ಊಟಿಯ ಚಿತ್ರಗಳು..

ನವೀನ ಸೊರಬ
-1-
ಉದ್ದುದ್ದ ಮರಗಳು ಇಲ್ಲಿ
ಮೈ ಮುರಿಯುವುದಿಲ್ಲ
ಬರೀ ಕೈಚಾಚುತ್ತವೆ ಹುಡುಗಿ
ಚಿಕ್ಕ ಹಕ್ಕಿಗಳು ಹಾಡುವುದಿಲ್ಲ
ಗರಿ ಕೊಡವುತ್ತವೆ ನಡುಗಿ
-2-
ಬಾಗುಬೆನ್ನಿನ ಮುದುಕಿಯಂತೆ
ಗುಡ್ಡಗಳು
ಕೊತ್ತಂಬರಿ ಸೊಪ್ಪು ಹಚ್ಚಿಟ್ಟಂತೆ
ಕಾಡುಗಳು
-3-
ಗುಡ್ಡದ ರೈಲು ಅದೆಷ್ಟು ನಾಜೂಕು
ಇಲ್ಲ ಅದಕ್ಕೆ ಗಡಿಬಿಡಿ
ಅಡಿ ತಪ್ಪಿದರೂ ಕಾಣುತ್ತಿತ್ತು
ಕಣಿವೆಯಲ್ಲಿ ಸ್ವರ್ಗವಿಡಿ
-4-
ಸೂರ್ಯನ ದರ್ಶನಕ್ಕಿಲ್ಲಿ
ಅರ್ಜಿ ಸಲ್ಲಿಸಬೇಕು
ಮಂಜು ಕರಗುವವರೆಗೂ
ಚಿತ್ರಕ್ಕೆ ಕಾಯಬೇಕು
-5-
ಮನೆಗಳಿವೆ ಇಳಿಜಾರಿನಲ್ಲಿ
ಜಾರುಬಂಡೆಯಿಂದ ಬೀಳುವಂತೆ
ಪ್ರವಾಸಿಗರ ಫೋಸುಗಳು
ಚಹಾ ಎಲೆಯ ಕೀಳುವಂತೆ





0 Comments