ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾಳನ್ನೂ ಅಳೆದಳೆದು ಹೊಲಿದು..

ಕಾತ್ಯಾಯಿನಿ ಕುಂಜಿಬೆಟ್ಟು

**

ಅಂದು

ಸುದ್ದಿಸುಯ್ಲು ಇಲ್ಲದೆ

ಮಟಮಟ ಮಧ್ಯಾಹ್ನವೇ

ನನ್ನಪ್ಪ ಸವಾರಿ

ಮನೆಗೆ ಬರುವುದೆಂದು

ಯಾರೂ ಎಣಿಸಿರಲಿಲ್ಲ.

ನನ್ನಪ್ಪ ಊರಿಗೆ ನವ್ಯ ಟೈಲರ್.

ಅವನ ಹೊಲಿಗೆ ಮಿಷನು

ಹೊಸ ಹೊಸ ವಿನ್ಯಾಸದ

ರವಕೆ ಲಂಗ ಹೊಲಿದರೂ

ಅಮ್ಮನಿಗೆ ಸೀರೆಗೆ ಗತಿಯಿರಲಿಲ್ಲ

ರೆಕ್ಕೆ ಬಿಚ್ಚಿದ ಫ್ರಾಕು ಹೊಲಿದರೂ

ನನಗೆ ರೇಶನಿನ ಚೀಟಿ ಬಟ್ಟೆಯ

ಪೆಟಿಕೋಟು

ಪ್ರತಿವರುಷ ಹೊಲಿಗೆ ಬಿಡಿಸಿ

ಉದ್ದ ಎಳೆದದ್ದೋ ಅಥವಾ

ಅಡಿಮೇಲು ಮಾಡಿ ಹೊಲಿದದ್ದೋ

ಅ-ಸಮವಸ್ತ್ರ..

ನನ್ನಪ್ಪ

ಬಟ್ಟೆ ಅಳೆದು ಕತ್ತರಿಸಿ ಹೊಲಿದಂತೆಯೇ

ಟೇಪಿನಲ್ಲೇ

ಬಾಳನ್ನೂ ಅಳೆದಳೆದು ಹೊಲಿದು

ಅದರೊಳಗೆ ನನ್ನನ್ನು ತುರುಕಿ

ಬಾಯಿ ಹೊಲಿದು  ಬಿಟ್ಟ

ನನ್ನಪ್ಪ ನೇಲ ಸೈಂದವ

ಸೈಂಗೋಲಲ್ಲೇ ಕಲ್ಲಕಂಬಗಳನ್ನು

ಪೆರಡಿಸಿ ಪೆರಡಿಸಿ

ತಂದು ನೆಟ್ಟು ಪಾಗರ ಕಟ್ಟಿದ

ಹೆಂಡತಿ ಮಕ್ಕಳು ಕಣ್ಣು ಕಿವಿ

ಬಾಯಿ ಮುಚ್ಚಿಕೊಂಡೇ

ಅವ ಕರುಣಿಸುವ ಹಿಡಿ ಗಾಳಿಯಲ್ಲೇ

ದಮ್ಮುಕಟ್ಟಿ ಉಸಿರಾಡಲಿ ಎಂದು

ತಲೆ ತುದಿ ಕಂಡರೆ ಸಾಕು

ಇಲಿ ಕಂಡ ಹಾವಿನಂತೆ

ಫೂತ್ಕರಿಸಿ ಭುಸುಗುಟ್ಟಿ

ಅವಾಚ್ಯ ಶಬ್ದಗಳಿಂದ ಊರೇ

ಮೈಲಿಗೆಯಾಗುವಂತೆ ಕೂಗಾಡಿ

ಇರುಳ ಶಾಂತಿಯ ತಿಳಿ ನೀರನ್ನು

ಕದಡಿ ಬಿಡುತ್ತಿದ್ದ.

ಊರಿಗೆ ಹುಚ್ಚ.

ಇಷ್ಟೆಲ್ಲ ಪುರಾಣ

ಯಾಕೆಂದರೆ

 ಅಂದು

ಸುದ್ದಿಸುಯ್ಲು ಇಲ್ಲದೆ

ಮಟಮಟ ಮಧ್ಯಾಹ್ನವೇ

ನನ್ನಪ್ಪ ಸವಾರಿ

ಮನೆಗೆ ಬರುವುದೆಂದು

ಯಾರೂ ಎಣಿಸಿರಲಿಲ್ಲ.. ದೇವರ ಪಟದ ಗೂಡಿನ ಗುಬ್ಬಚ್ಚಿಯೂ ಪಾಪಚ್ಚಿ ನಾನೂ

ಚಿಕ್ಕಿ ಮನೆಯ ಕೆಂಪು ಕೆಂಪು ಜಗಲಿ.

ಆಚೆಮನೆಯ ಚಿಕ್ಕಿ

ನನ್ನಪ್ಪನ ಚಿಕ್ಕಮ್ಮನಾದರೂ

ನನ್ನಪ್ಪನ ನಾಲಗೆಯ ಅಲಗಿಗೆ

ನಿತ್ಯ ಬಲಿಪಶು. 

ಇಲ್ಲ ಅವನಿಗೂ ಅವಳಿಗೂ

ಅನ್ನ ನೀರು.

ಇಷ್ಟೆಲ್ಲ ಪುರಾಣ

ಯಾಕೆಂದರೆ

ಅಂದು

ಸುದ್ದಿಸುಯ್ಲು ಇಲ್ಲದೆ

ಮಟಮಟ ಮಧ್ಯಾಹ್ನವೇ

ನನ್ನಪ್ಪ ಸವಾರಿ

ಮನೆಗೆ ಬರುವುದೆಂದು

ಯಾರೂ ಎಣಿಸಿರಲಿಲ್ಲ.. ನಾನೂನೂ

ಮೇಫ್ಲವರ್ ಹೂ ಕೇಸರಗಳಲ್ಲಿ

ಕೋಳಿಕಟ್ಟ ಆಡುತ್ತಿದ್ದೆ

ಮಿಣ್ಣುವಿನೊಡನೆ ಅಲ್ಲಿ,

ಎಲ್ಲಿದ್ದನೋ

ದಡಬಡ ಅಪ್ಪ ಮನೆಗೆ

ಬಂದೇ ಬಿಟ್ಟ

ನನ್ನನ್ನಿಲ್ಲಿ ನೋಡೇಬಿಟ್ಟ

ಕೊಂಬಲ್ಲಿ ಮಣ್ಣು ಕೆದರಿ

ಮೂಗಿನ ಹೊಳ್ಳೆ ಅರಳಿಸಿ

ಕೆಂಗಣ್ಣಲ್ಲಿ ಗುಟುರು ಹಾಕಿತು ಗೂಳಿ – ಮಹಿಷಾಸುರ

ಎಚ್ಚಿಡಲ್ಲಿ ನಾಲಗೆಗೆ ಗಗ್ಗರ ಕಟ್ಟಿ

ಕೂಗಿತು ಮರ್ಲು ಜುಮಾದಿ

ಬಾ .. ಇಲ್ಲಿ ಬಾ..

ನಡುನಡುವೆ ನನ್ನಮ್ಮನಿಗೆ

ಯಾಕೆ ಹೋಗಲು ಬಿಟ್ಟೆ ರಂಡೆ ಮುಂಡೆ ಜತೆಗೆ ಕಪಾಳ ಮೋಕ್ಷ

ಅಮ್ಮಾ.. ಎಂದು ಅತ್ತು ಅತ್ತು

ಥರಥರ ತತ್ತರ ಮೈಯಿಡೀ ಕಂಪಿಸುತ್ತ ಜಗಲಿಯಿಂದ ಹಾರಿ

ಓಡಿ  ಬಂದೆ ಪುಟಾಣಿ ಪಾದಗಳಲ್ಲೇ..

ಅಮ್ಮನೂ ಓಡಿ ಬಂದು

ಅಪ್ಪಿಕೊಂಡಳು ನನ್ನ.

ನನ್ನನ್ನು ಎಳೆದು

ನೆಲಕ್ಕೆ ದೂಕಿ

ಡವಗುಟ್ಟುವ ಎದೆಯ ಮೇಲೆ

ಬಲಗಾಲಿಟ್ಟು

ಕಿರುಚಿದ,

ಹೆಣ್ಣೇ..

ಹೊಸ್ತಿಲು ದಾಟಿ ಹೋಗು ನೋಡುವ ಈಗ.. ಬೋಸುಡಿ ದಗಣೆ.

ಇಲ್ಲ .. ಇಲ್ಲ.. ಹೋಗುವುದಿಲ್ಲ

ಅಪ್ಪಾ .. ಬಿಟ್ಟು ಬಿಡು ದಮ್ಮಯ್ಯಾ ಅರಚಿದೆ ಗೋಳಿಡುತ್ತ.

ಅಮ್ಮ ಓಡಿ ಬಂದು

ಎತ್ತಿಕೊಂಡಳು

ಎದೆಗೆ ಅಪ್ಪಿಕೊಂಡಳು 

ನಾನು ಧ್ವನಿ ಕಳಕೊಂಡೆ

ಜತೆಗೇ

ಬಾಲ್ಯವನ್ನೂ, ಅದರ  ರೆಕ್ಕೆಯನ್ನೂ.’

‍ಲೇಖಕರು Admin MM

10 May, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading