ಮಂಡಲಗಿರಿ ಪ್ರಸನ್ನ
ಏಸೋ ಕವಿತೆಗಳ ಬರೆದು ತೋರಿಸಿದ್ದೆ
ನನ್ನ ಕವಿತೆಗಳನ್ನು ಮೆಚ್ಚಿಕೊಂಡಿದ್ದಳು
‘ಕವಿತೆ ಕಟ್ಟುವಿಕೆ, ವಿಷಯ, ಪದಲಾಲಿತ್ಯ,
ಇಷ್ವವಾಯಿತು’ ಎಂದು ಹೊಗಳಿದ್ದಳು
ಎಷ್ಟೋ ಸಾರಿ ನನ್ನ ಕವಿತೆಗಳನ್ನು
ತನ್ನಷ್ಟಕ್ಕೆ ತಾನೆ ಓದಿಕೊಂಡು ಖುಷಿಪಟ್ಟು
ತಾನೆ ಕವಿತೆಯ ವಸ್ತುವೆಂದು ಹಿಗ್ಗಿದಳು
ಪದ್ಯದ ಪದಗಳನ್ನು ಎದೆಯಲಿ ಕಾಪಿಟ್ಟಿದ್ದಳು
‘ಕವಿತೆ ನಿಮಗೆ ಒಲಿದಿದೆ, ನೀವು ಕಾವ್ಯಕ್ಕೆ
ಕಾವ್ಯ ಕನ್ನಿಕೆ ನಿಮ್ಮ ಹೃದಯಾಂತರಾಳದಿ
ನೆಲೆಸಿದ್ದಾಳೆ’ ಎಂದೆಲ್ಲ ಉಲಿದು ತೇಲಿಸಿದಳು

ಅಂದು ಮತ್ತೊಂದು ಕವಿತೆಯ ದಿನ;
‘ಕವಿತೆ ಚೆನ್ನಾಗಿದೆ, ತುಂಬಾ ಇಷ್ಟವಾಯಿತು’ ಎಂದು
ಫೋನ್ ಹಿಡಿದು ಛಂಗನೆ ಹಾರಿ ಪಕ್ಕಕ್ಕೆ ಬಂದು
‘ಹತ್ತಿರ ಬನ್ನಿ’ ಎಂದು ಕರೆದಳು
‘ಸೆಲ್ಫಿ’ಯಲಿ ಕ್ಲಿಕ್ಕಿಸಿ ನಡೆದಳು
ನನ್ನ ಕಾವ್ಯಕ್ಕೆ ಅವಳು ದಕ್ಕಿದಳು
ನಾನು ಅವಳ ಸೆಲ್ಫಿಗೆ ಸಿಕ್ಕಿದೆ!






0 Comments