ಡಾ ನಾ ಮೊಗಸಾಲೆ
ಅಜ್ಜನೆಟ್ಟಾಲ ಇದು ಮುನ್ಸಿಪಾಲಿಟಿ ಮಂದಿ
ಕೆಡಹ ಬಂದಿದ್ದಾರೆ ರಸ್ತೆಯಗಲಕ್ಕೆ
ಇನ್ನೇನು ಒಂದೆರಡು ಗಳಿಗೆಯಲಿ ಈ ದೈತ್ಯ
ಮಗುಚಿ ಬಿದ್ದಾನಯ್ಯೊ ! ಯುಗಮುಗಿದ ಹಾಗೆ ! ||೧||
ನಿಂತು ನೋಡಿದೆ ಕೊನೆಯ ಬಾರಿ ನೋಡುವ ಹಾಗೆ
ಇನ್ನಿಲ್ಲ ಈ ಪಟ್ಟಣದಿ ಆದಿಪರ್ವ
ಕಣ್ಣುಮುಚ್ಚಿದರು ಸೊಂಡಿಲೆತ್ತಿ ಬರುವಂಥ
ಇದರ ಠೀವಿಯು ಇನ್ನು ಕನಸಿನಲಿ ಮಾತ್ರ ||೨||
ನಾಲ್ಕಾರು ತಲೆಮಾರುಗಳ ನೋಡಿದೀ ಮರದ
ಕೆಳಗೆ ಪಟ್ಟಾಂಗ ಹೊಡೆದವರೆಷ್ಟೋ ಮಂದಿ
ಗಾಂಧಿನೆಹರು ಪ್ರಭಾತಫೇರಿ ಇಲ್ಲಿನ ಯುವಕ
ರನ್ನು ಬಡಿದೆಬ್ಬಿಸಿದ ಕತೆಯಿದ್ದು ಇಲ್ಲಿ. ||೩||
ಕಾಗೆ ಕೋಗಿಲೆ ನವಿಲು ಗೊರವಂಕ ಇತ್ಯಾದಿ
ಹಕ್ಕಿಗಳ ಚಿಲಿಪಿಲಿಯಿಲ್ಲಿ ಸಂಜೆ ಮುಂಜಾನೆ
ಹಸಿರುಮುಕ್ಕಳಿಸುವೆಲೆಗಳ ನಡುವೆ ಬಿಸಿಲಕೋ
ಲಿನ ಆಟ ! ಇಹಪರವು ಇಲ್ಲಿದ್ದಂತೆ ಕಣ್ಗೆ ||೪||
ಅನೇಕಾನೇಕ ಚರ್ಚೆ ಸಂವಾದಗಳ
ಬಹುಮತ ಭಿನ್ನಮತ ಬಹುತ್ವದ
ಬೇರು ಇಳಿದಿತ್ತಿಲ್ಲಿ ಅಹಹ ! ಆಕಾಶದಲಿ
ರಾಷ್ಟ್ರಧ್ವಜವು ಹಾರಾಡುವುದು ನಿತ್ಯ ಸತ್ಯ. ||೫||

ಕೊರಳಿಲ್ಲದೆಂತು ಕೆಡಹುವುದನು ತಡೆಯುವುದಾನು ?
ಬಹುಮತಕೆ ಸಾಯಬೇಕೇ ಮರದ ಜೀವ ?
ಮಾತಿರದ ಮರವು ಮಾತಾಡೀತೇ ಭವಿಷ್ಯದಲಿ
ಪ್ರಾಣವಾಯುವಿಗಿಲ್ಲವಾಗಿ ಅವಕಾಶ ! ||೬||
ಅದೊ ಅದೋ ಬಂತೆನ್ನುವಂತೆ ಬಂತಾಕ್ಷಣವು
ಗರಗಸದ ಗರಗರಾ ಸದ್ದು ಎದೆ ಸೀಳಿ
ಆನೆ ಬಂತೊಂದಾನೆ ಎನ್ನುವುದು ಮರೆಯಾಗಿ
ಬಿತ್ತು ಮರ, ಅದೋ ಭುವಿ ನಡುಗುವಂತಾಗಿ! ||೭||






0 Comments