
ಮಲ್ಲಿಕಾರ್ಜುನಗೌಡ ತೂಲಹಳ್ಳಿ
ಎಂದಿನದೋ ಇರಬಹುದು ಈ ದಾರಿ
ಈ ಹೆಜ್ಜೆಗಳಿಗೆ ಹೊಸದು.
ಕವಲಂತೂ ಕಾಣುತ್ತಿಲ್ಲ
ಅಥವಾ
ಕಂಡಷ್ಟರಲ್ಲಿ ಕವಲಿಲ್ಲ.
ಕಣ್ಣು ನಿಧಾನ ನೆಲದ ಮೇಲೆ
ಆ ದಾರಿಯಿಂದ ಹೊರಬಂದ
ಹೆಜ್ಜೆಗಳು
ಅಥವಾ
ದುರ್ಯೋಧನ ವೈಶಂಪಾಯನ ಹೊಕ್ಕ
ಹಾಗಿರಬಹುದೆ?
ನನಗೆ ನನ್ನದೇ
ನಾ ನಡೆಯಲಷ್ಟೇ
ದಾರಿ ಬೇಕು.
ಆಗಲೇ
ಇದು ಯಾರನ್ನೋ ಸೆಳೆದು
ನಿಗೂಢ ಸರೋವರದಲ್ಲಿ
ತನ್ನವನನ್ನಾಗಿಸಿಕೊಂಡಿದ್ದರೆ
ಅಲ್ಲಿಯವರೆಗೆ ನಡೆದದ್ದು
ಆಯಸ್ಸು ಹಾಳುಮಾಡಿಕೊಂಡಂತೆ.
ಬೇಕೆಂಬುದೇ
ಪ್ರಬಲವಾದಾಗ
ಉಳಿದದ್ದಾದರೂ ಏನು?
ಮೊದ ಮೊದಲು
ಸೆಳೆವ
ಅಥವಾ
ಬೇಕೆನಿಸುವುದೆಲ್ಲಾ
ಇಂಥದ್ದೇ
ತರಂಗಗಳ ರವಾನಿಸುವುದೇತಕೆ?
ಸುರಿವ ಎಷ್ಟೋ ಮಳೆ ಹನಿಗಳಲ್ಲಿ
ಒಂದು ನನ್ನ ಅಂಗೈ ಮೇಲೆ!
ಆ ತಂಪು ಮುದ ನೀಡುವಾಗಲೇ
ಮತ್ತೊಂದು
ದಾಳಿ
ಇದ್ದದ್ದೂ ಖಾಲಿ.
ಇಲ್ಲದ್ದರಲ್ಲಿ
ಇರುವುದಾದರೂ ಏನು?





good one..koneya saalugLu kavanada aaLkkiLiyuvanate maduttave.