ಬೆಂಡೆಕಾಯಿ ಮತ್ತು ಬ್ರೆಡ್ಡಿನ ತುಂಡು

ಸ್ಫೂರ್ತಿ ಗಿರೀಶ್
೧.
ಜೋರಾಗಿ ಕತ್ತರಿಸು
ತುಂಡಾಗಬೇಕು
ದಗ ದಗ ಉರುವಲು
ಹಸಿರು ಒಣಗಬೇಕು
ಬೇಕಾದಾಗ ಒದಗಬೇಕು
ಅಪ್ಪ ಕತ್ತರಿಸುತ್ತಾನೆ
ಒಳ್ಳೆಯ ಮರವನ್ನು ಹುಡುಕಿಕೊಂಡು
ಅಮ್ಮ ಹುತ್ತರಿಸುತ್ತಾಳೆ
ಹಿತ್ತಾಳೆ ಬೋಗುಣಿಗೆ ಸುರಿದುಕೊಂಡು
ಹಿತ್ತಲಿನಲಿ ಪ್ರೀತಿಯಿಂದ ಬೆಳಸಿದ
ಬೆಂಡೆಕಾಯಿ
ಹಸಿ ಮೆಣಸಿನಕಾಯಿ
ಮಧ್ಯಾಹ್ನಕ್ಕೂ ರಾತ್ರಿಗೂ
ಕುಂಬಳಕಾಯಿ..
ತಟ್ಟೆ ಖಾಲಿಯಾಗುವುದನ್ನೆ ಕಾಯ್ದು
ಅಮ್ಮ
ಬಡಿಸುತ್ತಾಳೆ
ಉಂಡಷ್ಟು ಹಸಿವು ಹೆಚ್ಚಾಗುತ್ತದೆ
೨.
ಚೆನ್ನಾಗಿ ಕುದಿಸಿ
ನೀರು ಬಿಸಿ ಇರುವಂತೆ
ಫ್ಲಾಸ್ಕನ್ನು ಮುಚ್ಚಿಡುವೆ
ಬೆಳಗು, ನಡುಮಧ್ಯಾಹ್ನ ಮಿಕ್ಸ್ ಮಾಡಿ
ಕದಕಿ ತಿನ್ನಿರಿ
ಆಗದಿದ್ದರೆ ಕುಡಿದುಬಿಡಿ
‘ಅಮ್ಮ ಹಸಿವಿಲ್ಲ’
ರಾತ್ರಿ
ಮಕ್ಕಳು ಆಕಳಿಸಿ ಮಲಗುತ್ತವೆ
ಬ್ರೆಡ್ಡಿನ ತುಂಡು ಖಾಲಿ
ನಾಳೆಗೆ ತಂದಿಡಿ
ಮಾತು ಮುಗಿಯುತ್ತದೆ
ಲ್ಯಾಪ್ಟಪ್ ಫಕ್ಕನೆ ಬೆಳಕು ರಾಚುತ್ತದೆ
ಅವರು
ಸದ್ದು ಕೇಳಲಾರದಷ್ಟು
ತೆಳುವಾಗಿ
ಉಂಗುಟ್ಟುತ್ತಾರೆ
ನಡುಮನೆಯ ಟೀಪಾಯ್ ಮೇಲೆ
ಸುಂದರ ಹೂದಾನಿಯ
ಕಾಗದದ ಹೂಗಳು
ಕಣ್ಣ ಸೆಳೆಯುತ್ತವೆ
ಒಮ್ಮೆಯೂ
ನೀರು ಉಣ್ಣುವುದಿಲ್ಲ
ಮಣ್ಣ ಕೆದುಕುವಂತಿಲ್ಲ
ಗಂಧವಿರದಿದ್ದರು
ಬಣ್ಣದಿಂದಲೇ ಹೊಳೆಯುತ್ತವೆ
ಅಮ್ಮನ ನೆನಪಾಗಿ
ಕಣ್ಣು ಮಬ್ಬಾಗುತ್ತವೆ
ಕಿಟಕಿ ಗಾಜಿನ
ಧೂಳಿಡಿದ ಕಲೆಗಳನು
ನಾಳೆಯಾದರೂ ಒರೆಸಿ ತೆಗೆದು ಬಿಡಬೇಕು.
ಹಬ್ಬ ಮುಗಿಯಿತೇ?
ಇಲ್ಲ,
ಒಲೆಯ ಮೇಲೆ ಬೇಯ್ಯುವಾಗ
ವರ್ಷದ ತೊಡಕಿಗೆ
ಮಸಾಲೆ ಬೆರೆತು ಬೀದಿಗುಂಟ
ಉಬ್ಬಿಕೊಳ್ಳುತ್ತದೆ
ಹಬ್ಬ ಮುಗಿಯುವುದಿಲ್ಲ
ಒರಳಿನಲ್ಲಿ ಉಳಿದ ಚರಟವನು
ಉಕ್ಕರಿಸಿ ತೆಗೆದಿಟ್ಟು
ಉಳಿದ ದಿನಗಳಿಗೂ ಬಳಿದು
ವಾಗೊಲೆ ಚಿಮಣಿಯಲಿ
ನೇತು ಹಾಕಲಾಗುತ್ತದೆ
ಈರುಳ್ಳಿಯ ಸಿಪ್ಪೆ ಸುಲಿದಂಗೆ
ಬೆಂದು ಬೆಂದು
ಚಕ್ಕಳ ಕಟ್ಟಿ
ಉದುರಿ
ನೆಲ ಜಡ್ಡುಗಟ್ಟಿ
ಹಬ್ಬದ ಕಮಟು ವಾಸನೆ
ವರ್ಷದುದ್ದಕ್ಕೂ ಅಡರಿ ಕೊಳ್ಳುತ್ತದೆ
ಹೆರಿಗೆಗೆ ಬಂದವಳು
ತಿರುಗಿ ಹೋಗುವಾಗ
ತೊಟ್ಟಿಲ ಕಂದನಿಗೂ
ತಿನಿಸಿ
ಸಾವಿನ ಮನೆಯಲ್ಲಿ
ಹನ್ನೊಂದು ದಿನಕ್ಕೂ ವಿಸ್ತರಿಸಿ
ಇಲ್ಲ
ಹಬ್ಬ ಮುಗಿಯುವುದಿಲ್ಲ
ಒಮ್ಮೆ ಒಲೆಗೂ
ಮತ್ತೊಮ್ಮೆ
ವಾಗೊಲೆಯ ಚಿಮಣಿಗೂ
ಜೀಕುತ್ತಾ
ತುಯ್ದಾಡುವುದು
ಒಂದೇ ಏಟಿಗೆ ಮುಗಿಯುವುದಿಲ್ಲ
ಅಬ್ಬಾ!
ಕಾಲ ಲಾಗ ಹೊಡೆಯುತ್ತದೆ .





ಕವನಗಳು ಚೆನ್ನಾಗಿವೆ.