ಶೂದ್ರ ಶ್ರೀನಿವಾಸ್ ಅಂಕಣ ಆರಂಭ- ಕೇಳುಗರ ಅಂತರಾಳದಲ್ಲಿ ಬಾಳಪ್ಪ…

‘ಶೂದ್ರ’ ಪತ್ರಿಕೆ ಕನ್ನಡ ಸಾಹಿತ್ಯಕ್ಕೆ ನೀಡಿದ ತಿರುವು ಗಮನಾರ್ಹ. ‘ಶೂದ್ರ’ ಪತ್ರಿಕೆಯನ್ನು ಹುಟ್ಟು ಹಾಕುವ ಮೂಲಕ ಕನ್ನಡ ಸಾಹಿತ್ಯವನ್ನು ಜನಪರವಾಗಿಸಿದ ಹೆಮ್ಮೆ ಅದರ ಸಂಪಾದಕರಾದ ಶೂದ್ರ ಶ್ರೀನಿವಾಸ್ ಅವರದ್ದು.

ಕನ್ನಡದ ಅನೇಕ ಪ್ರಕಾರಗಳಲ್ಲಿ ಕೃತಿಯನ್ನು ರಚಿಸಿರುವ ಶೂದ್ರ ಅವರ ‘ಕಿ ರಂ ಲೋಕ’ವನ್ನು ‘ಬಹುರೂಪಿ’ ಪ್ರಕಟಿಸಿದೆ.

ಇಂದಿನಿಂದ ಅವರ ‘ಮರೆಗೆ ಸರಿದವರು’ ಅಂಕಣ ಆರಂಭ.

1

ಬಾಳಪ್ಪ ಹುಕ್ಕೇರಿ

ದಶಕಗಳೇ ಕಳದು ಹೋಗಿದೆ. ಅಂದರೆ ಕಳೆದ ಶತಮಾನದ ಕೊನೆಯ ಭಾಗದಲ್ಲಿ. ಅದೊಂದು ಮಧ್ಯಾಹ್ನ ಬೆಂಗಳೂರಿನ ಆಕಾಶವಾಣಿಗೆ ಮಹಾನ್ ಗಾಯಕ ಬಾಳಪ್ಪ ಹುಕ್ಕೇರಿಯವರಿಂದ ಮಾತಾಡಿಸಿ ಹೊರಗೆ ಬಂದೆ. ಮಾಜಿ ಮುಖ್ಯ ಮಂತ್ರಿಗಳೂ ಹಾಗೂ ತತ್ತ್ವ ನಿಷ್ಠ ರಾಜಕಾರಣಿಯಾದ ಕಡಿದಾಳ್ ಮಂಜಪ್ಪನವರು ತಮ್ಮ ಮಾತಿನ ರೆಕಾರ್ಡಿಂಗ್ ಮುಗಿಸಿಹೊರಗೆ ಬಂದರು. ಅವರು ಹೈಕೋರ್ಟ್ ನಿಂದ ನೇರವಾಗಿ ಕಪ್ಪು ಉಡುಪಿನಿಂದಲೇ ಬಂದಿದ್ದರು.

ಎಂಬತ್ತರ ಗಡಿಯನ್ನು ದಾಟಿದ್ದರೂ ತಮ್ಮ ಮಾಮೂಲಿ ಲವಲವಿಕೆ ಕಳೆದುಕೊಂಡಿರಲಿಲ್ಲ. ಬಾಳಪ್ಪ ಅವರನ್ನು ಕಂಡ ತಕ್ಷಣ ಸಂಭ್ರಮದಿಂದ  ಎಂಥ ಖುಷಿಯ ವಿಷಯ : ನಮ್ಮಿಬ್ಬರ ಸಮಾಗಮ ಇಲ್ಲಿಎಂದು ಹೇಳುತ್ತ  ಕಡಿದಾಳ್ ಅವರು ಹುಕ್ಕೇರಿಯವರ ಕೈ ಹಿಡಿದೇ  ಆಕಾಶವಾಣಿಯ ವಿಶಾಲ ಅಂಗಳದ ಮಧ್ಯೆ ಹುಲ್ಲಿನ ಬಯಲಲ್ಲಿ ಕೂತರು. ಹೀಗೆಯೇ ಮಾತುಕತೆಯ ನಡುವೆ ಕಡಿದಾಳ್ ಮಂಜಪ್ಪನವರು ಹುಕ್ಕೇರಿಯವರ ಅತ್ಯಂತ ಜನಪ್ರಿಯ ಗೀತೆ ‘ಮೊದಲು ಮಾನವನಾಗು’ ಹಾಡಲು ವಿನಂತಿಸಿಕೊಂಡರು. ಅದಕ್ಕೆ ಹುಕ್ಕೇರಿಯವರು “ಸರ್ ನೀವು ವಿನಂತಿಸಿಕೊಳ್ಳಬಾರದು, ಹಾಡಯ್ಯ ಎಂದು ಹೇಳಬೇಕು. ನಿಮ್ಮ ಮುಂದೆ ಕೂತು ಹಾಡುವುದೇ ನನ್ನ ಪುಣ್ಯ” ಎಂದು “ಈ ಗೀತೆಯನ್ನು ನನಗೆ ಹಾಡಲು ಕೊಟ್ಟ ಆ ಮಹಾನುಭಾವ ಕವಿ ಸಿದ್ಧಯ್ಯ ಪುರಾಣಿಕರಿಗೆ ನಮಸ್ಕರಿಸುವುದು ನನ್ನ ಕರ್ತವ್ಯ” ಎಂದು ಕೈಮುಗಿದು ಹಾಡಲು ಶುರುಮಾಡಿದರು. ಅವರ ಶ್ರೀಮಂತವಾದ ಧ್ವನಿಯಲ್ಲಿ ಹಾಡಲು ಶುರುಮಾಡಿದಾಕ್ಷಣ ಆಕಾಶವಾಣಿಯ ಬೇರೆಬೇರೆ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದ ಬಹಳಷ್ಟು ಮಂದಿ ಹೊರಗೆ ಬಂದು ಕೇಳಲು ತೊಡಗಿದರು.

‘ಮೊದಲು ಮಾನವನಾಗು’ ಗೀತೆಯ ಜೊತೆಗೆ ‘ನಮ್ಮ ಹಳ್ಳಿ ನಮಗ ಪಾಡ’ ಎಂಬ ಗೀತೆಯನ್ನು ಆ ಹಿರಿಯ ಗಾಯಕ ಶುದ್ಧ ಧಾರವಾಡದ ದೇಸಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತೆ ಹಾಡಿ ಮುಗಿಸಿದಾಗ ಕಡಿದಾಳ್ ಮಂಜಪ್ಪನವರು ಅತ್ಯಂತ ಭಾವನಾತ್ಮಕವಾಗಿ ಎದ್ದುನಿಂತು ಬಾಳಪ್ಪ ಹುಕ್ಕೇರಿಯವರನ್ನ ಅಪ್ಪಿಕೊಂಡು ಗೌರವ ಸೂಚಿಸಿದ್ದರು. ಒಂದು ರೀತಿಯಲ್ಲಿ ಇದು ಆಕಾಶವಾಣಿಯವರೇ ವ್ಯವಸ್ಥೆ ಮಾಡಿದ್ದ ಕಾರ್ಯಕ್ರಮದಂತಿತ್ತು. ಇದಾದ ಮೇಲೆ ಎರಡು ಮೂರು ಬಾರಿ ಕಡಿದಾಳ್ ಮಂಜಪ್ಪನವರನ್ನ ಅವರ ಮನೆಯಲ್ಲಿ ಭೇಟಿಯಾದಾಗ ಬಾಳಪ್ಪ ಹುಕ್ಕೇರಿಯವರ ಬಗ್ಗೆ ವಿಚಾರಿಸಿದ್ದರು.

ಮಂಜಪ್ಪನವರು ತಮ್ಮ ಸರಳ ಸಜ್ಜನಿಕೆಯ ಜೊತೆಗೆ ಎಲ್ಲಾ ವಿಷಯಗಳಲ್ಲೂ ಅತ್ಯಂತ ಶಿಸ್ತಿನ ನಾಯಕರಾಗಿದ್ದರು. ಓದು ಮತ್ತು ಕಲೆಯ ಕಡೆಗೆ ಅಗಾಧವಾದ ಒಲವಿತ್ತು. ಇರಲಿ, ಬಾಳಪ್ಪ ಹುಕ್ಕೇರಿಯವರಂಥ ದೊಡ್ಡ ಕಲಾವಿದರುನನಗೆ ಪರಿಚಯವಾಗಿದ್ದು ಬೆಂಗಳೂರಿನ ಅಣ್ಣಮ್ಮ ದೇವಸ್ಥಾನ ರಸ್ತೆಯ ರಾಯಲ್ ಲಾಡ್ಜ್  ನಲ್ಲಿ. ಅಲ್ಲಿ ಅವರಿಗೆ ಖಾಯಂ ಆದ ಕೊಠಡಿ ಕಾದಿರಿಸಿಕೊಂಡಿದ್ದರು. ಅದೇ ಲಾಡ್ಜ್ನಲ್ಲಿ ಚಲನಚಿತ್ರ ನಿರ್ದೇಶಕ ಕೆ.ಎಂ.ಶಂಕರಪ್ಪ ಅವರು  ಮಾಡಿ ಮಡಿದವರು’ ಎಂಬ ಬಸವರಾಜ ಕಟ್ಟೀಮನಿಯವರ ಕಾದಂಬರಿಯನ್ನು ಚಲನಚಿತ್ರಕ್ಕಾಗಿ ನಿರ್ದೇಶಿಸುವಾಗ ಒಂದು ಕೊಠಡಿ ಪಡೆದಿದ್ದರು ಅದರ ಸ್ಕ್ರಿಪ್ಟ್ ಸಿದ್ಧ ಪಡಿಸಲು.

ಆ ಸಮಯದಲ್ಲಿ ಅಲ್ಲಿಗೆ ಅದರ ಛಾಯಾಗ್ರಾಹಕ ಷರೀಫ್, ಸಂಕಲನಕಾರ ಉಮೇಶ್ ಕುಲಕರ್ಣಿ, ಕಥೆಗಾರ ಸೂ.ರಮಾಕಾಂತ ಮುಂತಾದವರೆಲ್ಲ ಸೇರುತ್ತಿದ್ದರು. ಆಗ ನನಗೆ ಅಲ್ಲಿ ಅವರೊಂದಿಗೆ ಸೇರುವ ಅವಕಾಶ ದೊರಕಿತ್ತು. ಆಗ ತಾನೆ ನಾನು ಕೆ.ಎಂ.ಶಂಕರಪ್ಪ ಅವರ ಬಹುಮುಖ್ಯ ಕಥೆಗಾರ ಕೆ.ಸದಾಶಿವ ಅವರ ‘ ನಲ್ಲಿಯಲ್ಲಿ ನೀರು ಬಂತು ‘ಕಥೆಯನ್ನು ಆಧರಿಸಿದ  ‘ವಾಟರ್ ಇನ್ ದಿ ಟ್ಯಾಪ್’ ಎಂಬಹೆಸರಿನ ಚಿತ್ರವನ್ನು ತಮ್ಮ ಪೂನಾ ಚಲನಚಿತ್ರ ಅದ್ಯಯನದ ಭಾಗವಾಗಿ ನಿರ್ದೇಶಿಸಿದ್ದರು. ಅದರಲ್ಲಿ ರೆಹನಾ ಸುಲ್ತಾನ್ ನಾಯಕಿಯಾಗಿ ನಟಿಸಿದ್ದರು. ಆಕೆಯೂ ಶಂಕರಪ್ಪ ಅವರ ಸಹಪಾಠಿ. ಅತ್ಯುತ್ತಮ ಚಿತ್ರ. ಆಗ ನಾನು ಪೂನಾ ಫಿಲ್ಮ್ ಇನ್ಸ್ಟಿಟ್ಯೂಟ್ ಗೆ ಹೋಗುವ ಉತ್ಸಾಹದಲ್ಲಿದ್ದೆ. ಇದರಿಂದ ಜಗತ್ತಿನ ಒಂದಷ್ಟು ಅತ್ಯುತ್ತಮ ಚಿತ್ರಗಳನ್ನು ನೋಡಲು ಸಾಧ್ಯವಾಯಿತು.

ಆ ಕಾಲಘಟ್ಟದಲ್ಲಿ ಯೇ ಬಾಳಪ್ಪ ಹುಕ್ಕೇರಿ ಯವರು ಇದ್ದ ಕೊಠಡಿಯು ಶಂಕರಪ್ಪ ಅವರು ಇದ್ದ ಕೊಠಡಿಯ ಪಕ್ಕದಲ್ಲಿಯೇ ಇದ್ದುದರಿಂದ ಪರಿಚಯವಾಯಿತು. ಹುಕ್ಕೇರಿಯವರ ಹಿನ್ನೆಲೆ ನನಗೆ ಗೊತ್ತಿದ್ದರಿಂದ ಪರಿಚಯ ಮಾಡಿಕೊಂಡೆ.ಅವರಿದ್ದ ಕೊಠಡಿ ನನಗೆ ಆಪ್ತವಾಗತೊಡಗಿತು. ಇದರಿಂದ ಅವರ ಶ್ರೀಮಂತ ಕಂಠದ ದಿಂದ ಒಂದಷ್ಟು ಅಪೂರ್ವ ಹಾಡುಗಳನ್ನು ಮತ್ತೆ ಮತ್ತೆ ಆಲಿಸುವ ಸದವಕಾಶ ದೊರಕಿತು.ಜೊತೆಗೆ ಬೆಂಗಳೂರಿನಲ್ಲಿ ಕಾರ್ಯಕ್ರಮಗಳು ಇದ್ದಾಗ ಭಾಗವಹಿಸುತ್ತಿದ್ದೆ. 

ಆ ಕಾಲಮಾನದಲ್ಲಿ ಸಂಗೀತ, ಚಿತ್ರಕಲೆ ಮತ್ತು ಸಾಹಿತ್ಯದ ನಡುವೆ ಅನನ್ಯ ಸಂಬಂಧವನ್ನು ಶ್ರೀಮಂತಗೊಳಿಸಲು ‘ನಾದಲೀಲೆ’ ಎಂಬ ಒಂದು ವೇದಿಕೆಯನ್ನು ರೂಪಿಸೋಣ ಎಂದು ಕಿ.ರಂ ನಾಗರಾಜ ಅವರ ಬಳಿ ಚರ್ಚಿಸಿದೆ. ಅವರು ಬೆಂಬಲ ಸೂಚಿಸಿದರು. ಅದರ ಉದ್ಘಾಟನೆಗೆ ಸಿದ್ಧತೆ ನಡೆಸಿದೆ. ಬೆಂಗಳೂರಿನ ಯವನಿಕಾ ಸಭಾಂಗಣದಲ್ಲಿ ಅದು ನಡೆಯುವಂತೆ ಬಾಳಪ್ಪ ಹುಕ್ಕೇರಿಯವರನ್ನು ಆಹ್ವಾನಿಸಿದೆ. ಅವರು ಸಂತೋಷದಿಂದ ಒಪ್ಪಿಕೊಂಡರು. ಅಂದು ಉದ್ಘಾಟನೆಯ ಸಮಯದಲ್ಲಿ ಕುಮಾರಿ ವೈಶಾಲಿ ಶ್ರೀನಿವಾಸ್ ಮತ್ತು ಆನಂದ ಜೈನ್ ಎಂಬಯುವ ಕಲಾವಿದರ ಹಿಂದೂಸ್ತಾನಿ ಸಂಗೀತವನ್ನು ಏರ್ಪಡಿಸಿದ್ದೆ. ಆ ಕಾರ್ಯಕ್ರಮ ಸಂಜೆ ಆರು ಘಂಟೆಗೆ ಇತ್ತು.

ಬಾಳಪ್ಪ ಹುಕ್ಕೇರಿಯವರ ದೂರವಾಣಿ ಕರೆ ಬಂತು. ನಾನು ತಕ್ಷಣ ಧಾರವಾಡಕ್ಕೆ ಹೊರಡಬೇಕಾಗಿದೆ ಎಂದು. ಯಾಕೆಂದರೆ ಪ್ರಸಿದ್ಧ ಹಿಂದೂಸ್ತಾನಿ ಗಾಯಕ ಪಂಡಿತ್ ಬಸವರಾಜ ರಾಜಗುರು ಅವರು ನಿಧನ ಹೊಂದಿದ್ದರು. ಅವರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಬೇಕೆಂದು. ಕೊನೆಗೆ ಆ ನಾದಲೀಲೆ ಕಾರ್ಯಕ್ರಮವು ಪಂಡಿತ್ ರಾಜಗುರು ಅವರ ಗೌರವದ ಶ್ರದ್ಧಾಂಜಲಿ ಕಾರ್ಯಕ್ರಮವಾಯಿತು. ಕೆ.ಎಚ್.ಶ್ರೀನಿವಾಸ್ ಮುಂತಾದವರು ಪಂಡಿತ್  ರಾಜಗುರು ಮತ್ತು ಹುಕ್ಕೇರಿಯವರ ಗಾಯನದ ಹೆಚ್ಚು ಗಾರಿಕೆ ಕುರಿತು ಮಾತಾಡಿದರು. ಆ ಯುವ ಸಂಗೀತ ಕಲಾವಿದರು ಕೆಲವು ಭಜನ್ ಗಳನ್ನು ಹಾಡಿದರು. ಇದಾದನಂತರ ಬಾಳಪ್ಪ ಹುಕ್ಕೇರಿಯವರು ಭೇಟಿಯಾಗುತ್ತಿದ್ದರು. ಆದರೆ ‘ನಾದಲೀಲೆ’ಗೆ ಕಾಲ ಕೂಡಿಬರಲಿಲ್ಲ.

ಇದೊಂದು ನನಗೆ ವಿಷಾದದ ನೆನಪಾಗಿ ಉಳಿಯತೊಡಗಿತು. ಈಗಲೂ ‘ಏನಾದರಾಗು ಮೊದಲು ಮಾನವನಾಗು’ ಗೀತೆಯನ್ನು ಕೇಳುತ್ತಿದ್ದರೆ ಹುಕ್ಕೇರಿಯವರು ಮನಸ್ಸಿನ ತುಂಬಾ ವ್ಯಾಪಿಸಿಕೊಳ್ಳುವರು. ಹಾಗೆಯೇ ಈ ಕಲಾವಿದ ಮಾನವೀಯತೆಯ ರಾಯಭಾರಿ ರೀತಿಯಲ್ಲಿ ಕರ್ನಾಟಕದ ಉದ್ದಗಲಕ್ಕೂ ಹಾಡುತ್ತ ಕೇಳುಗರ ಹೃದಯ ಮತ್ತು ಮನಸ್ಸನ್ನು ಮೃದುತ್ವದ ಕಡೆಗೆ ಕೊಂಡೊಯ್ದಿದ್ದರು. ಒಮ್ಮೆ ಕವಿ ಸಿದ್ದಯ್ಯ ಪುರಾಣಿಕರು ಶೂದ್ರದ ‘ಧರ್ಮ ಸಂವಾದ’ ಕಾರ್ಯಕ್ರಮದಲ್ಲಿ  ‘ಮೊದಲು ಮಾನವನಾಗು’ ಹಾಡನ್ನು  ಕೇಂದ್ರ ವಾಗಿಟ್ಟುಕೊಂಡು ಹುಕ್ಕೇರಿಯವರನ್ನು ಕೊಂಡಾಡಿದ್ದರು.

ಅಂದು ಅಧ್ಯಕ್ಷತೆವಹಿಸಿದ್ದ ನ್ಯಾಯಮೂರ್ತಿಎನ್.ಡಿ.ವೆಂಕಟೇಶ್ ಅವರೂ ಹುಕ್ಕೇರಿಯವರು ನಮ್ಮ ಜನಮಾನಸದ ಸಾಂಸ್ಕೃತಿಕ ರಾಯಭಾರಿಗಳು ಎಂದು ಜನನ ನುಡಿದಿದ್ದರು. ಆ ಕಾಲಘಟ್ಟದಲ್ಲಿ ಪಿ.ಕಾಳಿಂಗರಾಯರು, ಮೈಸೂರು ಅನಂತಸ್ವಾಮಿ ಹಾಗೂ ಹುಕ್ಕೇರಿಯವರು ಎಷ್ಟು ವ್ಯಾಪಕವಾಗಿ ಕೇಳುಗರ ಅಂತರಾಳದಲ್ಲಿ ತುಂಬಿಕೊಂಡಿದ್ದರು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

March 5, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. G.N.Ranganatha Rao

    Dear Mr.Shoodra Srinivas.,
    Your memoirs on Balappa Hukkeri is excellant. This instinctively took me to my Days in PRAJAVANI. Somewhere during seventees Mr.Balappa Hukkeri visited PRAJAVANI.iI was about 11-30 A M.. The then Editor TSR asked Balappa to sing.Immediately Balappa obliged. we all rushed to TSRs chamber.If i remember correct Balappa started singing with Anandakand -NAANU Santiige horartiNee…..’.He rendered some vachanas.It was a musical feast for us.
    I hope your reminiscences of this kind will certainly make us to await for your next instalments.
    With R egards
    G N Ranganatha Rao
    .

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: