ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬುದ್ಧನ ಕಥೆ

ಸವಿರಾಜ್ ಆನಂದೂರು

ಜಗದ ಗೋಳನು ಕಂಡು ಸಿದ್ಧಾರ್ಥನೆದೆ ಮರುಗಿತು
ರಾತ್ರೋರಾತ್ರಿ ಮನೆ ಬಿಟ್ಟು ಹೊರಟವನ
ಬಾಗಿಲಲ್ಲೇ ತಡೆದು ನಿಲ್ಲಿಸಿದವಳು ಯಶೋಧರೆ:
“ನಾಳೆ ಭಾನುವಾರ! ಉಪ್ಪಿಟ್ಟಿಗೆ ಸಾಸಿವೆ ಖಾಲಿಯಾಗಿದೆ
ಹೋಗುವ ಮುನ್ನ ಒಂದು ಉಪಕಾರ ಮಾಡು
ಗೋಳಿಲ್ಲದ ಊರಿನ ಸಾಸಿವೆಯ ತಾ ಮಾರಾಯಾ!”

ರಾತ್ರಿಯಿಡೀ ಅಲೆದು ಬೆಳ್ಳಂಬೆಳಗ್ಗೆ ಬರಿಗೈಲಿ ಮರಳಿದ ಗೌತಮ
ನಕ್ಕಳು ಯಶೋಧರೆ: “ಗೋಳಿಲ್ಲದ ಊರಿಲ್ಲ ಗಂಡಸೇ, ಇಕೋ ನಿನ್ನ ಮಗನ ಗೋಳನ್ನೂ ಕೇಳು”
ಎಂದವಳೇ ಕಿಚನ್ನು ಹೊಕ್ಕು ಮಿಕ್ಸಿ ಕಿರ್ರೆನಿಸಿದಳು
ರಾಹುಲನ ಡೈಪರ್ ಬದಲಿಸುತ್ತಲೇ ಉಪದೇಶ ನೀಡಿದ ಬುದ್ಧ:
ಹಸುಗೂಸುಗಳು ಮೂರು ಕಾರಣಕ್ಕೆ ಪಿಟಿಪಿಟಿ ಮಾಡುತ್ತವೆ,
೧. ಹಸಿವೆಯಾದಾಗ
೨. ಡೈಪರ್ ಒದ್ದೆಯಾದಾಗ
೩. ಯಾವ್ ನನ್ಮಗನಿಗೆ ಗೊತ್ತು?
ಅಷ್ಟೇ! ತ್ರಿಪಿಟಕಗಳು ಹುಟ್ಟಿದ್ದು ಹೀಗೆಯೇ!

“ಅಪ್ಪಾ! ಬುದ್ಧನ ಕಥೆ ಹೇಳು” ಎಂದ ಮಗಳಿಗೆ
ನಾ ಕಥೆಕಟ್ಟಿ ಹೇಳಿದ ಬುದ್ಧ ಚರಿತವಿದು
ನಿಜದ ಬುದ್ಧನ ಐತಿಹ್ಯ ಕೇಳಿದರೆ, ಅವಳ ಹಕ್ಕಿಯೆದೆ ಪಟಪಟಿಸುತ್ತದೆ ನೋಡಿ
ಮೊನ್ನೆ ಹೀಗೆಯೇ ಯಾವನೋ ವಿರಾಗಿಯ ಕಥೆ ಹೇಳಿದ್ದೇ ಹೇಳಿದ್ದು
ರಾತ್ರಿಯಿಡೀ ನಾನು ಮಿಸುಕದಂತೆ ಅವುಚಿ ಮಲಗಿತ್ತು ಮಗು

ನನ್ನ ಸುಳ್ಳಂಪಳ್ಳೇ ಕಥೆ ಕೇಳಿ ಬುದ್ಧನೇನೂ ಬೇಸರಿಸಿಕೊಳ್ಳಲಿಲ್ಲ ಸದ್ಯ!
ಟೀಪಾಯಿಯ ಮೇಲೆ ಧ್ಯಾನಸ್ಥ ಕುಳಿತವ ಮೆಲ್ಲ ಕಣ್ದೆರೆದ
“ಸ್ವಲ್ಪ ಇರು, ಮಗನಿಗೆ ಜಳಕ ಮಾಡಿಸಬೇಕು
ಕಡ ಕೇಳಿದರೆ ಕೊಡೆನೆನ್ನದ ಅಂಗಡಿಯಿಂದ ಕಡಲೆಹಿಟ್ಟು ತರುತ್ತೇನೆ”, ನನ್ನ ಕಾಲೆಳೆದ ಶಾಕ್ಯಮುನಿ
ಬಿದ್ದು ಬಿದ್ದು ನಗತೊಡಗಿದೆ, ನನ್ನೊಂದಿಗೆ ಬುದ್ಧನೂ ಸಹಾ!

‍ಲೇಖಕರು Avadhi

18 January, 2021

1 Comment

  1. SUDHA SHIVARAMA HEGDE

    ಚಂದಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading