ಹೈವೇ 7
——-
ಅನಾಥವಾಗಿದ್ದ ಹಲಸಿನ ಮರ ಫಲ ನೀಡದ ಬಂಜೆಯಾಗಿ, ನೆರಳು ನೀಡುತ್ತಿದ್ದು ಆಯಿಲ್, ಗ್ರೀಸ್, ವಿಷಯುಕ್ತ ಕೆಮಿಕಲ್ ನಿಂದ ಸುಟ್ಟು ಕ್ರಮೇಣ ಯಾವುದೋ ರೋಗ ತಗುಲಿ, ಒಂದೆಲೆಯೂ ಇಲ್ಲದೆ ಆ ಹೆಣ್ಣಿನಂತಾಗಿ ಹೋಯಿತು. ನಂತರ ಅವಳ ಬಂಗಲೆ ಟ್ರಕ್ ಗ್ಯಾರೇಜ್, ಗುಜರಿ, ಪಂಕ್ಚರ್ ಶಾಪ್, ದಿಕ್ಕಿಲ್ಲದವರಿಗೆ ಗುಡಾರವಾಗಿ ನಂತರ ಸಂಪೂರ್ಣವಾಗಿ ಹೆದ್ದಾರಿಗೆ ನಿರ್ನಾಮವಾಯಿತು.
ಭಾಗ : ಏಳು
ವಿ ಎಂ ಮಂಜುನಾಥ್
ನಾನು ನನ್ನ ಬಾಲ್ಯದಲ್ಲಿ ಬಹು ಹತ್ತಿರದಿಂದ ಕಂಡ ಇಲ್ಲಿನ ಕೆಲವು ಕಾಮಧುರಂಧರೆಯರನ್ನು ನನ್ನ ನೆನಪಿನಾಳದಿಂದ ಮತ್ತೊಮ್ಮೆ ನಿಮ್ಮೆದುರಿಗೆ ಬೆತ್ತಲಾಗಿಸುವುದು ನನಗೆ ಅಪಾರ ನೋವು ತರಿಸಿ, ಹಾಗೆ ಮಿಂಚಿನಂತೆ ಮರೆಯಾಗುವುದು ಸತ್ಯ.
ಪುಟ್ಟಸ್ವಾಮಿ ಆಚಾರಿಯ ಹೆಂಡತಿ ಅಶ್ವತ್ಥಮ್ಮ, ನಮ್ಮೆಲ್ಲರನ್ನೂ ಸಾಕಿ ಸಲಹಿದವಳು. ಗನ್ ಮೆಕ್ಯಾನಿಕ್ ಶೇಖ್ ಹುಸೇನ್ ನ ಪ್ರೇಯಸಿಯಾಗಿಯೂ ಕಾಲ ನೂಕಿದ ಈಕೆ, ತನ್ನ ಬಂಗಲೆಯ ಕಾಂಪೌಂಡಿನ ಗೇಟಿನಲ್ಲಿ ಇಳಿಸಂಜೆಗಳಲ್ಲಿ ದಿನಕ್ಕೊಂದು ಬಣ್ಣದ ಸೀರೆಯ ಮೇಲೆ ಕಪ್ಪು ಗೌನ್ ಧರಿಸಿ, ದುಂಡು ಮಲ್ಲಿಗೆ ಮುಡಿದುಕೊಂಡು ನಿಲ್ಲುತ್ತಿದ್ದ ಈ ಕಪ್ಪು ಸುಂದರಿಯ ಬದುಕು ಶ್ರೀಮಂತಿಕೆಯಲ್ಲಿ ತೂಗುತ್ತಿತ್ತು. ನಾವು ಉಪವಾಸ ಬಿದ್ದ ದಿವಸಗಳಲ್ಲಿ ನನ್ನ ಅಮ್ಮನ ಸೆರಗಿನ ತುಂಬ ಅನ್ನವನ್ನು ತುಂಬಿ ಕಳುಹಿಸಿದ ಮಹಾತಾಯಿ. ಕೆಂಪು ಬಣ್ಣದ ಸಿಹಿ ಮೋಟು ಹೂಗಳನ್ನು ಬಿಡುವ ಗಿಡಗಳನ್ನು ತನ್ನ ಬಂಗಲೆಯ ಸುತ್ತಲೂ ತೋಟದಂತೆ ಬೆಳೆಸಿಕೊಂಡಿದ್ದ ಈಕೆಯನ್ನು ನಾವು ಗೌರವಿಸುತ್ತಿದ್ದೆವು. ಗಂಡ ಪುಟ್ಟಸ್ವಾಮಿ ಆಚಾರಿ, ಹಲಸಿನ ಮರದ ಕೆಳಗೆ ಬಂಡಿಗಾಲಿಗಳಿಗೆ ಕಬ್ಬಿಣದ ಪಟ್ಟಿ ಮಾಡುವುದರಿಂದ ಹಿಡಿದು, ಕುಲುಮೆ ಕೆಲಸದವರೆಗೂ ಎಲ್ಲವನ್ನೂ ನಿರ್ವಹಿಸಿಕೊಂಡು ಜೀವನ ಸಾಗಿಸುತ್ತಿದ್ದ ಆತನನ್ನು ನಾವು ಹಚ್ಚಿಕೊಳ್ಳುತ್ತಿರಲಿಲ್ಲ. ಮುಸ್ಲಿಂ ಮಕ್ಕಳೊಡಗೂಡಿ ನಾವೆಲ್ಲರೂ ಅವರ ಬಂಗಲೆಯ ಸುತ್ತ ಯಾವಾಗಲೂ ಆಟವಾಡಲು ಹೋಗುತ್ತಿದ್ದೆವು. ಅವರ ಬಂಗಲೆಯ ಅಂಗಳದಲ್ಲಿ ನುಗ್ಗೆಮರ, ಬೋಗನ್ ವಿಲ್ಲಾ, ಆಳದ ಬಾವಿ ಇತ್ತು. ಇವರಿಗೆ ಆಗಲೇ ಬೆಳೆದ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣುಮಗಳಿದ್ದಳು.
ಕಾಲಾಂತರದಲ್ಲಿ ಆಚಾರಮ್ಮನ ಗಂಡ ತೀರಿಕೊಂಡ. ಸಮೃದ್ಧಿಯಾಗಿದ್ದ ಹಲಸಿನಮರ ಕಳೆ ಕಳೆದುಕೊಂಡಿದ್ದು ನಮ್ಮ ಅರಿವಿಗೆ ಬರಲಿಲ್ಲ. ಸೂರ್ಯಕಾಂತಿ ಹೂವಿನಂತೆ ಸೊಗಸಾದ ನೆಟ್ ನ ತುರುಬು ಕಟ್ಟುತ್ತಿದ್ದದ್ದು ಸಡಿಲಗೊಂಡು ತಲೆಗೂದಲು ಇಳಿಯತೊಡಗಿತ್ತು. ಬಂಗಲೆಯ ಒಂದು ಪುಟ್ಟ ಮನೆಯನ್ನು ಸಾರಾಯಿ ಅಂಗಡಿಗೆ ಬಾಡಿಗೆಗೆ ಬಿಟ್ಟುಕೊಟ್ಟಳು. ಮದ್ಯ ಅವಳನ್ನು ತಣಿಸತೊಡಗಿತ್ತು. ಕುಡಿತಕ್ಕೆ ಬರುತ್ತಿದ್ದ ಅನೇಕರಲ್ಲಿ ಸರ್ಕಾರಿ ಉದ್ಯೋಗಸ್ಥನೊಬ್ಬ ಅವಳ ನಿಕಟ ಸಂಬಂಧ ಬಯಸಿದ. ದೇಹಕ್ಕೆ ತಕ್ಕಂತೆ ಅವಳನ್ನು ಅನುಭವಿಸತೊಡಗಿದ. ಮುಖದಲ್ಲಿ ಯಾವೊಂದು ಕಲೆಯೂ ಇರದ ಅವಳಲ್ಲಿ, ಅವನಿಂದ ಮೈ ಪೂರ್ತಿ ಹೊಡೆತದ ಗುರುತುಗಳು ಹಬ್ಬತೊಡಗಿದವು. ಅವಳಲ್ಲಿದ್ದ ದುಡ್ಡು ಖಾಲಿಯಾಗತೊಡಗಿತು. ಒಂದು ಕಾಲಕ್ಕೆ ಹಾದಿಬೀದಿಯ ಪರದೇಸಿಗಳಿಗೆ ಹಲಸಿನ ಹಣ್ಣನ್ನು ಹಂಚುತ್ತಿದ್ದವಳು, ಈಗ ಅದನ್ನು ಮಾರಿಕೊಳ್ಳಲಾರಂಭಿಸಿದಳು. ನಾನು, ನನ್ನ ಅಣ್ಣ ಆಚಾರಮ್ಮನಿಗೆ ಸಾರಾಯಿ ತಂದುಕೊಡಲು ಹೋಗುತ್ತಿದ್ದೆವು. ಒಂದು ಕ್ವಾರ್ಟರ್ ಬಾಟಲ್ ಗೆ ಒಂದು ರೂಪಾಯಿ ಕೊಡುವುದರ ಜೊತೆಗೆ, ಬಾಟಲ್ ಹಿಂದಿರುಗಿಸಿದಾಗ ಐವತ್ತು ಪೈಸೆ ಸಿಗುತ್ತಿತ್ತು. ಸಂಜೆ ಮಾತ್ರ ಕುಡಿಯುತ್ತಿದ್ದವಳು, ಬೆಳಗ್ಗೆಯಿಂದಲೇ ಕುಡಿದು ತೂರಾಡತೊಡಗಿದಳು. ದೇಹ ಕೃಶವಾಗತೊಡಗಿತು. ಹರಿದ ಸೀರೆ ಉಡುವ ಸ್ಥಿತಿಗೆ ಬಂದಾಗ ನಾವೆಲ್ಲರೂ ಆಕೆಯಿಂದ ದೂರವಾಗಲಿಲ್ಲ. ಆದರೆ ದೊಡ್ಡವರೆಲ್ಲರೂ ಮನಸೋ ಇಚ್ಛೆ ಆಡಿಕೊಳ್ಳತೊಡಗಿದರು. ಇಟ್ಟುಕೊಂಡಿದ್ದವನು ಅವಳನ್ನು ಎಳೆದು ತಂದು ಬೀದಿಯಲ್ಲಿ ಬಡಿಯುತ್ತಿದ್ದ. ರಸ್ತೆಯಲ್ಲಿ ಬಿದ್ದರೂ ಅವನ ಕಾಲುಗಳನ್ನು ಬಿಡುತ್ತಿರಲಿಲ್ಲ. ಅನೇಕ ಗಂಡಸರು ಅವಳಲ್ಲಿ ಬಂದು ಹೋಗುವ ಹೊತ್ತಿಗೆ, ಅವಳ ಮಕ್ಕಳು ತಾಯಿಯನ್ನು ಸೂಳೆಯೆಂದು ಭಾವಿಸಿ ಕಡೆಗಾಣಿಸಿದರು.
ಆಕೆ ಚರ್ಚಿನ ಗೇರುಮರದ ಕೆಳಗೆ ಬೇರೊಬ್ಬ ಗಂಡಸಿನ ಜೊತೆ ಆವೊತ್ತು ಮಧ್ಯಾಹ್ನ ಮಲಗಿದ್ದಳು. ಇವಳ ಚಿಕ್ಕಮಗ, ಸಂಬಂಧಿಕನನ್ನು ಕರೆದುಕೊಂಡು ಹೋದವನು, ಬಿದಿರುಕೋಲು ಮುರಿದುಕೊಂಡು ಇಬ್ಬರನ್ನೂ ಬಾರಿಸತೊಡಗಿದ. ಮೈಮೇಲೆ ಕಿಂಚಿತ್ ಬಟ್ಟೆಯೂ ಆಕೆಯಲ್ಲಿ ಉಳಿದಿರಲಿಲ್ಲ. ನಾವೆಲ್ಲರೂ ನಿಂತು ನೋಡುತ್ತಿದ್ದೆವು. ಬೆನ್ನಿನ ಮೇಲೆ ದೊಡ್ಡ ಬರೆಗಳು ಎದ್ದಿದ್ದವು. ಅವಳಿದ್ದ ಸ್ಥಿತಿಯಲ್ಲೇ ಅವಳನ್ನು ಎಳೆದು ತಂದು, ಅವಳ ಬಂಗಲೆಯ ಹಲಸಿನ ಮರದ ಕೆಳಗೆ ಬಿಸಾಡಿ, ಮನ ಬಂದಂತೆ ಒದ್ದು ಹಾಕಿದರು. ಆಚಾರಮ್ಮ ಅಳುತ್ತಿರಲಿಲ್ಲ, ನಶೆಯಿಂದ ಕಿರುಚಾಡುತ್ತಿದ್ದಳು.
ಬೆಳಗಿನ ಜಾವ ಏಳೂವರೆಯಾಗಿತ್ತು. ಅಪ್ಪ, ಅಮ್ಮ ನಮ್ಮನ್ನು ಅಲ್ಲಿಗೆ ಹೋಗಲು ಬಿಡಲಿಲ್ಲ. ಜನ ಸೇರಿದ್ದರು. ಆಚಾರಮ್ಮ ತೀರಿಕೊಂಡಿದ್ದಳು. ರಾತ್ರೆ ಪೂರ್ತಿ ಸಾರಾಯಿ ಕುಡಿದಿದ್ದ ಅವಳು ಮತ್ತೆಂದಿಗೂ ಏಳಲಾರದ ಪ್ರಮತ್ತತೆಗೆ ಇಳಿದುಹೋಗಿದ್ದಳು. ಅವಳ ಪಾದಗಳಿಂದ ಹಿಡಿದು, ಕಣ್ಣು, ಕಿವಿ, ನಾಲಗೆಯ ಒಟ್ಟು ತಲೆಯವರೆಗೆ ವಿಷದ ಕಟ್ಟಿರುವೆಗಳು ಹರಿದು ಕಡಿದು ಹಾಕಿದ್ದವು. ಮೈಮೇಲೆ ಉಡುಪಿರಲಿಲ್ಲ. ಅವಳ ಮೈಗೆ ಬೂದಿಯನ್ನು ಎರೆದು ಕಟ್ಟಿರುವೆಗಳನ್ನು ಓಡಿಸಿದ್ದರು. ಚಿಕ್ಕದಾದ ಒಲೆಯ ಮುಂದೆ ಆಚಾರಮ್ಮನ ಹೆಣ ಬಿದ್ದಿದ್ದರೆ, ಅವಳ ಜೊತೆ ಮಲಗಿದ, ಪಿಸುಮಾತುಗಳಿಂದ ಅವಳನ್ನು ತುಂಬುತ್ತಿದ್ದ ಗನ್ ಮೆಕ್ಯಾನಿಕ್ ಶೇಖ್ ಹುಸೇನ್ ಮಾತ್ರ ಹೊರಬರಲೇ ಇಲ್ಲ.
ಅನಾಥವಾಗಿದ್ದ ಹಲಸಿನ ಮರ ಫಲ ನೀಡದ ಬಂಜೆಯಾಗಿ, ನೆರಳು ನೀಡುತ್ತಿದ್ದು ಆಯಿಲ್, ಗ್ರೀಸ್, ವಿಷಯುಕ್ತ ಕೆಮಿಕಲ್ ನಿಂದ ಸುಟ್ಟು ಕ್ರಮೇಣ ಯಾವುದೋ ರೋಗ ತಗುಲಿ, ಒಂದೆಲೆಯೂ ಇಲ್ಲದೆ ಆ ಹೆಣ್ಣಿನಂತಾಗಿ ಹೋಯಿತು. ನಂತರ ಅವಳ ಬಂಗಲೆಯಲ್ಲಿ ಟ್ರಕ್ ಗ್ಯಾರೇಜ್, ಗುಜರಿ, ಪಂಕ್ಚರ್ ಶಾಪ್, ದಿಕ್ಕಿಲ್ಲದವರಿಗೆ ಗುಡಾರವಾಗಿ ನಂತರ ಸಂಪೂರ್ಣವಾಗಿ ಹೆದ್ದಾರಿಗೆ ನಿರ್ನಾಮವಾಯಿತು.
ಆಚಾರಮ್ಮನ ನಂತರದ ಪೀಳಿಗೆಯವರಾದ ಮುಸ್ಲಿಂ ಹೆಣ್ಣು ಗುಲಾಬ್ ಮತ್ತು ತಮಿಳುನಾಡಿನ ಸುಂದರಮ್ಮ ಇಬ್ಬರೂ ಎರಡು ತಲೆ ಒಂದೇ ದೇಹದಂತಿದ್ದ ಇವರಿಬ್ಬರ ಬಗ್ಗೆ ಪ್ರತ್ಯೇಕವಾಗಿ ಹೇಳಿದರೆ ಅಸಂಬದ್ಧ ಕಥನವಾಗುವುದರಿಂದ ಒಂದೇ ನಿರೂಪಣೆಯಲ್ಲಿ ಹೇಳಲಿಚ್ಛಿಸುತ್ತೇನೆ. ಸುಂದರಮ್ಮ ಮತ್ತು ಗುಲಾಬ್ ನಮ್ಮ ಮನೆಯ ಹಿಂದೆ ವಾಸವಿದ್ದರು. ಇಬ್ಬರಿಗೂ ಮದುವೆಯಾಗಿತ್ತು. ಗುಲಾಬ್ ಗೆ ಭಟ್ಟಿ ಸಾರಾಯಿ ವ್ಯಾಪಾರದ ರಶೀದ್ ಗಂಡನಾಗಿದ್ದರೆ, ಸುಂದರಿಗೆ ಗಡಿಭದ್ರತಾ ಪಡೆಯಲ್ಲಿ ಕ್ಷೌರಿಕ ವೃತ್ತಿಯಲ್ಲಿದ್ದ ಮೋಹನ್ ಕುಮಾರ್ ಗಂಡನಾಗಿದ್ದ. ಈತ ಅರೆಹುಚ್ಚನೆಂದು ಅವಳು ಮರ್ಯಾದೆ ಕೊಡುತ್ತಿರಲಿಲ್ಲ. ಯಾವಾಗಲೂ ಬೆನ್ನು ಬಗ್ಗಿಸಿಕೊಂಡು ಕುಕ್ಕರುಗಾಲಿನಲ್ಲಿ ಬೀಡಿ ಸೇದುತ್ತಾ ಮೂಲೆಯಲ್ಲಿ ಬಿದ್ದಿರುತ್ತಿದ್ದ. ಕ್ರಮೇಣ ಇವನಿಗೆ ಹುಚ್ಚು ಅತಿಯಾದಂತಾಗಿ ಗಡಿಭದ್ರತಾ ಪಡೆಯವರು ಕೆಲಸದಿಂದ ಕಿತ್ತು ಹಾಕಿದರು. ನಂತರವೇ ಆತ ನಿಜವಾಗಿಯೂ ಹುಚ್ಚನಾದದ್ದು. ಗುಲಾಬ್ ಮತ್ತು ಸುಂದರಿ ಇಬ್ಬರೂ ಒಟ್ಟಿಗೆ ಹೊರಗೆ ಹೋಗುತ್ತಿದ್ದರು. ರಶೀದ್ ಇಲ್ಲದ ವೇಳೆ ಗುಲಾಬ್ ಗಾಜಿನ ಲೋಟಕ್ಕೆ ಸಾರಾಯಿ ಬಗ್ಗಿಸುತ್ತಿದ್ದಳು. ನಾನು ನನ್ನ ಅಪ್ಪನ ಜೊತೆ ಅವಳ ಮನೆಗೆ ಹೋಗುತ್ತಿದ್ದೆ. ಅಪ್ಪ ಇವಳ ಮನೆ ಹೊಕ್ಕವನೇ, ಅಡ್ಡಗೋಡೆಯ ಮೇಲಿರಿಸಿದ್ದ ಗಾಜಿನ ಲೋಟ ತೆಗೆದುಕೊಂಡು ನೀರಿನಿಂದ ತೊಳೆದು ಅವಳ ಮುಂದೆ ಕೈ ಒಡ್ಡುತ್ತಿದ್ದ.
ಹೀಗೆ ರಸ್ತೆ ಪಕ್ಕದ ಇವಳದ್ದೇ ಅಂಗಡಿಯನ್ನು ಬಶೀರ್ ಎಂಬುವವನಿಗೆ ಬಾಳೆಮಂಡಿಗೆ ಬಾಡಿಗೆ ಕೊಟ್ಟಳು. ಕವ್ವಾಲಿ, ಗಝಲ್ ಗಳನ್ನು ನಿತ್ಯವೂ ಹೇಳುತ್ತಿದ್ದ ಬಶೀರ್, ಗುಲಾಬ್ ಳ ಬೆನ್ನಟ್ಟಿದ್ದ. ಯಾರಿಗೂ ಗೊತ್ತಾಗದಂತೆ ಗುಲಾಬ್ ಕೂಡ ಬಶೀರ್ ನನ್ನು ಆರಾಧಿಸತೊಡಗಿದ್ದಳು. ಇಬ್ಬರೂ ಬಾಳೆಮಂಡಿಯಲ್ಲಿ ಸಂಧಿಸುತ್ತಿದ್ದರು. ಗುಲಾಬ್ ಳ ಅತ್ತೆ ಕಡೆಯವರೆಲ್ಲರೂ ಬಂದು ಬಶೀರ್ ನನ್ನು ಬಡಿದು ಪೊಲೀಸ್ ಗೆ ಒಪ್ಪಿಸಿದರು. ಪ್ರಯೋಜನವಾಗಲಿಲ್ಲ, ನಡುರಾತ್ರೆ ಗುಲಾಬ್ ಳ ಕೋಣೆಗೆ ನಿಂತು ಕವ್ವಾಲಿ ಹಾಡುತ್ತಿದ್ದ. ಇದಕ್ಕಾಗಿಯೇ ಎಚ್ಚರಗೊಂಡಂತಿದ್ದ ಗುಲಾಬ್, ಗಂಡನ ಎದುರಿಗೆ ಬಶೀರ್ ನ ಬಳಸಿ, ಚುಂಬಿಸಿ ಅವನ ಹಿಂದೆ ಹೊರಟೇಹೋದಳು.
ಇತ್ತ ಹುಳುವಿನಂತೆ ಕತ್ತಲೆಯಲ್ಲಿ ನರಳಾಡುತ್ತಿದ್ದ ಸುಂದರಿಯ ಗಂಡ ತೀರಾ ಇಳಿದು, ಅವಳ ಗುಲಾಮನಾಗಿ ಹೋಗಿದ್ದ. ದಾರಿಯಲ್ಲಿ ನಡೆದು ಹೋಗುತ್ತಿದ್ದವನು, ದೇವರ ಸೇವಕನೆಂದು ಹೇಳಿಕೊಂಡು ಸುಂದರಿಯ ಹತ್ತಿರ ನುಸುಳಿ ಬಂದಿದ್ದ ಕಾಮುಕ ಸ್ವಾಮೀಜಿ, ಇವರ ಮನೆಯಲ್ಲೇ ಉಳಿದುಕೊಂಡಿದ್ದ. ಆ ಸಂಜೆ ಮಂಚದ ಮೇಲೆ ದೇವರು ಮೈಮೇಲೆ ಬಂದಿದೆಯೆಂದು ಬೆತ್ತಲೆ ಬಿದ್ದಿದ್ದ ಸ್ವಾಮೀಜಿಯನ್ನು ಸುಂದರಿ, ತಬ್ಬಿಕೊಂಡು ಸಂತೈಸುತ್ತಿದ್ದಳು. ಕಡೆಗೆ ಅವನಿಗೆ ದೇವರು ಇಳಿದಂತಾಗಿ ಬಿದ್ದುಕೊಂಡಾಗ ಸುಂದರಿ ಸ್ವತಃ ಕೈಯ್ಯಾರೆ ಅವನಿಗೆ ಕಾಚಾ ಹಾಕಿದಳು. ಸುಂದರಿಯ ಗಂಡ ನೋಡುತ್ತಾ ಕುಳಿತಿದ್ದರೆ, ನಮ್ಮೊಟ್ಟಿಗೆ ಅವರ ಮಕ್ಕಳು ಕೂಡ ಕುತೂಹಲದಿಂದ ದಿಟ್ಟಿಸುತ್ತಿದ್ದರು.
ಸುಂದರಿಯ ಗಂಡ ಮೋಹನ್ ಕುಮಾರ್ ಮದ್ರಾಸ್ ಸೇರಿಕೊಂಡ. ಸ್ವಾಮಿ ಸುಂದರಿಯ ಜೊತೆ ಮಲಗಿ ಸುಸ್ತಾದವನು, ಯಾವುದೋ ರಾತ್ರೆ ಎದ್ದು ಹೋದ. ಶಿವಾಜಿನಗರದ ಟಿಂಕರ್ ಕೆಲಸ ಮಾಡುವ ಸಾಹೇಬ್ ಒಬ್ಬ ಸುಂದರಿಯನ್ನು ಇಟ್ಟುಕೊಂಡ. ಇವಳ ಮಕ್ಕಳು ಇವಳನ್ನು ತಿರಸ್ಕರಿಸಿ ತಮ್ಮ ತಮ್ಮ ಬದುಕನ್ನು ಕಟ್ಟಿಕೊಂಡರು. ಟಿಂಕರ್ ಸಾಹೇಬ್, ಸುಂದರಿಯನ್ನು ದುಡ್ಡಿಗಾಗಿ ಹಿಂಸಿಸತೊಡಗಿದ. ಇವನನ್ನು ಬಿಡದ ಸುಂದರಿ, ಬಯಸಿ ಬರುವ, ತಾನು ಹುಡುಕಿ ಹೋಗುವ ಎಲ್ಲ ಗಂಡಸರೊಂದಿಗೆ ಮಲಗಿ ಸಂಪಾದಿಸತೊಡಗಿದಳು. ಕೊನೆಗೆ ಸಾಹೇಬ್ ಬೇಸತ್ತು ಶಿವಾಜಿನಗರ ಸೇರಿಕೊಂಡ. ಮದ್ರಾಸಿನಿಂದ ಗಂಡ ಮೋಹನ್ ಕುಮಾರ್ ಬಂದವನೇ ಅವಳ ಸಂಗಡ ಬಾಳ್ವೆ ಮಾಡಲಿಲ್ಲ. ಹೆಣ್ಣುಮಕ್ಕಳೊಂದಿಗೆ ಕೆಲಕಾಲ ಇದ್ದವನು, ಊರಿಗೆ ಹಿಂದಿರುಗಿದ. ಕೆರೆಯ ಹತ್ತಿರ ಇಟ್ಟಿಗೆ ಗೂಡು ನಡೆಸುವ ಕೂಲಿಕಾರರಿಗೆ ಮಜ್ಜಿಗೆ, ಹೆಸರುಬೇಳೆ ಹಂಚುವ ನೆಪದಲ್ಲಿ ಸಾರಾಯಿಯನ್ನು ಚೀಲದಲ್ಲಿ ತುಂಬಿಸಿಕೊಂಡು ಮಾರುತ್ತಾ ಯಥೇಚ್ಛವಾಗಿ ಹಾದರ ನಡೆಸತೊಡಗಿದಳು. ಕೊನೆಕೊನೆಗೆ ಸಾರಾಯಿಯನ್ನು ತಾನೇ ಕುಡಿಯತೊಡಗಿ, ದಿನ್ನೆ ಬಯಲಿನಲ್ಲಿ ಬೆತ್ತಲಾಗಿ ಬಿದ್ದರೂ ಯಾರೊಬ್ಬರೂ ಹತ್ತಿರ ಸುಳಿಯಲಿಲ್ಲ. ಸುಂದರಿ ಹೆಣವಾಗಿ ಮಣ್ಣಾದ ಮುಂದಿನ ದಿನಗಳಲ್ಲಿ ಟಿಂಕರ್ ಸಾಹೇಬ್ ಅವಳ ಸಮಾಧಿಯ ಹತ್ತಿರ ಗೋಳಾಡುತ್ತಿದ್ದುದನ್ನು ನೋಡಿದೆ.
ಗುಲಾಬ್ ಳ ಮೊದಲನೆಯ ಗಂಡ ರಶೀದ್ ತೀರಿಕೊಂಡ. ಇವಳ ಪ್ರಿಯಕರ ಬಶೀರ್ ಹುಚ್ಚನಾಗಿ ಈಗಲೂ ಕಲ್ಲು, ಕಬ್ಬಿಣ, ಪೇಪರ್ ಹಾಯುತ್ತಾ ಬೀದಿ ಬೀದಿ ಅಲೆಯುತ್ತಿದ್ದಾನೆ. ಗುಲಾಬ್ ಅಪಾರ್ಟ್ ಮೆಂಟ್ಸ್ ಗಳಲ್ಲಿ ಮನೆ ಕೆಲಸ ಮಾಡುತ್ತಾ, ತಾಂತ್ರಿಕ ವಿದ್ಯಾಸಂಸ್ಥೆಯೊಂದರಲ್ಲಿ ಅಡುಗೆ ಮಾಡಿಕೊಂಡು ಆ ಹುಚ್ಚನನ್ನು ಸಾಕುತ್ತಿದ್ದಾಳೆ.





ಬರಹ ನಡು ಮಧ್ಯಾಹ್ನದಲ್ಲೂ ಆವರಿಸಬಹುದಾದ ದಟ್ಟ ಮಂಜು.
ಅದು ಮಂಜೋ, ಪ್ಲಾಸ್ಟಿಕ್ಕಿನ ಹೊಗೆಯೋ, ಹೊತ್ತಗೆ ಸುಟ್ಟುಹೋದ
ಕಮಟು ಪರಿಮಳವೋ ಅರಿಯದೆ-ಮನದಲಿ ತಳಮಳ.
ಕಸದ ಹೊಳೆಯಲಿ ಹಾಯಿದೋಣಿ ವಿಹಾರ
ಸಂದುಗಳ ಬಂಧನದಲಿ ಸಣ್ಣ ಕುಸುಕು
ಮಬ್ಬಿನಲಿ ನಿಡಿ ನೋಟಕ್ಕೂ ಸಿಗದ ಕಪ್ಪು ಸೂರ್ಯ
ಚೆಂಗನೆ ನೆಗೆವ ಜಿಂಕೆಯ ಕೊಂದು
ಕಮ್ಮನೆ ಮಾಂಸ ಹುರಿಯಲೋಸುಗ
ಹೊಗೆಮಂಜಿನ ಅಡಿ ಕರಕಲಾಯಿತು
ಬೂದಿ ಬಾನಾಯಿತು-ಬಯಸಿ
ಹಿಟ್ಟು ನಾದಿ ನಾದಿ ನೀರಾಗಿ
ಕರಗಿ ಕರಗಿ ಬೆಣ್ಣೆನುಣುಪು.
satyava adara ella theevrathe jothege helo edegaa