ಭೇಟಿ..
ಲಿಂಕನ್ ಶೈರ್ ನಿಂದ
ಡಾ. ಬಿ ಪ್ರೇಮಲತ
ಬೀಳ್ಕೊಟ್ಟೆ ಕೈ ಬೀಸಿ ಬೈ ಎಂದು
ಹಿಂತಿರುಗಿದೆ ಮಡಿಲ ತುಂಬ
ಕನಸುಗಳ ಬುತ್ತಿ ಕಟ್ಟಿ.
ಕೊಡಲು ನಾನೇನು ತರಲಿಲ್ಲ
ಹೊರಿಸಿ ಕಳಿಸಲಿಲ್ಲ ನೀನು ನನಗೇನು
ಬಿಟ್ಟು ಬಂದದ್ದಷ್ಟೆ ನೆನಪು
ಕಳೆದು ಹೋದದ್ದು ನನ್ನ ಮನಸು!!!
ಮುಂದಿನ ಭೇಟಿ ಎಲ್ಲಿ ಹೇಗೆಂದು
ಹೇಳಲಿಲ್ಲ ನೀನು, ಕೇಳಲಿಲ್ಲ ನಾನು
ಒಣ ಉಪಚಾರಗಳ ಆಮಂತ್ರಣವಿಲ್ಲದೆ
ಕಾತುರಳು ನಾ ಮರು ಭೇಟಿಗೆ!!
ಯೋಚಿಸಿಲ್ಲ ಹೇಳುವುದೇನೆಂದು
ಕೇಳುವುದೇನೋ ಅರಿವಿಲ್ಲ
ಅಗತ್ಯವಿದೆಯೋ ತಿಳಿದಿಲ್ಲ
ಆದರೂ ಹೃದಯ ಬಡಿದು ಮಿಡಿಯುವುದಾದರೆ
ತಂಗಾಳಿ ಸುಳಿಯುವುದಾದರೆ
ಮಾತಿಲ್ಲದೆ ಮಲ್ಲಿಗೆ ಅರಳುವುದಾದರೆ
ಕಂಪ ಬೀರುವುದಾದರೆ
ಕೆನ್ನೆಯಲಿ ಕೆಂಪು ಮೂಡುವುದಾದರೆ
ಚಂದ್ರಿಕೆಯ ಆಗಮನಕೆ ನೈದಿಲೆ
ಕಾಯುವುದು ತಾನೆ ಬೇಕೇನು?
ಕಣ್ಣ ಮಿಂಚಲ್ಲಿ ಕವನ ಹಾಡಿ
ಕಿರುನಗೆಯಲ್ಲಿ ಕೆಣಕಿ ಕಾಡಿ
ಒಂಟಿ ಮನಗಳು ಕೂಡಿ ಆಡಿ
ಬದುಕ ಚಿತ್ತಾರವ ಬಿಡಿಸಿ
ಹೊಸ ಸಂಬಂಧಗಳ ಮಿಡಿಸಿ
ವರ್ಷಗಳ ಕಳೆವ ಹರ್ಷದಿ
ನಲಿವುದಾದರೆ,
ನಿಮಿಷಗಳ ಎಣಿಸಿ ಎಣಿಸಿ
ಬಡಿಸುವ ಈ ಜಿಪುಣ
ಕಾಲದ ಹಂಗು ನಮಗೇಕಿನ್ನು?





Nice one
ಬಹು ಸುಂದರ ಕವನ. ಕೈಬೀಸಿ ಬೈ ಎಂದರೂ “ಚಂದ್ರಿಕೆಯ ಆಗಮನಕೆ ನೈದಿಲೆಯಂತೆ” ಕಾಯುತ್ತಿರುವ ಪ್ರೇಮಿಯ ಭಾವಗಳು ಅಂದವಾಗಿ ಮೂಡಿವೆ.
beautiful Poem with deep meaning
Dakshayani Gowda
ನವಿರು ಭಾವನೆಗಳ
ಸೊಗಸಾದ ಭಾಷೆಯ
ಅನುರಾಗ ಕವಿತೆ
ಕಾಲದ ಹಂಗು ನಮಗೇಕಿನ್ನು? ಸೂಪರ್