ಆಕರ್ಷ ಕಮಲಾ

ನಾಟಕದ ಪಾತ್ರದ ಮಾತುಗಳನ್ನೆಲ್ಲ ಉರುಹೊಡೆದು
ಅಭಿನಯಿಸುತ್ತಿರುವ ಆ ಹುಡುಗನ
ಶಾಲೆಯ ರಂಗಮಂಚದ ಪರದೆಗೆ
ಮುಗ್ಧತೆಯನ್ನು ತೂಗಿಹಾಕಿ.
ಮರದ ಕಪಾಟಿನ ಒಳಗೆ,
ಧೂಳು ಹಿಡಿದ ಪಿಂಗಾಣಿಯಲ್ಲಿ
ಬದುಕಿನ ಅನಿಶ್ಚಿತತೆಯನ್ನು ತುಂಬಿಬಿಡಿ.
ಪುಟ್ಟ ಹುಡುಗಿಯು
ಗೀಚುತ್ತಿರುವ ಹಾಳೆಯ ಬಣ್ಣದ ಗೆರೆಗಳಲ್ಲಿ,
ಕನಸುಗಳನ್ನೆಲ್ಲ ಬಚ್ಚಿಟ್ಟುಬಿಡಿ.

ಸಿಮೆಂಟ್ ಗೋಡೆಗಳ ಬಿರುಕುಗಳಲ್ಲಿ
ಭಾವನೆಗಳೆಲ್ಲ ಹೂವಾಗಲಿ,
ಬಿಡಿ!
ಟ್ರಾಫಿಕ್, ಶೆಕೆ, ಧೂಳು, ಹೊಗೆ ತುಂಬಿದ
ರಸ್ತೆಗಳಲ್ಲಿ ಅಲೆದು ಬಂದು
ನಾನು ತಟ್ಟುವ ಮನೆಯ ಬಾಗಿಲಿಗೆ
ಎಲ್ಲವನ್ನು ಒಟ್ಟಿಗೆ ನೇಯ್ದು,
ಬೀಸುವ ಗಾಳಿಗೆ ಹಾಡಾಗಲಿ,
ಬಿಟ್ಟುಬಿಡಿ!






0 Comments