ಕೃಷ್ಣ ಶ್ರೀಕಾಂತ ದೇವಾಂಗಮಠ
ಮಳೆ ಸುರಿದು
ಈಗಷ್ಟೇ ತಿಳಿಯಾದ ಆಗಸಕ್ಕೆ
ಸಂಜೆಯ ರಂಗೇರುತ್ತಿದೆ
ಬೆನ್ನಿಗಂಟಿದ ಗಡಿಯಾರದಲ್ಲಿ
ಟಿಕ್ ಟಿಕ್ ಶಬ್ಧ
ಘಾಡ ನಿಶ್ಯಬ್ದದ ಜಗತ್ತಿನಲ್ಲಿ
ಮೌನ ನನ್ನನ್ನು ಇರಿಯುತ್ತದೆ.
ಗಗನಚುಂಬಿ ಕಟ್ಟಡಗಳು ಬಾಗಿ
ನೆಲ ನೋಡುತ್ತವೆ ಎಂಬ ಭ್ರಮೆ
ರಸ್ತೆಯಲ್ಲೀಗ ಯಾರಾದರೂ ಸಿಕ್ಕಿ ಮಾತನಾಡಿಸುತ್ತಾರೆಂಬ ಹುಚ್ಚು
ಅಕ್ಕ ಪಕ್ಕಕ್ಕೆ ಸಿಮೆಂಟು ಇಟ್ಟಿಗೆ
ಗೋಡೆಗಳು ಬಾಯಿ ತೆರೆಯುತ್ತವೆಯೇ
ಮರದ ಬಾಗಿಲು ಕಿಟಕಿಗಳು
ಕೈ ಬೀಸುತ್ತವೆಯೇ ಕಾಯುತ್ತಿದ್ದೇನೆ.
ಪ್ರತಿ ಪ್ರಶ್ನೆಗೂ ನಿರುತ್ತರ
ಇಲ್ಲಿ ಯಾರಿಗೂ ಸಮಯವಿಲ್ಲ ಗಿಜಿಗುಡಬೇಕಿದ್ದ ರಾಜಬೀದಿ
ಸಾವಿರ ಹೆಜ್ಜೆಗಳಿಗೆ
ಸಾಕ್ಷಿಯಾಗಬೇಕಿದ್ದ ಮೇಲ್ಮೈ ಜೀವಂತಿಕೆಯನ್ನು ಕುಹಕಿಸಿ ಗಹಗಹಿಸುತ್ತವೆ.
ಪ್ರಪಂಚವೆಲ್ಲ ಎದುರು ನೋಡುತ್ತಿರುವುದಕ್ಕೆ ಉತ್ತರದಂತಿರುವ ನಾನು
ಹೃದಯದ ಮಿಡಿತಕ್ಕೆ ಕಿವಿಯಾಗುತ್ತೇನೆ ಧ್ವನಿಯಾಗುತ್ತೇನೆ ಮತ್ತು
ಏಕಾಂಗಿಯಲ್ಲದ ಭಾವ ನೀಡಿದ ನೆರಳಿನೊಂದಿಗೆ ವಿಶ್ವಾಸದ
ಹೆಜ್ಜೆ ಹಾಕುತ್ತೇನೆ
ನಾಳೆಗಳಲ್ಲಿನ ಭರವಸೆಯೊಟ್ಟಿಗೆ.
ಶೃತಿ ಶ್ರೀಕಾಂತ್ ದೇವಾಂಗಮಠ
ಉಣ್ಣಿಸಿ ತಿನ್ನಿಸಿ ಮಗುವ ಬೆಳೆಸಿದಳು ಅಮ್ಮ
ತಿದ್ದಿ ಬುದ್ಧಿಯ ಹೇಳಿರೆ ಅವ ಜಾಣನಾಗಿಹನಮ್ಮ.
ಒಂದು ಪಡೆಯಲು ಇನ್ನೊಂದು ತ್ಯಜಿಸುವುದಂತೆ
ಸೃಷ್ಟಿ ನಿಯಮದಲಿ ಎಂದು ಅದೇ ದಿಟವಂತೆ
ವಿದ್ಯಾರ್ಜನೆಗೆ ಮಗುವು ಸಿದ್ಧನಾಗಿಹನು
ಅಮ್ಮನ ಪ್ರೀತಿಯ ತೊರೆದು ಬಂದಿಹನು.
ಆಡಿಸಿ ಕಾಡಿಸಿ ಪ್ರೀತಿಯ ಸೆಲೆಯಾದ ಮಗುವು
ಇಂದು ಎದುರಾಗಿದೆ ಅವಗೆ ವಸತಿ ಶಾಲೆಯ ಕಟ್ಟಡವು
ಬೆನ್ನಿನ ಬೇತಾಳ ಈ ಕಾಲನ ಸಂತೆ
ಎಷ್ಟೆ ಭಾರವಾದರೂ ಮುಂದೆ ಸಾಗಲೇಬೇಕಂತೆ.
ನಿಂತ ಮಗುವ ಕಂಡು ಕಾಲ ನಗುತಿಹನು
ಜಲದೆ ಕಾಣುತಿದೆ ಅವನ ಬದಲಾದ ಬಿಂಬ
ಮಗು ಬೆಳೆಯುವ ತನ್ನ ಪ್ರತಿಬಿಂಬದಳತೆಯನೂ ಸೇರಿ
ಕಾಲ ಮಾತ್ರ ಎಂದೂ ಬಿಟ್ಟು ಹೋಗದ ಅಚ್ಛರಿ.
ಎಳಸು ಮನವಿರುವರೆಗೆ ಕಾಲ ಭಾರವೇ ನಮಗೆ
ಮನ ಬಲಿತು ಗಡುಸಾಗೆ ನಮ್ಮದೇ ಕಾಲ
ಮನ ಭಾರವ ಮಾಡ್ವ ಕಾಲ ಕ್ಷಣಿಕನು
ಧೈರ್ಯದಿ ಮುನ್ನಡೆಯೇ ಕಾಲ ಬೆನ್ನ ತಟ್ಟುವನು.
ಕವಿತೆ ಚೆನ್ನಾಗಿದೆ ಅಕ್ಕಾ