ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂಡಿಯೂರಿ ಕುಳಿತ ಅಪ್ಪ ಕಣ್ಣೊರೆಸಿಕೊಳ್ಳುತ್ತಾನೆ…

– ಮಾರುತಿ ದಾಸಣ್ಣವರ


ಯುದ್ಧ ಮುಗಿದ ಮೇಲೆ.
ಎಲ್ಲವೂ ಮುಗಿದ ರಣಭೂಮಿಯ
ರಕ್ತ ಮಾಂಸದ ಕೆಸರಲ್ಲಿ
ನನ್ನವೇ ಹೆಣಗಳ ಎಡವುತ್ತ ಹೊರಟ
ವೀರ ಯೋಧನು ನಾನು..
 
ನನ್ನೆದೆಯ ನಾಲಿಗೆಯ
ಅಸಮಾಧಾನದ ಕಿಡಿಗಳು
ಬಾಣಗಳಾಗಿ ನನ್ನ ಬತ್ತಳಿಕೆಯಲ್ಲಿ
ಕುದಿಯುತ್ತಿವೆ
ಪ್ರಯೋಗಿಸಲಾಗದ
ಅಸಹಾಯ ಶೂರ..
 
ಒಲವಿನಾಕಾಶದಲ್ಲಿ ಅವಕಾಶಗಳ
ಹುಡುಕುತ್ತ, ಸಂಬಂಧಗಳ
ಕುಣಿಕೆಯಲ್ಲಿ ಬಂದಿಯಾಗಿ
ನನ್ನನ್ನೇ ಹೋಳು ಹೋಳಾಗಿ
ಕುಯ್ದು ಕೊಟ್ಟ
ದಾನಶೂರ!
 
ಒಳಹೊಕ್ಕ ಹುರುಪಿನಲಿ
ಹೊರಬರುವ ಹಾದಿಯ
ಕಳಕೊಂಡ ಹುಡುಗ ಬುದ್ಧಿಯ
ದುಡುಕುವೀರ..
 
ಮಲಗಿದ್ದಾನೆ ಬೇಡವೆಂದರೂ
ಮುಳ್ಳುಗಳ ಹಾಸಿಗೆಯ ಮೇಲೆ
ಸಾಯಲೊಲ್ಲದ, ಬದುಕಲೂ
ಆರದ ಅಜ್ಜ.
(ಆತ ಬದುಕಿದ್ದೆಲ್ಲಿ ?
ಅವರಿವರಿಗಾಗಿ ಸತ್ತದ್ದೇ ಹೆಚ್ಚು).
 
ಮಂಡಿಯೂರಿ ಕುಳಿತ ಅಪ್ಪ
ಕಣ್ಣೊರೆಸಿಕೊಳ್ಳುತ್ತಾನೆ
ಯಾರಿಗೂ ಕಾಣದಂತೆ
ಪಡೆದಿರುವ ಭ್ರಮೆಯಲ್ಲಿ
ಕಳೆದುಕೊಂಡದ್ದಕ್ಕೋ ಏನೋ.
 
ಯಾರು ಯಾರಿಗೋ
ಶಾಪ ಹಾಕುತ್ತಿದ್ದಾಳೆ
ನಿಗಿ ನಿಗಿ ಕೆಂಡದ ಮುಂದೆ
ಕೂತ ಅವ್ವ.
ಹಂಡೆಯಲ್ಲಿ ನೀರು ಕುದಿಯುತ್ತಿದೆ
ಹೋರಾಡದೆಯೇ ಹೊಲಸಾದ
ನನ್ನ ಮೈಯ ಜಳಕಕ್ಕೆ.
 
ಅಸ್ತ್ರ ಹಿಡಿದಿದ್ದಾಳೀಕೆ
ಯಾರಿಗೋ ಗೊತ್ತಿಲ್ಲ.
ಆಟವಾಡಲು ಕೊಡು ಅದನು
ಎಂದು ಮಗ
ರಂಪ ಹೂಡಿದ್ದಾನೆ.
 

‍ಲೇಖಕರು G

5 September, 2014

1 Comment

  1. sangeetha raviraj

    Thumba arthagarbitha kavite. Ehtavaytu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading