ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿ ಆರ್ ರವಿಕಾಂತೇ ಗೌಡ ಹೊಸ ಕವಿತೆ- ಪ್ರೀತಿಸು ಶಿವನ ಹಾಗೆ !

ಬಿ ಆರ್ ರವಿಕಾಂತೇ ಗೌಡ

ಪ್ರೀತಿಸು
ಶಿವನ ಹಾಗೆ !
ಮೈ ಮನಸು ತೆರೆದಿಟ್ಟು
ಪ್ರಾಣ ಒತ್ತೆಯಿಟ್ಟು
ಪ್ರೀತಿಸು ಅಷ್ಟು ಗಡದ್ದಾಗಿ
ನಿರ್ಭೀಡೆಯಿಂದ.

ಬರೀ ಬರೀ ನೆನಪುಗಳನ್ನಲ್ಲ
ಅಂದಂದಿನ ವರ್ತಮಾನವನ್ನು
ಒಂದೊಂದೇ ಅಂಗ ಉದುರಿದರೂ
ಹಿಡಿ ಅಪ್ಪು ಆ ಬೆಸುಗೆ
ಆ ಬಂಧವನ್ನೂ
ತೀವ್ರವಾಗಿ ಅರಳುವ ಹೂವೊಂದನ್ನು
ಅಪ್ಪಿರುವ ಪರಾಗದ ಘಮದಂತೆ
ಕಣ್ಣ ಕಾಪಿಡುವ ರೆಪ್ಪೆಯಂತೆ

ದಣಿದರೂ ದೇಹ
ದಣಿದರೂ ಜೀವ
ದಣಿಯದಂತೆ ಪ್ರೇಮ
ಪ್ರೀತಿಸು ಕಾಮನನ್ನೇ ಸುಟ್ಟು ಬಿಡುವಂತೆ
ಆ ಪ್ರೀತಿಯ ಕಾವು ಎಷ್ಟೆಂದರೆ
ಸುಟ್ಟ ಕಾಮ
ವಿರಾಗಗಳ ಮೀರಿ
ಫಲಿಸುವಂತೆ ! ಜ್ವಲಿಸುವಂತೆ!!
ಮತ್ತೊಮ್ಮೆ ಮಗದೊಮ್ಮೆ
ಚಿಗುರೊಡೆಯುವಂತೆ
ಬೂದಿ ಮೈದಳೆದು ಸುಳಿಯುವಂತೆ

ಪ್ರೀತಿಸು
ಮುಡಿದ ಲಜ್ಜೆಗಳು ಮುರಿಯುವಂತೆ
ಗೋಡೆ ಬಿರಿದು ಬಯಲಪ್ಪುವಂತೆ
ಅರಮನೆಯ ಸುಪ್ಪತಿಗೆಗಳಲಿ
ಅಡಗಿದ ಮುಳ್ಳೆಲ್ಲಾ ಮಿದುವಾಗುವಂತೆ

ಪ್ರೀತಿಸು
ತಟವಿಟವಿಲ್ಲದೆ ಶಿವನ ಹಾಗೆ !

‍ಲೇಖಕರು Admin

6 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading