ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿದಲೋಟಿ ರಂಗನಾಥ್ ಹೊಸ ಕವಿತೆ – ತೊಗಲ ಜೋಪಡಿ…

ಬಿದಲೋಟಿ ರಂಗನಾಥ್

ತೊಗಲ ಜೋಪಡಿಯಲ್ಲಿ
ಇರುಳ ಬೆಳಕುಡುಗಿ
ತುಡುಬೆ ಜೇನು ಕಟ್ಟಿ
ಗುಬ್ಬಿ ಗೊರವಂಕರು ಬಂದು
ಮಲಮೂತ್ರ ಮಾಡ್ಯಾರೋ

ಗುಡಿಸಬೇಕು
ಗುರಿಕೆಡಿಸಿದವರ
ಹುಡುಕಬೇಕು
ಗೆದ್ದಲ ಮದ್ದಾನೆಯೊಂದು
ಸೊಂಡಿಲೆತ್ತಿ ಬರುವಾಗ
ಕಡ್ಡಿಪೊರಕೆ ಯಾವ ಲೆಕ್ಕ ?
ಸಿದ್ಧಾದಿ ಸಿದ್ಧರು
ಕೂಡಿಸಿದ ಲೆಕ್ಕವ ಅರಿಯಬೇಕು

ಜೋಪಡಿಯೊಳಗೆ ಬಿಟ್ಟ ಹಣ್ಣು
ರುಚಿಯೊಂದಕ್ಕೆ ಅಂಗಲಾಚಿ
ನಾಲಿಗೆ ಹಾಸಿ
ಕೈ ಚಾಚಿ
ಮೊಗಚಿ ಬಿದ್ದ ಕಣ್ಣೊಂದು
ಅಲ್ಲ,ಹೆಣ್ಣೊಂದು
ಮಣ್ಣ ಮೇಲೆ ಪಾದವೂರಿ
ಹೂತಬೀಜ ಮೊಳಕೆ ಬಿರಿದು
ಗಿಡುಗನ ಗಿಳಿಯೊಂದು
ಕಿಲ ಕಿಲನೆ ನಕ್ಕು
ಅಂಗಾತ ಬಿದ್ದ ಉಸಿರು ನೆಲಕಚ್ಚಿ
ಬಾಯಿಕಚ್ಚಿ
ಉಸಿರೆಂಬೋ ಆಲಯದಲ್ಲಿ
ಕುಂಬಕರ್ಣ ನಿದ್ದೆ !

ಗೋಡೆ ಮೇಲೆ ಬಿಡಿಸಿದ ಚಿತ್ರಕೆ
ಜೀವ ಬಂದು
ಕಾಲು ಮೂಡಿ
ರೆಕ್ಕೆ ಬಂದು ಹಾರುತಿರಲು
ಒಂಟಿಕಾಲಿನ ಪಕ್ಷಿಯೊಂದು
ತೊಗಲ ಜೋಪಡಿಯಲಿ ಗೂಡುಕಟ್ಟಿ
ಹಾರಲಾಗದ ನಡೆಯಲೂ
ಆಗದ ವೇದನೆ
ನೆಲ ತಬ್ಬಿದೆ. !

‍ಲೇಖಕರು Admin

11 July, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading