
ಎಂ. ಆರ್. ಕಮಲ
ಭೂತಗಳು ಬರುತ್ತಿವೆ, ದಾರಿಬಿಡಿ
ಕೆಂಬಣ್ಣ ಮರೆಯ ಕೆಂಗಣ್ಣ ಭೂತ
ಹಿರಿಭೂತ, ಕಿರಿಭೂತ, ಸಿರಿಭೂತ
ಅಬ್ಬರದ ಸರಭರದ ಡಬ್ಬಡಾಳು ಭೂತ
ನಡುನಡುವೆ ಒಂದೆರಡು ಕೆಂಬೂತ!
ಎಂಥ ಪ್ರಭೆ, ಏನೆಂಥ ಪ್ರಭಾವಳಿ,
ಹಾ! ಕತ್ತಿ ಕೋಲಿನ ದಿವಿನಾದ ಹಾವಳಿ
ಡುರು ಡುರು ಕರಡೇವು, ಬಡಿವ ಬಡಿವಾರ
ಕಿವಿಯ ಕಿವುಡಾಗಿಸುವ ತಮ್ಮಟೆ ಅಬ್ಬರ
ನಿಜದ ದೇವತೆಯ ಮರೆಸಿ,ಮೆರೆಯುವಾಟ
ನಲನಲವ ನವಿಲುಗರಿಯ ತೊನೆದಾಟ
ಮಾಟ, ಕಣ್ಕಟ್ಟು, ಸಿಡಿಯ ಕಿಡಿ ಬೆರೆಸಿ
`ಹಲಲೋ ಕುಲಲೋ’ ನುಡಿಯ ಹರಿಸಿ
ತೂಗುವ ಹೂ ನಡುವೆ ಕಹಿಬೇವ ಸರಿಸಿ
ಭೂತಗಳು ಬರುತ್ತಿವೆ, ದಾರಿಬಿಡಿ
ಭೂತಾಳೆ ಮುಖವಾಡ ತೊಟ್ಟ ಕೀಟಲೆಗಳು
ಕಿರೀಟ,ಕೀರುತಿ,ಕಾಮನೆಯ ಕೋಟಲೆಗಳು
ಬಗೆ ಬಗೆಯಲಿ ಬಗೆಯುವ ಕೋರೆಹಲ್ಲು
ಎಡ,ಬಲ,ನಡುವೆಲ್ಲ ಜಬ್ಬುವ ಜೊಲ್ಲು
ಜೋಲು ನಾಲಗೆ, ನೆಕ್ಕಷ್ಟು ನೆತ್ತರಿನ ದಾಹ,
ಬಣ್ಣ ಮಾತಿನ ನೇಹ, ಬಕುತಿಯ ಮೋಹ,
ಭೂತಗಳು ಬರುತ್ತಿವೆ, ಸರಿದು ಬಿಡಿ…






0 Comments