ಭವ್ಯ ಕಬ್ಬಳಿ
ತುಂಬು ಸಂತೆಯೊಳಗೆ
ಎಲ್ಲ ದಾರಿಗಳೂ
ಬೆನ್ನು ತೋರಿಸಿ ನಡೆಯುವಾಗ
ಪಾದಗಳ ಸುತ್ತ ಮೂಡಿದ
ವೃತ್ತದೊಳಗೆ ನಿಂತಲ್ಲೆ
ಕೊಂಚ ಹೊತ್ತು ಕುಳಿತುಬಿಡಿ
ತುಸು ಹೊತ್ತು ಧ್ಯಾನಿಸಿ
ಒಂದೊಂದು ದಿಕ್ಕಿನ ಕಡೆಗೂ
ಮುಖಮಾಡಿ
ವೃತ್ತದ ಗೆರೆಗಳ ಮೇಲೆ
ಹೂವುಗಳ ಜೋಡಿಸಿ
ಮನದೊಳಗೊಂದು ವೃತ್ತ ಮೂಡಿ
ನಿಟ್ಟುಸಿರೊಂದು ಮೊಗದಲ್ಲಿ
ಮಂದಹಾಸ ಮೂಡಿಸುತ್ತದೆ

ಇಷ್ಟೆ! ಸಂತೆಯೊಳಗಿನ
ಸಂತಸಕ್ಕೆ ದಾರಿ
ಈಗ…
ಎದೆಯೊಳಗೆ ಘಮಲನಿರಿಸಿ
ಹೂವನಿಟ್ಟ ವೃತ್ತವನ್ನು ದಾಟಿ
ಮುಂದೆ ನಡೆದುಬಿಡಿ
ಆದರೆ…
ಬೆನ್ನು ತೋರಿಸಿ ನಡೆಯುವ
ದಾರಿಯಾಗಲೀ
ಹೂವ ಜೋಡಿಸುವ
ಕಲೆಯಾಗಲೀ
ಎಲ್ಲರಿಗೂ ಒಲಿಯುವುದಿಲ್ಲ!






0 Comments