ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂಡ್ಯ ರಮೇಶ್ ಕಾಲಂ : ಅಪರಿಮಿತ ಅಂತಃಕರಣದ ರಂಗ ಸಂತ

ಜಿಟಿ ಜಿಟಿ ಮಳೆಯ ಮುಸ್ಸಂಜೆಯಲ್ಲಿ ಅನುಮಾನ ಆತಂಕಗಳ ಬ್ಯಾಗನ್ನು ಬೆನ್ನ ಮೇಲೆ ಹೊತ್ತು ಬಸ್ಸಿಂದಿಳಿದಾಗ ಕಣ್ಣಲ್ಲಿನ್ನೂ ಭಯದ ತೇವವಿತ್ತು. ಹೊಸ ಹುಡುಗನನ್ನು ಕಂಡ ಬಡಕಲು ಮೈಗಟ್ಟಿನ ಮುದುಕ, ಓದುತ್ತಿದ್ದ ಪತ್ರಿಕೆಯ ನಡುವಿಂದ ತಲೆ ಮೇಲೆತ್ತಿ ಕವಳ ತುಂಬಿದ ಬಾಯಲ್ಲೇ `ಎಲ್ಲಾಯ್ತೋ ಅಪ್ಪಿ?’.
`ಮಂಡ್ಯ’ ಅಂದೆ.
ಓಹೋ ನಮ್ಮ ಶಂಕ್ರೇಗೌಡ್ರ ಊರಿನೋನು. ಬಾ ಕೂತ್ಕೊ ಅಂದ್ರು. ಪಕ್ಕದಲ್ಲಿ ಕೂತ ನನ್ನ ಬೆನ್ನ ಮೇಲೆ ಕೈಯಾಡಿಸಿದರು. ಅರ್ಧ ಆತಂಕ ಹಾರಿಹೋಗಿತ್ತು. ಕಪ್ಪು ಬಿಳಿ ಗಡ್ಡದ ಕೋಲು ಮುಖದಲ್ಲೊಂದು ಅಣ್ಣಾವ್ರ ಮೂಗು. ಜಗತ್ತಿನ ಪ್ರೀತಿ ಎಲ್ಲವನ್ನೂ ತುಂಬಿಕೊಂಡಂಥ ಸದಾ ಫಳಫಳ ಹೊಳೆವ ಕಣ್ಣುಗಳು. ಆಗಾಧ ಆತ್ಮವಿಶ್ವಾಸದ ಅಪರಿಮಿತ ಅಂತಃಕರಣದ ಮೂರ್ತರೂಪ ರಂಗಸಂತ ಶ್ರೀ ಕೆ.ವಿ. ಸುಬ್ಬಣ್ಣನವರು.
ಮಾತು ಮಾತು. ಪ್ರತಿ ಮಾತಿಗೂ ಬದುಕಿನನುಭವದ ಸತ್ಯವನ್ನು ಎಳೆಯರಿಗೆ ಸರಳವಾಗಿ ತಲುಪಿಸುವ ತವಕ. ಹಾಗೆಂದೇ ಇವತ್ತು ಕರ್ನಾಟಕದ ತುಂಬೆಲ್ಲಾ ಆಧುನಿಕ ಸಂವೇದನೆಯ ರಂಗ ಕಾಯಕಕ್ಕೆ ರಂಗಯೋಧರನ್ನು ಸಿದ್ದ ಮಾಡಿದ ಅಪೂರ್ವ ಜೀವ ಅದು. ರಂಗಭೂಮಿ, ಸಾಹಿತ್ಯ, ಸಂಸ್ಕೃತಿಯನ್ನು ಸೋಗಿನಡಿಯಲ್ಲಿ ಸಿಲುಕಿಸದೇ ತನ್ನ ಪಾಡಿಗೆ ತಾನು ಸದ್ದಿಲ್ಲದೇ ಸಿಟಿಯವರೊಂದಿಗೆ ಗುದ್ದಾಡದೇ ತಾನಿರುವೆಡೆಯಲ್ಲೇ ಇಡೀ ಜಗತ್ತು ತಿರುಗಿ ನೋಡುವಂತೆ ಮಾಡಿದ ಮಹಾನ್ ಹರಿಕಾರ.
ಅವರ ದೂರದೃಷ್ಟಿ ಮತ್ತು ಜೀವನವನ್ನೆದುರಿಸುವ ಪರಿಗೊಂದು ಸಣ್ಣ ನಿದರ್ಶನ, ಕಾರಂತರ ಭೂಪಾಲ್ ಪ್ರಕರಣ ಅವರ ಕಿವಿಗೆ ಬಿದ್ದೊಡನೆ ಇಡೀ ಭಾರತವೇ ವಾರೆಗಣ್ಣಿನಿಂದ ನೋಡುತ್ತಿದ್ದಾಗ ಈ ಸುಬ್ಬಣ್ಣ ಮಾತ್ರ `ಛೇ ಏನ್ ತೊಂದ್ರೇಲಿ ಸಿಕ್ಕಿಕೊಂಡಿದ್ದಾರೋ ಏನೋ’ ಅಂತ ಮೊದಲು ಅರ್ಜಂಟಾಗಿ ಅವರಿಗೊಂದಿಷ್ಟು ಹಣ ಕಳಿಸುವ ಏರ್ಪಾಟು ಮಾಡಿದರು. ಭೂಪಾಲ್ ಬಿಟ್ಟು ಬಂದ ಕಾರಂತರನ್ನು ಸಾಂತ್ವನದ ಸರಪಳಿಯನ್ನು ಕಟ್ಟಿ ಮಿಸ್ ಸದಾರಮೆಯನ್ನು ರೂಪಿಸಿದರು.
ನಾಟಕ ಆಕಾಡೆಮಿಯ ಅಧ್ಯಕ್ಷಸ್ಥಾನ, ಕೇಂದ್ರ ಸಂಗೀತ ನಾಟಕ ಆಕಾಡೆಮಿಯ ಅಧ್ಯಕ್ಷಸ್ಥಾನ, ರಾಷ್ಟ್ರೀಯ ನಾಟಕ ಶಾಲೆಯ ಅಧ್ಯಕ್ಷಗಿರಿ ಎಂಥೆಂಥ ಪದವಿ, ಪಟ್ಟವನ್ನೂ ನಯವಾಗಿ ತಿರಸ್ಕರಿಸಿ, ತನ್ನಷ್ಟಕ್ಕೆ ತಾನು ಓದುತ್ತಾ, ಬರೆಯುತ್ತಾ, ಬರೆದದ್ದನ್ನು ಜಾರಿಗೆ ತರುತ್ತಾ ಲೀನವಾಗಿಬಿಟ್ಟರು ನಮ್ಮ ಸುಬ್ಬಣ್ಣ, ನೀನಾಸಮ್, ನೀನಾಸಮ್ ಯಕ್ಷರಂಗ, ನೀನಾಸಮ್ ಚಿತ್ರ ಸಮಾಜ, ನೀನಾಸಮ್ ರಂಗ ಶಿಕ್ಷಣ ಕೇಂದ್ರ, ನೀನಾಸಮ್ ತಿರುಗಾಟ, ಅಕ್ಷರ ಪ್ರಕಾಶನ, ನೀನಾಸಮ್ ಜನಸ್ಪಂದನ…. ಅಬ್ಬಬ್ಬಾ ನೀನಾಸಮ್ ಒಂದು ಸಂಸ್ಥೆಯಲ್ಲ, ಅದೊಂದು ಸಂಸ್ಕೃತಿ. ಅಂಥದ್ದೊಂದು ಸಂಸ್ಕೃತಿ ರೂಪಿಸಿದ ಸುಬ್ಬಣ್ಣನವರೊಂದಿಗೆ ಮಾತನಾಡುತ್ತಿದ್ದರೆ ನನ್ನಜ್ಜ, ನನ್ನ ಗೆಳೆಯನೊಂದಿಗೆ ಮಾತನಾಡಿದ ಹಿತವಾದ ಅನುಭವವಾಗುತ್ತಿತ್ತು. ಅವರನ್ನೊಮ್ಮೆ ಹತ್ತಿರದಿಂದ ಕಾಣಲೇ ಬೇಕೆಂದು ಹಠಕ್ಕೆ ಬಿದ್ದ ನನ್ನ ಗೆಳೆಯನನ್ನು ಅವರ ಮನೆಗೆ ಕಳೆದ ವರ್ಷ ಕರೆದೊಯ್ದಿದ್ದೆ. ನಿಧಾನವಾಗಿ ನಮ್ಮತ್ತ ನಡೆದು ಬಂದ ಸುಬ್ಬಣ್ಣ. ಅವನ ಹಸ್ತಕ್ಕೆ ತಮ್ಮ ತಣ್ಣನೆಯ ಮೃದು ಸ್ಪರ್ಷದಿಂದ ಒತ್ತಿ ಹೇಳಿದ ಮಾತೇನು ಗೊತ್ತ. `ನಮ್ಮ ಹಾಗೇ ನೀವೂ ನಿಮ್ಮ ಊರಲ್ಲೆಲ್ಲಾ ನಾಟ್ಕ ಆಡುತ್ತ ಓಡಾಡ್ತಿದ್ದೀರ ಅಂತ ಕಾಣುತ್ತೆ. ಅದಕ್ಕೆ ನಮ್ಮ ಕೆಲ್ಸ ದೊಡ್ಡದು ಅನ್ನಿಸಿ ಬಂದಿದ್ದೀರಿ. ಹಾಗೇನಿಲ್ಲ. ನಾವೆಲ್ಲ ಒಂದೇ’ ಅಂದರು ಮೆಲು ಧ್ವನಿಯಲ್ಲಿ. ನಮ್ಮೆಲ್ಲರ ಕಣ್ಣಂಚಿನಲ್ಲಿ ಪ್ರೀತಿ ನೀರಿತ್ತು.
ನೀನಾಸಮ್ ನಾಟಕ ಶಾಲೆಯಲ್ಲಿ ಲಂಕೇಶರ `ಅವ್ವ’ ಮತ್ತು ಚಿತ್ತಾಲರ `ತಾಯಿ’ ಪದ್ಯಗಳ ತುಲನೆಯ ಅವರ ಸಾಹಿತ್ಯದ ತರಗತಿಗಳನ್ನು ಯಾವುದೇ ವಿದ್ಯಾರ್ಥಿ ಖಂಡಿತ ಮರೆಯಲು ಸಾಧ್ಯವಿಲ್ಲ. ಅವರು ಹೇಳುವ ಪರಿ, ನಮ್ಮಿಂದ ಹೇಳಿಸುವ ರೀತಿಯೇ ವಿಶಿಷ್ಟ ಬಗೆಯರು. ಸಣ್ಣ ಹಳ್ಳಿಯ ಮೂಲೆಯಲ್ಲೆಲ್ಲೋ ಕುಳಿತು ಕವಳ ಮೆಲ್ಲುತ್ತಾ ಕುರುಸೇನನ ಚಿತ್ರಗಳಿಂದ ಕನ್ನಡ ನಾಟಕ ಪರಂಪರೆಯ ಬಗ್ಗೆ ಕಾಳಜಿಯಿತ್ತು.
ಕಳವಳಿಸುತ್ತಿದ್ದ, ಕನವರಿಸುತಿದ್ದ ಸುಬ್ಬಣ್ಣ ಕನ್ನಡದ ಗ್ರಾಮೀಣ ಹುಡುಗರಿಗೆ, ನಾಟಕ ಕಲಿಯಲೆಂದೇ ಬಂದ ಹೈಕಳಿಗೆ ಕಣ್ಣಾಗಿದ್ದರು.

ಆತ ನಟಿಸಲಿಲ್ಲ. ಅದ್ಬುತ ನಟರನ್ನು ಸೃಷ್ಟಿಸಿದ. ಹಾಡಲಿಲ್ಲ, ಹಾಡಿದ ಹಾಡಿಗೆ ಕನ್ನಡ ರಂಗಭೂಮಿಯೇ ರಂಗು ರಂಗಾಗಿ ಹೋಯಿತು. ಮನುಷ್ಯ ಪ್ರೀತಿಯನ್ನು ಹೃದಯದ ಹಾಡಿನಲ್ಲಿ ಹಂಚಿಹೋದ ರಂಗ ದಾರ್ಶನಿಕ. ಆದರ್ಶಗಳು ಮತ್ತು ವಾಸ್ತವವನ್ನು ಬೆಸೆಯಲು ತಿಪ್ಪರಲಾಗ ಹಾಕುತ್ತಿರುವ ನಮ್ಮಂಥವರಿಗೆ ಸುಬ್ಬಣ್ಣನವರ ಛಲ ಮತ್ತು ಎಮೋಷನ್ ಬರೀ ಅಚ್ಚರಿಯಷ್ಟೇ ಅಲ್ಲ ಗುರಿ ಕೂಡ.
ಇವತ್ತು ಕರ್ನಾಟಕದ ತುಂಬೆಲ್ಲ ಹಳ್ಳಿ ಹಳ್ಳಿಯಲ್ಲಿ ನಿರಂತರ ರಂಗಕಾಯಕ ಮಾಡುವ ಹುಡುಗರ ಕಣ್ಣಿಲ್ಲಿ ಸುಬ್ಬಣ್ಣ ಇದ್ದಾರೆ. ಸರಳತೆ, ಶಿಸ್ತು, ಕನ್ನಡದ ಕಾವಲನ್ನು ನಾಟಕದ ಮೂಲಕ ತನ್ನ ತಲೆಮಾರಿಗೆ ಕೊಡಲು ಸಂಕಲ್ಪ ಮಾಡಿದ್ದ ಸುಬ್ಬಣ್ಣ. ಒಳ್ಳೆಯತನ ಇರುವಷ್ಟು ದಿನವೂ ಇದ್ದೇ ಇರುತ್ತಾರೆ.
 

‍ಲೇಖಕರು avadhi

29 April, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading