ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುರುತು

ಸೌಮ್ಯಶ್ರೀ ಎ ಎಸ್

ಹಳೆ ವಸ್ತುಗಳ ಕೊಳ್ಳುವವನು
ಮನೆಯ ಮುಂದೆ ನಿಂತು
ಗಂಟಲು ಹರಿಯುವಂತೆ ಕೂಗುತ್ತಿದ್ದಾನೆ
ಅವನಿಗೂ ಅನುಮಾನ!
ನಿನ್ನೆಲ್ಲಾ ನೆನಪುಗಳು
ನನ್ನೆಲ್ಲೇ ತುಂಬಿಕೊಂಡಿವೆಂದು!

ಗಟ್ಟಿ ಮನಸು ಮಾಡಿ
ಬಾಗಿಲಲ್ಲಿ ನಿಂತು ಇಣುಕಿ ನೋಡುತ್ತೇನೆ
ನನಗೂ ಎಲ್ಲಾವನ್ನೂ ಸುರಿದು ಬಿಡುವ ಮನಸು
ಆಗೊಮ್ಮೆ ಗೋಡೆಯಲ್ಲಿ
ತೂಗಾಡುತ್ತಿರುವ ಧೂಳುಗಟ್ಟಿದ್ದ
ಕನ್ನಡಿಯನ್ನೊಮ್ಮೆ ನೋಡುತ್ತೇನೆ
ಎಲ್ಲವೂ ಮಬ್ಬು ಮಬ್ಬು!

ಇದೀಗ ನನ್ನ ಗುರುತೆ
ನನಗೆ ಸಿಗುತ್ತಿಲ್ಲ ನನ್ನೆಲ್ಲಾವನ್ನು
ಬೊಗಸೆವೊಡ್ಡಿ ನಿಂತ ನಿನಗೆ
ತುಂಬಿ ಸುರಿಯುವಷ್ಟು ಧಾರೆ ಎರೆದಿದ್ದೇನೆ.
ನೀನು ನಿನ್ನ ನೆನಪುಗಳ ಮಾಲೆಯನ್ನು ಕೊರಳಿಗೆ
ಹಾಕಿಯೇ ಹೋಗಿರುವೆ
ನೋಡು ಈಗಲೂ ತೂಗುತ್ತಲೇ ಇದೆ!

ಹೆಜ್ಜೆ ಹಾಕಿದರೆ ನೆರಳಿನಂತೆ
ನನ್ನೆಡೆಗೆ ಬರುತ್ತಿರುವಂತೆ ಭಾಸವಾಗುತ್ತದೆ
ರಾತ್ರಿ ಕಣ್ಮುಚ್ಚಿದರೆ ನೀರಿನಲ್ಲಿ
ಮುಳುಗಿ ಉಸಿರುಗಟ್ಟಿ ಒದ್ದಾಡಿ
ಅಲೆಗಳಲ್ಲಿ ತೇಲಿ ಸಾಗುತ್ತಿರುವಂತಾಗುತ್ತದೆ!

ನೀನು ನಡೆದ ಹೆಜ್ಜೆಯ ಗುರುತು
ಇಷ್ಟು ಮಾಸಿಲ್ಲ
ಮತ್ತದೇ ಹಾದಿಯಲ್ಲಿ
ಮನಸು ಹೆಜ್ಜೆಗೆ ಹೆಜ್ಜೆ ಇಡಲು ಬಯಸುತ್ತದೆ
ನೆನಪಿನಲ್ಲಿ ಮಾಗಿದ ಮನಸ್ಸಿಗೂ ಮರುಳು!

ತೀರದಲ್ಲಿ ಕೂತು ನಿನ್ನನ್ನೇ
ಅನುರಣಿಸುತ್ತಾ ಏನೇನೋ ಗೀಚುತ್ತೇನೆ
ಒಮ್ಮೆಲೇ ಅಲೆ ಉಕ್ಕಿ ಬಂದು
ಮತ್ತೆ ಗುರುತೇ ಸಿಗದಂತೆ ನಿನ್ನಂತಯೇ ಅಳಿಸಿ ಮರೆಯಾಗುತ್ತದೆ
ಆದರೂ ನನ್ನ ಮನದಲ್ಲಿ ನಿನ್ನ ನೆನಪಿನದೇ
ತೂಗು ಉಯ್ಯಾಲೆ.

‍ಲೇಖಕರು Admin

5 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading