ಮಂಗಳಾ ಮೇಡಂ ನನ್ನೊಳಗಿದ್ದಾರೆ..

ಲೋಕೇಶ್‌ ಮೊಸಳೆ

‘ಚ. ಸರ್ವಮಂಗಳʼ ಅವರು ನೆನಪಾದರೆ ಕವಯಿತ್ರಿ, ಮಹಿಳಾಪರ ಹೋರಾಟಗಾರ್ತಿ, ಕನ್ನಡದ ಪ್ರಾಧ್ಯಾಪಕಿ, ರಂಗ ನಟಿ, ಚಲನಶೀಲ ವ್ಯಕ್ತಿತ್ವದ ಚಿಲುಮೆಯಾಗಿ ಕಣ್ಮುಂದೆ ನಿಲ್ಲುತ್ತಾರೆ.

ಮಹಾರಾಜ ಕಾಲೇಜಿನಲ್ಲಿ ಕನ್ನಡ ಪಾಠ ಮಾಡುತ್ತಾ ತನ್ನ ಸೊಗಸಾದ ಮಾತುಗಳಿಂದ, ಆಕರ್ಷಕ ಉಡುಪುಗಳಿಂದ, ದಿಟ್ಟತನದ ಮಾತುಗಳಿಂದ ವಿದ್ಯಾರ್ಥಿಗಳ ಮನಸ್ಸನ್ನು ಆವರಿಸಿಕೊಂಡು ಸಾಂಸ್ಕೃತಿಕ ಚಟುವಟಿಕೆಗಳಿಗೆ ಬೆನ್ನೆಲುಬಾಗಿದ್ದರು.

ಸರ್ವಮಂಗಳ ಅವರು ತಮ್ಮ ಬರಹ, ಹೋರಾಟ, ಬೋಧನೆ, ನಟನೆ, ಸಾಹಿತ್ಯ, ಓದು-ಬರಹಗಳಲ್ಲಿ ವಿಮರ್ಶಾತ್ಮಕ ದೃಷ್ಠಿಕೋನ ಹೊಂದಿದ್ದರು. ಪಾತ್ರಗಳನ್ನು ಚಿತ್ರಿಕೆಗಳಾಗಿ ಕಣ್ಣಮುಂದೆ ನಿಲ್ಲಿಸುವಂಥಹ ಬೋಧಕರಾಗಿದ್ದರು. ಅವರ ನಿವೃತ್ತಿಯಾಗಿ ಒಂದು ದಶಕ ತುಂಬಿದ್ದರೂ ಅವರನ್ನು ನೆನಪಿಸಿಕೊಂಡು ಅವರ ವಿದ್ಯಾರ್ಥಿಗಳು, ಒಡನಾಡಿಗಳು ಪ್ರೀತಿಯ ಅಭಿವಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಇಂದು ಮೈಸೂರಿನ ‘ರಮಾಗೋವಿಂದ ರಂಗಮಂದಿರʼದಲ್ಲಿ ಚ. ಸರ್ವಮಂಗಳ ಅವರ ಅಭಿಮಾನಿಗಳು, ಅವರ ಸಹಪಾಠಿಗಳು, ಮಹಾರಾಜ ಕಾಲೇಜಿನ ಹಳೆಯ ವಿದ್ಯಾರ್ಥಿ ಬಳಗ, ‘ನೆಳಲು-ಬೆಳಕು’ ತಂಡದ ಗೆಳೆಯರೆಲ್ಲ ಸೇರಿ ರೂಪಿಸಿರುವ ಕಾರ್ಯಕ್ರಮದಲ್ಲಿ ಚ. ಸರ್ವಮಂಗಳ ಅವರಿಗೆ ಅಕ್ಷರ ಬಾಗಿನ ನೀಡಲು ‘ಕದಳಿಯ ಬೆರಗುʼ ಕೃತಿ ಸಮರ್ಪಿಸಲಿದ್ದಾರೆ.

ಈ ಕೃತಿಯಲ್ಲಿ ಸರ್ವಮಂಗಳ ಅವರ, ಕ್ರಿಯಾಶೀಲತೆ, ಸ್ನೇಹ ಬಾಂಧವ್ಯಗಳನ್ನು ನೆನಪಿಸಿಕೊಂಡ ಬರಹಗಳ ಜೊತೆಗೆ ಸರ್ವಮಂಗಳ ಅವರ ವ್ಯಕ್ತಿತ್ವವನ್ನು ಮಾತ್ರ ನೆನಪಿಸದೇ, ಮೈಸೂರಿನ ಮಹಿಳಾ ಹೋರಾಟ, ನಾಟಕ, ಸಾಹಿತ್ಯ, ಶೈಕ್ಷಣಿಕ ಚರಿತ್ರೆಗಳೆಲ್ಲ ದಾಖಲಿಸುವ ಜೊತೆಗೆ ಸರ್ವಮಂಗಳ ಅವರ ಕ್ರಿಯಾಶೀಲತೆ ಕೂಡ ದಾಖಲಾಗಿದೆ.

ಚ. ಸರ್ವಮಂಗಳಾ ಅವರು ಹುಟ್ಟಿದ್ದು ಏಪ್ರಿಲ್‌ ೬, ೧೯೪೮. ಬೆಳೆದದ್ದು ಶಿವಮೊಗ್ಗದ ನೋಣಿಗರ ಬೀದಿಯಲ್ಲಿ. ಡಾ. ಭುಜಂಗರಾವ್‌, ಮಹಾಲಕ್ಷ್ಮಿ ದಂಪತಿಗಳಿಗೆ, ಅಣ್ಣ ಭೀಮರಾವ್‌ ತಂಗಿ ಕೌಸಲ್ಯ, ತಮ್ಮ ಧನಂಜಯ. ಚ. ಸರ್ವಮಂಗಳಾ ಅವರು ಅಜ್ಜಿ ತುಲಸೀಬಾಯಿ ಸೋದರತ್ತೆ ಗಂಗತ್ತೆಯವರೊಂದಿಗೆ ಬೆಳೆದ ಪರಿಯನ್ನು ಇವರ ಕಾವ್ಯದಲ್ಲಿ ಕಾಣಬಹುದಾಗಿದೆ.

ಕಾಲೇಜಿನಲ್ಲಿ ಓದುತ್ತಿದ್ದಾಗ ಸಾ. ಶಿ ಮರುಳಯ್ಯ, ಜಿ.ಎಸ್‌ ಸಿದ್ದಲಿಂಗಯ್ಯ, ಪಿ.ಲಂಕೇಶ್ ಅವರ ಶಿಷ್ಯೆ. ಇವರೆಲ್ಲ ಸರ್ವಮಂಗಳ ಅವರಲ್ಲಿ ಸಾಹಿತ್ಯಾಸಕ್ತಿಯನ್ನು ಮೂಡಿಸಲು ಕಾರಣರಾಗಿದ್ದರೆ; ಅವರೊಳಗಿನ ಅಭಿನೇತ್ರಿಯನ್ನು ಗುರುತಿಸಿದ್ದು ಸಾ.ಶಿ ಮರುಳಯ್ಯನವರು ಎಂದು ಚ. ಸರ್ವಮಂಗಳ ನೆನಪಿಸಿಕೊಂಡಿದ್ದಾರೆ.

ವಿದ್ಯಾರ್ಥಿ ದೆಸೆಯಲ್ಲೇ ನಾಟಕಾಭಿನಯದಲ್ಲಿ ತೊಡಗಿದ ಸರ್ವಮಂಗಳಾ ಅವರು ಅಧ್ಯಾಪಕಿಯಾಗಿ, ಲಲಿತ ಕಲೆಗಳ ಕಾಲೇಜಿನಲ್ಲಿ ನಾಟಕದಲ್ಲಿ ಅಭಿನಯಿಸಿ ವಿದ್ಯಾರ್ಥಿನಿಯರಿಗೆ ಮಾದರಿಯಾಗಿದ್ದರು.

‘ಸ್ವಪ್ನವಾಸವದತ್ತʼ ನಾಟಕದ ಮೂಲಕ ರಂಗಪ್ರವೇಶಿಸಿದ ಸರ್ವಮಂಗಳ ಅವರು, ‘ರಕ್ತಾಕ್ಷಿʼ, ತಿರುಗು-ಮುರುಗು, ತಾಯಿ, ಹಯವದನ, ಸದ್ದು ವಿಚಾರಣೆ ನಡೆಯುತ್ತಿದೆ, ಮಂಥರೆ, ಸಂಕ್ರಾಂತಿ, ಸಾಯೋ ಆಟ, ಬರ, ಸತ್ತವರ ನೆರಳು, ಕದಡಿದ ನೀರು, ಜೋಕುಮಾರಸ್ವಮಿ, ಒಡಲಾಳ, ಹುಲಿಯ ನೆರಳು, ರುಡಾಲಿ ಮುಂತಾದ ನಾಟಕಗಳಲ್ಲಿ ಅಭಿನಯಿಸಿ ನಾಟಕ ರಂಗದಲ್ಲಿ ತನ್ನದೇ ಛಾಪನ್ನು ಮೂಡಿಸಿದ್ದಾರೆ.

ದೇವನೂರ ಮಹಾದೇವ, ಕಿಕ್ಕೇರಿ ನಾರಾಯಣ್‌, ರಾಮಚಂದ್ರ ದೇವ, ಓ.ಎಲ್‌ ನಾಗಭೂಷಣಸ್ವಾಮಿ ಸೇರಿದಂತೆ ಕವಿತಾರತ್ನ, ಜಯರಾಮ ರಾಯಪುರ, ವಾಸುದೇವ ಶರ್ಮ, ಪ್ರಸಾದ್‌ ಕುಂದೂರ್‌, ರಾವಂದೂರ್‌ ಪ್ರಕಾಶ್‌, ಮಂದಾಕಿನಿ, ರುದ್ರಣ್ಣ ಹರ್ತಿಕೋಟೆ ಮುಂತಾದ ಸಾವಿರಾರು ಪ್ರತಿಭಾವಂತರನ್ನು ರೂಪಿಸಿದ ಕೀರ್ತಿ ಸರ್ವಮಂಗಳಾ ಅವರದ್ದು.

ಪಿ. ಲಂಕೇಶ್‌, ಶ್ರೀ ಕೃಷ್ಣ ಆಲನಹಳ್ಳಿ, ಯು. ಆರ್‌ ಅನಂತಮೂರ್ತಿ, ಬಿ.ಸಿ ರಾಮಚಂದ್ರ ಶರ್ಮ, ಶಾಂತಿನಾಥ ದೇಸಾಯಿ, ಕೆ.ವಿ ತಿರುಮಲೇಶ, ಟಿ.ಪಿ ಅಶೋಕ, ಪೋಲಂಕಿ ರಾಮಮೂರ್ತಿ, ಗೋಪಾಲಕೃಷ್ಣ ಅಡಿಗರ, ಎಚ್‌. ಎಂ ಚೆನ್ನಯ್ಯ, ಜಿ. ಎಚ್‌ ನಾಯಕ, ಕೆ.ನ ಶಿವತೀರ್ಥನ್‌, ಲಕ್ಷ್ಮಣ ರಾವ್‌, ಎಲ್‌ ಬಸವರಾಜ, ಸುಜನಾ, ಪ್ರಭುಶಂಕರ, ಎ.ಕೆ.ರಾಮಾನುಜನ್‌ ಮುಂತಾದವರ ಒಡನಾಟದಲ್ಲಿ ಚ, ಸರ್ವಮಂಗಳ ಅವರು, ಚಿಂತಕಿಯಾಗಿ, ಕವಿಯಾಗಿ, ವಾಗ್ಮಿಯಾಗಿ, ಹೋರಾಟಗಾರಳಾಗಿ ರೂಪು ತಳೆದರು.

ಈ ಎಲ್ಲಾ ಒಡನಾಟಗಳ ಫಲವಾಗಿ ಅತ್ಯುತ್ತಮ ಕ್ರಿಯಾಶೀಲ ಅಧ್ಯಾಪಕಿಯಾಗಿ ವಿದ್ಯಾರ್ಥಿಗಳ ಮನದಲ್ಲಿ ನೆಲೆಗೊಂಡ ಪರಿಣಾಮವಾಗಿ ಇಂಥಹ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಇಡೀ ಜೀವನದುದ್ದಕ್ಕೂ ಪ್ರಕಟವಾಗಿರುವುದು ಅಮ್ಮನ ಗುಡ್ಡ ‘ಏಕೈಕ ಕವಿತಾ ಸಂಕಲನ.

ಪತ್ರಿಕಾ ಸಂದರ್ಶನಗಳು, ಭಾಷಣಗಳು. ಚದುರಿ ಹೋಗಿರುವ ಅವರ ಬರಹಗಳನ್ನು ಪ್ರಕಟಿಸಬೇಕಾದ ಜವಾಬ್ದಾರಿ ಕೂಡ ಅವರ ಮೇಲಿದ್ದರೂ ಅವರದ್ದು ಮಾತ್ರ ‘ನಿರಾಕಾರಣ ಮನಸ್ಥಿತಿ’. ಇದೆಲ್ಲ ಏನೇ ಇರಲಿ ಸರ್ಮಮಂಗಳಾ ಅವರು ಲಂಕೇಶ್ ಪತ್ರಿಕೆಗಾಗಿ ನಡೆಸಿದ ಸಂದರ್ಶನವೊಂದರಲ್ಲಿ ‘ಹೆಣ್ಣನ್ನು ಮಾನದ ಮಡಕೆಯಲ್ಲಿ ಬಂಧಿಸುವಂತಹ ಕ್ರೂರತೆ ಬೇರೆ ಯಾವುದಿದೆ? ಎಂದು ಪ್ರಶ್ನಿಸುತ್ತಾರೆ, ನಿಮ್ಮ ಜೀವನದಲ್ಲಿ ಸಹಿಸಲಸಾಧ್ಯವಾದ ಅವಮಾನ ಯಾವುದೆಂದರೆ, ಕೆಲವನ್ನ ಸಾಯೋತನಕ ಹೇಳಕ್ಕಾಗಲ್ಲ. ಯಾರ ಯಾರೋ ಅಡ್ಡ ಬಂದು ನಿಲ್ತಾರೆ, ನಮ್ಮ ಮನೆಗೆ ಹಿಂದೆ ತುಂಬಾ ಜನ ಬರ್ತಿದ್ದರು. ನನ್ ಮೈಸವರಿದ್ರು, ಅಸಹ್ಯ ಹುಟ್ಟಿಸೋ ಹಾಗೆ ಮಾಡ್ತಿದ್ರು, ಚಪಲತೆಯಿಂದ ದಿಟ್ಟಿಸ್ತಿದ್ರು, ಈಕೆ ಹೆಣ್ಣು ಅಂತ ಮುಟ್ಟೋವಾಗ ಅಸಾಧ್ಯ ಬೇಸರ, ಸಿಟ್ಟು, ಅವಮಾನ ಆಗ್ತಿತ್ತು. ನಾನೂ ಕೂಡ ಒಂದು ಜೀವ ಎಂದು ತಿಳಿಯದೆ, ಅಮಾನವೀಯವಾಗಿ ನಡೆಸಿಕೊಳ್ಳೋ ಕ್ಷಣಗಳು ನನ್ನನ್ನು ತುಂಬಾ ನೋಯಿಸ್ತಿದ್ದು’. -ಹೀಗೆ ನೇರವಾಗಿ ದಿಟ್ಟವಾಗಿ ಮಾತನಾಡುತ್ತಿದ್ದ ಮಂಗಳಾ ಅವರಿಗೆ ಕಾಡುವ ಲೇಖಕನಾಗಿ ಪಿ.ಲಂಕೇಶ್ ಇದ್ದರೆ; ಪ್ರೀತಿಯ ಸ್ನೇಹಿತನಾಗಿ ಅನಂತ ಮೂರ್ತಿಯವರಿದ್ದರಂತೆ. ತನ್ನೆಲ್ಲ ಕಷ್ಟಸುಖವನ್ನು ಹಂಚಿಕೊಳ್ಳಲು ಮಹಾರಾಜ ಕಾಲೇಜಿನಲ್ಲಿದ್ದ ಸಹಪಾಠಿ ಗೆಳತಿ ಕಾವೇರಿ ಇದ್ದರು ಎಂದು ಹೇಳಿಕೊಂಡಿದ್ದಾರೆ.

ಹೀಗೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಪಡೆದು ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಕನ್ನಡ ಎಂ.ಎ ಮಾಡಿ, ಬೋಧಕರಾಗಿ ವೃತ್ತಿ ಪ್ರಾರಂಭಿಸಿ, ಕವಿಯಾಗಿ, ಹೋರಾಟಗಾರಳಾಗಿ, ಅಭಿನೇತ್ರಿಯಾಗಿ, ಮಹಾರಾಜ ಕಾಲೇಜಿನ ಪ್ರಾಂಶುಪಾಲರಾಗಿ ದಕ್ಷತೆ, ನೇರ ನಡೆ- ನುಡಿಗಳಿಂದ ಜೀವನದುದ್ದಕ್ಕೂ ಪ್ರೀತಿಯನ್ನು ಎರಚಿ ಇಂದು ಪ್ರೀತಿ ಪಾತ್ರರ ಅಭಿವಂದನೆಗಳನ್ನು ಸ್ವೀಕರಿಸುತ್ತಿರುವ ನನ್ನ ಮಂಗಳಾ ಮೇಡಂ ನನ್ನೊಳಗಿದ್ದಾರೆ; ನನ್ನಂಥ ಅನೇಕರ ಮನದಲ್ಲಿದ್ದಾರೆ…

‍ಲೇಖಕರು Admin

July 31, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: