
ಶಶಿಧರ ಹೆಮ್ಮಾಡಿ
ಬೂಟುಗಾಲುಗಳಿದಲೇ
ಒದೆಯೋ ಗೆಳೆಯ
ನಾನು ಹೊಲೆಯ.
ಕಬ್ಬಿಣದ ಈ ದೇಹಕ್ಕೆ
ಬರಿಗಾಲಲ್ಲಿ ಒದ್ದರೆ
ನಿನ್ನ ಮೆತ್ತಗಿನ
ಪಾದಗಳಿಗೆ
ನೋವಾಗುವುದು
ಬಲ್ಲೆಯಾ?
ನನಗೆ ಒದೆಯುವಾಗಲೂ
ನಿನಗೆ ನೋವಾಗಬಾರದು.
ನನ್ನದೇ ಕಸುಬಿನ
ಯಾವುದೋ ಗೆಳೆಯ
ಹಾಂ ಅವನೂ ಹೊಲೆಯ
ದನದ ಹೆಣಗಳ
ಚರ್ಮ ಸುಲಿಯುತ್ತಾ
ತಾನೂ ಹೆಣವಾಗಿ
ನಿನ್ನ ಜೀವಂತ
ಪಾದಗಳ ಸುತ್ತ
ಚರ್ಮದ ಬೂಟುಗಳಾಗಿ
ಅಕ್ಕರೆಯಿಂದ ಆವರಿಸಿದ್ದಾನೆ.
ನನಗೆ ಒದೆಯುವಾಗಲೂ
ನಿನಗೆ ನೋವಾಗಬಾರದು.
ಬೂಟುಗಾಲುಗಳಿದಲೇ
ಒದೆಯೋ ಗೆಳೆಯ
ನಾನು ಹೊಲೆಯ.





ಇದು ಓದಿದರೆ ಸಂಕಟವಾಗುತ್ತೆ. 🙁
ಮೃದುವಾದ ಹೊಡೆತ…..ಮೆಲುದನಿಯ ಆಕ್ರೋಶ…….