ತಿಳುವಳಿಕೆ
ಪ್ರಜ್ಞಾ ಮತ್ತಿಹಳ್ಳಿ
ಖಾಲಿ ಕೊಳವೆಯೊಳಗೆ
ಬಳೆಚೂರುಗಳ ಚಿತ್ತಾರ
ಒಂಟಿ ಕಣ್ಣಿಂದ
ನೋಡಿದಾಗೊಮ್ಮೆ
ಬದಲಾಗುವ ಬೆರಗು
ಬಾಯಿಪಾಠವಾಗುವ ಮುನ್ನ
ಕಳೆದುಕೊಳ್ಳೋಣ
ಪರಸ್ಪರ ಅತಾಪತಾ
ರಸೀದಿ ಸಂಖ್ಯೆ ಸಮೇತ
ಆಮೇಲೆ ಎಷ್ಟೆಷ್ಟೋ
ಚಳಿ,ಮಳೆ,ಬಿಸಿಲಾಚೆ
ಸುಖದ ಗಾಳಕ್ಕೆ ಬಿದ್ದ
ಉದ್ದುದ್ದ ಮೀನುಗಳ
ಮುದ್ದು ಮಾಡುತ್ತ
ಯುದ್ಧ ಗಾಯಗಳಿಗೆ
ಮದ್ದು ಸವರುತ್ತ
ಹೊಸ ಶೆರವಾನೆಗೊಪ್ಪದ
ಹಳೆ ಕನ್ನಡಕದ ಗಾಜಿಂದ
ತಪ್ಪದೇ ಗುರ್ತು ಹಿಡಿಯೋಣ
ಯಾರದ್ದೋ ಔತಣದ
ಬಿಸಿ ಸಾರಿನ ಬಟ್ಟಲೊಂದಿಗೆ
ಎದುರಾ ಬದರಾ
ಕುಂಚ ಹೊಂಚಿದ ಚಿತ್ರಗಳು
ಮೊಗಸಾಲೆ ಕಟಾಂಜನದ
ಕಟ್ಟಿಗೆ ಮೆಟ್ಟಿಲನಿಳಿದಿಳಿದು
ಗಾರೆ ಕಿತ್ತ ಕಾರಂಜಿ ಉಕ್ಕುಕ್ಕಿ
ನೀರುಂಡ ಗಿಡ ತೊನೆದು
ಸೂರಿಗಿಳಿ ಬಿದ್ದ ಲಾಟೀನು ಬೆಳಕಲಿ
ಉಯ್ಯಾಲೆ ನೆರಳು
ಮಕ್ಕಳಿಗೆ ಪರಿಚಯಿಸುವಾಗ
ಹೆಸರ ಬೆನ್ನಿಗೆ ವಾಕ್ಯ ನಿಂತು
ಬಿಡಬಾರದು ಅಂತ
ಕಳೆಯುವ ಮುನ್ನ
ಇನ್ನೊಂಚೂರು ತಿಳಕೊಳ್ಳೋಣ







0 Comments