ಪಾರಿಜಾತದ ಕನವರಿಕೆಯಲ್ಲಿ ಅರಳುವ ರೇಣುಕಾ ಕವಿತೆಗಳು..

ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ಅವಧಿಯ ನಂಬಿಕೆ.
ಹಾಗಾಗಿ ಆರಂಭವಾಗಿದ್ದು ‘ಕವಿತೆ ಬಂಚ್’ ಎನ್ನುವ ಪ್ರಯೋಗ

ಆ ಕವಿ ‘ಪೊಯೆಟ್ ಆಫ್ ದಿ ವೀಕ್’ ಕೂಡಾ..

ಅವರು ಬರೆದ ಕವಿತೆಗಳಿಗೆ ಒಂದು ಕನ್ನಡಿ ಹಿಡಿಯಬೇಕೆಂಬ ಕಾರಣಕ್ಕೆ ಪ್ರತೀ ವಾರ ಒಬ್ಬೊಬ್ಬರು ಕಾವ್ಯಪ್ರೇಮಿಯ ಮೊರೆ ಹೋಗಿದ್ದೇವೆ.

ಅವರು ಕವಿತೆಯನ್ನು ಓದಿ ಅದರ ಸ್ಪರ್ಶಕ್ಕೆ ಮನಸೋತ ಬಗೆಯನ್ನು ಬಿಚ್ಚಿಡುತ್ತಾರೆ.

ಹಾಗೆ ನಮ್ಮ ‘ಪೊಯೆಟ್ ಆಫ್ ದಿ ವೀಕ್’ ಆದವರು ರೇಣುಕಾ ರಮಾನಂದ

ರೇಣುಕಾ ಅವರ ಕವಿತೆಗೆ ಡಾ. ಚಿದಾನಂದ ಕಮ್ಮಾರ್ ಅವರು ಪ್ರತಿಕ್ರಿಯಿಸಿದ ರೀತಿಯನ್ನು ನೋಡಿ..

—————————————————————————————————————————————————————

ಡಾ. ಚಿದಾನಂದ ಕಮ್ಮಾರ್

ಧಾರವಾಡ ಜಿಲ್ಲೆ, ಕುಂದಗೋಳ ತಾಲ್ಲೂಕಿನ ಬೆನಕನಹಳ್ಳಿಯ ಕಮ್ಮಾರ್,ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರ.ಸ್ವಾತಂತ್ರ್ಯೊತ್ತರ ಕನ್ನಡ ಪತ್ರಿಕೋದ್ಯಮದ ಕುರಿತು ಪಿ.ಎಚ್.ಡಿ.

‘ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌’ನಲ್ಲಿ ಉಪಸಂಪಾದಕರಾಗಿ ನಂತರ ‘ಪ್ರಜಾವಾಣಿ’ಯಲ್ಲಿ ಒಂದು ದಶಕದ ಕಾಲ ಪತ್ರಕರ್ತರಾಗಿ ಕಾರ್ಯನಿರ್ವಹಣೆ.

ಸದ್ಯ, ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಣೆ.

‘ಒಲವ ಋಣಭಾರ ಹೊತ್ತು’ ಕವಿತಾ ಸಂಕಲನ.’ತಟ್ಯಾವು ಕಾವ್ಯಕಿರಣ’ ಧಾರವಾಡ ಜಿಲ್ಲೆಯ ಕವಿಗಳ ಪ್ರಾತಿನಿಧಿಕ ಕವನ ಸಂಕಲನ ಸಂಪಾದನೆ. (ಸುನಂದಾ ಕಡಮೆ ಸಹ ಸಂಪಾದಕತ್ವದಲ್ಲಿ)

——————————————————————————————————————————————————————-

ಪಾರಿಜಾತದ ಕನವರಿಕೆಯಲ್ಲಿ ಅರಳುವ ಕವಿತೆಗಳು

ಕಾಲ, ಪ್ರದೇಶಗಳಾಚೆಗೂ ವಿಸ್ತಾರಗೊಳ್ಳುತ್ತಲೇ ಇರುವ ಮನುಷ್ಯ `ಪ್ರೇಮ’ದ ಅಗಾಧತೆಯನ್ನು ದಕ್ಕಿಸಿಕೊಂಡ ಇಲ್ಲಿನ ಕವಿತೆಗಳು ತೀರದ ಹಂಬಲವೊಂದನ್ನು ಹೊತ್ತು ಸಾಗಿವೆ.

`ಇನ್ನೇನು ಇತ್ತು ಹೇಳು ನಮ್ಮಿಬ್ಬರ ಮಧ್ಯೆ?’ ಎಂದು ವಿವರಿಸಿಕೊಳ್ಳಲು ಹಲವು ಮಿತಿಗಳನ್ನು ಆರೋಪಿಸಿಕೊಂಡಿರುವ ಕವಿತೆ, ಲೋಕಾಂತರವ ಸಂಚರಿಸುತ್ತ ಈ ಮಿತಿಗಳನ್ನು ಸೀಳಿಕೊಂಡು ಹೋಗುವುದು ವಿಶಿಷ್ಟ. ದೃಷ್ಟಿ ಕೂಡಿದ್ದಕ್ಕಿಂತ ಹೆಚ್ಚಿನ ಯಾವುದಕ್ಕೋ ಕೈಚಾಚುವ ಕವಿತೆ ಅಸಂಭವದೊಡಲೊಳಗೇ ಸಂಭಾವ್ಯ ಎಳೆಯೊಂದನು ಸುತ್ತಿಕೊಂಡಿದೆ. ಆರೋಪಿತ ಮಿತಿಗಳನ್ನು ಒಡೆದುಹಾಕಿದಾಗ ಪುಳಕ, ರೋಮಾಂಚನಗಳೆಲ್ಲ ಸತ್ತು, ಮುಟ್ಟು ನಿಲ್ಲುವ ಹೊತ್ತು ಮೂಡುವ ರಶ್ಮಿಯೊಂದು ಕೆನ್ನೆಗಳಲ್ಲಿ `ಇನ್ನೊಮ್ಮೆ’ ಚೆಲ್ಲಾಟವಾಡುವ ಓಕುಳಿ ನೀರಿನಲ್ಲಿ ಪ್ರತಿಫಲಿಸುತ್ತದೆ.

ಇಂಥ ಮಿಂಚುಗಳನ್ನು ಹೊಳೆಯಿಸುವ ಸಿದ್ಧಿಯ ಮೂಲಕ ಕವಯತ್ರಿ ಕಾವ್ಯ ಚಮತ್ಕಾರ ಮೆರೆದಿದ್ದಾರೆ; ಈ ಬಲದಿಂದಲೇ ಬದುಕಿಗೆ ಎದುರುಬದರಾಗಲು ಸಜ್ಜುಗೊಳ್ಳುತ್ತಾರೆ. ಇಷ್ಟಾದರೂ ಅದೆಲ್ಲ `ಆಕಸ್ಮಿಕ’ವೆಂಬಂತೆ ಸಂಭವಿಸಲಿ ಎಂಬ ಇರಾದೆ ಕವಯತ್ರಿಗೆ. `ಅಪ್ಪಿ-ತಪ್ಪಿ’ಯಾದರೂ ಬದುಕು ಬೊಗಸೆಯೊಳಗೆ ಅರಳಿಕೊಳ್ಳುವ ಕನಸುಗಾರಿಕೆಯೇ ಕವಿತೆಯ ಬಲ.

ಎಂದೋ ಕಂಡ `ಪಾರಿಜಾತದ ಹಚ್ಚೆ’ಯನ್ನು ವಿರಹದ ಕುರುಹಾಗಿಯೂ ಬದುಕಿನ ಕಡು ವ್ಯಾಮೋಹಿಯ ಇತ್ಯಾತ್ಮಕ ಧೋರಣೆಗೆ ಆಸರೆಯಾಗಿಯೂ `ಎಲ್ಲಿದ್ದೆವು ಇಷ್ಟು ದಿನ’ ಕವಿತೆ ಬಳಸಿಕೊಂಡಿದೆ. ಅಂತೆಯೇ ಯಾವುದೇ ಗಳಿಗೆಯಲ್ಲಿ ಪಕಳೆ ಬಿಡಿಸುವ ಹೊತ್ತಿಗೆ `ಆ ಕಂಪು’ ಸೂಸಿಬರುವುದನ್ನು ಎದುರು ನೋಡುತ್ತದೆ. ಬಿಕೋ ಎನ್ನುವ ರಾತ್ರಿಯಲ್ಲಿಯೂ ಕಾಡಿಗೆ ನೆಮ್ಮದಿ ಇಲ್ಲ. ಒಂಟಿ ಮರವೊಂದು ಗೆಲ್ಲು ಮುರಿಸಿಕೊಂಡು ಅತ್ತ ಸದ್ದು ಅಮಾವಾಸ್ಯೆಯ `ಗಾಢಾಂಧಕಾರ’ವನ್ನೂ ಅದರ ಭೀಕರತೆಯನ್ನೂ ಸಶಕ್ತವಾಗಿ ಧ್ವನಿಸಿದೆ.

ಈ ಮಧ್ಯೆಯೇ `ಸುಕ್ಕಾಗದ’ ಹಾಸಿಗೆಯ ಮೇಲೆ ಮಂಡಿಯೂರಿದ ಬದುಕು ಬುದ್ಧಪೂರ್ಣಿಮೆಯ ಕುರಿತು ಧ್ಯಾನಿಸುವ ವೈರುಧ್ಯವನ್ನೂ ರೇಣುಕಾ ಎದುರಾಗಿಸುತ್ತಾರೆ. ‘ಪಾರಿಜಾತ’ದ ಕಂಪಿಗೆ ಮಾರುಹೋದವರ ನಡೆ, ವಲಸೆ ಹೊರಟು ನಿಂತವರ ಧಾವಂತದಲ್ಲಿ ಸೋನೆಮಳೆಗೆ ಅರಳುತ್ತಲೇ ಉದುರುವ ಮೃದು ಮೊಲೆತೊಟ್ಟಿನಂತಹ ಹೂಗಳು ಹೊಸಕಿ ಹೋಗುವ ದಟ್ಟ ವಿಷಾದವನ್ನು ದಾಟಿಸುತ್ತಲೇ `ಶಂಖದ ಹುಳ’ ನಂಬಲಿಕ್ಕಾಗದ ಅಚ್ಚರಿಯನ್ನು ಕವಯತ್ರಿ ಮೂಡಿಸಿಬಿಡುತ್ತಾರೆ. ಕವಿತೆಯ ಅನಿರೀಕ್ಷಿತ ತಿರುವುಗಳಲ್ಲಿ ಈ ಬಗೆಯ ‘ಜಾದೂ’ ಸಂಭವಿಸುವುದು ರೇಣುಕಾ ಅವರ ಕವಿತೆಗಳ ಸೊಗಸನ್ನು ಹೆಚ್ಚಿಸಿದೆ ಎಂದೇ ಹೇಳಬೇಕು.

ಬೆಂಕಿ ಹಾಕಿದರೆ ಮಾತ್ರ ಜ್ವಲಿಸಿ ನೆನಪ ಕಾರಿಕೊಳ್ಳುವ ಮರೆವಿನೊಂದಿಗೆ `ಮೀನು ಪೇಟೆಯ ತಿರುವಿನ’ಲ್ಲಿ ಸತ್ತ ಮೀನುಗಳ ಮೇಲಾಟವನ್ನು ಕಟ್ಟಿಕೊಡುವ ಕವಯತ್ರಿ, ಕರುಣೆ, ಪ್ರೀತಿ, ಸಾಂತ್ವನದ ಬಿಳಿ ಚಹರೆಗಳನ್ನು ಗುರುತಿಸಲಾಗದ ವಿಷಾದವನ್ನೇ ಕವಿತೆಯುಯದ್ದಕ್ಕೂ ಬಸಿದಿದ್ದಾರೆ; ಸಹೃದಯರ ಎದೆಯೊಳಗೂ ಇಳಿಯುವಂತೆ. ಆಸ್ಪತ್ರೆಯ ಶೌಚಾಲಯದ ಗೋಡೆಗಳಿಗೆ ಅಂಟಿಸಿ, ‘ತೊರೆದುಹೋದ’ ಕೆಂಪು ಹಣೆಬೊಟ್ಟುಗಳು ಅಸಹಾಯಕತೆಯ ನೋವಿಗಿಂತ ಧಿಕ್ಕರಿಸಿ ಹೋದ ದಿಟ್ಟತನದÀ ಪ್ರತೀಕಗಳಾಗಿ ಮನದಲ್ಲಿ ಉಳಿಯುತ್ತವೆ.

‘ಅವನೊಳಗಿನ’ ಪದಗಳನ್ನು ತನ್ನದಾಗಿಸಿಕೊಳ್ಳದೇ ಕವಿತೆಗೆ ಗತ್ಯಂತರವಿಲ್ಲ. ಜುಳುಜುಳು ಕಿರುತೊರೆಯ ಬೆಳ್ಳಿ ಮೀನುಗಳು ಸುಲಭಕ್ಕೆ ಬೊಗಸೆಗೆ ದಕ್ಕಲಾರವು. ಬಯಕೆಯ ಇಮ್ಮಡಿಸಿ, ಕರೆದು ಒದ್ದೆ ಮೈಯನ್ನು ಇಣುಕುವ ತುಂಟತನಕ್ಕೆ ಬೀಳುತ್ತವೆ. `ಬಹಳಷ್ಟು ಸಲ ಹೀಗಾಗುವುದನ್ನು’ ತಾಜಾ ರೂಪಕಗಳ ಮೂಲಕ ‘ಹೊಕ್ಕುಳ ಕುಳಿಯಲ್ಲಿ ಹೊಕ್ಕು, ಹೊರಬಿದ್ದು ಕಚಗುಳಿ ಇಡುವುಂತೆ’ ಬಣ್ಣಿಸುವ ರೇಣುಕಾ, ಅವನೊಳಗೇ ಅಡಗಿರುವ ಪದಗಳ ಹಂಗು ಬಿಡಿಸಿಕೊಂಡೂ ಚೆಂದದ ಕವಿತೆ ಕಟ್ಟಬಲ್ಲರು; ತಮ್ಮದೇ ನಿಶ್ಯಬ್ದ ಭಾವಪ್ರಪಂಚದೊಂದಿಗೆ.

ಒಲವಿನ ಹಲಬಗೆಯ ಆಯಾಮಗಳನ್ನು ಸುಪ್ತವಾಗಿರಿಸಿಕೊಂಡ ಕವಯತ್ರಿ, ನೆತ್ತಿಯಲ್ಲಿ ಠಿಕಾಣಿ ಹೂಡುವ ಪ್ರೇಮದ ಉಮೇದು ಎದೆಯೊಳಗಿಳಿದು ಅಮೃತಫಲ ಬಿಡುವ ಗಳಿಗೆಗೆ ಕಾಯುತ್ತಾರೆ; ಕಾಯಿಸುತ್ತಾರೆ. ಬಿರುಬೇಸಿಗೆಯಲ್ಲೂ ಹೊದ್ದು ಮಲಗುವಂತೆ ಹೊಕ್ಕಳನ್ನು ಹೊಕ್ಕುವ ಚಳಿ ಸಹ್ಯವಾಗುವುದೇ ಕಾಯುವ ಇಂಥ ಕಾವ್ಯಸುಖದಿಂದ. `ರಾತ್ರಿ ಮೂರನೇ ಜಾವಕ್ಕೆ ಮುದ್ದಿಟ್ಟು ಹೋದ ದುಂಬಿಯ `ಹೇಳಿ ಮಾಡಿಸಿದ’ ಹೆಜ್ಜೆಗುರುತು’ ಅಳಿಸಿ ಹೋಗದಂತೆ ಕಾಪಿಟ್ಟುಕೊಳ್ಳುವುದಾದರೆ ಯಾರೂ ಕಾವ್ಯಸುಖದಿಂದ ವಂಚಿತರಾಗಲಾರರು. ಈ ಹೆಚ್ಚುಗಾರಿಕೆ ಕವಯತ್ರಿಯದ್ದೂ ಸಹೃದಯರದ್ದೂ ಹೌದು.

ಬೇಲಿಯಂಚಿನ ಕ್ಯಾಕ್ಟಸ್‍ನ `ಇಮೇಜ್’ ಮೂಲಕ ತೆರೆದುಕೊಳ್ಳುವ `ಆರಂಭಕ್ಕೊಂದು ಮುಕ್ತಾಯ’ ತನ್ನ ಚಿತ್ರಕಶಕ್ತಿಯಿಂದಲೇ ಬದುಕಿನ ಹಲವು ಬಿಂಬಗಳನ್ನು ಪ್ರತಿಫಲಿಸುವಲ್ಲಿ ಯಶಸ್ವಿಯಾಗಿದೆ. ಹಲವು ಅರ್ಥಸಾಧ್ಯತೆಗಳನ್ನು ಬಿಟ್ಟುಕೊಡುವ ಕವಿತೆ ಅಂತಃಕರಣದ ದೃಷ್ಟಿಯನ್ನು ಬೀರುತ್ತಿದೆ. ಇದರಿಂದಾಗಿಯೇ ಶಾಪವಿಮೋಚನೆಗೆ ಕಾದಿರುವ `ಕ್ಯಾಕ್ಟಸ್’ನ ಜೀವಚೈತನ್ಯವು ಹೊಡೆ ಬತ್ತಿದ ಎದೆಯ ಮೇಲಿನ ಮುತ್ತನ್ನು ಕಿತ್ತಿಡಲಾಗದ ಅಸಹಾಯಕತೆಯೂ ನೋಯುವ ಬೇರುಗಳನ್ನು ಸೈಂತೈಸುವ ಅದರ ಜೀವಕಾರುಣ್ಯವೂ ಕವಿಸಮಯಕ್ಕೆ ಒದಗಿದೆ.

`ಸದ್ಯ’ದ ಎಲ್ಲ ತಲ್ಲಣಗಳು ಮತ್ತು ಅವು ತಂದೊಡ್ಡುವ ಮಿತಿಗಳಾಚೆಗೂ ಚಿಗುರಿದಲ್ಲೇ ಒಣಗುವ ಬದಕು `ನಿಂತ ನೆಲದ ಬಿರುಕನ್ನು `ಕಾಲ’ಸಂದಿಯಲ್ಲಿಯೇ ತೋರಗೊಡದಂತೆ ಮುಚ್ಚಿದಾಗಲೇ ಬದುವಿನಲ್ಲಡಗಿದ ತಂಪು ಸೃಜನಶೀಲತೆಯ ಹಸಿತವನ್ನು ಸದಾ ಜಾರಿಯಲ್ಲಿಡಲು ಸಾಧ್ಯವಾಗುತ್ತದೆ. ಇಲ್ಲಿನ ಕವಿತೆಗಳ ಮಟ್ಟಿಗೂ ಕವಯತ್ರಿ ರೇಣುಕಾ ರಮಾನಂದ ಅದನ್ನು ಸಾಧ್ಯವಾಗಿಸಿದ್ದಾರೆ.

‍ಲೇಖಕರು Avadhi GK

February 18, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: