ಬೇಲೂರು ರಘುನಂದನ್
ಸಂಬಂಧ ಬೆಂದು ಬೆಂದು ಮಾಗಿ ನುಣ್ಣಗಾಗಿ
ಶಕ್ತಿ ಕೊಟ್ಟು ಮತ್ತೆ ಹುಟ್ಟುವ ಗೊಬ್ಬರದ ಕಿಟ್ಟ.
ಅದೇ ಬೆಂದ ಕಾವಿನ ಪ್ರೀತಿ ಫಲವನ್ನು ಉಣ್ಣದಿರೆ,
ತಣ್ಣಿಗೆಯಾ ಗಂಜಿ ಹೊಟ್ಟೆ ಸೇರದೆ ನೊರೆಯ ಹಳಸು.
ಬದುಕುವುದಕ್ಕೆ ಅನ್ನ ಗಾಳಿ ಬಟ್ಟೆಯಷ್ಟೇ ಸಂಬಂಧದ
ಒಳಗೆ ಹೊರಗೆ ನೆಮ್ಮದಿಯೂ ಬಲು ಮುಖ್ಯ ಅಲ್ಲವೇ
ಶ್ವೇತಪ್ರಿಯ ಗುರುವೆ ?
ಹೊಸತು ಎಂದು ಏನ ಬರೆದರೂ,
ಹೊಸತರಂತೆ ಕಾಣುತ್ತಿಲ್ಲ.
ಅವರಿವರು ಕುಣಿದ ನೆಲದ ಮೇಲೆ,
ಮತ್ತೆ ಕುಣಿಯಲೂ ಮನಸಿಲ್ಲ.
ರಸ ಕಸ ಹೊಸತೆಂದು ರಚನೆಗೆ
ಪದವಿತ್ತೊಡೆ,ಅಳುಕು ತಪ್ಪುತ್ತಿಲ್ಲ.
ಬರೆದುದನೆ ಬರೆವುದ ಬಿಡಿಸಿ,
ಹೊಸದಾರಿಗೆ ಹೆಸರಿಟ್ಟು ಕೆಸರಲ್ಲಿ
ಅರಳುವ ಕಮಲದ ನಿತ್ಯ ಕಿಶೋರತೆಯ
ಹೇಳಿಕೊಡಯ್ಯ ಶ್ವೇತಪ್ರಿಯ ಗುರುವೆ.
ದೊಸೇಮನೆ ನಾಟಿಕೋಳಿ ಮನೆ ಮುದ್ದೇಮನೆ ರೊಟ್ಟಿಮನೆ 
ಹಳ್ಳಿತಿಂಡಿ ಹಟ್ಟಿಕಾಪಿ ಮಜ್ಜಿಗೆಮಹಲ್ ಮಲ್ಲಿಗೆ ಇಡ್ಲಿಅಂಗಡಿ
ಆಲೇಮನೆ ಪೆಟ್ಟಿಗೆಅಂಗಡಿ ಬೋಂಡಾಬಜ್ಜಿ ಹೋಳಿಗೆಬಜಾರು
ಮನೆ ಊಟ ಅಂತ ತಿನಿಸೋ ಮನೆಯಡಿಗೆಯ ಶಿಕಾರಿ ನಗರದಲ್ಲಿ.
ಕೇಜಿ ಗ್ರಾಮುಗಟ್ಟಲೆ ಅನ್ನ, ಲೀಟರುಗಟ್ಟಲೆ ಸಾರು ಸಿಗುವಾಗ,
ಒಲೆ ಹತ್ತಿಸಿ ಮಾಡುಣ್ಣುವ ಕೈಯ ಮನಸು ಹಣದ ಕಿಸೆಯಲ್ಲಿ.
ಅಜ್ಜಿ ಅಮ್ಮಂದಿರ ತಮ್ಮೂರಲ್ಲೇ ಬಿಟ್ಟು ಅವರ ಪಾಕದ ರುಚಿಯ
ಪಟ್ಟಣ ಕಟ್ಟಿ ಎಸೆದು ಹಸಿವೆಗೆ ತಿನ್ನದೇ ಶೋಕಿಗೆ ದೆವ್ವದಂತೆ ತಿನ್ನುವ
ಹೊಟ್ಟೆ ಟೊಣಪರಿಗೆ ಪ್ರಾಣಕ್ಕೆ ಹಿಡಿಯನ್ನ ಸಾಕೆಂದು ಹೇಳಬೇಕು.
ಮನೆಯ ರುಚಿಯೆಲ್ಲಾ ಮಳಿಗೆಗೆ ಬಂದರೆ ಮುಂದೊಂದು ದಿನ
ಮನೆ,ಅಡುಗೆಮನೆಯ ನುಂಗಿ ಗುರುತಿಗೂ ಸಿಗದಂತೆ ಗುಳುಂ
ಮಾಡಿಬಿಡುತ್ತದೆ ಅಲ್ಲವೇ ಶ್ವೇತಪ್ರಿಯ ಗುರುವೆ






Eradaneyadu eshtu sooktavaagide…!