ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೇಲಿಯ ದಿಕ್ಕು ಬದಲಾಗುತ್ತದೆ..

ನಿರಂತರ..

ದೀಪ್ತಿ ಭದ್ರಾವತಿ

 

ಪುಟ್ಟ ಮಗಳು ಹುಟ್ಟುತ್ತಾಳೆ
ಜೊತೆಗೊಂದು ಭಯವೂ..

ಆಕೆ ಬೊಚ್ಚು ಬಾಯಿ
ಅಗಲಿಸಿ ನಗುತ್ತಾಳೆ..
ಅದು ಅಲ್ಲೇ ಬಳಿ ಇದ್ದು
ತೊಟ್ಟಿಲ ಜೀಕುತ್ತದೆ..

ಆಕೆ ಅಂಬೆಗಾಲಿಟ್ಟು ಆಚೀಚೆ
ಗೆಜ್ಜೆ ಸದ್ದುಗಳ ಹನಿಗಿಸುತ್ತ
ಮನೆಯ ತುಂಬೆಲ್ಲ
ರಂಗೋಲಿ ಎಳೆಗಳಿಗೆ ಬಣ್ಣ ತುಂಬುತ್ತಾಳೆ
ಅದು ಸೀಮೆ ಸುಣ್ಣದಲಿ
ಗಡಿಗಳ ಗೀಚುತ್ತದೆ..

ಆಕೆ ಚಂದ್ರನಂತೆ
ಬೆಳೆಯತೊಡಗುತ್ತಾಳೆ..
ಅದು ಕಾಪಾಡುವ ನೆಪದಲ್ಲಿ
ರಾವಣನಂತೆ
ದಶದಿಕ್ಕಿಗೂ ಕತ್ತು ತಿರುಗಿಸುತ್ತ
ನಿಲ್ಲುತ್ತದೆ

ಆಕೆ ನಕ್ಷತ್ರದಂತೆ
ಹೊಳೆಯತೊಡಗುತ್ತಾಳೆ..
ಮನೆಗೆ ಬೇಗ ಬಾ, ಅಲ್ಲಿ ಇಲ್ಲಿ
ನಿಲ್ಲಬೇಡ..ಅಪರಿಚಿತರ ಸಂಗಸಲ್ಲದು
ಹೆಚ್ಚು ನಗು ಒಳ್ಳೆಯದಲ್ಲ..
ತೆಳು ಲಂಗ
ಸೌಖ್ಯವಲ್ಲ..

ರಣ ಹದ್ದಿನಂತೆ ಅದು
ಅವಳ ಸುತ್ತಲೇ ಸುತ್ತುತ್ತ
ಕಾವಲು ಕಾಯುವ ಸೋಗು ಹಾಕುತ್ತದೆ..

ಅವಳ ಜಡೆ ನೀಳವಾದಂತೆಲ್ಲ..
ನಿಟ್ಟುಸಿರುಗಳು ದೀರ್ಫವಾಗುತ್ತದೆ..
ಹಗಲು ರಾತ್ರಿಯಲ್ಲಿ
ಬೆವರಿಕೆಯದ್ದೇ ನೆರಳು.

ಅದೊಂದು ಸುಂದರ ಗಳಿಗೆಯಲಿ ಅವಳ
ಬೇಲಿಯ ದಿಕ್ಕು ಬದಲಾಗುತ್ತದೆ..
ನಾನು ದಿಗಿಲ ಬದಿಗಿಟ್ಟು
ನಿರಾಳ ಉಸಿರಾಡುತ್ತೇನೆ..
ಮಗದೊಂದು ದಿನ ಆಕೆ
ಆಗಷ್ಟೇ ಹುಟ್ಟಿದ ಮುದ್ದು ಮಗಳ
ಬೆರಳು ಹಿಡಿದು ಹೇಳುತ್ತಾಳೆ..
ಭಯವಾಗುತ್ತದೆಯಮ್ಮ..

ಅದು ದ್ವಿಗುಣಗೊಳ್ಳುತ್ತ
ನಮ್ಮಿಬ್ಬರನ್ನು ಮುತ್ತಿಕೊಳ್ಳುತ್ತದೆ..

 

‍ಲೇಖಕರು admin

30 June, 2017

3 Comments

  1. Vijaykumar wadawadagi

    ನಿಜಕ್ಕೂ ನಿರಂತರ ತಾಯಿ ಮಗಳು ಮತ್ತದೆ ಮಗಳುತಾಯಿ ಭಯ

  2. BHUVANESHVARI

    ನೈಜತೆ

  3. Lalitha siddabasavayya

    ಹೌದಮ್ಮ, ತಾಯಿ ಮಗಳ “ಭಯಕೊಂಡಿ” ಮುಂದೊಂದು ದಿನ ಕಳಚಿ ಹೋಗಬಹುದೆಂಬ ಉಮೇದೇ ನಾಶವಾಗುತ್ತಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading