ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿ ಎಸ್ ಲಿಂಗದೇವರು ಕಂಡ 'ತಲ್ಲಣ'

ತಲ್ಲಣಿಸಿದ ‘ತಲ್ಲಣ’

ಬಿ ಎಸ್ ಲಿಂಗದೇವರು

2012ರ ಕೊನೆಯ ವಾರದಲ್ಲಿ ನಾನು ‘ಅಮೋರ್’ ಚಿತ್ರ ನೋಡಿ ಅದರಿಂದ ಹೊರ ಬರಲು ಇನ್ನೂ ಸಧ್ಯವಾಗಿರಲಿಲ್ಲ ಅಷ್ಟರಲ್ಲಿ ನಿರ್ದೇಶಕ ಸುದರ್ಶನ್ ರಿಂದ ‘ತಲ್ಲಣ’ ಚಿತ್ರ ವೀಕ್ಷಿಸಲು ಆಹ್ವಾನವಿತ್ತು. ನನಗೂ ಈ ಚಿತ್ರದ ಬಗ್ಗೆ ವಿಶೇಷ ಆಸಕ್ತಿ. ಯಾಕೆಂದರೆ ‘ತಲ್ಲಣ’ ಚಿತ್ರದ ಸ್ಕ್ರಿಪ್ಟ್ ರೀಡಿಂಗ್ ನಲ್ಲಿ ನಾನು ಭಾಗವಹಿಸಿದ್ದೆ.

ಒಂದೇ ಸಾಲಿನಲ್ಲಿ ‘ತಲ್ಲಣ’ ಚಿತ್ರದ ಕಥೆಯನ್ನ ಹೇಳೋದಾದ್ರೆ ಇದು ಹೆಣ್ಣು ಬ್ರೂಣ ಹತ್ಯೆ ಹಿನ್ನಲೆಯಿರುವ ಮತ್ತು ಇತ್ತೀಚಿಗೆ ಚಟವಾಗುತ್ತಿರುವ ಕಾಣೆಯಾದವಳು ಎಂಬ ಎರಡು ಘಟನೆಯನ್ನಾಧರಿಸಿದ್ದಾಗಿದೆ. ಹೆಣ್ಣು ಭ್ರೂಣ ಹತ್ಯೆ ಬಹಳ ಚರ್ಚೆಯಾಗಿರುವ ಸಾಕಷ್ಟು ಸಾಕ್ಷ್ಯ ಚಿತ್ರಗಳು ಮತ್ತು ಚಲನಚಿತ್ರವಾಗಿರುವ ವಸ್ತು. ಈ ಹಿನ್ನಲೆಯಿಂದ ನೋಡಿದ್ರೆ ಇದೇ ವಿಷ್ಯ ಇಟ್ಕೊಂಡು ಈಗ ಮತ್ತೆ ಸಿನಿಮಾ ಮಾಡೋದು ಸ್ವಲ್ಪ ರಿಸ್ಕ್! ಆದರೆ ನಿರ್ದೇಶಕರ ಜಾಣ್ಮೆ ಮತ್ತು ಕ್ರಿಯಾಶೀಲತೆಯಿಂದ ಕಾಣೆಯಾದವಳು ಇಲ್ಲಿ ಸೇರಿಕೊಂಡು ನಮ್ಮನ್ನ ಅಚ್ಚರಿಗೊಳಪಡಿಸಿದೆ. ಅಚ್ಚರಿ ಯಾಕೆಂದರೆ ಸುಮಾರು 3 ತಿಂಗಳ ಹಿಂದೆಯಷ್ಟೇ ಕರ್ನಾಟಕ ಮಹಿಳಾ ಆಯೋಗ ಸರ್ಕಾರಕ್ಕೆ ಒಂದು ವರದಿಯನ್ನು ಸಲ್ಲಿಸಿತ್ತು. ಅದು ಸಾರ್ವಜನಿಕರನ್ನು ‘ತಲ್ಲಣ’ಗೊಳಿಸಿತ್ತು ಕೂಡಾ.
ಆ ವರದಿಯಲ್ಲಿ ಸಾವಿರಾರು ಹೆಣ್ಣುಮಕ್ಕಳು ನಮ್ಮ ರಾಜ್ಯದಲ್ಲಿ ಬೇರೆ ಬೇರೆ ಕಾರಣಗಳಿಗೊಸ್ಕರ ಕಾಣೆಯಾಗುತ್ತಿದ್ದಾರೆ ಮತ್ತು ಶೇಕಡಾ 80% ಹೆಣ್ಣುಮಕ್ಕಳು ಸಿಕ್ಕಿಲ್ಲ ಎಂಬುದಾಗಿತ್ತು. ಈ ಒಂದು ವರದಿ ಚಿಂತಕರನ್ನ ಆಘಿಕಗೊಳಿಸಿತ್ತು. ಹೀಗಾಗಿ ಈ ಕಾಣೆಯಾದವಳು ವಿಷಯ ನಮ್ಮ ರಾಜ್ಯದಲ್ಲಿ ಚರ್ಚೆಯಾಗ್ತಾಯಿದೆ. ಲೇಖಕ ಮತ್ತು ನಿರ್ದೇಶಕ ಸುದರ್ಶನ್ ದೂರದ ಆಸ್ಟ್ರೇಲಿಯಾದಲ್ಲಿ ಇದ್ದುಕೊಂಡು ಮಹಿಳಾ ಆಯೋಗ ಸರ್ಕಾರಕ್ಕೆ ವರದಿ ಕೊಡುವುದಕ್ಕೂ ಮುಂಚೆನೇ ಅದನ್ನು ಯೋಚಿಸಿ ಸಿನಿಮಾ ರೂಪದಲ್ಲಿ ಬರೆದದ್ದು ಈಗ ನಮಗೆ ಅಚ್ಚರಿ ಮೂಡಿಸಿದೆ.

ಬಹಳ ಚರ್ಚಿತವಾದ ವಿಷಯಗಳನ್ನ ಇಟ್ಕೊಂಡು ಸಿನಿಮಾ ಮಾಡೋದು ‘ಅಪಾಯ’ ಕಟ್ಟಿಟ್ಟ ಬುತ್ತಿ. ಈ ಹಿನ್ನಲೆಯಲ್ಲಿ ನಾನು ಒಂದು ಉದಾಹರಣೆ ಕೊಡಲೇಬೇಕು ಅನಿಸ್ತಾ ಇದೆ. ಅದೇನೆಂದರೆ 40*30 ರ ಅಳತೆ ಸೈಟಿನಲ್ಲಿ ತುಂಬಾ ಮನೆಗಳನ್ನು ಕಟ್ಟುತ್ತಾರೆ ಅಲ್ವಾ ? ಅದರಲ್ಲಿ ಕೆಲವು ಮನೆಗಳು ನಮ್ಮ ಮನಸಿನಲ್ಲಿ ಉಳಿದುಬಿಡುತ್ತವೆ. ಯಾಕಾಗಿ…? ಜಾಗದ ಬಳಕೆ ಮೊದಲನೆಯದಾದರೆ ಮುಂದಕ್ಕೆ ಆ ಮನೆಗೆ ಬಳಸಿರುವ ವಸ್ತುಗಳು, ಬಣ್ಣ ಇತರೆಯದ್ದಾಗಿರುತ್ತದೆ. ಹಾಗಾಗಿ 30*40 ರ ಅಳತೆಯ ಮನೆ ನಮಗೆ 40*60ರ ಅಳತೆಯಲ್ಲಿ ಕಟ್ಟಿದ ಮನೆಯಾಗಿ ಭಾಸವಾಗುತ್ತೆ. ಹಾಗೂ ಲಕ್ಷ-ಲಕ್ಷ ಖರ್ಚು ಮಾಡಿರುವ ವಸ್ತುಗಳ ಮುಂದೆ ಈ ಮನೆಯಲ್ಲಿ ಕೆಲವೇ ಸಾವಿರಗಳನ್ನು ಖರ್ಚು ಮಾಡಿ ಉಪಯೋಗಿಸಿದ್ದು ವಿಶೇಷವಾಗಿ ನಮ್ಮ ಮನಸಲ್ಲಿ ಉಳಿದುಬಿಡುತ್ತೆ.
ನಾನು ಈ ಹಿನ್ನಲೆ ಗಮನದಲ್ಲಿ ಇಟ್ಕೊಂಡು ತಲ್ಲಣ ಚಿತ್ರ ಚರ್ಚೆ ಮಾಡ್ತಾ ಹೋಗ್ತಿನಿ. ಈ ಚಿತ್ರದ ಅವಧಿ ಒಟ್ಟು 109 ನಿಮಿಷ. ಇಷ್ಟು ಅವಧಿಯಲ್ಲಿ ಸಿನಿಮಾ ಕಟ್ಟಿರುವ ರೀತಿ ನಮ್ಮನ್ನು ಚಕಿತಗೊಳಿಸುತ್ತೆ. ಹಾಗೆ ಆಶ್ಚರ್ಯಗೊಳಪಡಿಸುತ್ತೆ. ಪ್ರಾರಂಭದ ಕೆಲ ನಿಮಿಷಗಳು ಪಾತ್ರ ಪರಿಚಯಕ್ಕೆ ಸೀಮಿತವಾಗಿರುತ್ತೆ. ಅದು ಮನೆಗೆಲಸ ಮಾಡುವ ಜಯಮ್ಮ ಮತ್ತು ಕುಡುಕ ಗಂಡ. ಇವರಿಗೆ 12 ವರ್ಷ ವಯಸ್ಸಿನ ಒಬ್ಬಳೇ ಮಗಳು. ಜಯಮ್ಮ ಕೆಲಸಮಾಡುವ ಮನೆಯ ಯಜಮಾನ, ಹೆಂಡತಿ ಮತ್ತು ಮದುವೆ ಮಾಡಿ ಕೊಟ್ಟಿರುವ ಒಬ್ಬಳೇ ಮಗಳು. ಈ ಎರೆಡು ಕುಟುಂಬದ ಸುತ್ತ ಸಾಗುವ ಈ ಸಿನಿಮಾ ಮಧ್ಯಮ ವರ್ಗ ಮತ್ತು ಕೆಳವರ್ಗದ ಜೀವನ ಮತ್ತು ಅವರ ದೈನಂದಿನ ಜೀವನದ ತೊಳಲಾಟ/ಹೋರಾಟವನ್ನು ಅನಾವರಣಗೊಳಿಸುತ್ತಾ ಸಾಗುತ್ತೆ.

ಜಯಮ್ಮನ 12 ವರ್ಷದ ಮಗಳು ಒಂದು ದಿವಸ ಶಾಲೆಯಿಂದ ವಾಪಾಸ್ ಬರದೆ ಕಾಣೆಯಾಗುತ್ತಳೆ. ಇಲ್ಲಿಂದ ಸಿನಿಮಾದ ವೇಗ ಕೂಡಾ ಪ್ರಾರಂಭವಾಗುತ್ತೆ. ‘ಕಾಣೆಯಾದವಳ’ ಬಗ್ಗೆ ಸಮಾಜ ಪ್ರತಿಕ್ರಿಯಿಸುವ ವಿವಿಧ ಮುಖಗಳು ನಮಗೆ ಪರಿಚಯ ಮಾಡಿಕೊಡುತ್ತಾ ಇನ್ನೊಂದೆಡೆ ಜಯಮ್ಮ ಕೆಲಸ ಮಾಡುವ ಮನೆಯ ಮಗಳ ಬ್ರೂಣ ಹತ್ಯೆಯ ಘಟ್ಟಗಳು ಮತ್ತು ಅದಕ್ಕೆ ಸಿದ್ಧಗೊಳ್ಳುವ /ಸಿದ್ಧಗೊಳಿಸುವ ರೀತಿ ಈ ಎರೆಡೂ ವಿಷಯಗಳನ್ನು ಸಿನಿಮಾ ಸೌಂದರ್ಯ ಶಾಸ್ತ್ರಕ್ಕೆ ಧಕ್ಕೆ ಬರದ ಹಾಗೆ ಅಳವಡಿಸಿರುವ ರೀತಿ ನನ್ನಂಥ ಸಿನಿಮಾ ವಿದ್ಯಾರ್ಥಿಗಳಿಗೆ ಅರಿವನ್ನ ಮೂಡಿಸುವುದರ ಜೊತೆ ಒಳನೋಟ ಬೇರೆಯದನ್ನೇ ಬಿಚ್ಚಿಡುತ್ತೆ.
ಈ ಸಿನಿಮಾದ ಇನ್ನೊಂದು ವಿಶೇಷ ಅಂದ್ರೆ ಪ್ರತಿಯೊಂದು ದೃಶ್ಯದಲ್ಲೂ ಪಾತ್ರಗಳು ಅರ್ಥಪೂರ್ಣವಾದ ಚಟುವಟಿಕೆಯಿಂದ/ಚಲನೆಯಿಂದ ನಮ್ಮನ್ನ ಆ ಪಾತ್ರದ ಒಳಗೆ ಕರೆಡದುಕೊಂಡು ಹೋಗೋದು ಅದಕ್ಕೆ ಪೂರಕವಾಗಿ ಸೂರ್ಯಕಾಂತ್ ಹೊನ್ನಾಳಿಯವರ ಕ್ಯಾಮರಾ ಚೌಕಟ್ಟು ಮತ್ತು ರಚನೆ ನಮ್ಮಗಳ ಮನಸ್ಸಿನಲ್ಲಿ ಉಳಿಯೋ ರೀತಿಯದ್ದಾಗಿದೆ. ಇದಕ್ಕೆ ಉದಾಹರಣೆಯಾಗಿ ಜಯಮ್ಮನ ಮಗಳು ಮಾರುಕಟ್ಟೆ ಮತ್ತು ಗಲ್ಲಿಗಳಲ್ಲಿ ಓಡಿ ಬರುವುದು ಇದಕ್ಕೆ ಸ್ವಾಮಿಯವರ ವಾಸ್ತವ ಸಂಕಲನ ನಿರ್ದೇಶಕರ ಅನಿಸಿಕೆಗಳನ್ನ ಸಫಲಗೊಳಿಸಿದ್ದಾರೆ. ಪಾತ್ರಧಾರಿಗಳ ಆಯ್ಕೆ ಕೂಡಾ ಪ್ರಶಂಸನೀಯ. ಜಯಮ್ಮಳಾಗಿ ನಿರ್ಮಲಾ ಚೆನ್ನಪ್ಪ, ಗಂಡನಾಗಿ ಅನಿಲ್, ಜಯಮ್ಮ ಕೆಲಸ ಮಾಡುವ ಮನೆಯ ಒಡೆಯನಾಗಿ ಶ್ರೀಧರ್, ಇನ್ಸಪೆಕ್ಟರ್ ಆಗಿ ನಾಗೇಂದ್ರ ಶಾ ಹೀಗೆ ಪ್ರತಿಯೊಂದು ಪಾತ್ರಗಳು ಅಬ್ಬರವಿಲ್ಲದೇ ಪ್ರಬುದ್ಧರಾಗಿ ನಟಿಸಿದ್ದಾರೆ.
ತನ್ನ ಮಗಳನ್ನು ಹುಡುಕಿಕೊಂಡು ಅಬಲಾಶ್ರಮಕ್ಕೆ ಹೋದಾಗ ಅಲ್ಲಿ ತನ್ನ ಮಗಳ ವಯಸ್ಸಿನ ಇನ್ನೊಬ್ಬ ಹೆಣ್ಣು ಮಗಳ ಜೊತೆ ಮುಖಾ-ಮುಖಿ, ಜಯಮ್ಮನ ಗಂಡನಿಂದ ಕಂಪ್ಲೇಂಟ್ ತನ್ನ ವಿರುದ್ಧ ಇದೆ ಎಂದು ಗೊತ್ತಾದಾಗ ಮತ್ತು ನಂತರದ ದೃಶ್ಯಗಳಲ್ಲಿ ಶ್ರೀಧರ್ ಹೀಗೆ ಒಂದೊಂದು ದೃಶ್ಯವೂ ವಿಶೇಷತೆಯಿಂದ ನೈಜತೆಗೆ ಹತ್ತಿರವಾಗಿವೆ.
ನಿರ್ದೇಶಕರ  ಒಪ್ಪಿಗೆಯಿದ್ದರೆ ಜ್ಯೋತಿಷಿಯ ಕೆಲವು ಶಾಟ್ ಗಳನ್ನ ಕತ್ತರಿ ಮಾಡಿದ್ರೆ ಉದಾಹರಣೆಗೆ ಜ್ಯೋತಿಷಿ ದಿನಪತ್ರಿಕೆ ಓದುವುದು ಇತ್ಯಾದಿಗಳನ್ನ ಆ ದೃಶ್ಯಕ್ಕೆ ಹೆಚ್ಚು ಗಾಂಭೀರ್ಯ ಸಿಗುತ್ತೆ. ಇಂಥ ಒಂದು ಸಿನಿಮಾದ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ ಮತ್ತು ನಿರ್ಮಾಪಕನಾಗಿ ಸುದರ್ಶನರವರಿಗೆ 100/100 ಅಂಕ ನೀಡಬೇಕಾಗುತ್ತೆ. ಈ ಸಿನಿಮಾ ಸಾಧ್ಯವಾಗಿದ್ದು ಸುದರ್ಶನ್ ಅವರ ಕನಸಿನಿಂದ ಮತ್ತು ಒಬ್ಬ ಕ್ರಿಯಾಶೀಲ ನಿರ್ದೇಶಕ ಪ್ರಸ್ತುತ ವಿಷಯಗಳತ್ತ ಗಮನ ಕೊಟ್ಟು ಸಾಮಾಜಿಕ ಕಳಕಳೆಯಿಂದ ಚಿಂತನೆ ಮಾಡಿದ್ರೆ, ಯೋಚಿಸಿ ಯೋಜಿಸಿದ್ರೆ ತಲ್ಲಣ ಅಂತ ಸಿನಿಮಾಗಳು ಬರಲು ಸಾಧ್ಯ ಅನ್ನೋದನ್ನ ಸುದರ್ಶನ್ ತೋರಿಸಿದ್ದಾರೆ. ಘಟನೆಗಳನ್ನ ಆಧರಿಸಿ ಕನ್ನಡ ಚಿತ್ರಗಳು ಕಡಿಮೆ. ಹಾಗಾಗಿ ತಲ್ಲಣ ಸಿನಿಮಾ ನಮ್ಮನ್ನ ಚಿಂತನೆಗೆ ಒಳಪಡಿಸಿ ಹಲವಾರು ದಿನಗಳು ಕಾಡುತ್ತೆ.

‍ಲೇಖಕರು G

23 January, 2013

ನಿಮಗೆ ಇವೂ ಇಷ್ಟವಾಗಬಹುದು…

5 Comments

  1. D.Ravivarma

    ondu olle talana vannu niididdiri cinema tappade noduve..

  2. ಮಹದೇವ ಹಡಪದ

    ಜ್ಯೋತೀಷಿ ದಿನಪತ್ರಿಕೆ ಓದುವುದು ಸಾಂಸ್ಕೃತಿಕಕ್ಕಿಂತಲೂ ಹೆಚ್ಚಾಗಿ ಮಾನವ ನಿರ್ಮಿತ ನಂಬಿಕೆಗಳ ವ್ಯಂಗ್ಯ ಅನಿಸೋದಿಲ್ಲವಾ ಬಾಸ್… ನಾನು ಸೆನೆಮಾ ನೋಡಿಲ್ಲ ಆದರೂ ನೀವು ಕತ್ತರಿ ಹಾಕಲು ಹೇಳೋ ಆ ಭಾಗವೇ ಚನ್ನಾಗಿದೆ ಅನಿಸುತ್ತೆ ನನಗೆ.

    • Lingadevaru

      But.. Picturisation looks comedy , looses its serious approach ?

  3. ಕನಕಾಪುರ ನಾರಾಯಣ

    ತಮ್ಮ ನುಡಿ ನಿಜವೇ ಸರಿ, ಪ್ರಸ್ತುತ ವಿಷಯ ಮೀಡಿಯಾಗಳಲ್ಲಿ ಮಿಂಚಿನಂತೆ ಹೀಗ್ಬ್ಂದ್ ಹಾಗೆ ಹೋಗಿಬಿಡತ್ತೆ, ಸಿನಿಮಾ ಎಲ್ಲರಿಗೂ ತಲಪುವುದು ಕಷ್ಟ, ತಲುಪಿದಲ್ಲಿ ಹೆಣ್ಣುಹೆತ್ತವರ ಮನದಾಳದಲ್ಲಿ ಜಾಗೃತಿಗೆ ಕಾರಣವಾಗತ್ತೆ.ತಮ್ಮಂತೆ ಮತ್ತಷ್ಟು ಉತ್ತೇಜನ ಸಿಕ್ಕಲ್ಲಿ ಉತ್ತಮ ಕಲಾವಿದರ ಸಿನಿಮಾಗಳೂ ತೆರೆ ಕಂಡು ಯಶಸ್ವಿಯಾಗುವುದು ಖಂಡಿತ.

  4. Anu

    ತಲ್ಲಣ ನೋಡಲು ನಾವೆಲ್ಲ ತವಕದಿಂದ ಕಾಯುತ್ತಿದ್ದೇವೆ.ಚಿತ್ರದ ಬಗ್ಗೆ ನಿರೀಕ್ಶಿಸಿದ್ದಂತೆ ಒಳ್ಳೆಯ ವಿಮರ್ಶೆಗಳು ಬರುತ್ತಿರುವುದು ನೋಡಿ ಕುಶಿಯಾಗಿದೆ. ಬೇಗ ಸಿಡ್ನಿಗೆ ಬನ್ನಿ- ತಲ್ಲಣ ತನ್ನಿ! ಅನು ಶಿವರಾಮ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading