ದೇವರು ಮತ್ತು ಸೇಂದಿ

ಡಾ ರಾಜೇಗೌಡ ಹೊಸಹಳ್ಳಿ
ನಾನು : ಏನೋ ಗೋಪಾಲ ಮಳೆ ಬಂದು ಬಿಟ್ಟಿದೆಯಲ್ಲೊ!
ಅವನು : ಹೂಂ ಕನಣ್ಣೋ ಬಂತಪ್ಪಾ ಹಂಗೆ ಕಾದ ನೆಲ ಫಟಫಟ ಎಳ್ಕಂಬಿಡ್ತಪ್ಪಾ ಬಾಯಾರಿ ನಿಂತಿತ್ತಲ್ಲವೆ!
ನಾನು : ಚರ್ಮ ಸುಟ್ಟು ನೀರಲ್ಲಿ ತೊಳ್ದಂಗೆ ಕಾಣಲ್ಲವೆ ಮರ ಗಿಡ ಭೂಮಿ.
ಅವನು : ಮತ್ತಿನ್ನೇನಣ್ಣೋ ಮರಗಿಡ ಎಲ್ಲಾ ಹಂಗೆ ಬಾಯಾರಿದ ಗಂಟಲಿಗೆ ನೀರುಬಿಟ್ಟಂಗೆ ಕಾಣ್ತವಪ್ಪ.
ನಾನು : ಇನ್ನೇನೋ ಸಮಾಚಾರ ಇತ್ತೀಚಿನ ಏನೂ ಕಥೆ ಹೇಳಲೇ ಇಲ್ಲ.

ಅವನು : ಏನು ಹೇಳಲಣ್ಣೋ (ತಲೆ ಕೆರೆಯುತ್ತಾ) ಒಳ್ಳೇ ಸೇಂದಿ ಕುಡಿಬೇಕು ಅನಿಸ್ತ, ಅದೆ ಬಾಳ್ಲು ತವಾ ದೊಡ್ಡಳ್ಳಿಗೆ ಹೋದ್ವಿ. ಸೇಂದಿ ಅಯ್ತನ್ರಿ? ಅಂದ್ವಿ., ಮೋಟರ ಬೈಕಲ್ಲಿ ಹೋಗಿದ್ದವಾ! ಕ್ಯಾನು ತಗಂಡು ಹೋಗಿದ್ದವ! ಹೂ ಅಯ್ತೆ ಅಂದ ಸೇಂದಿ ಇಳಿಸೋನು., ಮತ್ತೆ ನಾಳಿಕೆ ಚ್ವಾಮನ ಹೊರಡಿಸ್ತಿವಿ. ದೇವರ ಬರಿಸ ಬೇಕಲ್ಲಾ ಅದಕ್ಕೆ ಸೇಂದಿ ಕೇಳಿದವಪ್ಪಾ ಅಂದ್ವಿ. ಹಂಗಾ ಕೊಡಿ ಇಲ್ಲಿ ಕ್ಯಾನ! ಬೆಳಗ್ಗೆ ಹೊತ್ತುಟ್ಟೊವೊತ್ಗೆ ಬನ್ನಿ. ತುಂಬಿಟ್ಟಿರ್ತೀನಿ. ದೇವರಿಗಲ್ಲವೆ! ನೀವು ಬರಹೋಗಿ ಅಂದ. ಮತ್ತೆ ದೇವರಿಗೆ! ಗೊತ್ತಾತಲ ಅಂದ್ವಿ. ಆಯ್ತು ಹೋಗಿ ಒಳ್ಳೇದಾ ಕೊಟ್ತಿನಿ ಅಂದ. ಬಂದ್ವಿ.
ನಾನು : ಅಲ್ಲವೋ ಒಳ್ಳೇದು ಅಂದ್ರೆ ಏನೋ ಎಲ್ಲಾ ಬೈನೆ ಮರದ್ದೇ ಅಲ್ಲವೆ?
ಅವನು : ಹಂಗಲ್ಲ ಕಣಣ್ಣೋ ಅಕ್ಕಿತೊಳದ ನೀರು, ಹನ್ಸ್, ಸಕ್ಕರೆ ಬೆರೆಸಿ ಬಿಟ್ಟರೆ ಗೊತ್ತಾದತೆ! ತಲೆಗೆ ಏರ್ತದೆ ಹೊರ್ತು ಒಯ್ನಾಗಿರಕುಲ್ಲ. ಅದಕ್ಕಲ್ಲವೆ ಅವನು ದೇವರಿಗಾದರೆ ನಾಳಿಕೆ ಒಳ್ಳೇದು ಕೊಡ್ತಿನಿ ಅಂದದ್ದು.
ನಾನು : ಹಂಗನ್ನಪ್ಪ ಅದರಲ್ಲೂ ಕಲಬರೆಕೆಯೆ! ಆಮೇಲೆ ಅಂದೆ.

ಅವನು : ಹಾಲಿಗೆ ಯೂರಿಯಾ ಉಪ್ಪು ಸಕ್ಕರೆ ನೀರು ಅಯ್ಯೋ ಈ ಪರಪಂಚದಾಗೆ ಯಾವುದು ಸಾಚಾ ಕೊಡ್ತರಣ್ಣೋ! ಮನುಷ್ಯನ ಹೊಟ್ಟೆ ಕಲಗಚ್ಚಲ್ಲವೆ ಅದೇನು ಒಳಗೆಳ್ಕತದೋ ಯಾವುದು ಹೊರಗಾಕ್ತದೋ ಕಾಣೆ ಕನಪ್ಪ
ನಾನು : ಅದಿರಲಿ ಬೆರೆಸೋದು ಕೇಳಿದ್ನಪ್ಪಾ, ಸೇಂದಿಗೂ ಬೆರಸ್ತರ ಅಂದೆ.
ಅವನು : ಏನಕ್ಕೆ ಬೆರಕೆ ಇಲ್ಲ ಹೇಳಪ್ಪಾ; ಅದಿರಲಿ! ಬೆಳಗ್ಗೆನೆ ಹೋದ್ವಾ! ಐದು ಲೀಟರ್ ತುಂಬಿಟ್ಟಿದ್ದ. ಘಮಘಮ ಅಂತಾ ಎಳನೀರ್ನಂಗೆ ತಿಳಿಯಾಗಿತ್ತಾ. ನಮಗೆ ಕುಡಿಯಾಕೆ? ಅಂದ್ವಿ. ಇಬ್ಬಿರಿಗೂ ಒಂದು ಒಂದು ಲೀಟರ್ ಕೊಟ್ಟ; ಅಲ್ಲಿಗೆ ಎಷ್ಟಾಯ್ತು! ಯಾವುದಕ್ಕೂ ದುಡ್ಡ ಇಸ್ಕೊಳ್ಳುಲಿಲ್ಲ. ಹೋಗಿ ಹೋಗಿ! ದೇವರಿಗಲ್ಲವೇ ಎಂದ. ಹೊಂಟವಿ. ಹೊಂಟೋರೇ ಬೈರಾಪುರದ ತವಾ ಡಾಬಾಕ್ಕೆ ಬಂದ್ವಿ. ಕುಂತ್ಕಂದು ಹಂದಿ ಬಾಡು ತರಿಸ್ಕಂದಿವಿ. ಐದು ಲೀಟರನು ಇಬ್ಬರೂ ಕುಡಿದಿವಿ. ಅಲ್ಲಿಗೆ ಎಷ್ಟಾಯ್ತು 7 ಲೀಟರು ಇಬ್ಬರಿಗೆ, ಫೋನ ತಗಂದ್ವಿ : ಸೇಂದಿ ಕೊಟ್ಟಿದ್ನಲ್ಲ ಅವನಿಗೆ ಫೋನ ಮಾಡಿದ್ವಿ. ಹಲೋ ಕೇಳಿಸ್ತತಾ ಚೆನ್ನಾಗಿತೆ ಕಣ್ರಿ ನೀರಾ! ಅಲ್ಲಾ ಸೇಂದಿ ಬಿಸಿಲಿಗೆ ಬುರುಬುರು ಅಂತಾ ಹೆಂಡ ಉಕ್ಕಿಬಿಡ್ತದೆ. ಪಸ್ಟ್ ಆಗಿತೆ ಚ್ವಾಮನ ಹೊರೋರಿಗೆ ಕೊಟ್ರೆ ಹೆಂಗ ಬಂತು ಅಂತಿರಿ ದೇವರು. ಅಯ್ ನಿಮ್ಮ! ನೀವು ಬನ್ನಿರಿ ಬಂದು ನೀವು ನೋಡಬೇಕು ಅಂದೆ., ಆಯ್ತು ಗೌಡ್ರೆ! ಸಂತೋಷಾತಪ್ಪ. ನಾನು ಅಲ್ಲಿಗೆ ಬರಾಕಾದಾತ! ದೇವರ ಸೇವೆ ಬಿಡಿ. ಮತ್ತೆ ವರ್ಷ ವರ್ಷ ಬನ್ನಿ, ನಾನು ಒಳ್ಳೆದ ಕೊಡ್ತೀನಿ ಅಂದ. ಹಂಗಿತ್ತು ನೋಡಪ್ಪ ದೇವರ ಸೇಂದಿ.

ನಾನು : ಅಲ್ಲವೋ ಗೋಪಾಲ ಹಿಂಗೆ ಸುಳ್ಳು ಹೇಳಿ ಅದೂ ದೇವರ ಹೆಸರು ಹೇಳಿ ಹಿಂಗೆ ಮಾಡ್ತರೇನೋ ತಪ್ಪಲ್ಲವಾ ಅಂದೆ.
ಅವನು : ಏನು ಮಾಡೋದಣ್ಣೋ ಮೊದಲು ಒಂದು ದಿನ ಸತ್ಯ ಹೇಳಿದ್ದಕ್ಕಲ್ಲವೆ ಕಲಬೆರಕೆ ಕೊಟ್ಟಿದ್ದು. ಅದಕೆ ಒಂದು ಕತೆ ಕಟ್ಟಿದವಪ್ಪ. ತಪ್ಪಾ ಅಂದ. ಬೆಳಗಾನೆ ಎದ್ರೆ ದೇವ್ರ ಹೆಸ್ರ್ ಹೇಳ್ಕಂಡು ಇಷ್ಟ್‍ದಪ್ಪ ನಾಮ, ಇಭೂತಿ ಹಾಯ್ಕಂಡು ಗುಡಾಣದಪ್ಪ ಹೊಟ್ಟೆ ಬಿಟ್ಕಂಡು ಹ್ಯಾಂಗೆ ಶಾಸ್ತ್ರ ಗೀಸ್ತ್ರ ಹೇಳ್ತಾ ಸುಖವಾಗಿಲ್ವೇನಣ್ಣೊ ಅಂದ.
ನಾನು : ಅದಕೆ ಕಣಲಾ ಮಳೆಬೆಳೆ ಹೋಗಿರೋದು ಸುಳ್ಳುಕಡಿಚಾತ್ರ ಒಳ್ಳೇದೇನೋ ಅಂದೆ.
ಅವನು : ಅಯ್ ಬುಡಣ್ಣೋ ಈ ವರ್ಷ ಮಳೆ ಉಯ್ಯಬಾರದ್ದು ಉಯ್ತುದಂತೆ ! ಅಂದ
ನಾನು : ಹೌದೆ! ಮಳೆ ಬರದೆ ಹೋದ್ರೆ ಏನ್ಮಾಡ್ತೀಯಾ ಅಂದೆ.
ಅವನು : ಏನು ಮಾಡೋದು ಸಾಯಕಾದಾತ! ಕೋಳಿ ಕೊಕ್ಕರದಂಗೆ ಅದು ಇದು ತಿಂದು ಬದುಕುತಿವಪ್ಪಾ ಪ್ಯಾಟೆರ ನಿಮ್ಮಂಗೆ ತಲೆಮ್ಯಾಲೆ ಕೈಹೊತ್ಗೊಂಡುಕುಂತರೆ ಬದುಕಾದೀತ ಅಂದ.





“Devaru mattu Sendi”- Humorous & satirical.Simple conversation with great insight.
-R Gopinath