ಜೀವನ್ ಪ್ರಕಾಶನ, ಕೋಲಾರ ಹಮ್ಮಿಕೊಂಡಿದ್ದ ದಸರಾ ಕವಿತೆ ಸ್ಪರ್ಧೆಯಲ್ಲಿ
ಮೆಚ್ಚುಗೆ ಪಡೆದ ಕವಿತೆ
ಸ್ಮಿತಾ ಅಮೃತ್ ರಾಜ್, ಸಂಪಾಜೆ
ಕಪ್ಪು ಕತ್ತಲು
ಬಣ್ಣ ಬಳಿಯಲಾರದಷ್ಟು
ಇದ್ದಿಲು
ಮುಖ ಊದಿಸಿಕೊಂಡಿದೆ
ಹಗಲು.

ನಿಶಾಂತ ನಿಶೀಥದಲ್ಲಿ
ಪುಟ್ಟ ಪುಟ್ಟ ಮಿಣುಕು ಹುಳುಗಳು
ಚೂರು ಚೂರೇ ಬೆಳಕ ಉಂಡೆಯನ್ನು
ಕಟ್ಟಿಕೊಂಡು ಇರುಳಿಡೀ ಹಾರುತ್ತಾ
ನೇಯುತ್ತಿವೆ ಬೆಳಕಿನ ಕೌದಿ
ನೇಯ್ದಷ್ಟೂ ಹೊತ್ತು ಹೆಚ್ಚುತ್ತಿದೆ
ಕತ್ತಲ ಹಾದಿ.
ಎವೆಯಿಕ್ಕದೆ ನೋಡುತ್ತಾ ಕುಳಿತ
ಕವಿತೆಯ ರೆಪ್ಪೆ ಸೋಲುತ್ತಿದೆ
ಮುಚ್ಚಿಕೊಂಡ ಕಣ್ಣ ಪಾಪೆಯೊಳಗೆ
ಬೆಳಕಿನ ಬೀಜಗಳು ತುಂಬಿಕೊಳ್ಳುತ್ತಿವೆ.
ನೇಯುತ್ತಾ ನೇಯುತ್ತಾ ರೆಕ್ಕೆ
ನೋಯುವಾಗ ಆಕಾಶ ಮುಟ್ಟಿದೆ
ಮಿಣುಕು
ದಳ ದಳಗಳ ಹೂ ಪಕಳೆಯೊಳಗಿಂದ
ಬಿರಿಯುತ್ತಿದೆ ನಸುಕು.
ಮಗ್ಗಲು ಬದಲಾಯಿಸಿ ಕಣ್ಣುಜ್ಜಿಕೊಂಡಿದೆಯಷ್ಟೆ
ಕವಿತೆ
ಚಿಮ್ಮಿ ಹಾರಿದೆ ಬೆಳಕ ಬೀಜ
ಅಳತೆಗೂ ಮೀರಿದ ದೂರಕೆ
ಊರ ಬಯಲಿನ ತುದಿಗೂ
ಬಿಸಿಲ ಕೋಲಿನ ಮೆರವಣಿಗೆ
ಇಡೀ ಇರುಳಿಗೆ ಬೆಳಕಿನ
ಕುಲಾವಿ ತೊಡಿಸಿ ಸರಸರನೆ
ಕೆಳಗಿಳಿದು ಮುಸುಕಿನಲಿ ಕುಳಿತಿದೆ
ಮಿಂಚು ಹುಳು
ಕಿಡಿ ಚೂರನ್ನು ಕಟ್ಟಿಕೊಂಡು ಆರದಂತೆ
ಕಾಯುತ್ತಿದೆ ಕಾವಲು.
ಯಾರದೋ ಶ್ರಮದ ಪಾಲಿಗೆ
ಮತ್ಯಾರೋ ವಾರಸುದಾರರು..!
ಪ್ರಶ್ನಿಸುವ ಧೈರ್ಯ ಸಾಲದೆ
ಚಡಪಡಿಸುವ ಕವಿತೆ ಪೂರ
ಕಂಗಾಲು
ಕತ್ತಲ ತೊಳೆಯುವ ಧ್ಯಾನ
ಬೆಳಕ ತೊಡಿಸುತ್ತಾ ಬೆಳಕೇ
ಆಗಿ ಬಿಡುವ ಕ್ಷಣ
ಎರಡನ್ನೂ ದಕ್ಕಿಸಿಕೊಂಡು ಖಾಲಿಯಾಗುವ
ಸುಖ
ಕವಿತೆಯ ಮೌನದೊಳಗಷ್ಟೇ
ಹುದುಗಿಕೊಂಡ ಸತ್ಯ.





ಕತ್ತಲೆಯಷ್ಟೇ ಗಾಢ ಹಾಗೂ ಬೆಳಕಿನಷ್ಟೇ ಸ್ಪಷ್ಟ ಕವಿತೆ. ಇಷ್ಟವಾಯಿತು.
ಕವಿತೆಗೆ ಹಲವು ಅರ್ಥಗಳನ್ನು ಏಕಕಾಲಕ್ಕೆ ಹೊಳೆಯಿಸಬಲ್ಲ, ಗಂಭೀರ ಕವಿತೆ ಇದು….ಧ್ವನಿ ಸಾಧ್ಯತೆಗಳನ್ನು ಇಮ್ಮಡಿಸಿದ ಕವಿತೆ ಇದು.
ವಂದನೆಗಳು.
symbolic poem…has to analyse..