ಬಿದಲೋಟಿ ರಂಗನಾಥ್
ಗೋಡೆಯ ಮೇಲೆ ಬರೆದ ಚಿತ್ರ
ರೆಕ್ಕೆಬಿಚ್ಚಿ ಹಾರುತ್ತಿವೆ
ಪುಕ್ಕ ತರೆದ ಕೈಯ ಗುರುತು ಎದುರು ನಿಂತಿದೆ ಎದೆಯ ಭಾರವ ಕಡೆದ ಹೆಜ್ಜೆ
ಗುರುತ ಅಳಿಸಿ ಹೋಗಿದೆ
ಯಾವುದಾ ಬೀಳುವ ರೆಕ್ಕೆಯ ತಾವು
ಚಲಿಸುವ ಕಣ್ಣದಾರಿಗೆ
ಮಂಕು ಮಸುಕಾದ ಈ ಹೊತ್ತಿನಲ್ಲಿ
ಗೋಡೆಯ ಮೇಲಿನ ದೀಪ ಉರಿಯುತ್ತಿಲ್ಲ
ನೆಲದ ಮಣ್ಣು ಗೋರಿಹೋದವರು
ಒಂದು ಗಿಡವನ್ನೂ ನೆಡಲಿಲ್ಲ
ನಡುಗುವ ಕೈಯಲ್ಲಿ ನಂಬಿಕೆ ಹೆತ್ತವರು
ಕಾಮನ ಬಿಲ್ಲಿಗೆ ಮುಳ್ಳ ಚುಚ್ಚಿದರು

ಸ್ವರವಿಲ್ಲದ ಶರೀರ ಹೊತ್ತವನು
ಮುಗಿಲ ಬೆನ್ನಿಗೆ ಬೆಳಕಿನ ಕಣ್ಣು ಬಿಡಿಸುತ್ತಿದ್ದಾನೆ
ಕಾಲನ ದಾರಿಯಕೊಳದಲ್ಲಿ
ಕನಸು ಸತ್ತು ಬಿದ್ದಿದೆ
ಮೊಲ ಜಿಗಿದು ಬಿಟ್ಟ ಹೆಜ್ಜೆ ಮೇಲೆ
ಗುಲಾಬಿಯ ಪಕಳೆಗಳು ಒಣಗಿ ಬಿದ್ದಿವೆ
ಮರದ ಕೊಂಬೆ ಮೇಲೆ ಕೂತ ಹಕ್ಕಿ ಮನಸು
ಗಾಳಿಯಲಿ ತೇಲುವ ಚುಕ್ಕಿಯ ಹಿಡಿಯುತ್ತಿದೆ
ಜಿಂಕೆಯ ಕಾಲಿನಲಿ ಕೂತ ಕಾಲಗಳು
ಯಾರ ಕೈಯ ಚಪ್ಪಾಳೆಗೆ ಸಿಗುತ್ತವೋ
ಹಿಡಿ ಮಣ್ಣಿನಲಿ ಬೀಜ ಮೊಳೆಸಿ
ಚಿಗುರುವ ಕನಸಿಗೆ ಬದುಕ ಆನಿಸುವ ಆಸೆ.






0 Comments