ತೆಲುಗು ಮೂಲ: ಐನಾಮ್ಪೂಡಿ ಶ್ರೀಲಕ್ಷ್ಮೀ

ಕನ್ನಡಕ್ಕೆ: ರೋಹಿಣಿ ಸತ್ಯ
ಪ್ರಸವ ಸಮಯದ ವೇದನೆಗೆ ಯೂನಿಸೆಫ್ ನವರು ಕೊಟ್ಟ ಹೆಸರು ‘ಬರ್ಥ್ ರೇಪ್’

ಪ್ರಕೃತಿ ಮಹತ್ವದ ಸೂಲಗಿತ್ತಿ
ಎಲ್ಲ ಪ್ರಾಣಿಗಳಿಗೂ ಪ್ರಸವ ಮಾಡಿಸುತ್ತದೆ
ಮಾನವರಿಗೆ ಇದರಿಂದ ವಿನಾಯಿತಿ!
ರಾತ್ರಿ ಸುರಿದು ಹೋದ ರಹಸ್ಯ ರತಿಮಳೆ
ಹನಿಯಾಗಿ ಬೀಜವಾಗಿ ಮೊಳಕೆಯಾಗಿ
ಗರ್ಭದಲ್ಲಿ ಪ್ರಾಣ ತಳೆದು
ನೆಲವ ಸೇರಲು ಪ್ರಯತ್ನಿಸುತ್ತಿರುವ
ಪ್ರಸವ ಸಮಯವಿದು!
ಹೊಸಜೀವಿಯ ಸೃಷ್ಟಿಗಾಗಿ ತನ್ನನ್ನು ತಾನು
ಆಪಾದಮಸ್ತಕ ದಮನ ಮಾಡಿಕೊಳ್ಳುತ್ತಾಳೆ ಅಮ್ಮ
ಜಗತ್ತಿನಲಿ ಬೆಳಕಿಗಾಗಿ ತನ್ನನ್ನೇ
ಕರಗಿಸಿಕೊಳ್ಳುವ ದೀಪವು ಅಮ್ಮ,
ಮಹತ್ವ ಕಾಂತಿಮಂತಳು!
ನವಮಾಸಗಳಿಂದ ಕಂದ ಅಮ್ಮನ ನಡುವೆ
ನಿರಂತರ ಕಣ್ಣಾಮುಚ್ಚಾಲೆಯಾಟ ನಡೆಯುತ್ತಿದೆ
ಕಾಣದೆ ಕಾಡಿಸುವ ಕಂದನಿಗಾಗಿ ಕನಸುಗಳ ಕಾಣುತ್ತಾ
ಹೊಕ್ಕಳ ಬಳ್ಳಿಯನ್ನು ಯಜ್ಞೋಪವೀತವಾಗಿಸಿ
ನಿತ್ಯಾಗ್ನಿಹೋತ್ರವ ಮಾಡುವ ಮಹಾಯಾಜ್ಞಿ ತಾಯಿ
ತಾಯ್ತನ ಕಣ್ಣೀರಿನ ರೂಪ!
ತಾಯಿ ಮೊಲೆಹಾಲಿನ ದೀಪ!!
ಪಟ್ಟವನೀಡುವ ಪ್ರಸವ ಮಾತ್ರ
ನೋವು ದುಃಖ ಗಾಯ ಅರಚುವಿಕೆಗಳಿಂದ ಭಯ ಬೀಭತ್ಸ!
ವಿಚಲಿತ ಮನ – ಸಂಚಲಿತ ದೇಹಗಳ
ನಿಸ್ಸಹಾಯ ಭಯೋದ್ವಿಗ್ನಗಳ ಸಂದರ್ಭ!!

ಅದಕ್ಕೇ…
ಈಗ ಪ್ರಸವವನ್ನು ಹೊಸದಾಗಿ ಅರ್ಥೈಸೋಣ
ಪ್ರಸೂತಿ ವೈರಾಗ್ಯ ಸ್ಥಾನದಲ್ಲಿ
ಪ್ರಸವಾನುಭವವನ್ನು ಪ್ರತಿಷ್ಟಿಸೋಣ
ನವ ಸೃಷ್ಟಿಯನ್ನು ತಲಪಿಸುವ ಹೆರಿಗೆಯ ಕೋಣೆಗೆ
ಕುಯ್ಯುವಿಕೆ ಅರಚುವಿಕೆಗಳೇ ಅಲಂಕಾರಗಳು
ಅವುಡುಗಚ್ಚಿಹಿಡಿಯುವ ವೇದನೆಯೇ ಒಳಸೊಬಗು
ದಾದಿಗಳ ಹೂಂಕಾರವೇ ನೇಪಥ್ಯ ಸಂಗೀತ
ಫಾರ್ಸೆಪ್ಸ್ ತಾಂಡವಗಳು ನೃತ್ಯ ಸಂಯೋಜನೆ
ಒಂದು ದೇಹ ಎರಡು ತುಂಡುಗಳಾಗಿ
ಮತ್ತೊಂದು ರಕ್ತಮಾಂಸಗಳ ದೇಹಾವಿಷ್ಕಾರ ಮಾಡುತ್ತಾಇದು –
ಪರಮಯಾತನೆಯ ಗಾನ – ಆರ್ತನಾದಗಳ ಸಿಂಫನಿ
ನಿಮಗೆ ತಿಳಿದಿರುವುದು ತಾಯ್ತನವನ್ನು ಕೊಂಡಾಡುವುದೇ
ಆದರೇ…..
ಕಂಗಳಿಂದ ಧಾರಾಕಾರ ಸುರಿವ ಕಣ್ಣೀರು
ತನುವಿನಿಂದ ನಿಲ್ಲದೇ ಪ್ರವಹಿಸುವ ರಕ್ತನದಿಗಳು
ಅತ್ಯಂತ ಜಿಗುಪ್ಸಾಕರ ಭಯಾನಕ ವಿಧ್ವಂಸಕಾಂಡವಿರುವುದೆನ್ನುವ ಸತ್ಯವು
ನಿಮ್ಮ ಕಲಾತ್ಮಕ ಹೃದಯದ ಮಿಡಿತಕ್ಕೆ ಸಿಗುವುದೇ ?!
ಗರಗಸದ ಇದರ ಕುಯ್ತವನ್ನು ಕಂಡಿರುವೆನಲ್ಲ
ಮಾತೃತ್ವದ ದುಃಖ ಮಾಧುರ್ಯದಿಂದ ನಡೆದುಬಂದವಳಲ್ಲವೇ!
ಹಾಗಾಗಿ ಪ್ರತಿ ಹೆಣ್ಣಿಗೆ ಪ್ರಸವ
ಒಂದು ಮಧುರಾನುಭೂತಿಯಾಗಬೇಕೆಂದು ಕನಸು ಕಾಣುತ್ತಿರುವೆ
ಮುಂಗಾರಿನ ಹನಿಯ ಕಂಡು
ಅಸಂಕಲ್ಪಿತವಾಗಿ ಅರೆಮುಚ್ಚಿದ ಕಂಗಳು
ತುಟಿಗಳ ಮೇಲೆ ನಗುವನ್ನು ಸಿಂಪಡಿಸಿದಷ್ಟು
ಸಹಜಾನುಭವವಾಗಬೇಕೆನ್ನುವ ಕಲ್ಪನೆಯು ನನ್ನದು
ಅದಕ್ಕೇ…
ಪ್ರಪಂಚ ಮಹಿಳೆಯರ ಪರವಾಗಿ ನಾನೊಂದು ಸುಂದರ ಸ್ವಪ್ನವನ್ನು ಕಾಣುತ್ತಿದ್ದೇನೆ
ಹೆರಿಗೆಯ ಕೋಣೆಯನ್ನು ಪ್ರಶಾಂತ ಮಾನಸ ಸರೋವರದಂತೆ,
ದಾದಿಗಳ ನುಡಿಗಳು ಸಾಂತ್ವನದ ಮಂತ್ರಗಳಂತೆ ಭಾವಿಸುತ್ತಿದ್ದೇನೆ
ಯಂತ್ರಗಳಿಂದ ತಾಯ್ತನಕ್ಕೆ ಕಲೆ ಉಂಟಾಗುವುದಿಲ್ಲ
ಹಣದ ಹಾರಕ್ಕಾಗಿ ಕಂದನು ತೊಂದರೆಗೀಡಾಗುವುದಿಲ್ಲ
ಸೋದರಿ ಈಗ ಹೀಗೆ ಮಾಡೋಣ
ಕಣ್ಣೀರಿನ ಹೊಳೆ ಹರಿವ ಹೆರಿಗೆಕೋಣೆಯನ್ನು
ದೇವಾಲಯದಂತೆ ಕಾಣುವ ವೈದ್ಯಶಾಲೆಯ ನಿರ್ಮಿಸೋಣ
ಹೆಣ್ಣಿನ ದೇಹಕ್ಕೆ ತ್ರಾಸವಾಗದಂತಹ ವೈದ್ಯಶಾಸ್ತ್ರವನ್ನು ಸೃಷ್ಟಿ ಮಾಡೋಣ
ಚಿನ್ನಾರಿ ಕಂದ
ಕಣ್ಣುಬಿಡುವ ಮುನ್ನವೇ ಕತ್ತಿ ಕಠಾರಿಗಳ ಕಾಣುವುದು ಬೇಡ
ಪುರುಡು ಪ್ರಕ್ರಿಯೆಯನ್ನು ಪ್ರಮೋದಭರಿತವಾಗಿಸೋಣ
ಪ್ರಸವ ಹೂವಿನ ಪಕಳೆಗಳ ಸಂಭಾಷಣೆಯಾಗಲಿ
ಶಾಸನಕರ್ತರಿಗೆ –
ನಿಯಂತ್ರಿಸಬೇಕಾಗಿರುವುದು “ಬರ್ಥ್ ರೇಟ್” ಅಲ್ಲ
“ಬರ್ಥ್ ರೇಪ್” ಎಂದು ಏರುದನಿಯಲ್ಲಿ ಹೇಳೋಣ
ಪ್ರಪಂಚದ ಎಲ್ಲ ಭಾಷೆಗಳ ಪದಗಳು
ಸಮಸ್ತ ಜಾತಿಗಳ ಭಾವೋದ್ವೇಗಗಳು ಒಂದೆಡೆ ಸೇರಿವೆ
ವಾಕ್ಯಗಳು ಅದೃಶ್ಯವಾಗಿವೆ,
ಭಾಷೆಗಳು ಸೋತಿವೆ, ವ್ಯಾಕರಣ ಮಾಯವಾಗಿದೆ!
ಆಗ ತಾನೇ ಹುಟ್ಟಿದ ಕಂದನು
ಕಂಗಳ ತೆರೆದು ಉಸಿರುಗಟ್ಟಿ ಒಮ್ಮಿಂದೊಮ್ಮೆ ಅಳಲಾರಂಬಿಸಿದೆ
ತಾಯಿಯ ಕೆನ್ನೆಗಳ ಮೇಲೆ ಒಣಗಿದ ಕಣ್ಣೀರಿನ ಕಲೆಯ ಸೀಳುಗಳಿಂದ
ಸಾಗಿದ ನಗು ತುಟಿಗಳ ಮೇಲೆ ಅರಳಿದೆ!
ನಿಮಗಿದು ಗೊತ್ತಾ…?!
ಜನನ ಮರಣಗಳಿಗೆ ಮಹತ್ವ ಸ್ನೇಹ!
ಮಳೆಹನಿಗೆ ಮಣ್ಣಿಗೆ ಮಹತ್ವ ಬಂಧ!
ಸುಖದುಃಖಗಳಿಗೆ ಮಹತ್ವ ಮಿತ್ರತ್ವ!!






ಇಡೀ ಪ್ರಕೃತಿಯ ಮೂಲ ಹುಟ್ಟು/ಸೃಷ್ಟಿ/ ರೀಕ್ರಿಯೇಷನ್. ಅದು ಸಕಲ ಪ್ರಾಣಿಕುಲಕ್ಕೆ ಸಹಜ. ಪ್ರತಿ ಜೀವಿಯೂ ಹೊಸತನ್ನು ಹುಟ್ಟಿಸುವಾಗ ಒಂದು ಅವರ್ಣನೀಯ ಅನುಭವವನ್ನು ಹೊಂದುತ್ತದೆ. ಕ್ರೂರ ಪ್ರಾಣಿಗಳು ಅನ್ನಿಸಿಕೊಂಡವು ಕೂಡಾ ಹೆರಿಗೆ ಸಮಯದಲ್ಲಿ ತಮ್ಮನ್ನು ಹರಕೊಂಡೇ ಮರಿಗೆ ಜನ್ಮ ಕೊಡುತ್ತವೆ. ಆದರೆ ಮನುಷ್ಯ ಜೀವಿ ಪ್ರಕೃತಿಯಿಂದ ಎಷ್ಟು ದೂರ ಸರಿದು ಬಂದು ಬಿಟ್ಟಿದ್ದಾರೆಂದರೆ ಹೆರಿಗೆ ಅನ್ನುವುದನ್ನು ಅದರ ಪ್ರಾಕೃತಿಕ ಸಹಜ ನೆಲೆಯಲ್ಲಿ ನೋಡುವುದಕ್ಕಿಂತ ಏನೋ ಅಪರಾಧ ಅನ್ನುವಂತೆ ನೋಡಲು ತೊಡಗಿವೆ. ನಿಜವಾಗಿ ನೋಡಿದರೆ ಹೆಣ್ಣು ಮತ್ತು ಗಂಡಿನ ನಡುವೆ ಇರುವ ವ್ಯತ್ಯಾಸ ಇದೊಂದೇ. ಹೆಣ್ಣು ತಾಯಿಯಾಗಬಲ್ಲಳು ಗಂಡು ಆಗಲಾರ. ಆಧುನಿಕ ಹೆಣ್ಣುಗಳು ಅದನ್ನು ಸರಿಯಾದ ನೆಲೆಯಲ್ಲಿ ಗ್ರಹಿಸಲು ವಿಫಲರಾಗಿರುವುದು ಅವರಿಗೆ ಸೃಷ್ಟಿಯ ಬಗ್ಗೆ ಸರಿಯಾಗಿ ತಿಳಿದಿಲ್ಲದಿರುವುದು ಅಥವಾ ಹೆರಿಗೆ ಅನ್ನುವುದೊಂದು ಘೋರ ಅನ್ನುವ ತಪ್ಪು ತಿಳುವಳಿಕೆ ಇರುವುದು. ಜೊತೆಗೆ ಅದನ್ನು ಪ್ರಕೃತಿ ಸಹಜ ಅನ್ನುವ ನಿರಾಳತೆಯಿಂದ ಹೊರತುಪಡಿಸಿ ನೋಡುವುದು. ಈ ಕವನ ಕೂಡಾ ಸಾಂಪ್ರದಾಯಿಕ ತಾಯ್ತನದ ಮಹತ್ವದ ಮೇಲೆ ಒತ್ತು ಕೊಟ್ಟು ರೊಮ್ಯಾಂಟಿಕ್ ಆಗಿ ಮುಕ್ತಾಯವಾಗಿದ್ದರೂ ಅದರ ಆಶಯ “ಪ್ರಸವ ಹೂವಿನ ಪಕಳೆಗಳ ಸಂಭಾಷಣೆಯಾಗಲಿ” ಎನ್ನುವುದಾಗಿರುವುದು ಸಂತೋಷ. ಅದಕ್ಕೆ ತಯಾರಿ ಹೆಣ್ಣು ಋತುಮತಿಯಾದಾಗಿನಿಂದಲೇ ತೊಡಗಿ, ದೈಹಿಕವಾಗಿ ಹಾಗೂ ಮಾನಸಿಕವಾಗಿ ತಾಯ್ತನಕ್ಕೆ ಸಿದ್ಧವಾಗುವಲ್ಲಿರುತ್ತದೆ. ಅದಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗಿಲ್ಲ. ಸಹಜವಾಗಿ ದೇಹ ಗಟ್ಟಿಮುಟ್ಟಾಗಿದ್ದರೆ ಸರಿ. ಅದಕ್ಕೇ ಹೆಂಗಸರು ದೈಹಿಕ ಕೆಲಸ ಮಾಡುತ್ತಿದ್ದರೆ ಹೆರಿಗೆ ಇತ್ಯಾದಿ ಸರಾಗವಾಗುತ್ತದೆ. ಇದನ್ನೆಲ್ಲಾ ಇಂದಿನ ಡಯಟ್ ಪ್ರೇರಿತ ಹುಡುಗಿಯರಿಗೆ ಹೇಗೆ ಅರ್ಥ ಮಾಡಿಸುವುದು?
Dhanyavaadagalu Pratibhanandakumar!
“ಬಥ್೯ ರೇಪ್” ಕವನದೊಳಗಿನ ಹೇಣ್ಣಿನ ನೋವು ತಾಯ ಹಂಬಲದ ನಾ ಬರೆದ ಈ ಕವನ ಮನ ತಂಪಾಗಿಸಬಹುದೆ!
———————————/
ಜನ್ಮ ದಿನ
ಅಂಬರಕೆ ಚಪ್ಪರ ಹಾಕಿ
ಬಂಗಾರದ ತೊಟ್ಟಿಲು ಕಟ್ಟಿ
ಮೋಡಗಳ ಮೆತ್ತನೆಯ ಹಾಸಿಗೆ ಹಾಸಿ
ಕೋಟಿ ಕೋಟಿ ಮಿನುಗುವ ನಕ್ಷತ್ರಗಳ
ಮಾಲೆಗಳಿಂದ ಶೃಂಗರಿಸಿ
ಜಗಮಗಿಸುವ ಬೆಳಕಲ್ಲಿ ಇಣುಕಿ ಹಾಕುವ
ದುಂಡನೆಯ ಚಂದ್ರಮನನ್ನೇ
ನಿನ್ನಾಟಿಗೆಯ ಮಾಡಿ
ಕೆಚ್ಚಲೆದೆಯ ಹಾಲ ಕುಡಿಸಿ
ಬೊಚ್ಚು ಬಾಯಲ್ಲಿ ಕಿಲ ಕಿಲ ನಗುವ
ನಿನ್ನಧರಕ್ಕೆ ಮುತ್ತಿಕ್ಕಿ
ಬೀಸುವ ತಂಪಾದ ಗಾಳಿಯ
ನಾದಕ್ಕೆ ಜೀಕುತ್ತ ಜೋಗುಳ ಹಾಡಿ ಮಲಗಿಸಿ
ತಾಯ್ತನದ ಹಂಬಲ ಈಡೇರಿದ ದಿನ
ಸಂಸಾರದಲ್ಲಿ ತೃಪ್ತಿ ಕಂಡ ದಿನ.
Dhanyavaadagalu Sangeetha Kalmane!
Dhanyavaadagalu Avadhi!