ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿದಲೋಟಿ ರಂಗನಾಥ್ ಹೊಸ ಕವಿತೆ- ಒಂದೇ ಒಂದು ಕರೆಗಂಟೆ ಸದ್ದಿಗಾಗಿ…

ಬಿದಲೋಟಿ ರಂಗನಾಥ್

ಮನಸ ಮಲ್ಲಿಗಂಟಿಯ ಮೇಲೆ
ಗುಬ್ಬಿಯೊಂದು ಗೂಡುಕಟ್ಟಿ
ಗುಲಗಂಜಿ ಗಾತ್ರದ ಪ್ರೀತಿ ಹರಸಿ
ಮೊಗದ ಕನ್ನಡಿಯ ಮೌನವಾಗಿಸಿ
ನೆಲ ತಬ್ಬಿದ ಹುಣ್ಣಿಮೆಯನು
ಕಣ್ತುಂಬಿಕೊಂಡು ಪುಳಕಗೊಂಡ ಸಂಭ್ರಮ

ಮಣ್ಣಲ್ಲಿ ಗುರುತಾದ ಹೆಜ್ಜೆಯನು ಎಬ್ಬಿ
ಜೀವಕೊಡುವ ಜೀವತಂತುವಿನಲಿ
ಮಮಕಾರ ತೊಟ್ಟಿಕ್ಕುತ್ತಿರಲು
ಕರುಳು ಹಿಗ್ಗಲಿಕೆಗೊಂಡು
ಬೆಳಗಿದ ಆತ್ಮದ ಬೆಳಕು
ಬೊಗಸೆ ತುಂಬಿ
ಕತ್ತಲ ಮೈಯಿ ಬೆಪ್ಪಾಗಿ ಕೂತಿದೆ

ಇರುಳು ನೋಡುವ ಕಣ್ಣುಗಳು
ಆಸೆ ಬುತ್ತಿಯ ಬಿಚ್ಚಿದರೂ
ಉಣ್ಣಲು ಮಮಕಾರದ ಕುಡಿಯ ಚಿತ್ರಗನ್ನಡಿಯಿಲ್ಲ
ಹಾಗೇ ಗಾಳಿಯಲಿ ಬೆರೆತ ಉಸಿರು
ಜೀವ ಸೇರುವ ಬಯಕೆ
ಚಿತ್ರದಂತೆ ಚೈತ್ರ ನಗುವ ಈ ಹೊತ್ತು !

ಯಾರದೋ ಹೆಜ್ಜೆ ಸದ್ದು
ಕರುಳ ಕುಡಿಯ ನಡಿಗೆಯೆಂದು
ಬಿಕ್ಕಿ ಬಿಕ್ಕಿ ಅತ್ತ ಮೌನ ನವಿಲ ರೆಕ್ಕೆ ಬಿಚ್ಚಿ
ಭೂ ಒಡಲು ಬಣ್ಣವಾಯಿತೋ !

ಒಂದೇ ಒಂದು
ಕರೆಗಂಟೆಯ ಸದ್ದಿಗಾಗಿ ಬೆಂಡಾದ ಜೀವ
ಕೂತ ಜಾಗದ ಬೆವರಿಗೆ ಬಣ್ಣ ಬಳಿಯಲಿಲ್ಲ
ಹಕ್ಕು ಎಕ್ಕಿದ ಪರಿಗೆ ಜೋಗುಳವ ಹಾಡಿ
ನೆನಪು ಸೆರಗ ಹಾಸಿ ಕೂತು
ಕಾಲನ ಗಂಟೆಯ ಅಂಗೈಲಿ ಸ್ವರ ಮೀಟಿ
ಸಪ್ತಸಾಗರಗಳಾಚೆ
ಅಮ್ಮನ ಕಣ್ಣನಗು ಮಳೆ ತರಿಸಿ
ತಂಪಾಯಿತೋ ಜಗದ ಪರಿಶೆ.!

‍ಲೇಖಕರು Avadhi

27 February, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading