ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಭಾಷೆ ಎನ್ನುವುದು ನದಿಯ ಹಾಗೆ..’ – ಜಿ ಪಿ ಬಸವರಾಜು ಬರೀತಾರೆ

ಜಿ ಪಿ ಬಸವರಾಜು

ಇತ್ತೀಚೆಗೆ ನಾನು ಓದಿದ ಒಂದು ಕತೆಯಲ್ಲಿ ಬಳಸಿದ ಪದಗಳು ಹೀಗಿವೆ: ಬಂಡೀಕೋಣೆ, ಚಲನವಾಣಿ, ಸಮಕಟ್ಟೆ, ಎತ್ತುಗಯಂತ್ರ, ಸೌರ ವಿದ್ಯುತ್ ಬೆರಕೆ ಯಂತ್ರ, ಹಳಿಗಾಡಿ, ಹಳಿನಿಲ್ದಾಣ, ಹಿರೇಮಣಿ, ಗಾಳಿಬುರುಡೆ, ಕಬ್ಬಿಣದ ಕೈಸೂತ್ರ, ಅಗಿಯುವ ಗೋಂದುಮಿಠಾಯಿ, ಓಡುಮಾತು, ಸೌರಸೀತಕ, ತಲೆದೀಪ, ಮಿದುಳು ಪ್ರಹಾರ, ಮೃದುತಂತ್ರಜ್ಞ ಇತ್ಯಾದಿ.
ಕನ್ನಡ ನಾಡಿನಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಈ ಕತೆಗಾರರು ಈ ಪದಗಳನ್ನು ಏಕೆ ಬಳಸಿದರು? ಈ ಬಳಕೆಯ ಹಿಂದಿನ ಉದ್ದೇಶವೇನು?
ಇವೇನೋ ಕನ್ನಡ ಪದಗಳು ನಿಜ. ಆದರೆ ಈ ಪದಗಳು ಈಗ ಜನಬಳಕೆಯಲ್ಲಿ ಇವೆಯೇ? ಇಂಗ್ಲಿಷ್ ಪದಗಳ ಅನುವಾದವಾಗಿ ಈ ಪದಗಳನ್ನು ಬಳಸಿರುವುದು ನಿಜ. ಆದರೆ ಈ ಅನುವಾದಗಳು ಮತ್ತೆ ಇಂಗ್ಲಿಷ್ಗೆ ಅನುವಾದಗೊಂಡರೆ ಮಾತ್ರ ಕನ್ನಡಿಗರಿಗೆ ಅರ್ಥವಾಗುತ್ತವೆ. ಇಲ್ಲವಾದರೆ ಕನ್ನಡಿಗರೇ ಗೊಂದಲಕ್ಕೀಡಾಗುತ್ತಾರೆ; ಅಥವಾ ಈ ಪದಗಳ ಅರ್ಥಕ್ಕಾಗಿ ತಡಕಾಡುತ್ತಾರೆ.
ಭಾಷೆ ಎನ್ನುವುದು ನದಿಯ ಹಾಗೆ. ನಿರಂತರವಾಗಿ ಅದು ಹರಿಯುತ್ತಲೇ ಇರುತ್ತದೆ. ಹೊಸ ನೀರನ್ನು ತುಂಬಿಕೊಳ್ಳುತ್ತ, ಹಳೆಯ ನೀರನ್ನು ಮುಂದಕ್ಕೆ ತಳ್ಳುತ್ತ ಸಾಗರ ಸೇರುವುದು ನದಿಯ ಸಹಜ ಗುಣ. ಭಾಷೆಯೂ ಹೀಗೆಯೇ. ಹೊಸ ಹೊಸ ಪದಗಳನ್ನು ತನ್ನೊಡಲಿಗೆ ಸೇರಿಸಿಕೊಳ್ಳುತ್ತಲೇ ಇರುತ್ತದೆ. ಈ ಹೊಸ ಪದಗಳು ತನ್ನಲ್ಲಿಯೇ ಹುಟ್ಟಬಹುದು ಅಥವಾ ಬೇರೊಂದು ಭಾಷೆಯ ಪದಗಳು ಬಂದು ಸೇರಿಕೊಂಡು ಹೊಸ ರೂಪವನ್ನು ಪಡೆದುಕೊಳ್ಳಬಹುದು. ಭಾಷೆ ನಿಂತ ನೀರಲ್ಲ; ದ್ವೀಪವೂ ಅಲ್ಲ. ತನ್ನ ಸಂಪರ್ಕಕ್ಕೆ ಬರುವ ಎಲ್ಲರೊಂದಿಗೆ ಅದು ಅನುಸಂಧಾನ ನಡೆಸುತ್ತಲೇ ಇರುತ್ತದೆ. ಇದಕ್ಕೆ ಕಾರಣಗಳು ಹಲವು ಇರಬಹುದು. ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಸಂಗತಿಗಳು ಅಥವಾ ಜ್ಞಾನದ ಹಲವು ಕ್ಷೇತ್ರಗಳೊಂದಿಗೆ ನಡೆಸುವ ಮುಖಾಮುಖಿಯೂ. ರಾಜಕೀಯ ಕಾರಣಗಳಿಂದಾಗಿ ಕನ್ನಡನಾಡು ಎನ್ನುವುದು ವಿಭಿನ್ನ ಆಡಳಿತಗಳಲ್ಲಿ ಹಂಚಿಹೋಗಿತ್ತು ಎಂಬುದನ್ನು ನಾವು ಬಲ್ಲೆವು. ಸಹಜವಾಗಿಯೇ ಆಡಳಿತ ನಡೆಸುವವರ ಭಾಷೆಯ ಸಂಪರ್ಕಕ್ಕೆ ಸಿಕ್ಕ ಕನ್ನಡ ಭಾಷೆ ಹೊಸ ಹೊಸ ಪದಗಳನ್ನು ಪಡೆದು ಅರಗಿಸಿಕೊಂಡಿತು. ಈಗ ಹೈದರಾಬಾದ್ ಕರ್ನಾಟಕ ಎಂದು ಕರೆಯುವ ಕನ್ನಡ ಪ್ರದೇಶದಲ್ಲಿ ನಿಜಾಮರ ಆಡಳಿತವಿತ್ತು. ಅದರ ಪರಿಣಾಮವಾಗಿ ಉರ್ದು, ಫಾರಸಿ, ಅರೇಬಿಕ್ ಭಾಷೆಯ ಅನೇಕ ಪದಗಳು ಕನ್ನಡಕ್ಕೆ ಬಂದು ಸೇರಿಕೊಂಡವು. ಬ್ರಿಟಿಷರ ಆಡಳಿತದ ಫಲವಾಗಿ ಹಲವಾರು ಇಂಗ್ಲಿಷ್ ಪದಗಳು, ಪೋರ್ಚುಗೀಸರ ಮತ್ತು ಡಚ್ಚರ ಆಡಳಿತದಿಂದಾಗಿ ಆ ಭಾಷೆಗಳ ಪದಗಳು ಕನ್ನಡವನ್ನು ಸೇರಿದವು. ಕನ್ನಡ ಭಾಷೆಯಲ್ಲಿ ಈ ಪದಗಳು ಕರಗಿಹೋದವು. ಮೂಲಸ್ವರೂಪವನ್ನೇ ಮರೆಸುವಷ್ಟು ಈ ಪದಗಳು ಬದಲಾಗಿರುವುದನ್ನು ನಾವು ಗುರುತಿಸಬಹುದು.
ಈ ಪದಗಳನ್ನು ಕನ್ನಡದ ಜನ ಹೇಗೆ ತಮ್ಮೊಳಗೆ ಕರಗಿಸಿಕೊಂಡಿದ್ದಾರೆಂದರೆ ಇವುಗಳನ್ನು ಅನುವಾದಿಸುವುದು ಹಾಸ್ಯಾಸ್ಪದವಾಗುತ್ತದೆ; ಜೊತೆಗೆ ಅನುವಾದಿತ ಪದಗಳು ಕನ್ನಡಿಗರಿಗೇ ಅರ್ಥವಾಗುವುದಿಲ್ಲ. ಒಂದು ಭಾಷೆಯ ಪದಸಂಪತ್ತು, ಅರ್ಥಸಂಪತ್ತು ತುಂಬಿಕೊಳ್ಳುವುದು ಅದು ಮುಕ್ತವಾಗಿ ತನ್ನ ಬಾಹುಗಳನ್ನು ಚಾಚಿದಾಗಲೇ. ಭಾಷಾವಾರು ಪ್ರಾಂತ್ಯಗಳ ರಚನೆಯಾದ ಮೇಲೆ ಕನ್ನಡನಾಡಿನ ಒಳಕ್ಕೆ ಬಂದ ಅನೇಕ ಪ್ರದೇಶಗಳು ಮತ್ತು ವಿವಿಧ ರಾಜ್ಯಗಳ ಗಡಿಭಾಗದಲ್ಲಿರುವ ಪ್ರದೇಶಗಳು ಭಾಷೆಯನ್ನು ಬೇರೆಯೇ ರೂಪದಲ್ಲಿ ಬದಲಾಯಿಸಿಕೊಂಡವು. ಈ ಗಡಿಭಾಗದ ಕನ್ನಡಕ್ಕೆ ಪಕ್ಕದ ರಾಜ್ಯದ ಭಾಷೆಗಳ ಅನೇಕ ಪದಗಳು ಸೇರಿಕೊಂಡವು. ಅವುಗಳನ್ನು ತನ್ನೊಳಕ್ಕೆ ತೆಗೆದುಕೊಂಡು ಕನ್ನಡ ತನ್ನ ಶಬ್ದ ಸಂಪತ್ತನ್ನು ಹೆಚ್ಚಿಸಿಕೊಂಡಿದೆ.

ಈ ಎಲ್ಲವನ್ನೂ ಬಲ್ಲ ನಮ್ಮ ಸಾಹಿತಿಗಳು, ಭಾಷಾತಜ್ಞರು ಮತ್ತು ಚಿಂತಕರು ಭಾಷೆಯಲ್ಲಿ, ವಿಶೇಷವಾಗಿ ಬರಹದಲ್ಲಿ ನಡೆಸುವ ಪ್ರಯೋಗಗಳು ಏಕೆ ನಮಗೆಲ್ಲ ವಿಚಿತ್ರವಾಗಿ ಕಾಣಿಸುತ್ತ್ತವೆ? ಕನ್ನಡದ ಬಗ್ಗೆ ಅಪಾರ ಪ್ರೀತಿ, ಕಾಳಜಿ ಇರುವ, ಭಾಷೆಯ ಬಗ್ಗೆ ಮಹತ್ವದ ಕೆಲಸ ಮಾಡಿರುವ ಡಿ.ಎನ್.ಶಂಕರಭಟ್ಟರು, ‘ಕನ್ನಡ ಬರಹವನ್ನು ಸರಿಪಡಿಸೋಣ’ ಎಂಬ ಗ್ರಂಥವನ್ನೇ ಬರೆದಿದ್ದಾರೆ. ನಾವು ಮಾತಿನಲ್ಲಿ ಕನ್ನಡವನ್ನು ಹೇಗೆ ಬಳಸುತ್ತೇವೆಯೋ ಹಾಗೆಯೇ ಬರೆಯಬೇಕು ಎಂಬುದು ಶಂಕರಭಟ್ಟರ ಪ್ರಯೋಗ. ‘ಬರಹದ ಮೇಲೆ ಮಡಿವಂತಿಕೆಯನ್ನು ಹೊರಿಸಹೋಗದೆ ಜೀವಂತಿಕೆಯನ್ನು ತುಂಬುವ ಮೂಲಕ ಅದು ಎಲ್ಲರಿಗೂ ಬೇಕಾಗುವ ಹಾಗೆ ಮಾಡುವುದೇ’ ಭಟ್ಟರ ಈ ಪ್ರಯೋಗ. ಭಾಷೆಯ ಬಗ್ಗೆ ಶಂಕರ ಭಟ್ಟರು ಹೊಂದಿರುವ ಅನೇಕ ಅಭಿಪ್ರಾಯಗಳು ಒಪ್ಪತಕ್ಕವೇ. ಆದರೆ ಇವರು ಬಳಸುವ ಅನೇಕ ಪದಗಳು ಚರ್ಚೆಗೆ ದಾರಿಮಾಡಿಕೊಡುತ್ತವೆ.
ಆಡುವ ಭಾಷೆ ಮತ್ತು ಬರೆಯುವ ಭಾಷೆಯ ಮಧ್ಯೆ ಒಂದು ಅಂತರವಂತೂ ಹುಟ್ಟಿಕೊಂಡಿದೆ. ಅದು ರೂಢಿಗೂ ಬಂದಿದೆ. ವಿದ್ವಾಂಸರು ಮಾತ್ರವಲ್ಲ, ಸಾಮಾನ್ಯ ಜನಸಮುದಾಯವೂ ಈ ವ್ಯತ್ಯಾಸವನ್ನು ಗುರುತಿಸಿಕೊಂಡು ಒಪ್ಪಿಕೊಂಡಿದೆ. ಈಗ ನಾವು ಇದರಲ್ಲಿ ಬದಲಾವಣೆ ತರುವುದು ಮತ್ತು ಬರೆಯುವಾಗ ಬಳಸುವ ಪದಗಳನ್ನು ಬದಲಾಯಿಸಿ ಹೀಗೆಯೇ ಬರೆಯಬೇಕೆಂದು ಸೂಚನೆ ಕೊಡುವುದು ಮತ್ತೊಂದು ಗೊಂದಲಕ್ಕೆ ತಳ್ಳುವ ಪ್ರಯತ್ನವೂ ಆಗಬಹುದು. ಉದಾಹರಣೆಗೆ ಶಂಕರ ಭಟ್ಟರು ಬಳಸುವ ಪದಗಳನ್ನು ನೋಡಿ: ಸಂಕರ (ಶಂಕರ), ಬಟ್ಟ (ಭಟ್ಟ), ಮುಕ್ಯಮಂತ್ರಿ(ಮುಖ್ಯಮಂತ್ರಿ), ಪಾರಿಬಾಶಿಕ (ಪಾರಿಭಾಷಿಕ), ಗ್ರಂತ (ಗ್ರಂಥ), ಗವ್ಡರು (ಗೌಡರು), ಮಯ್ಸೂರು (ಮೈಸೂರು), ಜಯ್ನರು (ಜೈನರು), ಮುಕ್ಯವಾಗಿ (ಮುಖ್ಯವಾಗಿ), ಗುರ್ಮುಕಿ (ಗುರ್ಮುಖಿ), ವಿಜ್ನಾನ (ವಿಜ್ಞಾನ).
ಇಷ್ಟು ಹೇಳಿಯೂ ಭಟ್ಟರು ‘ಆಶ್ಚರ್ಯ’ ಎನ್ನುವ ಪದವನ್ನು ಅದು ಇರುವ ಹಾಗೆಯೇ ಬಳಸುತ್ತಾರೆ.
ಭಾಷೆಗೆ ಹಿನ್ನಡೆ ಎಂಬುದು ಇರಲಾರದು. ಅದು ಮುಂದೆ ಮುಂದೆ ಚಲಿಸುತ್ತಲೇ ಇರುತ್ತದೆ. ಹೊಸತು ಬಂದು ಸೇರುತ್ತಲೇ ಇರುತ್ತದೆ. ಇರುವುದು ಬಿಟ್ಟುಹೋಗಲೂ ಬಹುದು. ಅಚ್ಚಕನ್ನಡದ ಅನೇಕ ಪದಗಳು ನಮ್ಮ ಭಾಷೆಯಿಂದ ಆಚೆ ಸರಿದು ಹೋಗಿರುವುದಕ್ಕೆ ಕಾರಣ ಅವುಗಳು ಬಳಕೆಯಲ್ಲಿ ಇಲ್ಲದಿರುವುದು. ಇಂಥ ಕಡೆ ನಾವು ಅಗತ್ಯ ಎಚ್ಚರವನ್ನು ವಹಿಸಬೇಕು. ಅದು ಬರೆಯುವ ಭಾಷೆಯಿರಬಹುದು, ಓದುವ ಅಥವಾ ಆಡುವ ಭಾಷೆಯಿರಬಹುದು. ಅಚ್ಚಕನ್ನಡ ಪದಗಳು ಬಿಟ್ಟುಹೋಗದಂತೆ ಅವುಗಳನ್ನು ಬಳಸಿ ಅವುಗಳಿಗೆ ಜೀವತುಂಬಬೇಕು. ತಮಿಳರು ಈ ಕೆಲಸವನ್ನು ಹೆಚ್ಚು ನಿಷ್ಠೆಯಿಂದ ಮಾಡಿರುವುದು ಕಂಡುಬರುತ್ತದೆ. ಅಚ್ಚ ತಮಿಳು ಪದಗಳನ್ನು ಅವರು ಅಷ್ಟಾಗಿ ಕಳೆದುಕೊಂಡಿಲ್ಲ. ಈ ಕಾರಣದಿಂದಾಗಿಯೇ ಅವರ ಭಾಷೆ ಸಮೃದ್ಧವಾಗಿರುವಂತೆಯೂ ಕಾಣುತ್ತದೆ.
ಒಂದು ಭಾಷೆ ಎಂದರೆ ಅದಕ್ಕೊಂದು ಸೊಗಸು, ಚೆಲವು, ನಾದ, ಲಯ, ಸಂಗೀತ ಇರುತ್ತದೆ. ಇದೆಲ್ಲವನ್ನು ಕಾಯ್ದುಕೊಳ್ಳಬೇಕಾದ ಜವಾಬ್ದಾರಿ ಆ ಭಾಷೆಯನ್ನಾಡುವವರ ಮತ್ತು ಬಳಸುವವರ ಮೇಲಿರುತ್ತದೆ. ಇವತ್ತು ನಮ್ಮ ಮಾಧ್ಯಮಗಳಲ್ಲಿ ಬಳಕೆಯಾಗುತ್ತಿರುವ ಭಾಷೆಯನ್ನು ನೋಡಿ. ಇಂಗ್ಲಿಷ್ ಭಾಷೆಯ ಬಗ್ಗೆ ನಮಗೆ ಮಡಿ ಮೈಲಿಗೆಯ ಪ್ರಶ್ನೆಯಿಲ್ಲ (ಕನ್ನಡಕ್ಕೆ ಯಾವ ಭಾಷೆಯ ಬಗೆಗೂ ಇಂಥ ಭಾವನೆ ಇಲ್ಲ) ಎಂದ ಮಾತ್ರಕ್ಕೆ ನಾವು ಇಂಗ್ಲಿಷ್ ಪದಗಳನ್ನು ಬೇಕಾಬಿಟ್ಟಿಯಾಗಿ ಬಳಸಬೇಕಾಗಿಲ್ಲ; ಕನ್ನಡಕ್ಕೆ ತಂದು ತುರುಕಬೇಕಾಗಿಲ್ಲ. ಫುಡ್ಕೋರ್ಟ್, ಲೋಕಲ್ ಎಕ್ಸ್ಪ್ರೆಸ್, ಬುಕ್ ಮಾರ್ಕರ್, ಕ್ಯೂರಿಯಸ್, ಮೆಟ್ರೋ, ಪ್ರಾಪರ್ಟಿ, ಬ್ರೇಕಿಂಗ್ ನ್ಯೂಸ್, ಷಾಕಿಂಗ್ ನ್ಯೂಸ್, ಯು ಟರ್ನರ್, ಸಾಫ್ಟ್ ಕಾರ್ನರ್, ಟೀನ್ ಟ್ವಂಟಿ, ಡೈಜೆಸ್ಟ್, ಪ್ರೂವ್, ಕೌಂಟ್ಡೌನ್, ಫ್ಲಟರ್, ಲಾಂಗ್ಜರ್ನಿ, ಫಸ್ಟ್ಲುಕ್, ಹೈಡ್ರಾಮಾ, ಡ್ರಗ್ ಪಾಯಿಸನ್, ಕವರ್ ಸ್ಟೋರಿ, ಲೈಫ್ಸ್ಟೈಲ್ ಇತ್ಯಾದಿ. ಭಾಷೆಯ ಸೊಗಸಿನ ಪ್ರಶ್ನೆ ಇರಲಿ, ಈ ಪದಗಳು ಕನ್ನಡದ ಸಾಮಾನ್ಯ ಓದುಗನಿಗೆ ಅರ್ಥವಾಗುತ್ತವೆಯೇ ಎಂಬ ಪ್ರಶ್ನೆಯನ್ನೂ ಮಾಧ್ಯಮದ ಕ್ರಿಯಾಶೀಲರು ಎದುರಿಸಬೇಕು.
ಜನಸಮುದಾಯ ಮಾತ್ರ ಎಂದೂ ತನ್ನ ವಿವೇಕವನ್ನು ಕಳೆದುಕೊಳ್ಳುವುದಿಲ್ಲ. ತನಗೆ ಬೇಕಾದ ಭಾಷೆಯನ್ನು ಅದು ರೂಪಿಸಿಕೊಳ್ಳುತ್ತಲೇ ಇರುತ್ತದೆ. ಯಾವುದರ ಉಪಯೋಗ ಎಷ್ಟು ಮತ್ತು ಹೇಗೆ ಎಂಬುದನ್ನು ಅದು ಅರಿತಿರುತ್ತದೆ. ಭಾಷೆಯ ಚೆಲುವು, ಚೈತನ್ಯ, ಅದರ ಬಳಕೆಯ ಹಲವು ಸಾಧ್ಯತೆ ಎಲ್ಲವನ್ನೂ ಅದು ತನ್ನ ಪರಂಪರೆಯ ಅರಿವಿನಿಂದ ತಿಳಿದಿರುತ್ತದೆ. ಈ ಸಮುದಾಯವನ್ನು ಗೌರವಿಸಿ, ಅದರ ಏಳಿಗೆಗೆ ನಾವು ಪ್ರಾಮಾಣಿಕವಾಗಿ ದುಡಿದಾಗ ಅದರ ಧ್ವನಿಗೆ ಕಸುವು ದೊರಕುತ್ತದೆ. ಅದರ ಹಾಡು, ಕುಣಿತ, ಸಾಹಿತ್ಯ, ಗಣಿತ, ಕೌಶಲ ಎಲ್ಲವೂ ಕುಡಿಯೊಡೆಯುತ್ತವೆ; ಅರಳುತ್ತವೆ.
(ಸೌಜನ್ಯ: ಸಂಯುಕ್ತ ಕರ್ನಾಟಕ)
 
 

‍ಲೇಖಕರು G

30 January, 2014

ನಿಮಗೆ ಇವೂ ಇಷ್ಟವಾಗಬಹುದು…

2 Comments

  1. ಬಿ. ಆರ್. ಸತ್ಯನಾರಾಯಣ

    ಸರ್ ಒಳ್ಳೆಯ ಲೇಖನ. ನನ್ನ ಸ್ನೇಹಿತರ ಗುಂಪೊಂದು ಫೇಸ್ ಬುಕ್ಕಿನಲ್ಲಿ ಎಲ್ಲಾ ಆಂಗ್ಲ ಪದಗಳಿಗೂ ಕನ್ನಡ ಪದರೂಪಗಳನ್ನು ಸೃಷ್ಟಿಸಿ ಬಳಸಬೇಕೆಂದು ಕೆಲಸ ಮಾಡುತ್ತಿದ್ದೆ. ನಾನು ಆರಂಭದಲ್ಲಿಯೇ, ಅದು ಸಾಧುವಾದುದಲ್ಲ ಎಂದು ಹೇಳಿದ್ದೆ. ಅವರು ಕೇಳಲಿಲ್ಲ. ಕನ್ನಡ ನಾಡಿನಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವವರಿಗೆ ಆ ರೀತಿ ಅಂದರೆ ಎಲ್ಲವನ್ನೂ ಅನುವಾದಿಸಿಯೇ ತೀರಬೇಕೆಂದು ಅನ್ನಿಸುವುದು ಸಹಜವೇನೊ!? ಇತ್ತೀಚಿಗೆ ಆ ಗುಂಪು ಸೃಷ್ಟಿಸಿದ ಕೆಲವು ಪದಗಳನ್ನು ನೋಡಿ:
    ಮೊಬೈಲು = ಚಲುವಾಣಿ; ಜಂಗಮ ಘಂಟೆ
    ಬ್ಯಾಂಕ್ ಚೆಕ್ = ನಗದು ಚೀಟಿ; ಕಾಸೋಲೆ
    ಎ.ಟಿ.ಎಂ. = ಸನಿಹ (ಸದಾ ನಿಮಗೆ ಹಣ)
    ಇವೆಲ್ಲವನ್ನೂ ಮೀರಿ ಈಗಿರುವ ಕನ್ನಡ ಪದಗಳಿಗೇ ಪರ್ಯಾಯ ಪದಗಳನ್ನೂ ಕೆಲವರು ಸೂಚಿಸುತ್ತಿದ್ದಾರೆ. ಉದಾ:
    ಕಚಗುಳಿ = ಜುಮುಗರ
    ಈ ಸಾಹಸಗಳಿಗೆ ಏನನ್ನುವುದು? ಭಾಷೆಯ ಸಹಜ ಬೆಳವಣಿಗೆಯನ್ನು ತಡೆಯುವುದು ಹೇಗೆ ಸಾಧ್ಯವಿಲ್ಲವೊ, ಹಾಗೆಯೇ ಇವರ ಸಾಹಸವನ್ನೂ ತಡೆಯುವುದು ಸಾಧ್ಯವಿಲ್ಲ ಎಂದುಕೊಂಡು ಸುಮ್ಮನಾಗುವುದು ಅಷ್ಟೆ. ‘ಜನಸಮುದಾಯ ಮಾತ್ರ ಎಂದೂ ತನ್ನ ವಿವೇಕವನ್ನು ಕಳೆದುಕೊಳ್ಳುವುದಿಲ್ಲ. ತನಗೆ ಬೇಕಾದ ಭಾಷೆಯನ್ನು ಅದು ರೂಪಿಸಿಕೊಳ್ಳುತ್ತಲೇ ಇರುತ್ತದೆ.’ ಎಂಬ ನಿಮ್ಮ ಮಾತು ಸತ್ಯ. ಕಾಲ ಎಂಬುದೊಂದು ಇದೆಯಲ್ಲಾ; ಅದೇ ಎಲ್ಲದಕ್ಕೂ ಉತ್ತರ ಹೇಳುತ್ತದೆ.

  2. ಪಂಡಿತಾರಾಧ್ಯ ಮೈಸೂರು

    ಜನತೆಯ ಭಾಷೆ ಸದಾ ಜೀವಂತ.ಅದು ಎಲ್ಲ ಕಾಲಕ್ಕೂ ತನ್ನ ವಿವೇಚನೆಯನ್ನು ಬಳಸಿ ತನ್ನ ಜಾಯಮಾನಕ್ಕೆ ಒಗ್ಗುವುದನ್ನು ಮಾತ್ರ ಸ್ವೀಕರಿಸಿ ಉಳಿದುವನ್ನು ಪಕ್ಕಕ್ಕೆ ಸರಿಸಿ ಮುಂದೆ ಹರಿಯುತ್ತದೆ. ಫ಼ೇಸ್ ಬುಕ್ ನ ನಿರ್ವಾಹಕರು ನೆರಳುತಿಟ್ಟ, ಮಿಂಬಲೆ, ಮಿಂಚೆ, ಶಂಕರ ಬಟ್ಟ, ಎಂಬ ಅತಿರೇಕದ ಒಂದು ತುದಿಯಲ್ಲಿದ್ದರೆ ರಾಜಧಾನಿಯ ಪತ್ರಿಕೆಗಳು ಆಕಾಶವಾಣಿ, ದೂರದರ್ಶನ ವಾಹಿನಿಗಳು ಅನಗತ್ಯವಾಗಿ ಇಂಗ್ಲಿಷ್ ಪದ, ವ್ಯಾಕರಣಾಂಶಗಳನ್ನು ಕನ್ನಡದಲ್ಲಿ ತುರುಕುವ ದುಸ್ಸಾಹಸ ಮಾಡುತ್ತಿದ್ದಾರೆ. ತಾವು ಯುವಜನರಿಗೆ ಪ್ರಿಯವಾದುದನ್ನು ಕೊಡುತ್ತಿದ್ದೇವೆಂಬ ಸಮರ್ಥನೆ ಅವರದು. ಇಂಗ್ಲಿಷಿನ ಯಾವ ಪ್ರಬುದ್ಧ ಪತ್ರಿಕೆಯೂ ಇಂಥ ಕೆಲಸ ಮಾಡುವುದಿಲ್ಲ. ದಿ ಹಿಂದೂ ಅಂಥ ಪತ್ರಿಕೆಯಲ್ಲಿ ಇಂಥ ತಲೆಮಾಸಿದ ಭಾಷಾಪ್ರಯೋಗ ಕಾಣಲು ಸಾಧ್ಯವಿಲ್ಲ. ಕನ್ನಡದಲ್ಲಿ ಹೀಗೇಕೆ? ಪ್ರಬುದ್ಧ ಇಂಗ್ಲಿಷಿನ ಎದುರು ಶಿಷ್ಟ ಕನ್ನಡವನ್ನು ಬಳಸಿ ಓದುಗರ ಭಾಷಾ ಪ್ರಬುದ್ಧತೆಯನ್ನು ಬೆಳೆಸುವುದರ ಬದಲು ಅಡುಮಾತಿನ ರೂಪವನ್ನು ಬಳಸಿ ಯುವಜನರ ಮನಗೆಲ್ಲುವೆವೆಂಬ ನಂಬಿಕೆ ಅವರದು. ಎಲ್ಲರಿಗೂ ಅರ್ಥವಾಗುವ ಶಿಷ್ಟ ಕನ್ನಡ ಮಾತ್ರ ಎಲ್ಲರ ಕನ್ನಡವಾಗಲು ಸಾಧ್ಯ. ಸಂಬಂಧಪಟ್ಟವರಲ್ಲಿ ವಿವೇಕ ಮೂಡಲಿ ಎಂದು ಹಾರೈಸುವೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading