇಕು. ಮಕ್ಕಳ ಪುಟ್ಟ ಪದ್ಯಗಳಿಂದ ಆದಿಯಾಗಿ, ಪಂಥಕ್ಕೆ ಅಂಟಿಕೊಳ್ಳದೇ ಎಲ್ಲ ಬಗೆಯ ಕಥೆ, ಕಾದಂಬರಿ, ನಾಟಕಗಳನ್ನು ಓದುತ್ತಿರಲೇಬೇಕು, ವೃತ್ತಪತ್ರಿಕೆಯ ಎಲ್ಲ ವಿಷಯಗಳತ್ತ ಅವನ ಗಮನ ಸದಾ ಜಾಗೃತವಿರಬೇಕು. ಒಂದು ನಾಡಿನ ಗಾದೆ, ನುಡಿಗಟ್ಟು ನಟನೊಬ್ಬನ ಆಸ್ತಿ. ಹುಟ್ಟಿದ ಮಗುವಿನ ಅಳು, ಸಣ್ಣ ಸೊಳ್ಳೆಯ ಕಿರು ಗುಯ್ಂಗುಡುವಿಕೆಯಿಂದ ಜಗತ್ ಪ್ರಳಯದ ಪ್ರತಿ ಶಬ್ಧಕ್ಕೆ ಆತನ ಕಿವಿ, ಮನಸ್ಸು ತೆರೆದಿರಲೇಬೇಕು. ಎಲ್ಲವನ್ನು ಚಿಕಿತ್ಸೆ-ಅಧ್ಯಯನ ಅಂತೆಲ್ಲ ಅಂದುಕೊಳ್ಳದೇ ಸದ್ದಿಲ್ಲದೇ-ಅನುಭವಿಸುತ್ತಾ ಸಾಗಿ . . . ನಿಮ್ಮಲ್ಲೊಬ್ಬ ನಟ ಹುಟ್ಟಿದ್ದಾನೆ-ನೋಡಿ. . . ಮತ್ತೆ ಆರಂಭಿಸಿ!
















ರಮೇಶ್ ಸರ್, ನಿಜವಾಗಿಯೂ ಈ ಲೇಖನ ಓದುತ್ತಲೇ ರೋಮಾಂಚನವಾಯಿತು. ನಟನೆಯ ಅತಿ ಸೂಕ್ಷ್ಮ ವಿಚಾರಗಳನ್ನು ಮನಸ್ಸಿಗೆ ನಾಟುವ ಹಾಗೆ ಬರೆದಿದ್ದೀರ. ಎಷ್ಟೋ ವಿಷಯಗಳನ್ನು ಓದುವಾಗ ನಟನೆಗೆ ಇಷ್ಟೆಲ್ಲಾ ತಪಸ್ಸು ಬೇಕಾ ಅಂತ ಅನಿಸಿದ್ದು ಸುಳ್ಳಲ್ಲ. ಅತ್ಯಂತ ಪ್ರಯೋಜನಕಾರಿ ಲೇಖನ ಓದಿಸಿದ್ದಕ್ಕೆ ನಿಮಗೆ ನನ್ನ ಧನ್ಯವಾದಗಳು.
Thumba Olleya lekhana. Abhinaya kaliyuva aasaktarige idu ondu aakara lekhana. Dhanyavaadagalu Ramesh.
ಸಿನಿಮಾ ರಂಗದಲ್ಲಿ ನಟಿಸಲು ಏನು ಮಾಡಬೇಕು??