ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾರ್ ಹುಡುಗಿ..

ಗೀತಾ ಜಿ.ಹೆಗಡೆ,ಕಲ್ಮನೆ

ಕಿರಂಜೂರಿನ ಲಲನೆಯವಳು
ಬೆಟ್ಟ ಸುತ್ತಿ ಬಸವಳಿದು
ಬದುಕದಟ್ಟಿಯೊಳಗೆ ಕೊಂಚ ನಿತ್ರಾಣವಾಗಿ
ಇಲ್ಲಿರುವ ಬದುಕಿಗೆ ತನ್ನದಲ್ಲದ
ಮನಸಿಗೆ ಮಣಿದು
ಹಿನ್ನೀರ ಕೊಳದ ಹರಿವಿಗೆ ಮುಖವೊಡ್ಡಿ
ನಶೆಯ ಪಾತ್ರೆ ಹಿಡಿದು ನಿಂತಿಹಳು
ರಾತ್ರಿ ಹತ್ತೊ ಹನ್ನೆರಡೊ
ತಡರಾತ್ರಿಯಲಿ ಗೂಡು ಸೇರಬೇಕೆಂಬ
ಇಂಗಿತ ಗೊತ್ತಿದ್ದೂ.

ಆಳುವ ಮಂದಿಯ ಬರಕಾಸ್ತು ಮುದ್ರೆ ಒತ್ತಿ
ಲಿಖಿತ ಕಾನೂನು ಬಂದ ಮೇಲೆ
ಎದೆ ಸೆಟೆದು ಅಮ್ಮನ ಸೆರಗಿಂದ
ಅವಳಿಗೊಂದಷ್ಟು ಧೈರ್ಯ ಪೂಸಿ
ಘಠಾಣಿಯಾಗಿ ಬಂದ ಹೆಣ್ಣು
ಹೊರ ನೋಟಕೆ ಕಪೋಲದುಡಿಗೆ ತೊಡುಗೆ
ಒಂದಷ್ಟು ಚಂದ ಕಾಣಲು
ಅವಳ ನಗುವೊ
ಕೀ ಕೊಟ್ಟ ಗೊಂಬೆಯಂತೆ.

ಚೂರು ಮದಿರೆಗೆ ನೀರಾಕು…..
ಸ್ವಲ್ಪ ಬಟ್ಟಲಲಿ ಚೌ ಚೌ ತಾ….
ಅವಳ ಕೈ ಬಗ್ಗಿಸುವ ವೈಖರಿಗೆ
ಸುರೆ ರುಚಿ ಹೆಚ್ಚಿ
ನೆಪ ಮಾತ್ರಕೆ ಆಗಾಗ ಕರೆದು
ಕೃತಕನಗೆಯನರಿಯದೆ ಬೆಸ್ತಾಗಿ
ಮೊಗದ ದರ್ಶನ ಕಾಣಲು ತವಕಿಸುವ
ದೃಷ್ಟಿಸಿ ನೋಡುವ ಇರಾದೆ
ಮಿಣಿಗಣ್ಣ ಮಬ್ಬು ಬೆಳಕಲ್ಲಿ.

ಚಪಲಕೊ, ಕುತೂಹಲಕೊ ಇಲ್ಲಾ
ಪಾಪ ಯಾರ ಮನೆ ಹೆಣ್ಣೊ ಏನೊ
ಗೊತ್ತು ಮಾಡಿಕೊಳ್ಳಲಿಕಿರಲೂಬಹುದು
ಬರುವವರೆಲ್ಲ ತೃಷೆಯಿರುವವರೆಂದಲ್ಲ
ಬಕ್ಷೀಸಣ ಕರ ಕೊಡಲಿಕಿರಲೂಬಹುದು
ಕೆಲವರ ನಶೆಯ ದಿಶೆ ಬದಲಾಗುವುದಲ್ಲ
ಇರಲಿ, ಆ ಗುಂಪಿನ ಜನ ಬೇರೆ!

ಬಂದವರೆಲ್ಲರ ನಡೆ ಸೈರಿಸಿಕೊಂಡು
ಕುಡಿತಕ್ಕೆ ಬರುವ ಮಂದಿಯ
ಗುಣಾವಗುಣವಳಿಗಿನ್ನೂ ಅಸ್ಪಷ್ಟ
ಆದರೂ ಅವಳೆದೆ ನಡುಗುವುದಿಲ್ಲ
ಸಿಟ್ಟು ಸೆಡಗು ದುಗುಡ ದುಮ್ಮಾನ
ಮನೆಯಲ್ಲೇ ಬಾಗಿಲ ಬಳಿ ಕಾವಲಿಟ್ಟು
ಬಂದವರ ಮೊಗದಲ್ಲಿ ಖುಷಿ ಅರಳಿಸುವವಳು.

ಅವಳ ಚಿತ್ತದಲಿಷ್ಟೆ ;
ಗಿರಾಕಿಗಳು ಒಳ ಸೇರುವ ಮದಿರೆಗೆ
ಮರೆತಿನ್ನಷ್ಟು ಹಿಗ್ಗಿ ಹೀರಿದಾಗ
ಎಜಮಾನನ ಮುಖ ನೋಡುವಳು.

ತಿಂಗಳ ಬಟವಡೆಯೊಂದಿಗೆ
ಸಿಗುವ ನಾಲ್ಕು ಕಾಸಿನಾಸೆಗೆ
ತೇಲುವ ಬದುಕಿಗೆ ಹೆಣಗಾಡುವ
ನಿಯತ್ತಿನ ಬಾರು ಹುಡುಗಿಯ
ದಿನ ನಿತ್ಯದ ಕಾಯಕವಿರಬಹುದೇ…??

ಎಲ್ಲವೂ ನಿಗೂಢ
ಅಸಹಾಯಕ ಹೆಣ್ಣಿನ ಬದುಕಿನ ಚಿತ್ರಣ
ಕಂಡವರ ಅನಿಸಿಕೆಯ ಹೂರಣ
ಆದರೆ ಇದು
ಮೋಡ ಕಟ್ಟಿ ಮಳೆಯಾಗುವಂತೆ
ಎಲ್ಲವೂ ನಿತ್ಯ ಸತ್ಯ!

‍ಲೇಖಕರು Avadhi

17 November, 2018

2 Comments

  1. Bhuvana

    Good one

  2. Sangeeta Kalmane

    Thank you so much

Trackbacks/Pingbacks

  1. ಬಾರ್ ಹುಡುಗಿ.. – Avadhi/ಅವಧಿ – Sandhyadeepa…. - […] http://wp002.global.temp.domains/~avadhion/avadhimag?p=206308 […]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading