ನಾನು ಮತ್ತು ಬೆಕ್ಕು
ಪ್ರಕಾಶ್ ಪೊನ್ನಾಚಿ
ಬಾಗಿಲು ಹಾಕಿತ್ತು
ಬೆಕ್ಕೂ ಒಳಬಂತು
ಒಳಗೀಗ ಇಬ್ಬರೆ ಒಂದು ನಾನು
ಮತ್ತೊಂದು ಬೆಕ್ಕು
ಸುತ್ತ ಸುಣ್ಣದ ಗೋಡೆ ಎಲ್ಲೂ ಬಿರುಕಿಲ್ಲ
ಆ ಮೂಲೆಗೆ ಬೆಕ್ಕು
ಈ ಮೂಲೆಗೆ ನಾನು
ಮಧ್ಯ ಯಾವುದೇ ಕಂದರವಿಲ್ಲ
ಹೆಜ್ಜೆ ಇಟ್ಟರೆ ಕೆಂಪು ನೆಲ
ಬೆಕ್ಕಿಗೆ ನನ್ನ ಮೇಲೆ ಗುರಿ
ನನಗೀಗ ಬೆಕ್ಕಿನ ಮೇಲೆಯೇ ಗುರಿ
ತಪ್ಪಿಸಿಕೊಳ್ಳಲು ಆಧಾರ ಶೂನ್ಯ
ಬೆಕ್ಕಿಗೂ ಒಂದೇ ದಾರಿ
ಪರಚಿದರೆ ಭೂಮಿ ಬಿರುಯುವಂತೆ
ನನ್ನ ಕೊಂದುಬಿಡುವುದು
ನನಗೂ ಒಂದೇ ದಾರಿ ಒಡೆದ ಏಟಿಗೆ
ಗಂಟೆಯ ಗೂಟ ಠಣಾರನೆ ಹಾರುವಂತೆ
ಬೆಕ್ಕನ್ನು ಕೊಲ್ಲುವುದು
ಅರೆ
ಇಬ್ಬರಿಗೆ ಇಬ್ಬರೂ ವೈರಿಯಲ್ಲ
ಮುಚ್ಚಿದ ಬಾಗಿಲ ಎಗರಿದ ತಪ್ಪಿಗೆ
ನಾನು ಕೊಲ್ಲಬೇಕು
ತಡೆಯೊಡ್ಡಿ ಬಾಗಿಲು ಮುಚ್ಚಿದ ತಪ್ಪಿಗೆ
ಅದು ನನ್ನ ಕೊಲ್ಲಬೇಕು
ಕೊಂದ ಮೇಲೆ
ಇಬ್ಬರ ಹೆಣದ ಮೇಲು ನೊಣದ ಹಿಂಡು
ಹಸಿ ವಾಸನೆ
ತೆರೆದ ನರಕದ ಬಾಗಿಲಲಿ
ಇಬ್ಬರಿಗೂ ಸ್ವಾಗತಿಸುವ ಕಿಂಕರರಿಂದ
ನಾಳೆಗೆ ಅದೇ ಬಾಣಲೆಯಲಿ
ಇಬ್ಬರದೂ ಶವಯಾತ್ರೆ

ಎಷ್ಟು ಯೋಚಿಸಿದರೂ
ಒಳಗೊಂದೇ ಶೂನ್ಯ
ನಿಶ್ಶಬ್ಧ ನೀರವತೆ
ಇಬ್ಬರಿಗೂ ತಿಳಿಯಲಿಲ್ಲ ಬರೀ ದ್ವಂದ್ವ
ಕೊಲ್ಲಲು ನಾನು
ಕೊಲ್ಲಿಸಿಕೊಳ್ಳಲು ಬೆಕ್ಕು, ಇಲ್ಲ
ಕೊಲ್ಲಲು ಬೆಕ್ಕು
ಕೊಲ್ಲಿಸಿಕೊಳ್ಳಲು ನಾನು
ಯಾವುದು ನ್ಯಾಯ
ಯಾವುದು ಅನ್ಯಾಯ
ಗೊತ್ತಿಲ್ಲ
ಇಬ್ಬರಲ್ಲೂ ಈಗ ತಣ್ಣಗಾದ ಬೆಂಕಿ
ಯಾವ ಕೇಡಿಗೂ ಆಸ್ಪದಿಸುತ್ತಿಲ್ಲ
ಆ ಮೂಲೆಯಲಿ ಬೆಕ್ಕು
ಈ ಮೂಲೆಯಲಿ ನಾನು
ನಡುವೆ ಬರಿ ಕತ್ತಲು
ಸೋಲುವುದೆಂದರೆ
ಇಬ್ಬರಿಗೂ ಹೊಸದೇನಲ್ಲ
ಅದು ಅನ್ನಕ್ಕಾಗಿ ಹಸಿವಿಗಾಗಿ ಉಳಿವಿಗಾಗಿ
ನಾನು ಹಾಗೆ ಪ್ರೀತಿಗಾಗಿ ಅದರ ರೀತಿಗಾಗಿ
ಕೊನೆಗೆ
ಉಳಿದಿಲ್ಲ ಇಬ್ಬರಲೂ
ಅದಕ್ಕೆ ನನ್ನ ಮೇಲೆ ಕರುಣೆ
ನನಗೂ ಅದರ ಮೇಲೆ
ಮೌನಯುದ್ಧ ಮುಗಿದ ಮೇಲೆ ಮತ್ತೇನು
ನಾನೂ ಬೌದ್ಧನಾದೆ
ಮತ್ತೆ ನನ್ನ ಬೆಕ್ಕೂ..






ಚೆನ್ನಾಗಿದೆ.