ಬಿ ಎಂ ಬಷೀರ್
—-
ಈ ರಸ್ತೆ ಎಷ್ಟು ಸುಂದರವಾಗಿದೆ
ಜನರು ನೆಮ್ಮದಿಯಿಂದ ಓಡಾಡುತ್ತಿದ್ದಾರೆ
ಅಂಗಡಿಗಳೆಲ್ಲ ಬದುಕಿನ ಭಂಡಾರ ತೆರೆದಿಟ್ಟು
ಹೊಸ ದಿನವನ್ನು ಸ್ವಾಗತಿಸಿವೆ
ತರಕಾರಿ ಮಾರುವವರು-ಕೊಳ್ಳುವವರು
ನಗದು ಸರಕುಗಳ ಜೊತೆಗೆ
ವಿಶ್ವಾಸದ ನಗುವನ್ನು ವಿನಿಮಯಿಸಿ ಕೊಳ್ಳುತ್ತಿದ್ದಾರೆ
ಬೀದಿ ಬದಿಯ ಗಾಡಿಯೊಂದರಲ್ಲಿ
ಹುಯ್ದ ದೋಸೆಯ ಸದ್ದಿಗೆ
ಶಹರದ ಮೂಗು ಅರಳಿದೆ

ಕುರುಡ ಬಿಕ್ಷುಕನೊಬ್ಬನನ್ನು
ಹೆಣ್ಣು ಮಗುವೊಂದು ರಸ್ತೆ ದಾಟಿಸುವ
ಸೊಗಸನ್ನು ಜನರು ಮನಸು ತುಂಬಿ ನೋಡುತ್ತಿದ್ದಾರೆ
ಬಸ್ಸಲ್ಲಿ ಗರ್ಭಿಣಿ ಹೆಣ್ಣು ಮಗಳಿಗೆ
ವಿದ್ಯಾರ್ಥಿಯೊಬ್ಬ ಸೀಟು ಬಿಟ್ಟು ಕೊಟ್ಟಿದ್ದಾನೆ
ಹಿರಿಯರೊಬ್ಬರ ಭಾರವಾದ ಚೀಲವನ್ನು
ಇನ್ನಾರೋ ಎತ್ತಿ ಮೇಲಿಟ್ಟಿದ್ದಾರೆ
ಭಿಕ್ಷೆ ಬೇಡುತ್ತಾ ಬಂದ ಮಹಿಳೆಯ ಕೈಗೆ
ಒಬ್ಬ ಹತ್ತರ ನೋಟು ಇಟ್ಟು ಬಿಟ್ಟಿದ್ದಾನೆ
ಆಗಷ್ಟೇ ಡಯಾಲಿಸಿಸ್ ಮುಗಿಸಿದ ರೋಗಿ
ಆಸ್ಪತ್ರೆಯ ಬೆಡ್ ನಲ್ಲಿ
ನಿದ್ದೆ ಹೋಗಿದ್ದಾನೆ
ಯಾರೋ ಜನರಲ್ ವಾರ್ಡ್ ನಲ್ಲಿ ಹಣ್ಣು ಹಂಚುತ್ತಿದ್ದಾರೆ
ಈ ಶಹರ ಇವತ್ತು ಅದೆಷ್ಟು ನೆಮ್ಮದಿಯಿಂದಿದೆ !
ಧರ್ಮ, ದೇವರು, ಮಾನವೀಯತೆ, ತ್ಯಾಗ, ಸಂಭ್ರಮ
ಮೌಲ್ಯ, ಸಂಸ್ಕೃತಿ ಮೊದಲಾದ ಸರಕುಗಳ ಹೊತ್ತುಕೊಂಡು
ಬೀದಿಯೊಳಗೆ ಕಾಲಿಡಲು
ಕಾದು ನಿಂತಿರುವ ಹಬ್ಬಗಳೇ
ದಯವಿಟ್ಟು ಇಂದು ಬೇಡ
ನಾಳೆ ಬನ್ನಿ !






0 Comments