ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿದ್ದು ಯಾರದೋ ಬಾಯಿ ಬಾವಿಗೆ!

ವೆಂಕಟೇಶ ಪಿ ಮರಕಂದಿನ್ನಿ

**

ಎಲ್ಲಿ ಹೋದವು ಗೆಳೆಯ

ನಿನ್ನ ಕನಸಿನ ದಿನಗಳು

ಮನೆಯ ಹಿತ್ತಲಲ್ಲಿ ಹೀರೆಬಳ್ಳಿಯಂತೆ

ಮನದ ಕತ್ತಲಲ್ಲಿ ನೀನು ಹಬ್ಬಿಸಿದ್ದ

ನಿನ್ನ ಮುತ್ತಿನ ದಿನಗಳು

ಎಲ್ಲಿ ಹೋದವು?

ಎಲ್ಲಿ ಹಾದವು ಗೆಳೆಯ

ಗಿಲ್ಲಿ ನಿನ್ನೆಳೆ ಎದೆಯ 

ಮಲ್ಲಿಗಿ ಕನಸ ದಿನಗಳು

ಬದುಕುಗಲ್ಲು ಕುಟ್ಟುವಾ ಏಟಿಗೆ

ಹೊಟ್ಟೆ ನುಡಿಸುವ ನಾದದಾ ತಾಟಿಗೆ

ಅಥವಾ ಇನ್ಯಾರೋ ಎಳೆದೆ ಮಿತಿಯ ಗೀಟಿಗೆ 

ಹಿಂಗಾಲು ಇಟ್ಟವಾ ಗೆಳೆಯ ಕಂಗಾಲು ಆದವಾ  

ಎಲ್ಲಿ ಕೂತವು ಎಲ್ಲಿ ಹೂತವು ಗೆಳೆಯ

ಚೆಂದ ಗೀತೆಯ ದಿನಗಳು!

ಎಲ್ಲಿ ಬಿದ್ದವು ಗೆಳೆಯ

ತಣ್ಣನೆ ಬಣ್ಣದ ದಿನಗಳು

ಗುತ್ತಿಗೆ ಬಂದ ಯಾವುದೋ ಕೊಂಕು ಗುಳ್ಳೆಗೆ

ತತ್ತಿ ಇಟ್ಟವಾ ಗೆಳೆಯ ಮುದುರಿ ಮೆಲ್ಲಗೆ

ಅಥವಾ ಸತ್ತೇ ಹೋದವಾ ಗೆಳೆಯ

ಬಿದ್ದು ಯಾರದೋ ಬಾಯಿ ಬಾವಿಗೆ!

ಎಲ್ಲಿ ಸತ್ತವು ಗೆಳೆಯ

ನೀನು ಬಿತ್ತಿದ ಫಸಲ ದಿನಗಳು

ಕಾದು ಕೂತವಾ ಬರಿ ಮೇಲ ಮಳೆಗೆ

ಹೋಗದಾದವ ಬೇರು ಕೊಸರಿ ಇಳೆಗೆ

ಕುದ್ದು ಹೋದವ ಬರೀ ಒಳಗೆ ಒಳಗೆ

ಎಲ್ಲಿ ಹೋದವು ಗೆಳೆಯ

ಹದ್ದುಗಣ್ಣಿನಾ ದಿನಗಳು

ಬಿದ್ದು ಹೋದವ ಗೆಳೆಯ

ಮುದ್ದುಗನಸಿನ ದಿನಗಳು!

‍ಲೇಖಕರು Admin MM

27 April, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading