“ಸ್ವಲ್ಪ ಸುಮ್ಮನಿರು….”
– ಡಾ ಶಿವಾನಂದ ಕುಬಸದ
ಯಾರು ಗದರಿದ್ದೆಂದು ನೋಡಿದರೆ
ಅತ್ತಿತ್ತ ಯಾರಿಲ್ಲವಲ್ಲ ಮತ್ತೆ
ಬಂದಿತೆಲ್ಲಿಂದ ಈ ಧ್ವನಿ ಎಂಬ
ಕುತೂಹಲಕೆ ಸುಮ್ಮನಿದ್ದು ಆಲಿಸಿದರೆ
ಬರುತ್ತಿದೆ ಅಂತರಾಳದಿಂದ ….
”ಸ್ವಲ್ಪ ಸುಮ್ಮನಿರು..”

ಹೆದರಿ ಸುಮ್ಮನಾದರೆ ಏನೇನೋ
ಸಪ್ಪಳಗಳ ಸಂತೆ ಜಾತ್ರೆ ಗದ್ದಲ
ಹೆಣ್ಣೊಂದು ಕೊಸರಿ ಚೀರಾಡಿದಂತೆ
ಅವಳ ಸುತ್ತಲೂ ಯಾರೋ ಗಹ ಗಹಿಸಿದಂತೆ
ಭ್ರೂಣದ ಕುತ್ತಿಗೆಗೆ ಕೈ ಹಾಕಿದ ಸದ್ದು
ಛಟ್ ಎಂದು ಹರಿದ ಕರುಳು ಬಳ್ಳಿ
ಅಲ್ಲೆಲ್ಲೋ ಗಿಡದ ಬುಡದ ಸುತ್ತ
ಯಾಂತ್ರಿಕ ಗರಗಸ ಸುತ್ತಾಡಿದಂತೆ
ಧೊಪ್ಪನೆ ನೆಲಕ್ಕುರುಳಿದ ಹೆಮ್ಮರ
ತಾಯ ಗುಟುಕಿಗೆ ಬಾಯ್ದೆರೆದ ಗುಬ್ಬಿಯ
ಮರಿಗಳ ಬಾಯಲ್ಲಿ ಬಂದು ಬೀಳುವ
ಆಸಿಡ್ ಮಳೆಯ ಚುರ್ ಎನ್ನುವ ಸದ್ದು
ಮೇಲಿನಿಂದುರುಳಿ ಬಿದ್ದ ಮೊಟ್ಟೆ ಒಡೆದ ಸದ್ದು
ಮತ್ತೆ …
ಅಲ್ಲಿ ನೆಲದಾಳದಲ್ಲೆಲ್ಲೋ ಬೀಜದೊಳಗಿನ ಭ್ರೂಣ
ಮೈಮುರಿದು ಮೊಳೆತು ಚಿಗುರಿ ಹೊರಬರುವ ಧ್ವನಿ
ಹೂವೊಂದನು ಹೀರಿ ಇನ್ನೊಂದಕೆ ಧಾವಿಸುವ
ದುಂಬಿಯ ರೆಕ್ಕೆ ಬಡಿತದ ಮೆಲುದನಿ
ಕಾಯ್ದ ನೆಲಕ್ಕೆ ಬಿದ್ದ ಮಳೆಯ ಹನಿಯ
ಫಟ್ ಎಂಬ ಸಪ್ಪಳ ಎಷ್ಟೊಂದು ಸದ್ದು…
ಹೌದು
ಸುಮ್ಮನಿದ್ದರೆ ಮಾತ್ರ ಕೇಳುವ ಈ
ಧ್ವನಿಗಳಿಗಾಗಿ ಕಲಿಯಬೇಕಲ್ಲವೇ
ಸುಮ್ಮನಿರುವುದನ್ನು ಇಲ್ಲವೇ
ಇಲ್ಲವಾದಾವು ಅಂತರಂಗೊಳಗಿನ
ಇಣುಕು ನೀಡುವ ಈ ಸುಖ ದುಃಖಗಳು …






chennaagide sir..
Good One
ಹೌದು
ಸುಮ್ಮನಿದ್ದರೆ ಮಾತ್ರ ಕೇಳುವ ಈ
ಧ್ವನಿಗಳಿಗಾಗಿ ಕಲಿಯಬೇಕಲ್ಲವೇ
ಸುಮ್ಮನಿರುವುದನ್ನು ಇಲ್ಲವೇ
ಇಲ್ಲವಾದಾವು ಅಂತರಂಗೊಳಗಿನ
ಇಣುಕು ನೀಡುವ ಈ ಸುಖ ದುಃಖಗಳು …
ಕವಿತೆ ಚೆನ್ನಾಗಿದೆ. ಮೇಲಿನ ಸಾಲುಗಳು ತುಂಬ ಅರ್ಥಪೂರ್ಣವಾಗಿವೆ.
super sir.. tumbaa harithavaada kvite sir..
ಸ್ನಾತಕೋತ್ತರ ವಿದ್ಯಾರ್ಥಿ ವಿಭಾಗದ ವಿಷಯ ನಿರ್ವಾಹಕನಾಗಿ, ಕಚೇರಿ ಅಧೀಕ್ಷಕನಾಗಿ ನಾನು ಸರಕಾರಿ ಸೇವೆ ಸಲ್ಲಿಸುತ್ತಿದ್ದ ಬಳ್ಳಾರಿ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ(ವಿಮ್ಸ್) ವೈದ್ಯಕೀಯ ಕಾಲೇಜಿನಲ್ಲಿ ಸರ್ಜರೀ ಸ್ನಾತಕೋತ್ತರ ಎಂ.ಎಸ್.ಜನರಲ್ ಸರ್ಜರೀ ಸೇವಾನಿರತ ವಿದ್ಯಾರ್ಥಿಯಾಗಿದ್ದ ಡಾ.ಶಿವಾನಂದ ಕುಬಸದ್ ನನಗೆ ಆತ್ಮೀಯರು. ಸ್ನೇಹಶೀಲರಾದ ಅವರು ರಂಗೋಲಿ ಹಾಕುವುದರಲ್ಲಿ ಮಹಿಳಾಮಣಿಗಳನ್ನೂ ಮೀರಿಸಬಲ್ಲ ನಿಷ್ಣಾತರಾಗಿದ್ದರು. ಎಲೆ-ಹೂವು-ಬಳ್ಳಿ ಇತ್ಯಾದಿ ವಸ್ತುಗಳನ್ನು ಬಿಡಿಸುವುದು ಸಹಜ. ಆದರೆ ಈ ಮಹನೀಯರು ವ್ಯಕ್ತಿಗಳನ್ನೇ ತದ್ರೂಪು ರಂಗೋಲಿಯಲ್ಲಿ ಚಿತ್ರಿಸುತ್ತಿದ್ದುದು ಅತ್ಯಂತ ವಿಶೇಷವಾಗಿತ್ತು. ಅವರು ಸಾಹಿತ್ಯಪ್ರಿಯರೆಂದಷ್ಟೇ ಗೊತ್ತಿತ್ತು. ಆದರೆ ಅವರೊಬ್ಬ ಪ್ರಬುದ್ಧ-ಪ್ರೌಢ ಕವಿಗಳೂ ಹೌದೆಂಬುದನ್ನು ತಿಳಿಪಡಿಸಿದ “ಅವಧಿ”ಗೆ ಕೃತಜ್ಞತೆಗಳು.-ಟಿ.ಕೆ.ಗಂಗಾಧರ ಪತ್ತಾರ, ಚಲನವಾಣಿ : 8152006144
ಮೌನ ಕೆದುಕುತ ಮನದಂತರಾಳ ಮೀಟುವ ಒಳ್ಳೆಯ ಕವನ