ಬಿ ಎಂ ಬಶೀರ್
ಬುದ್ಧನ ಮಹಾ ವಿಗ್ರಹದ ಮುಂದೆ
ಕಣ್ಮುಚ್ಚಿ ಧ್ಯಾನಸ್ಥನಾಗಿರುವ
ನನ್ನ ಸಹೋದರನೇ…
ಇರುವ ಬೆಳಕನ್ನು ತಿರಸ್ಕರಿಸಿ
ರೆಪ್ಪೆಯೊಳಗನ್ನು ಆವರಿಸಿ ಕೊಂಡ
ಕತ್ತಲಲ್ಲಿ ಏನನ್ನು ಹುಡುಕುತಿರುವೇ ?

ಶತ ಶತ ಮಾನದಿಂದ
ಕತ್ತಲನ್ನೇ ಹಾಸಿ ಹೊದ್ದ ನೀನು
ಕತ್ತಲಿಗಾಗಿ ಮತ್ತೆ ರೆಪ್ಪೆ ಮುಚ್ಚ ಬೇಕಾಗಿಲ್ಲ
ನಿನ್ನ ತೋಳುಗಳ
ಹಾವಿನಂತೆ ಸುತ್ತಿಕೊಂಡಿರುವ
ಮರದ ಬಿಳಲುಗಳ ಕೊಡವಿ ಎದ್ದು ನಿಲ್ಲು
ತೆರೆ ಕಣ್ಣನ್ನು
ನಿನ್ನನ್ನು ಆವರಿಸಿರುವ
ಬೆಳಕೆಲ್ಲವೂ ಬುದ್ಧ
ಆ ಬೆಳಕಲ್ಲಿ ಹುಡುಕು !






0 Comments