ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂಗಳೂರು ಆಕಾಶವಾಣಿ ಮತ್ತೆ ನಾಪತ್ತೆಯಾಗುತ್ತಿತ್ತು!

 

 

 

 

ಪಿ ಮಹಮದ್ 

 

 

 

 

ನಮ್ಮ ಮನೆಯಲ್ಲಿ ಇದೇ ಮಾಡೆಲ್ (ಬಣ್ಣ ಬೇರೆ) ಫಿಲಿಪ್ಸ್ ಟ್ರಾನ್ಸಿಸ್ಟರ್ ರೇಡಿಯೋ ಇತ್ತು.

ರೇಡಿಯೋ ರಿಪೇರಿಯ ಕಂದ ಎನ್ನುವವರಿಂದ ಅಬ್ಬ ‘ಸೆಕೆಂಡ್ ಹೇಂಡ್’ (ಅಸಲಿನಲ್ಲಿ ಹತ್ತಾರು ಹೇಂಡ್ ಆಗಿದ್ದಂತಿತ್ತು) ಖರೀದಿಸಿದ್ದು.

ಅದು ಒಂಬತ್ತು ವೋಲ್ಟಿನ ಬ್ಯಾಟರಿಯಲ್ಲಿ ನಡೆಯುತ್ತಿತ್ತು. ಅದರ ಕುಂಡೆಯಿಂದ ಹೊರಬಿದ್ದ ಹಲವು ಮೀಟರ್ ಉದ್ದದ ಎರಡು ವೈರುಗಳು. ಒಂದು ಏರಿಯಲ್, ಇನ್ನೊಂದು ಅರ್ಥ್. ಎರಡೇ ಬ್ಯಾಂಡು- ಶಾರ್ಟ್ ವೇವ್ ಮತ್ತು ಮೀಡಿಯಂ ವೇವ್.

ನಾವು ಹೆಚ್ಚಾಗಿ ಶಾರ್ಟ್ ವೇವ್ನಲ್ಲಿ ‘ರೇಡಿಯೋ ಸಿಲೋನ್’ ಮತ್ತು ಆಕಾಶವಾಣಿಯ ‘ವಿವಿಧ ಭಾರತಿ’ ಕೇಳುತ್ತಿದ್ದೆವು. ಮಂಗಳೂರು ಆಕಾಶವಾಣಿ ಪ್ರಸಾರ ಆರಂಭಗೊಂಡ ಬಳಿಕ ಮೀಡಿಯಂ ವೇವ್ ಕೇಳುವ ಅಭ್ಯಾಸ ಶುರುವಾಯ್ತು. ಮೊದಲ ಬಾರಿ ರೇಡಿಯೋದಲ್ಲಿ ಯಕ್ಷಗಾನ ಪ್ರಸಾರ ಆದಾಗ ಮನೆಯಲ್ಲಿ ಹಬ್ಬದ ವಾತಾವರಣ! ತಂದೆ ಮತ್ತು ಸೋದರ ಮಾವನಿಗೆ ‘ಆಟ’ದ್ದು ಭಾರಿ ಹುಚ್ಚಿತ್ತಲ್ಲ.

ಈ ರೇಡಿಯೋಗೆ ಮಳೆಗಾಲ ಬಂತೆಂದರೆ ಒಂದು ವಿಚಿತ್ರ ರೋಗ ಶುರುವಾಗುತ್ತಿತ್ತು- ಮೀಡಿಯಂ ವೇವಿನ ಒಂದು ಬದಿಯ ಸ್ಟೇಷನುಗಳು ಮಾಯವಾಗಿ ಬಿಡುತ್ತಿದ್ದವು.

ಆಗ ಅದನ್ನು ಒಂದು ಬೈರಾಸಿನಲ್ಲಿ ಕಟ್ಟಿ ‘ಕಂದ ಮೆಕ್ಯಾನಿಕ್’ ಹತ್ತಿರ ರಿಪೇರಿಗೆ ತೆಗೆದುಕೊಂಡು ಹೋಗುತ್ತಿದ್ದೆವು. ಕಂದರು ಅದನ್ನು ಕೆಲವು ದಿನ ಒಂದು ಮೂಲೆಯಲ್ಲಿ ಇಟ್ಟುಕೊಂಡು, ನಂತರ ಕಟ್ಟಿದ ಬಟ್ಟೆಯನ್ನೂ ಬಿಚ್ಚದೆ,”ಅದಕ್ಕೆ ರಿಪೇರಿ ಗಿಪೇರಿ ಏನೂ ಬೇಡ. ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಇಟ್ಟರೆ ಸರಿಯಾಗುತ್ತದೆ” ಎಂದು ಹೇಳಿ ವಾಪಸ್ ಕೊಟ್ಟುಬಿಡುತ್ತಿದ್ದರು.

ಹಾಗೆ ಮನೆಗೆ ರೇಡಿಯೋವನ್ನು ವಾಪಸ್ ತಂದ ಬಳಿಕ ಅದನ್ನು ಬಿಸಿಲಿನಲ್ಲಿ ಒಣಗಿಸುವ ಕಾಯಕ ಹಿರಿಯ ಮಗನಾದ ನನ್ನ ಜವಾಬುದಾರಿಯಾಗುತ್ತಿತ್ತು.

ಆಗ ನಾನು ತಮ್ಮಂದಿರ ಎದುರು ಸ್ವಲ್ಪ ಗತ್ತು ಮಾಡುತ್ತಿದ್ದೆ. ಇರಲಿ. ಅದು ಹೇಗೋ ಏನೋ, ಬಿಸಿಲಿನಲ್ಲಿ ಒಣಗಿಸಿದ ಮೇಲೆ ಮೀಡಿಯಂ ವೇವ್ ಮತ್ತು ಮಂಗಳೂರು ಆಕಾಶವಾಣಿ ಮರಳುತ್ತಿದ್ದವು. ಆದರೆ ಕೆಲವು ದಿನ ಎಡಬಿಡದೆ ಮಳೆ ಸುರಿದರೆ ಮಂಗಳೂರು ಆಕಾಶವಾಣಿ ಮತ್ತೆ ನಾಪತ್ತೆಯಾಗುತ್ತಿತ್ತು!..

‍ಲೇಖಕರು avadhi

18 February, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading