ಭಗತ್ ಸಿಂಗ್, ಸುಖದೇವ್, ರಾಜಗುರು ಇಲ್ಲವಾದ ದಿನ ಇಂದು. ನೇಣಿಗೆ ಧಿಟ್ಟತನದಿಂದ ಕೊರಳೊಡ್ಡಿದ ಈ ಮೂವರೂ ಕವಿ ಸು ರಂ ಎಕ್ಕುಂಡಿಯವರನ್ನು ಇನ್ನಿಲ್ಲದಂತೆ ಕಲಕಿದ್ದಾರೆ. ಈ ಮೂವರೂ ಹಗ್ಗದ ಕೊನೆಯಲ್ಲಿ ತೂಗುತ್ತಿದ್ದುದು ಮೂರು ಕೊಡ ನೀರಿನಂತೆ ಎಕ್ಕುಂಡಿ ಅವರಿಗೆ ಕಂಡಿದೆ- ಬದುಕು ನೀಡುವ ನೇರ ಕೊಡಗಳು.
ಮೂರು ಕೊಡ ನೀರು

ಸು ರಂ ಎಕ್ಕುಂಡಿ
”ಏಳಲಾರೆನು ಮಗೂ ಮರವು ಚಿಗುರುವ, ವ
ರೆಗೆ, ಮತ್ತೊಮ್ಮೆ ಎಲೆ ಹೂವು ಬರುವವರೆಗೆ,
ಮರಳಿಬಾರದ ಕಣಿವೆಯಿಂದ, ಎತ್ತಿದ ಮೂರು
ಕೊಡ ನೀರು, ತಾಣದಲ್ಲಿ ಸುರಿವವರೆಗೆ
ಬತ್ತಿ ಹೋಗಿವೆ ಮಗೂ, ಬಾಳಿಸಿದ ಜೀವರಸ
ವಾಹಿನಿಗಳೆಲ್ಲ: ಕೊರಡಾದ ಮರವ.
ಕಾಯುತಿವೆ ಕಬ್ಬಿಣದ ಬೇಲಿ, ಹಾಡಿನ ಹೂವು
ಬಾಡಿ ಹೋಗಿವೆ. ಮರೆಸಿ ಹಲವು ಸ್ವರವ
ಹಾರಿ ಹೋಗಿವೆ ಹಕ್ಕಿ ದೂರ ದೂರದಿ. ಚೈ
ತ್ರ ಕಣ್ಮರೆಸಿ ಚಿಲಿಪಿಲಿಯ ಕಾಡು ಸೇರಿ.
ತಂಬೆಲರಿಗೂ ಇಲ್ಲಿ ಉಸಿರುಗಟ್ಟಿದೆ. ಮಗೂ
ಕಂಬನಿಯ ಪರದೇಸಿ ಬೆಟ್ಟವೇರಿ.

ಏಳಲಾರೆನು ಮಗೂ, ಜ್ವಾಲೆಗಳ ಹೂವರಳಿ
ಮತ್ತೊಮ್ಮೆ ಮುಡಿವನಕ ನನ್ನ ಹೆರಳು.
ಟೊಂಗೆ ಟೊಂಗೆಯ ತಬ್ಬಿ, ನೆಲದಲ್ಲಿ ನಲ
ವಿಂದ. ಸುರಿವನಕ ಮತ್ತೆ ಅಮೃತದ ನೆರಳು.
ಈ ಮರದ ನೆರಳಲ್ಲಿ ಬಂಡೆ ಬೆಟ್ಟವ ಸೀಳಿ,
ಸಿಂಹಗಳ ಗುಹೆಯಿಂದ ಇಳಿದುಬಂದು,
ಬಿತ್ತಿ ಬೆಳೆದರು ಹೃದಯಗಳ ಹೊ
ಲವನ್ನು, ಹರಿವ ಹೊಳೆಗಳ ಇಲ್ಲಿಗಳೆದು ತಂದು.
ಸಿದ್ದರಿಲ್ಲ ಕುಳಿತು ಎದೆ ಎದೆಯ ಕೆಂಡವನು,
ಹೊತ್ತಿಸುತ ಬೆಳಗಿದವರು ವಿಶ್ವಜ್ಯೋತಿ.
ಬುದ್ಧರಿಲ್ಲೇ ಕುಳಿತು ತಾರೆಗಳ ದಾರಿಯಲಿ
ಕರೆದೊಯ್ದು ನೀಡಿದರು ಕರುಣೆ ಪ್ರೀತಿ.

ಹಸಿದವರಿಲ್ಲಿಯೆ ಇತ್ತು ಅನ್ನದ ತಟ್ಟೆ.
ನೀರಡಿಸಿದವರಿಗಮೃತದ ಕೊಳವು.
ನೆನಪುಗಳ ನೇಗಿಲವನತ್ತು, ಮುತ್ತಿನ
ಬೀಜ ಬಿತ್ತುವರಿಗಾಗಿ ಕಾದಿಹುದು ಹೊಲವು
ನಿಜದ ಮಡಕೆಯ ಹೊತ್ತು ಸುಖದ ಕೈ ಬಿಟ್ಟವರು.
ಹರಿದವೇಗದ ಹೊಳೆಗಳಲ್ಲಿ ಇಳಿದು.
ದಣಿದವರ ಕದ ತಟ್ಟಿ ಅಪ್ಪಿಕೊಂಡು ಮ
ಗೂ, ಕತ್ತಲಿನ ಕೇರಿಗಳ ಕರೆಯ ತಿಳಿದು.
ಎಂದು ಬರುವರು? ಇಲ್ಲಿಗೆಂದು ಸುರಿವರು
ಮೂರುಕೊಡ ನೀರು? ಕಾದಿರುವೆ ಅವರಿಗೆಂದು.”
ಬಾಯಿಬಿಟ್ಟವು ಬೇರು. ಹೊಗೆಯಾಡಿದವು ಹೊ
ತ್ತಿ ಉರಿಯ ಬೆಟ್ಟವು ತಾಯ ಕರೆಗೆ ನೊಂದು.

ಒಂದು ಮರುಕದ ದನಿಗೆ ಸಿಂಹ ಗುಹೆಯಿಂದಿ
ಳಿದು. ಮೂರು ಕೊಡ ಹೊತ್ತವರು ಕಣಿವೆಯಿಂದ
ಮರಕೆ ಸುರಿಯಲು. ಚೈತ್ರ ಚೆಲ್ಲುವರಿಯಿತು
ಗೆಲ್ಲು ಗೆಲ್ಲಿನಲಿ ಎಲೆಹೂವು ಚೆಲುವಿನಿಂದ.
ಕೊರಳ ಕುಣಿಕೆಗಳಿಂದ ಮೂರು ಕೊಡ ತೂ
ಗಿದವು: ದೀಪಗಳು ಆರಿದವು ಮೌನದಲ್ಲಿ
ಹೂಬಿಸಿಲಹುಡಿ ಚೆಲ್ಲಿ ಹರಡಿತು ಉಷಃಕಾಲ
ಬಣ್ಣಗಳ ಗರಿಬಿಚ್ಚಿ ಬಾನಿನಲ್ಲಿ.
ಸುಬ್ಬಣ್ಣ ರಂಗನಾಥ ಎಕ್ಕುಂಡಿ
ಸಮಗ್ರ ಕಾವ್ಯ “ಬೆಳ್ಳಕ್ಕಿ ಹಿಂಡು”





Bhoomige jeevasatvadante edde moovaru mahaneeyara badukkannu mooru tumbida kodagalige holisiddu owchitya poornavaadaddu .avara bowtika shareeragala alivu bhoomige korete alla .avara bowdhikateya Maru huttu chaitrada hosa chigurinante matte matte baralembha aashayave ananyavaadaddu .pratibhaavantha kavi ekkundige namanana .