ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾಲೆ ಬಯಲ ಕಂಡರೆ ಬೆಚ್ಚಿ ಬೀಳುತ್ತಿದ್ದಾಳೆ..

ನಾಳೆ ಹಾಗೆಂದರೇನು

ದೀಪ್ತಿ ಭದ್ರಾವತಿ

ಸಂಜೆ ಹೊರಗೆಲ್ಲೋ ಆಡಲು ಹೋಗಿದ್ದ
ನನ್ನ ಪುಟ್ಟ ಕನಸೊಂದು
ಜೋರು ದನಿಯಲ್ಲಿ
ಅಳುತ್ತ ಹಿಂತಿರುಗಿ ಬಂದಿದೆ

ಮೈ ತುಂಬ ಬಿದ್ದು ತರಚಿದ
ಗಾಯ, ತಲೆ ತುಂಬ
ಯಾರೋ ಸುರಿದ ಮಳಲ ರಾಶಿ..
ಬಿದ್ದ ಹೊಡೆತಕ್ಕೆ ಮೊಣಕೈ ಕಾಲುಗಳ
ಚರ್ಮ ಕಿತ್ತು ನೆತ್ತರು
ಸಣ್ಣಗೆ ಜಿನುಗುತ್ತಿದೆ
ಮಣ್ಣು ಮೆತ್ತಿ ಕೂತಿದೆ

ಹಾಕಿದ ನವಿರು ಲಂಗದ
ನೆರಿಗೆಗಳಿಗೆ
ಮುಗ್ಗರಿಸಿದ ನೆನಹುಗಳ
ಎದೆಯಲ್ಲಿ ಹೆಕ್ಕಿ ಬಂದಿಹ
ಬಾಲೆ
ಬಯಲ ಕಂಡರೆ ಬೆಚ್ಚಿ ಬೀಳುತ್ತಿದ್ದಾಳೆ

ಹಸಿ ಗಾಯಗಳ ತೊಳೆದು
ಮುಲಾಮು ಹಚ್ಚುವಾಗಲೂ
ನಡುಗುವ ಅದರದಲಿ
ಅಂಗಳವ ನೋಡುತ್ತ
ಕನಲುತ್ತಿದ್ದಾಳೆ

ಕೆದರಿದ ಕೂದಲು, ಒಡೆದ ತುಟಿ, ಬಿರುಕು ಬಿಟ್ಟ
ಅಂಗೈಗಳ ಮೆಲ್ಲ ಸವರಿ
ಕೊಂಚ ಸಹಿಸು ಸರಿಯಾಗುತ್ತದೆ ಎಲ್ಲ ನಾಳೆಗೆ
ಸಂತೈಸುತ್ತೇನೆ..

ಅದು ನನ್ನ ಕಣ್ಣೊಳಗೆ, ಮಡಿಲೊಳಗೆ
ಬೊಗಸೆಯೊಳಗೆ
ಬಚ್ಚಿಟ್ಟುಕೊಳ್ಳುತ್ತ ಕೇಳುತ್ತದೆ
ನಾಳೆ ಹಾಗೆಂದರೇನು
ಗಾಯ ಮತ್ತೆ ಉರಿಯುತ್ತದೆ..

 

‍ಲೇಖಕರು Admin

23 January, 2016

6 Comments

  1. Bidaloti Ranganath

    ಭಾವನಾತ್ಮಕ ಕವಿತೆ

  2. smitha

    Olledide deepthi….. smitha

  3. Anonymous

    ಕನಸಿನಲ್ಲೂ ಎಚ್ಚರಿಸುವ ಕವನ…..

  4. ಆನಂದ್ ಋಗ್ವೇದಿ

    ನಾಳೆಗಳಿಗೆ ಭರವಸೆ! ಬೆಚ್ಚಿಬೀಳಿಸುವ ಬಯಲನ್ನು ಪರಿಚಯಿಸಿದ ಪರಿ ಅನನ್ಯ ರೂಪಕ

  5. Praveen V Savadi

    ಅಬ್ಬಾ ಎಂತ ಅದ್ಬುತ ಕವನ.. ಸುಮಾರಾಗಿ ಕನಸೆಂದರೆ : ಚಿಗುರೋ, ಹೊಳಪೊ ಇಲ್ಲಾ ಆಸೆಎಂದೋ ಹೇಳುತ್ತೇವೆ ಕನಸನ್ನೇ ಋಣಾತ್ಮಕವಾಗಿ ಉಪಯೋಗಿಸುವಾಗ ಅದು ಸತ್ತಿತು, ಕಮರಿತು ಕಳೆದುಹೋಯಿತು ಎನ್ನುತ್ತೇವೆ.. ಆದರೆ ಇಲ್ಲಿ ಕನಸು : “ಜೋರು ದನಿಯಲ್ಲಿ ಅಳುತ್ತ ಹಿಂತಿರುಗಿ ಬಂದಿದೆ… ” ಎಂತಹ ವರ್ಣನಿಯ ರೂಪಕ. ಕನಸು ಒಂದು ಮುಗ್ದವಾದ ಮಗು ಅದರ ಅಳುವನ್ನ ಸಂತೈಸಬಹುದು ಆದರೆ “ನಡಗುವ ಅದರದಲಿ..” ಕೇಳಿದ ಪ್ರಶ್ನೆಗೆ ಏನಂತ ಉತ್ತರಿಸುವದು.. ಎಂಬ ಇಂಗಿತವನ್ನ ಕವಿತೆಯಲ್ಲಿ ಮನಮುಟ್ಟುವ ಹಾಗೆ ಬರೆದಿದ್ದಿರ ಮೇಡಂ. ತುಂಬಾ ಇಷ್ಟವಾದ ಕವಿತೆ.. ಧನ್ಯವಾದಗಳು

  6. ರಮೇಶ ಗಬ್ಬೂರು

    ಕವಿತೆ ಮನವ ಸೆಳೆಯಿತು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading