ಯಮುನಾಗಾಂವ್ಕರ್
ಶಾಯಿ ಬೇಕಿಲ್ಲ ಇವರ ಪೆನ್ನಿಗೆ
ಸೂರ್ಯತಾಪಕ್ಕೆ ಕರಕಲಾದ ಆ ಮುಖಗಳು
ಚಳಿಗೆ ಸುಕ್ಕುಗಟ್ಟಿದ ಚರ್ಮದೊಗಲು
ಬಿರುಕು ಬಿಟ್ಟ ಪಾದದಿಂದೊಸರಿದ ರಕ್ತ
ಆಗಲೇ ಬರೆದಿವೆ
ಹಾದಿಯುದ್ದಕೂ ಭೂಮಿಗೀತವ
ಕಣ್ಣು ದಣಿಯುತ್ತಿದೆ ನನಗೆ
ಆ ಸಾಲಿನ ತುದಿಬುಡ ನೋಡಿ
ಅವರ ಪಾದಗಳ ದೃಢ ಚಲನೆ ಮಾತ್ರ
ಹೆದ್ದಾರಿಯನ್ನು ಗದ್ದೆಯ ಹಾಳಿಯಂತೆ
ದಾಟಿಸಿ ಬಿಟ್ಟಿವೆ ತಡೆಗಳ ಮೀರಿ
ಅವರ ಬೆವರ ವಾಸನೆಯಲ್ಲೂ
ಅಕ್ಕಿ ಬೆಂದ ಘಮಲು ಆಘ್ರಾಣಿಸಿದೆ
ಅನ್ನದ ಬದಲು ದುಡ್ಡು ತಿಂದವರ
ಬೆಳೆಯ ಬದಲು ಭೂಮಿ ನುಂಗಿದವರ
ಬೆನ್ನಟ್ಟಿ ಬಂದು ಠಿಕಾಣಿ ಹೂಡಿದ್ದಾರೆ “ಅಡಗುದಾಣ”ದೆದುರೇ…
ಆಳುವವರ ಕೊಳೆ ತೋರಿಸಿ
ಕಳೆ ಕೀಳಲು ಬಂದಿದ್ದಾರೆ
ಕತ್ತಿ ಸುತ್ತಿಗೆಯ ಸಂಕೇತ ಹೊತ್ತು
“ಶೇತ್ ಕರ್ಯಾಂಚಾ ರಾಜ್ಯಾಸಾಟಿ”
ಘೋಷ ಆಕ್ರೋಶದಲ್ಲಿ
ಮರೆತಿದ್ದಾರೆ ತಮ್ಮೊಡಲ ಹಸಿವ…
ಗುರುತು ಹಿಡಿಯದ ದೊರೆಯೆದುರು
ಆಸರಿಕೆ ನೀಡದ ಅಧಿಕಾರದೆದುರು
ನುಗ್ಗಿದರು ಮುಗಿಲಬ್ಬರದ ನೆರೆಹಾವಳಿಯಂತೆ
ಅದೆಷ್ಟೋ ಹೂಗಳಿಗೆ ಮೊದಲ ಬೆಳಗು ತೋರಿಸಿದರು
ಬೊಕ್ಕೆಗಳೆದ್ದು ರಕ್ತ ಹರಿಸಿದಲ್ಲೆಲ್ಲ
ಭತ್ತದ ಸಸಿ ಮೊಳೆತೀತು
ನಮ್ಮೊಳಗೊಂದು ಛಾಪು ಒತ್ತಿತು ಬತ್ತದಂತೆ






ಅರ್ಥಪೂರ್ಣವಾಗಿದೆ.