ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭಾರತ ಬದಲಾಗಿಬಿಟ್ಟಿದೆ ಬಾಪು…

ಹೇಮಂತ್ .ಎಲ್.

ಸಾಯುವಾಗ ನೀವು ‘ಹೇ ರಾಮ್’ ಎಂದಿರಿ,
ಈಗ ಸಾಯಬಡಿಯುತ್ತಿದ್ದಾರೆ,
‘ಜೈ ಶ್ರೀರಾಮ್’ ಹೇಳಬೇಕೆಂದು
ರಾಮರಾಜ್ಯವೆಂದರೆ ಇದೇಯೇನು ಬಾಪು?
ಭಾರತ ಬದಲಾಗಿಬಿಟ್ಟಿದೆ..

ದೇಶದ ದೊಡ್ಡ ಕಾರ್ಯಕ್ರಮಕ್ಕೆ
ನಿಮ್ಮದೇ ಸ್ಫೂರ್ತಿ ಬಾಪು,
ರಸ್ತೆಗೆ ಕಸ ಸುರಿದು ಪುನಃ ಗುಡಿಸಲಾಗುತ್ತಿದೆ,
ಕೋಟಿಗಳ ಸಾಲ ಮಾಡಿ ಸ್ವಚ್ಛ ಮಾಡಲಾಗುತ್ತಿದೆ,
ಆದರೆ ಕೊಳಕು ಮನಸ್ಥಿತಿಗಳ ಗತಿ?
ಪ್ರಶ್ನಿಸುವಂತಿಲ್ಲ ಬಾಪು
ಭಾರತ ಬದಲಾಗಿಬಿಟ್ಟಿದೆ..

ಆಶ್ರಮದಲ್ಲಿ ಕುಷ್ಠರೋಗಿಯ ಮಲ
ಬಾಚಿದ್ದಿರಂತಲ್ಲ? ಕೇಳಿ ಬಾಪು,
ಈಗಲೂ ನಿಮ್ಮನ್ನು ತೋರಿಸಿ ಮಲದ
ಗುಂಡಿಗೆ ಇಳಿಸಿ ಸೀದಾ ಮೇಲೆ ಕಳಿಸಲಾಗುತ್ತಿದೆ,
ವಾರಕ್ಕೈವರಂತೆ, ನೋಡಬೇಕು ನೀವು
ಭಾರತ ಬದಲಾಗಿಬಿಟ್ಟಿದೆ..

ನಿಮ್ಮ ಜಯಂತಿಯಂದು ಚರಕದ ಮುಂದೆ
ಕೂತು ಕೊಂಚ ನೇಯುತ್ತಾರೆ, ನೇತಾರರು
ಕೋಟು-ಕಾರು-ಮನೆಯ ಸಾಮಾನುಗಳು,
ಹೂಡಿಕೆ-ಬಂಡವಾಳಗಳು ಎಲ್ಲವೂ
ಅಚ್ಚ ವಿದೇಶಿ, ಛೇ! ನೀವಿರಬೇಕಿತ್ತು
ಬಾಪು, ಭಾರತ ಬದಲಾಗಿಬಿಟ್ಟಿದೆ..

ಕಣ್ಣಿಗೆ ಕಣ್ಣು ತೆಗೆದರೆ ಜಗತ್ತೇ ಕುರುಡೇ?
ನೋಡಲು ಈಗ ನೀವಿಲ್ಲವಷ್ಟೆ,
ಕಣ್ಣುಗಳೊಟ್ಟಿಗೆ ಎದೆಯನ್ನೂ ಬಗೆದುಕೊಂಡಿದ್ದಾರೆ
ಇನ್ನು ಬಡಿಯುವ ಹೃದಯವೆಲ್ಲಿರಬೇಕು?
ಸುಳ್ಳು-ಅಸಹನೆ-ದ್ವೇಷ- ಹಿಂಸೆಗಳು
ದೇಶಭಕ್ತಿಯ ರೂಪ ಪಡೆದಿವೆ,
ಈ ಲೆಕ್ಕದಲ್ಲಿ ನೀವೂ ದೇಶಭಕ್ತರಲ್ಲ ಬಿಡಿ
ಭಾರತ ಬದಲಾಗಿಬಿಟ್ಟಿದೆ ಬಾಪು
ಸಾಕಷ್ಟು ಬದಲಾಗಿಬಿಟ್ಟಿದೆ..

‍ಲೇಖಕರು avadhi

28 September, 2019

9 Comments

  1. ಗೀತಾ ಎನ್ ಸ್ವಾಮಿ. ಪ್ರಾಂಶುಪಾಲರು ತಿಪಟೂರು

    ಭಾರತ ಬದಲಾಗಿ ಬಿಟ್ಟಿದೆ
    ಹೇಮಂತ್ ಅವರ ಕವಿತೆ ಈ ದೇಶದ ಕೊಳೆತ ರಾಮನಾಮದ ರಾಜಕಾರಣವನ್ನು ಅವಮಾನಿಸುವಂತೆ ಹಾಗೆಯೇ ಬಾಪು ಬೇಕಿತ್ತು ಇವತ್ತಿಗೆ ಎನ್ನುವ ಒಳಿತಿನ ಆಶಯವನ್ನು ಪ್ರಕಟಿಸಿದೆ. ಆದರೆ ಬಾಪುವಿಗಿಂತ ಮುಖ್ಯವಾಗಿ ಅಂಬೇಡ್ಕರ್ ಅವರ ಒಟ್ಟು ಆಶಯಗಳು ಹೆಚ್ಚು ಹೆಚ್ಚು ಓಡಾಡಬೇಕಿದೆ ಈ ದೇಶದಲ್ಲಿ. ಭಾರತ ಪ್ರಕಾಶಿಸುತ್ತಿದೆ ಎನ್ನುವ ಹಿಂಸೆಯ ಸುಳ್ಳನ್ನು ಬಿತ್ತುವ ಮೀಡಿಯಾಗಳನ್ನು ಕಟ್ಟಿಹಾಕಬೇಕಿದೆ. ಅಸಹಾಯಕರನ್ನು ಜಾತಿಮುಂದೆ ಮಾಡಿಕೊಂಡು ಹತ್ಯೆಗೈಯ್ಯುತ್ತಿರುವುದನ್ನು ನೋಡಿಯೂ ಏನೂ ಕ್ರಮ ಜಾರಿ ಮಾಡಿದೆ ಒಣ ಭಾಷಣಗಳ ಹಿಂದೆ ಬಿದ್ದವರನ್ನು ನೇರ ಖಂಡಿಸಿ ಎಳೆದು ತಂದು ಅಮಾಯಕರ ಮೇಲೆ ಆಗ್ತಿರೋ ಹಲ್ಲೆಗೆ ಉತ್ತರ ಕೇಳಲಿಕ್ಕಿದೆ. ಹೀಗೆ ತಣ್ಣಗೆ ಬಾಪು ಇರಬೇಕಿತ್ತು ಎಂದು ನಾವೆಲ್ಲ ಸೇರಿ ಬರ್ಕಂಡು ಮನೇಲಿ ಕೂತ್ರೆ ಏನು ಆಗೋಲ್ಲ ಈ ಕೊಳೆಯುತ್ತಿರುವ ರಾಜಕಾರಣಿಗಳ ನಡುವೆ….. ಸಮುದಾಯಗಳು, ಸೆಕ್ಯುಲರ್ ಗಳು ಪ್ರೋಗ್ರೇಸಿವ್ ಅನ್ನೋ ಕವಚ ಹಾಕಿ ಕೂತ್ರೆ ರಾಮನ ಹೆಸರಲ್ಲಿ ಈ ದೇಶ ನಿರಪರಾಧಿಗಳ ಹೆಣಧರಿಸಿ ರಕ್ತಭಾರತ ಆಗುತ್ತದೆ ಅಷ್ಟೇ….
    ಕವಿ ಎನ್ ಕೆ ಹನುಮಂತಯ್ಯ ನವರು ಬರೆದ ಸಾಲು ತುಂಬಾ ಕಾಡ್ತಾ ಇದೆ. ಪ್ರೀತಿಯ ಹಣ್ಣಿನೊಳಗೆ ಹಿಂಸೆಯೇ ರಸ.
    ರಾಮಭಕ್ತಿಯ ಹಣ್ಣಿನ ಮಾರಾಟ ನಿಲ್ಲುವಂತಹ ಕವಿತೆಗಳನ್ನು ಬರೆಯಿರಿ. ಅಸಹಾಯಕತೆಗೆ ಪುಷ್ಟಿ ಕೊಡುವ ಪದ್ಯಗಳು ಸಾಕು.

    • ಹೇಮಂತ್ ಎಲ್

      ತಮ್ಮ ಮೆಚ್ಚುಗೆಗೆ ಧನ್ಯವಾದಗಳು ಮೇಡಂ. ಈ ದೇಶಕ್ಕೆ ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರೂ ಬೇಕು. ಭವಿಷ್ಯದ ರೈಲು ಈ ಎರಡು ಹಳಿಗಳ ಮೇಲೆಯೇ ಸಾಗಬೇಕು. ಆಗ ಮಾತ್ರ ಭಾರತ ಉದ್ಧಾರವಾಗಲು ಸಾಧ್ಯ. ಅಸಹಾಯಕತೆಯ ಪದ್ಯಗಳು ಸಾಕು ಎಂದು ಹೇಳುವ ನಿಮ್ಮ ವ್ಯವಸ್ಥೆಯ ಬಗಗಿನ ತಮ್ಮ ಅಂತರಾಳದ ಆಕ್ರೋಶ ವ್ಯಕ್ತಪಡಿಸಿದ್ದೀರಿ.ರಾಮಭಕ್ತಿಯ ಹಣ್ಣಿನ ಮಾರಾಟ ನಿಲ್ಲಬೇಕೆನ್ನುವ ನಿಮ್ಮ ಆಶಯವೇ ನನ್ನದೂ. ದಾರಿ ಬೇರೆಯಷ್ಟೇ. ಧನ್ಯವಾದಗಳು.

  2. Vinay

    Uttamavaada Kaavya Rachane … 🙂

    • ಹೇಮಂತ್ ಎಲ್

      Thank you

  3. ಬೆಳಕು ಉಮೇಶ್

    ಹೇಮಂತ್ ಅವರ ಕವನದಲ್ಲಿ ಭವ್ಯ ಭಾರತದ ಕನಸುಗಳು ದಿಕ್ಕು ತಪ್ಪಿ ಕಂಗಾಲಾಗಿ ಅಲೆಯುತಿಹ ಆರ್ಥನಾದದ ಆರ್ಭಟವನ್ನು ಪದಗಳಲ್ಲಿ ಸಾರಾಸಗಟಾಗಿ ಸೆರೆ ಹಿಡಿಯಲಾಗಿದೆ….ಇನ್ನೂ ಉತ್ತಮವಾದ ಲೇಖನಗಳು ಬರಲಿ

    • ಹೇಮಂತ್ ಎಲ್

      Thank you sir

    • ಹೇಮಂತ್ ಎಲ್

      ಧನ್ಯವಾದಗಳು ಸರ್

  4. Madhu

    ನೀವಿರಬೇಕಿತ್ತು ಬಾಪು ನಿಮ್ಮ ಹೆಸರನ್ನು ಹೇಳಿಕೊಂಡು ನಿಮ್ಮ ತತ್ವ ಚಿಂತನೆಗಳನ್ನು ಕೊಲ್ಲುತ್ತಿರುವವರನ್ನು ಕೊನೆಗಾಣಿಸಲು..

    • ಹೇಮಂತ್ ಎಲ್

      ಧನ್ಯವಾದಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading