ಬಟ್ಟಬಯಲು
– ವಿದ್ಯಾ ಕೆ ಆರ್
ಯುಗಗಳಿಂದ ಜಕ್ಕಣನ
ಶಿಲ್ಪದ ಗರ್ಭದ ಒಳಗೆ ಹೂತ ಕಪ್ಪೆ,
ಬೊಗಸೆ ನೀರಲ್ಲೇ ಬದುಕಿತ್ತು..
ಉಳಿಪೆಟ್ಟು ಗರ್ಭ ಒಡೆಯದ ತನಕ.
ಅಲೆಗಳೆದ್ದು, ಮೊರೆದು,
ಎಲ್ಲವ ಸೆಳೆದು ಒಳಗೆಳೆದರೂ,
ಕಡಲಾಮೆಯ ಮರಿಯೊಂದು
ಮರಳಿಗಂಟಿ ಕೂತಿತ್ತು ಕಡಲ ಸೇರೆನೆಂದು..
ಬೆಳಕಿನ ಹೂವು ಯುಗಗಳಿಂದ
ಗಿರಕಿ ಹೊಡೆಯುತ್ತಿದೆ, ಇಲ್ಲೇ..
ದೂರ ಇರುವ ನಭಕ್ಕೆ ನೆಟ್ಟಿದೆ ದೃಷ್ಟಿ
ನಳಿಕೆಯ ಖಾಲಿತನದ ಅರಿವಿರದೆ..
ಅದು ಹೀಗೇ! ದೂರದ್ದು ಗೋಚರ
ಒಳಗು ಬಗೆದಷ್ಟೂ ಬಗೆ ಹರಿಯದ ಆಳ
ಅವೆಷ್ಟೋ ಯುಗಗಳ ಬೆಳಕು ಹರಿದು
ಕ್ರಿಸ್ತನಿಗೆ ಬಾಗಿದ ತಲೆ, ಮಂಡಿ
ಕೃಷ್ಣನಿಗೆ ತೆರೆದ ಬರಿತೋಳುಗಳು
ಬುದ್ದನ ತೊರೆ ತಡಿಯ ಹೂವುಗಳು
ಇನ್ನೂ ಹಾಗೆಯೇ ಇವೆ!!
ಅವರ ಬೆರಳಿಗಂಟಿದ ರಕ್ತದಂತೆ..
ತೊಳೆದು ಕಳೆದುಕೊಂಡರೆ.
ಮರಳು ಮಾಯವಾಗಿ,
ಬಟ್ಟಬಯಲು ಕಾಣಬಹುದೇನೋ!!
ಅಲ್ಲಿಯತನಕ..ಇದೊಂದು
ಕೆಸರಿಗಂಟಿದ ಕಮಲ..
ಕಮಲದೊಳಗಿನ ಮಣಿಯಲ್ಲ.






0 Comments