ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭಾರತಿ ಹೆಗಡೆ ನೋಡಿದ ‘ಕಿಸಾನ್ ಸತ್ಯಾಗ್ರಹ’

ಭಾರತಿ ಹೆಗಡೆ

ಕೆಲವು ದಿನಗಳ ಹಿಂದೆ ಆತ್ಮೀಯರಾದ ಗೋಪಿನಾಥ್ ಅವರು ಸಿಕ್ಕು ‘ನಮ್ಮ ಕೆ.ವಿ.ಸುಬ್ಬಣ್ಣ ಆಪ್ತ ರಂಗಮಂದಿರದಲ್ಲಿ ನಿರ್ದೇಶಕ ಕೇಸರಿ ಹರವೂ ಅವರ ‘ಕಿಸಾನ್ ಸತ್ಯಾಗ್ರಹ’ ದ ಸಾಕ್ಷ್ಯ ಚಿತ್ರ ಪ್ರದರ್ಶನವಿದೆ, ಬನ್ನಿ ಮೇಡಂ’ ಎಂದು ಆಹ್ವಾನವಿತ್ತರು.

ಕೃಷಿಯಲ್ಲಿ ಮತ್ತು ಕೃಷಿ ಬರವಣಿಗೆಯಲ್ಲಿ ಒಲವು ಇರುವ ನನಗೆ ಈ ಡಾಕ್ಯುಮೆಂಟರಿ ನೋಡಲೇಬೇಕೆಂಬ ಮಹದಾಸೆ ಇದ್ದದ್ದು ಎರಡು ಕಾರಣಕ್ಕೆ, ಒಂದು ಕೃಷಿಯ ಕುರಿತಾಗಿ ನನಗಿರುವ ಆಸಕ್ತಿ. ಅಷ್ಟರಲ್ಲಾಗಲೇ ನನ್ನ ಕೃಷಿ ಮಹಿಳೆಯರ ಕುರಿತ ಅನುಭವ ಕಥನ ‘ಮಣ್ಣಿನ ಗೆಳತಿ’ ಪುಸ್ತಕ ಹೊರಬಂದಿತ್ತು. ಈ ಕಾರಣಕ್ಕಾಗಿ ರೈತರ ಚಳವಳಿಗಳ ಕುರಿತು ಅನೇಕರು ನನಗೆ ಲೇಖನ ಬರೆಯಲು ಕೇಳಿಕೊಂಡಿದ್ದರು. ಆದರೆ ಆಗ ನಾನು ಈ ಕುರಿತು ಅಷ್ಟು ಅಪ್‌ಡೇಟ್ ಆಗಿರದ ಕಾರಣ ಯಾವುದು ಸರಿ, ಯಾವುದು ತಪ್ಪು ಎಂಬ ವಿಶ್ಲೇಷಣೆಯನ್ನು ಖಂಡಿತ ಬರೆಯಲಾರೆ ಎಂದು ನಯವಾಗಿ ನಿರಾಕರಿಸಿದ್ದೆ.

ಎರಡನೆಯ ಕಾರಣವೆಂದರೆ, ಅಷ್ಟರಲ್ಲಾಗಲೇ ಈ ರೈತ ಚಳವಳಿಯ ಕುರಿತು ಪರ-ವಿರೋಧಗಳು ಸಾಕಷ್ಟು ಎದ್ದಿದ್ದವು. ಈ ಕಾಯಿದೆಗಳು ರೈತರ ಪರವಾಗಿವೆಯೇ ಎಂಬ ರೈತರ ಪರ ಕಾಳಜಿಗಳಿಗಿಂತ ಸಂಪುರ್ಣವಾಗಿ ಈ ವಾದಗಳು ಎರಡು ಪಕ್ಷಗಳ ಕಣ್ಣುಗಳಿಂದ ನೋಡಲಾಗುತ್ತಿತ್ತು. ಒಬ್ಬರಂತೂ ನನ್ನ ಬಳಿ, ಅಲ್ಲಾ, ನಿಜಕ್ಕೂ ರೈತರಿಗೆ ಇಷ್ಟೆಲ್ಲ ತೊಂದರೆ ಇದೆಯಾ ಈಗ, ರೈತರಿಗೆ ಅದೆಷ್ಟೊಂದು ಸವಲತ್ತುಗಳನ್ನು ನೀಡಲಾಗಿದೆ, ಆದರೂ ಇದು ಬೇಕೆಂದೇ ಮಾಡಲಾಗುತ್ತಿದೆ ಎಂದಿದ್ದರು.

ನಿಜಕ್ಕೂ ಈ ಮಾತು ನನ್ನಲ್ಲಿ ಖೇದವುಂಟು ಮಾಡಿತ್ತು. ‘ಮಣ್ಣಿನ ಗೆಳತಿ’ ಪುಸ್ತಕ ಬರೆಯುವಾಗ ಬಹುತೇಕ ನಾಡಿನಾದ್ಯಂತ ಸುತ್ತಿದ್ದೇನೆ. ರೈತರ ಬವಣೆಗಳನ್ನು ಸ್ವತಃ ಕಂಡಿದ್ದೇನೆ. ಇಂದಿಗೂ ಮಳೆಯನ್ನೇ ಆಶ್ರಯಿಸಿ ಬದುಕುವ ನಮ್ಮ ರೈತರು, ತಾವು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆಯೂ ಸಿಗದೆ ದಲ್ಲಾಳಿಗಳ ಮುಷ್ಟಿಯಲ್ಲಿ ಸಿಲುಕಿ, ಮಾರಾಟ ಮಾಡಲು ಸರಿಯಾದ ಮಾರುಕಟ್ಟೆಯೂ ಸಿಗದೇ ಒದ್ದಾಡುವುದನ್ನು ಕಂಡಿದ್ದೇನೆ, ರಿಯಲ್ ಎಸ್ಟೇಟ್ ದಂಧೆಗಳಿಂದ ಇರುವ ಸಣ್ಣಪುಟ್ಟ ತಮ್ಮ ಜಮೀನುಗಳನ್ನು ಉಳಿಸಿಕೊಳ್ಳುವುದಕ್ಕೆ ಅವರು ಮಾಡುವ ಹೋರಾಟಗಳನ್ನೂ ನೋಡಿದ್ದೇನೆ.

ಈ ಎಲ್ಲ ಕಾರಣಗಳಿಗೆ ಈ ಸಾಕ್ಷ್ಯ ಚಿತ್ರವನ್ನು ನೋಡುವುದು ನನಗೆ ತುಂಬ ಮುಖ್ಯ ಅನಿಸಿ ಹೋಗಿದ್ದೆ. ನಿಜಕ್ಕೂ ಒಂದು ಒಳ್ಳೆಯ ಚಿತ್ರವನ್ನು ನೋಡಿದ ಅನುಭವ ನನ್ನದಾಯಿತು.

ಭಾರತದ ಒಕ್ಕೂಟ ಸರ್ಕಾರ ೨೦೨೦ರಲ್ಲಿ ತಂದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೇಶಾದ್ಯಂತವಿರುವ ಹತ್ತಾರು, ಸಾವಿರ ರೈತರು ೨೦೨೦ರ ನವೆಂಬರ್ ತಿಂಗಳಲ್ಲಿ ದೆಹಲಿಯ ಗಡಿಗಳಿಗೆ ಧಾವಿಸಿ ಧರಣಿ ಕೂತರು. ಕೃಷಿಯ ಕಾರ್ಪೋರೇಟೀಕರಣದ ಪರವಾಗಿದ್ದ ಆ ಕಾಯ್ದೆಗಳನ್ನು ಸಂಪೂರ್ಣ ಹಿಂತೆಗೆದುಕೊಳ್ಳಬೇಕು ಎನ್ನುವುದು ಅವರ ಬೇಡಿಕೆಯಾಗಿತ್ತು. ಬಹುಧೀರ್ಘ ಕಾಲ ನಡೆದ ಈ ಚಳವಳಿಯನ್ನು ಭಾರತದ ಸ್ವಾತಂತ್ರ್ಯಾನಂತರದಲ್ಲಿ ನಡೆದ ಅತಿ ಸುಧೀರ್ಘವಾದ ಚಳವಳಿಯಿದು ಎಂದೇ ಬಣ್ಣಿಸಲಾಗುತ್ತಿದೆ. ಅತಿ ಹೆಚ್ಚಿನ ಪ್ರಮಾಣದಲ್ಲಿ ಪಂಜಾಬ್ ಮತ್ತು ಹರಿಯಾಣದಿಂದ ಬಂದ ರೈತರು ಈ ಮೂರೂ ಕಾಯಿದೆಗಳನ್ನು ಒಕ್ಕೊರಲಿನಿಂದ ಧಿಕ್ಕರಿಸಿ ಪಟ್ಟಾಗಿ ದೆಹಲಿಯ ಗಡಿಗಳಲ್ಲಿ ಬೀಡುಬಿಟ್ಟಿದ್ದರು. ಆದರೆ ಇವರನ್ನು ರಾಜಕೀಯ ನೇತಾರರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಬದಲಾಗಿ ಆಳುವ ಪಕ್ಷದ ವಿರುದ್ಧ ನಡೆಯುತ್ತಿರುವ ಪಿತೂರಿ ಎಂದೇ ಬಣ್ಣಿಸಲಾಯಿತು.

ಆದರೆ ಸುಮಾರು ತಿಂಗಳುಗಳ ಕಾಲ ಕೇಸರಿ ಹರವು ಅವರು ನವದೆಹಲಿಗೆ ಖುದ್ದು ಹೋಗಿ, ಧರಣಿ ನಿರತರ ರೈತರನ್ನು ಕಂಡು, ಅವರ ಸಂದರ್ಶನವನ್ನೂ ಪಡೆದು ಈ ಸಾಕ್ಷ್ಯ ಚಿತ್ರವನ್ನು ನಿರ್ಮಿಸಿದ್ದಾರೆ. ಅಲ್ಲದೆ ಕೆಲವು ರೈತ ಮುಖಂಡರು, ಹೋರಾಟಗಾರರು ತಜ್ಞರನ್ನೂ ಮಾತನಾಡಿಸಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಅದೆಷ್ಟು ಸೂಕ್ಷ್ಮವಾಗಿ ತೆರೆದಿದ್ದಾರೆಂದರೆ, ರೈತ ಚಳವಳಿಗಾರರು ತಾವು ಧರಣಿ ನಿರತ ಸ್ಥಳದಲ್ಲೇ ಊಟ ಮಾಡುವುದು, ಅಲ್ಲೇ ಸ್ನಾನಮಾಡುವುದು, ಅಲ್ಲೇ ತಿಂಡಿ ತಿನ್ನುವುದು ಮುಂತಾದ ಸಣ್ಣಸಣ್ಣ ಸಂಗತಿಗಳನ್ನೂ ಹರವೂ ಅವರು ಸೆರೆಹಿಡಿದಿದ್ದಾರೆ.
ಕೃಷಿ ಕಾರ್ಪೋರೇಟ್ ಕೈಗೆ ಸಿಲುಕಿದರೆ ರೈತರ ಜೀವನ ನಾಶವಾದಹಾಗೆಯೇ ಅಂತ ಒಮ್ಮೆ ಹೋರಾಟಗಾರ್ತಿ ನಂದಿನಿ ಜಯರಾಂ ಅವರು ಹೇಳಿದ್ದರು. ಅದರ ಸಾಕ್ಷಾತ್ ದರ್ಶನವನ್ನು ಈ ಚಿತ್ರದಲ್ಲಿ ನೋಡುವಂತಾಯಿತು.

ಮೊದಮೊದಲು ದೆಹಲಿಯ ನಾಗರಿಕರು ಈ ಚಳವಳಿಗಾರರಿಗೆ ತಾವೇ ಆಹಾರ ಪೂರೈಸಿದ್ದೂ, ನಾವು ಊರಿಂದ ತಂದ ಆಹಾರವನ್ನು ಇನ್ನೂ ತೆಗೆದೇ ಇಲ್ಲ ಎಂದು ಹೇಳುವ ರೈತರು, ನಾಗರಿಕರು ಹೇಗೆ ರೈತರಿಗೆ ಸಹಕಾರಿಯಾಗಿ ನಿಂತರು ಎಂಬುದನ್ನು ತೋರಿಸಿದರೆ, ಕಡೆಕಡೆಗೆ ಯಾರೂ ಬೆಂಬಲಕ್ಕೆ ನಿಲ್ಲದೆ ರೈತರು ಹತಾಶರಾಗಿ, ತಮಗಿನ್ನು ಜಯ ಸಿಗುವುದಿಲ್ಲ ಎಂದು ಕಣ್ಣೀರು ಹಾಕುವುದು ಮನಕಲಕುತ್ತದೆ.
ಕೊನೆಯಲ್ಲಿ ಪಿ. ಸಾಯಿನಾಥ್ ಹೇಳುವ ಮಾತುಗಳು ಎದೆಗೆ ಇಳಿಯುತ್ತದೆ…

ಕಡೆಗೂ ಕೇಂದ್ರ ಸರ್ಕಾರ ಮಣಿದು ಈ ಮೂರೂ ಕಾಯ್ದೆಗಳನ್ನು ಹಿಂದಕ್ಕೆ ತೆಗೆದುಕೊಂಡಿತು. ಆದರೆ ಹೀಗೆ ಹಿಂದಕ್ಕೆ ತೆಗೆದುಕೊಂಡಾಕ್ಷಣ ಕೃಷಿ ಸಮಸ್ಯೆಗಳು ಬಗೆಹರಿಯುವುದಿಲ್ಲ. ಕೃಷಿ ಮತ್ತು ಕೃಷಿಯೇತರ, ರೈತರಲ್ಲದೆ ಅನೇಕಾನೇಕ ಜನರು ಕೃಷಿ ಆರ್ಥಿಕತೆಯನ್ನು ಅವಲಂಬಿಸಿರುವವರು, ನೇಕಾರರು, ಸಿಂಪಿಗರು, ಕುಂಬಾರರು, ಕಮ್ಮಾರರು, ಮುಂತಾದವರ ಕುರಿತೂ ಇಲ್ಲಿ ಚರ್ಚೆಯಾಗಬೇಕು.

ಈ ಎಲ್ಲ ಸಮಸ್ಯೆಗಳನ್ನು ಪರಿಗಣಿಸದೇ ಕೃಷಿ ಸಮಸ್ಯೆಗಳಿಗೆ ಪರಿಹಾರ ಇಲ್ಲ. ಹಾಗೆಯೇ ಕೃಷಿ ಸಮಸ್ಯೆ ಉತ್ಪತ್ತಿ ಮಾರುಕಟ್ಟೆ ಅಷ್ಟೇ ಅಲ್ಲ, ಅದನ್ನೂ ಮೀರಿ ನಿಂತಿದೆ. ರೈತರ ಆತ್ಮಹತ್ಯೆಯಂತಹಾ ಘೋರ ಸಮಸ್ಯೆ ಅಷ್ಟೇ ಅಲ್ಲ, ಇದೊಂದು ಸಮಾಜದ ಸಂಕಷ್ಟ, ಇಷ್ಟು ದೊಡ್ಡ ಸಂಖ್ಯೆಯ ಸಣ್ಣ ರೈತರು ತಮ್ಮ ಉಳಿವಿಗಾಗಿ ಹೋರಾಡುತ್ತಿರುವಾಗ ಇದೊಂದು ನಾಗರಿಕತೆಯ ಸಂಕಷ್ಟ, ಇದು ನಮ್ಮ ಇಡೀ ಮಾನವ ಜನಾಂಗದ ಸಂಕಷ್ಟ ಎಂದು ನಾನು ಹೇಳುತ್ತೇನೆ ಎನ್ನುವ ಮಾತುಗಳು ಕಾಡುತ್ತವೆ.

ಒಟ್ಟಾರೆಯಾಗಿ ರೈತ ಚಳವಳಿಯ ಸಮಗ್ರ ಚಿತ್ರಣ ಈ ಸಾಕ್ಷ್ಯ ಚಿತ್ರದಿಂದ ಲಭಿಸುತ್ತದೆ. ಯಾವುದೇ ರಾಜಕೀಯದ ಪಕ್ಷಗಳ ಕಣ್ಣುಗಳಿಂದ ನೋಡದೆ ರೈತರ ಸಮಸ್ಯೆಗಳು ಮತ್ತು ಅವರ ಬೇಡಿಕೆಗಳನ್ನು ಮಾತ್ರ ಕೇಂದ್ರೀಕರಿಸಿ ಈ ಚಿತ್ರವನ್ನು ನಿರ್ಮಿಸಿರುವ ಕೇಸರಿ ಹರವೂ ಅವರಿಗೆ ಅಭಿನಂದನೆಗಳು.

‍ಲೇಖಕರು Admin

5 March, 2022

2 Comments

  1. M A Sriranga

    ದಿನಸಿಗಳ ಬೆಲೆ ಹೆಚ್ಚಾದರೆ ಗ್ರಾಹಕರಿಗೆ ಕಷ್ಟ. ಬೆಳೆ ಜಾಸ್ತಿ ಬಂದು ಅವುಗಳ ಬೆಲೆ ಇಳಿದರೆ ರೈತರಿಗೆ ಕಷ್ಟ. ಸರ್ಕಾರ ಯಾರ ಪರ ನಿಲ್ಲಬೇಕು? ಪ್ರತಿಭಟನೆ ಸುಲಭ. ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವುದು ಸುಲಭವಲ್ಲ.

  2. T S SHRAVANA KUMARI

    ಉ ತ್ತಮ,ಲೇಖನ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading